Tuesday , July 23 2019
Breaking News
Home / ಇಸ್ಲಾಮಿಕ್ ಲೇಖನಗಳು / ಬ್ಯಾಟ್ ಮತ್ತು ಬಾಲ್‌ನೊಂದಿಗೇ ಯೌವನ ಸವೆಸುವವರು

ಬ್ಯಾಟ್ ಮತ್ತು ಬಾಲ್‌ನೊಂದಿಗೇ ಯೌವನ ಸವೆಸುವವರು

ಪರಲೋಕದಲ್ಲಿ ಶಾಶ್ವತವಾದ ಸ್ವರ್ಗ ಗಳಿಸುವ ಮತ್ತು ನರಕದ ಭಯಾನಕ ಯಾತನೆಗಳಿಂದ ಬಚಾವಾಗುವ ಸತ್ಯವಿಶ್ವಾಸಿಗಳ ಅತಿದೊಡ್ಡ ಗುಣವಿಶೇಷತೆಯೇನೆಂದರೆ, ಅವರು “ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ” ಎಂಬುದು. [ಪವಿತ್ರ ಕುರ್‌ಆನ್‌] ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಮತ್ತು ಚಿಂತನೆಗೆ ಹಚ್ಚುವ ಬಹಳ ಉನ್ನತವಾದ ಆಶಯವಿದು. ಆರೋಗ್ಯ ಮತ್ತು ಬಿಡುವು ಇವೆರೆಡೂ ಅತ್ಯಮೂಲ್ಯವಾದ ಎರಡು ಅನುಗ್ರಹಗಳೆಂದೂ ಮತ್ತು ಯೌವನದಲ್ಲಿ ನಿರ್ವಹಿಸ ಬೇಕಾದ ಬಾಧ್ಯತೆಗಳ ಕುರಿತಾದ ಸವಾಲಿಗೆ ಉತ್ತರಿಸದೆ, ವಿಚಾರಣೆಯ ಮೈದಾನದಿಂದ ಒಂದು ಹೆಜ್ಜೆಯೂ ಕದಡಲಾಗದೆಂದೂ ಪ್ರವಾದಿವರ್ಯ(ಸ)ರು ಮುನ್ನೆಚ್ಚರಿಕೆ ನೀಡಿದ್ದಾರೆ.

ಹೌದು, ಯೌವ್ವನ ಒಂದು ಅನುಗ್ರಹವಾಗಿದೆ. ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲಿ ಯೌವ್ವನಕ್ಕೆ ಬಹಳ ಪ್ರಾಧಾನ್ಯತೆ ಮತ್ತು ಬೇಡಿಕೆಯಿತ್ತು. ಪೌರೋಹಿತ್ಯದ ಅಂಧಕಾರದ ಮೌಢ್ಯ ಮತ್ತು ಸುಲಿಗೆಗಳ ವಿರುದ್ಧ ಹೋರಾಡಿದ್ದ ಹ.ಇಬ್ರಾಹೀಮ್‌(ಅ) ಓರ್ವ ಯುವಕನಾಗಿದ್ದರೆಂಬ ಪ್ರಸ್ತಾಪ ಕುರ್‌ಆನಿನಲ್ಲಿದೆ. ಕ್ರೂರ ಮರ್ದಕನಾದ ಫಿರ್‌ಔನನ ದೌರ್ಜನ್ಯ-ಕ್ಷೋಭೆಯ ವಿರುದ್ಧ ಮೂಸಾ(ಅ)ರು ನಿರ್ವಹಿಸಿದ ಸುಧಾರಣೆಯಲ್ಲಿ ಅವರಿಗೆ ಸಾಥ್‌ ನೀಡಿದ್ದು ಆ ಜನಾಂಗದ ಕೆಲವು ಯುವಕರಾಗಿದ್ದರೆಂದೂ ಕುರ್‌ಆನ್‌ ಎತ್ತಿ ಹೇಳಿದೆ. ಪ್ರವಾದಿವರ್ಯ(ಸ)ರು ಪ್ರವಾದಿತ್ವವನ್ನಿಡಿದು, ಜನರಿಗೆ “ಲಾ ಇಲಾಹ ಇಲ್ಲಲ್ಲಾಹ್‌” ಕಲಿಸಿ ಕೊಡುವ ಆರಂಭ ಕಾಲಘಟ್ಟದಲ್ಲಿ, ಪ್ರಥಮವಾಗಿ ಪ್ರವಾದಿವರ್ಯ(ಸ)ರನ್ನು ಬೆಂಬಲಿಸಿದ್ದೂ ಆ ಸಮಾಜದ ಯುವಕರಾಗಿದ್ದರು. ಯಾವ ಯುವಕರದು ಗೊತ್ತೇ? ಮೂವತ್ತೆಂಟು ವಯಸ್ಸಿನ ಹ. ಅಬೂಬಕ್ಕರ್‌ ಸಿದ್ದೀಕ್‌(ರ), ಇಪ್ಪತ್ತೇಳು ವಯಸ್ಸಿನ ಹ. ಉಮರುಲ್‌ ಫಾರೂಖ್‌(ರ) ಹಾಗೂ ಹ. ಮುಸ್‌ಅಬ್‌ ಬಿನ್‌ ಉಮೈರ್‌(ರ), ಸ‌ಅದ್‌ ಬಿನ್‌ ಅಬೀ ವಕ್ಕಾಸ್‌‌(ರ), ಬಿಲಾಲ್‌ ಬಿನ್‌ ರಬಾಹ್‌(ರ), ಅಬ್ದುರ್ರಹ್ಮಾನ್‌ ಬಿನ್‌ ಔಫ್‌(ರ), ಅಬೂ ಉಬೈದಾ ಬಿನ್‌ ಜರ್ರಾಹ್‌(ರ) ಮುಂತಾದ ಸ್ವಹಾಬಿಗಳು ಇಸ್ಲಾಮ್‌ ಸ್ವೀಕರಿಸುವಾಗ ಇಪ್ಪತ್ತರಿಂದ ಮೂವತ್ತರೊಳಗಿನ ಯುವಕರಾಗಿದ್ದರು. ಅವರು ಉನ್ನತ ಧ್ಯೇಯ ಮತ್ತು ಗುರಿಯನ್ನಿಟ್ಟು ಕೊಂಡು, ಸಮಾಜದ ಒಳಿತಿಗಾಗಿ ಆಹೋರಾತ್ರಿ ಪರಿಶ್ರಮ ಪಟ್ಟು, ಜಗತ್ತು ಕಂಡು ಕೇಳರಿಯದ ಕ್ರಾಂತಿಕಾರಕ ಬದಲಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ಕಠಿಣ ಬಾಧ್ಯತೆಗಳನ್ನು ವಿವೇಕ-ವಿವೇಚನೆಯಿಂದ ನಿರ್ವಹಿಸಿ ಸಮಾಜವನ್ನು ಬೆಳಗಿಸುತ್ತಲೇ, ಸಮಾಜದ ಅಗತ್ಯ ಮತ್ತು ಆತ್ಮವಾಗಿ ಮಾರ್ಪಟ್ಟರು.

ಆದರೆ, ಈಗಿನ ಮುಸ್ಲಿಮ್ ‌ ಯುವಕರ ಅವಸ್ಥೆಯಂತೂ ಬಹಳ ಪರಿತಾಪಕರ! ಅವರು ಮುಖ್ಯ ಬಾಧ್ಯತೆಗಳಿಂದ ನುಣುಚಿಕೊಂಡು, ಚೆಂಡು ಮತ್ತು ಬ್ಯಾಟನ್ನಿಡಿದು ಸದಾ ಮೈದಾನದಲ್ಲೇ ಉಳಿದಿದ್ದಾರೆ. ವಾಸ್ತವದಲ್ಲಿ ಕ್ರಿಕೆಟ್ ಎಂಬುದು ಇಂದು ಒಂದು ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಜೂಜಾಟವಾಗಿ ಬೆಳೆದಿದೆ. ಅದು ಮಾದಕ ವ್ಯಸನದಂತೆ ಯುವ ಪೀಳಿಗೆಯ ನೈಜ ಜವಾಬ್ದಾರಿಕೆಗಳನ್ನು ಕಸಿದುಕೊಂಡಿದೆ. ಆಟೋಟವನ್ನು ನಾನು ಆಕ್ಷೇಪಿಸುತ್ತಿಲ್ಲ, ಆದರೆ ಅತಿಯಾದರೆ ಅಮೃತವೂ ವಿಷ ತಾನೆ? ಹೆಚ್ಚಿನೆಲ್ಲೆಡೆ ನಮ್ಮ ಯುವಕರೇ ಟೂರ್ನ್‌ಮೆಂಟ್‌‌ನ ಮುಖ್ಯ ಪ್ರಾಯೋಜಕರಾಗಿ ಹಗಲಿರುಳೂ ಓಡಾಡುತ್ತಿದ್ದಾರೆ. ಆದಿತ್ಯವಾರವಂತೂ ಮುಂಜಾನೆ ಮೈದಾನಕ್ಕೆ ಇಳಿದರೆ, ಅಲ್ಲಿಂದ ಹೊರಬರುವುದೇ ಮುಸ್ಸಂಜೆ. ಮರುದಿನವೂ ಮಾರನೆ ದಿನವೂ ಮತ್ತು ಹೊನಲು ಬೆಳಕಿನ ಪಂದ್ಯಾಟಗಳೂ ಇವೆ. ಪಕ್ಕದ ಮಸೀದಿಯಲ್ಲಿ ಸಾಮೂಹಿಕ ನಮಾಝ್‌ ನಡೆಯುತ್ತಿರುವಾಗಲೂ ನಮ್ಮ ಯುವಕರು ಕ್ಯಾರೇ ಅನ್ನುತ್ತಿಲ್ಲ. ಅಷ್ಟಕ್ಕೂ ಯುವಕರು ಕ್ರಿಕೆಟ್‌ಗೆ ಎಡಿಟ್‌ ಆಗಿದ್ದಾರೆ.

ಯಾಕೋ ನೆನಪಾಗುತ್ತಿದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಎದ್ದೇಳಲಾಗದೆ, ನಡೆದಾಡಲಾಗದೆ, ಅತ್ತಿತ್ತ ಸರಿದು ಮಲಗಲೂ ಸಾಧ್ಯವಾಗದೆ, ಹಾಸಿಗೆಯಲ್ಲೇ ತನ್ನ ಯೌವನವನ್ನು ಸವೆಸಿದ ಓರ್ವರನ್ನು ಕಂಡು ಮಾತಾಡಿಸಿದ್ದೆ. ಪಾಪ, ಏಕಮುಖವಾಗಿ ಮಲಗಿ ಬೆನ್ನಲ್ಲಿ ಹುಣ್ಣುಗಳಾಗಿವೆ. ಮಾತಿನ ಮಧ್ಯೆ ಅವರು: “ನನಗೆ ಯಾವ ಆಸೆಯೂ ಇಲ್ಲ, ಮಸೀದಿಗೆ ತೆರಳಿ ಐದು ಹೊತ್ತಿನ ಸಾಮೂಹಿಕ ನಮಾಝ್‌ನಲ್ಲಿ ಭಾಗಿಯಾಗುವ ಆರೋಗ್ಯ ಸಿಕ್ಕಿದರೆ ಸಾಕು” ಎಂದು ಕಣ್ಣೀರೊರೆಸುತ್ತಾ ಹೇಳಿದ್ದರು. ಆದರೆ ಆರೋಗ್ಯವಂತರಾಗಿದ್ದೂ ನಮ್ಮ ಅವಸ್ಥೆ ಹೇಗಿದೆ? ನಮ್ಮ ಆರೋಗ್ಯವನ್ನೂ ಅಲ್ಲಾಹನು ಅಚಾನಕ್‌ ಕಸಿದು ಕೊಂಡರೆ? ನಮ್ಮ ಬಿಡುವು, ಯೌವನವನ್ನು ಇಲ್ಲಿನ ಮೈದಾನದಲ್ಲೇ ಸವೆಸಿ ಬಿಟ್ಟರೆ, ಯಾವ ನೆರಳೂ ಸಿಗದ ಮಹ್‌ಶರದ ಆ ಭಯಾನಕ ಮೈದಾನದಲ್ಲಿ ನಮ್ಮ ಅವಸ್ಥೆ ಏನಾದೀತು? ಅಲ್ಲಾಹನ ವಿಶೇಷ ಸಂಪ್ರೀತಿಗೆ ಪಾತ್ರವಾದ ಮತ್ತು ಕಿಯಾಮತ್‌ನ ಕಠಿಣತೆಯ ವೇಳೆ ಸುರಕ್ಷಿತತೆ ಪಡೆದು ಅಲ್ಲಾಹನ ಕಾರುಣ್ಯದ ನೆರಳಲ್ಲಿ ಆಶ್ರಯ ಪಡೆಯುವ ಏಳು ವಿಭಾಗದ ಸೌಭಾಗ್ಯವಂತರಲ್ಲಿ, “ಅಲ್ಲಾಹನ ಆರಾಧನೆಯಲ್ಲಿ ಬೆಳೆದ ಯುವಕ”ರಿದ್ದಾರೆ. ಆದ್ದರಿಂದ ಎಲ್ಲ ನಿರರ್ಥಕ ಮತ್ತು ಅನಗತ್ಯಗಳಿಂದ ದೂರ ಸರಿದು, ಬಿಡುವು ಮತ್ತು ಆರೋಗ್ಯವನ್ನು ಅಲ್ಲಾಹನ ದೀನಿನ ಮಾರ್ಗದಲ್ಲಿ ಸದುಪಯೋಗಿಸುವ ಸೌಭಾಗ್ಯವಂತರಾಗೋಣ! ನಮ್ಮ ಯುವಕರನ್ನು ಅಲ್ಲಾಹನು ಸದಾ ಅನುಗ್ರಹಿಸಲಿ!

ಬರಹ: ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು

Check Also

‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

201ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ …

Leave a Reply

Your email address will not be published. Required fields are marked *