Friday , April 3 2020
Breaking News
Home / ಲೇಖನ / ಏನಿದು ತಲಾಕ್ ? ತಲಾಕ್ ನೀಡುವ ಸರಿಯಾದ ವಿಧಾನ ಯಾವುದು ?

ಏನಿದು ತಲಾಕ್ ? ತಲಾಕ್ ನೀಡುವ ಸರಿಯಾದ ವಿಧಾನ ಯಾವುದು ?

ಕೇಂದ್ರ ಸರಕಾರವು ಮುತ್ತಾಲಕನ್ನು ನೀಡುವವರಿಗೆ 3 ವರ್ಷದ ಜೈಲಿನ ಕಾನೂನನ್ನು ಕೊನೆಗೂ ಜಾರಿಗೊಳಿಸಿದೆ. ವಿಶ್ವದ ಯಾವುದೇ ದೇಶದಲ್ಲಿ ಇಂತಹದೊಂದು ಕಾನೂನು ಜಾರಿಯಲ್ಲಿಲ್ಲ. ಪ್ರಕೃತಿ ಸಹಜ ಧರ್ಮವಾದ ಪವಿತ್ರ ಇಸ್ಲಾಮಿನಲ್ಲೂ ಇಂತಹದೊಂದು ಕಾನೂನು ಇದುವರೆಗೂ ಈ ಭೂಮಿಯಲ್ಲಿ ಜಾರಿಯಾಗಲಿಲ್ಲ. ಮೂರು ಬಾರಿ ತಲಾಕನ್ನು ಹೇಳುವವನಿಗೆ ಇಂತಹದೊಂದು ಶಿಕ್ಷೆಗೆ ಇಸ್ಲಾಮೀ ಶರೀಅತ್ ನ ಪ್ರಧಾನ ಮೂಲಗಳಾದ ಕುರ್ ಆನ್ ಹಾಗೂ ಹದೀಸ್ ನೊಂದಿಗೆ ಯಾವುದೇ ಸಂಭಂಧವಿಲ್ಲ.

ಸರಕಾರದ ಈ ನಿಯಮದ ಪ್ರಕಾರ, ಯಾವುದೇ ಮಹಿಳೆ ಪೋಲೀಸ್ ಠಾಣೆಗೆ ಹೋಗಿ ತನ್ನ ಪತಿಯು ಮೂರು ತಲಾಕನ್ನು ನೀಡಿದ್ದಾನೆ ಎಂದು ಪ್ರಕರಣವನ್ನು ದಾಖಲಿಸಿದಲ್ಲಿ (ನಿಜವಾಗಿಯೂ ನೀಡಿದ್ದಾನೋ ಇಲ್ಲವೋ ಹೇಳತೀರದು) ಪತಿಗೆ ಮೂರು ವರ್ಷ ಜೈಲಲ್ಲಿ ಕೊಳೆಯುವುದು ಕಡ್ಡಾಯ. ಜೈಲಲ್ಲಿ ಇದ್ದುಕೊಂಡೇ ಪತಿಯು ಮೂರು ವರ್ಷದವರೇಗೆ ಪತ್ನಿ ಮಕ್ಕಳ ಖರ್ಚುಗಳನ್ನೂ ಭರಿಸಲೂಬೇಕು. ಇದೆಂತಹ ವಿಪರ್ಯಾಸ!

ಸರಕಾರವು ಈ ಕಾನೂನನ್ನು, ಮುಸ್ಲಿಮ್ ಮಹಿಳೆಯರ ಮೇಲೆ ಕರುಣೆ ಎಂದು ಪ್ರತಿಪಾದಿಸುತ್ತಿದೆ. ಇದರಲ್ಲಿ ಒಂದಿಷ್ಟು ನೈಜತೆ ಇರುತ್ತಿದ್ದರೂ, ಪತಿಯು 3 ವರ್ಷ ಜೈಲಲ್ಲಿ ಇರುವ ಸಂದರ್ಭದಲ್ಲಿ ಮಕ್ಕಳ ಹಾಗೂ ಪತ್ನಿಯ ಖರ್ಚು ವೆಚ್ಚಗಳನ್ನು ಸರಕಾರವು ವಹಿಸಬೇಕಿತ್ತು. ಅಂತಹ ಯಾವುದೇ ಜವಾಬ್ದಾರಿಯನ್ನು ಹೊರಲು ತಯಾರಿಲ್ಲ. ಪರಿಸ್ಥಿತಿ ಹೀಗಿರುವಾಗ, ತಾವೇ ಆಲೋಚಿಸಿ ನೋಡಿ, ಜೈಲಿನಿಂದ ಹೊರಬಂದ ನಂತರ ಪತಿಯು ಪತ್ನಿಯೊಂದಿಗೆ ಯಾವ ರೀತಿಯ ಸಂಭಂಧವನ್ನು ಇಟ್ಟುಕೊಳ್ಳಲು ಸಾಧ್ಯ ?

ಪ್ರವಾದಿ ಮುಹಮ್ಮದ್ (ಸ.ಅ) ರವರು ಹೇಳುತ್ತಾರೆ, ಧರ್ಮ ಸಮ್ಮತವಾದಂತಹ ಕಾರ್ಯಗಳಲ್ಲಿ ಅಲ್ಲಾಹನಿಗೆ ಅತೀ ಹೆಚ್ಚು ಅಪ್ರಿಯವಾದದ್ದು ತಲಾಕ್ ಆಗಿದೆ. ಆದರೆ ಪ್ರಸಕ್ತ ಸರಕಾರದ ಕಾನೂನಿನ ಪ್ರಕಾರ ತಲಾಕ್ ತಮಾಷೆಯ ವಿಷಯವಾಗಬಹುದು. ಇದರಿಂದ ಒಂದು ಪಕ್ಷದ ಉದ್ದೇಶವು ನೆರವೇರಬಹುದೇ ವಿನಃ ಇದರಿಂದ ಯಾವುದೇ ಪ್ರಯೋಜನವಿಲ್ಲ. ಈ ಮೂಲಕ ಪತಿ, ಪತ್ನಿಯರ ನಡುವೆ ಉಂಟಾದ ಯಾವುದೇ ಒಂದು ವೈಮನಸ್ಯಕ್ಕೆ ಈ ಕಾನೂನಿನ ಮೂಲಕ ಪತಿಯನ್ನು ಬ್ಲ್ಯೇಕ್ ಮೈಲ್ ಮಾಡುವಂತಹ ಅವಕಾಶ ಪತ್ನಿಗೆ ನೀಡಿದಂತಾಗುತ್ತದೆ. ಈ ಮೂಲಕ ಪತಿಯನ್ನು ಜೈಲಿಗಟ್ಟಲೂಬಹುದು. ಪರಿಣಾಮವಾಗಿ ಎರಡು ಪರಿವಾರದ ನಡುವೆ ಜಗಳ ತಾರಕಕ್ಕೇರುವುದರಲ್ಲಿ ಸಂಶಯವಿಲ್ಲ. ಅದಾಗಲೇ ಈ ಕಾನೂನಿನ ಲಾಭವನ್ನು ಪಡೆದುಕೊಂಡು ಅಲ್ಲಲ್ಲಿ ಪ್ರತೀಕಾರವನ್ನು ಪಡೆಯುವಂತಹ ಘಟನೆಗಳು ಪ್ರಾರಂಭವಾಗಿವೆ.

ಪ್ರಸಕ್ತ ಸನ್ನಿವೇಶದಲ್ಲಿ ಈ ಕಾನೂನಿನಿಂದಾಗಿ ಮುಸ್ಲಿಮ್ ಸಮಾಜದ ಸ್ವಾಸ್ಥ್ಯತೆಯು ಕೆಡದ ಹಾಗೆ ಎಚ್ಚರಿಕೆಯನ್ನು ವಹಿಸುವುದು ತೀರಾ ಅಗತ್ಯ. ಆದ್ದರಿಂದ ಚಿಕ್ಕ ಚಿಕ್ಕ ವೈಮನಸ್ಯಗಳಿಗೆ ಒಂದೇ ಬಾರಿಗೆ ಮೂರು ತಲಾಕನ್ನು ಹೇಳುವಂತ ಕೆಟ್ಟ ರಿವಾಜಿಗೆ ಕಡಿವಾಣ ಹಾಕುವ ಹಾಗೆ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ. ಒಂದು ವೇಳೆ ಪತಿ, ಪತ್ನಿಯರ ನಡುವೆ ಭಿನ್ನಾಭಿಪ್ರಾಯಗಳು ಅಂತ್ಯಗೊಳ್ಳದಿದ್ದಲ್ಲಿ ಕುರ್ ಆನಿನ 4 ನೇ ಅಧ್ಯಾಯ(ಸೂರಃ ನಿಸಾಅ‍್)ದ 35ನೇ ಸೂಕ್ತದ ಪ್ರಕಾರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಎರಡು ಪರಿವಾರದ ಕೆಲವು ಗಣ್ಯ ವ್ಯಕ್ತಿಗಳ ಸಮ್ಮಖದಲ್ಲಿ ಪ್ರಕರಣವು ಇತ್ಯರ್ಥವಾಗಬೇಕು. ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ವೈವಾಹಿಕ ಸಂಭಂಧವು ಮುರಿಯದ ಹಾಗೆ ಪ್ರಯತ್ನವನ್ನು ಮಾಡಬೇಕು. ಆದರೂ ಕೆಲವೊಂದು ಸಂದರ್ಭಗಳಲ್ಲಿ ಇಬ್ಬರ ನಡುವಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಇಬ್ಬರೂ ಜೊತೆಗಿರುವುದು ನರಕವಾಗಿಬಿಡಬಹುದು. ಆ ವೇಳೆ ಪರಸ್ಪರ ವೈವಾಹಿಕ ಕರಾರನ್ನು ಕೊನೆಗೊಳಿಸುವುದೇ ಇವರೀರ್ವರಿಗೂ ಇರುವ ಏಕೈಕ ಪರಿಹಾರ. ಇಂತಹ ವೇಳೆ ತಲಾಕನ್ನು ಕೊನೆಯ ಅಸ್ತ್ರವಾಗಿ ಉಪಯೋಗಿಸಲು ಶರೀಅತ್ ಸಮ್ಮತಿಸುತ್ತದೆ. ನಿಜವಾಗಿಯೂ ಇಸ್ಲಾಮೀ ಶರೀಅತ್ ನ ಈ ವಿಶೇಷ ಕಾನೂನು ತನ್ನದೇ ಆದಂತಹ ವಿಶಿಷ್ಟತೆಯನ್ನು ಹೊಂದಿದೆ. ಪರಸ್ಪರ ಸಂಭಂಧಗಳು ಹಳಸುವಂತಹ ರೀತಿಯಲ್ಲಿದ್ದಲ್ಲಿ ತಲಾಕನ್ನು ನೀಡುವ ಮೂಲಕ ಬೇರ್ಪಡುವ ಅವಕಾಶವನ್ನು ನೀಡಿದೆ.

ಪತಿ, ಪತ್ನಿಯರ ನಡುವಿನ ವೈವಾಹಿಕ ಕರಾರನ್ನು ಕೊನೆಗೊಳಿಸುವುದಕ್ಕೆ “ ತಲಾಕ್ ” ಎಂದು ಹೇಳಲಾಗುತ್ತದೆ. ಎರಡು ಷರತ್ತುಗಳೊಂದಿಗೆ ಬರೇ ಒಂದು ತಲಾಕನ್ನು ನೀಡುವುದೇ ಇದರ ಅತ್ಯುತ್ತಮ ನಿಯಮ. 1) ಮಹಿಳೆಯು ಋತು ಸ್ರಾವದ ಅವಧಿಯಲ್ಲಿರಬಾರದು. 2) ತಲಾಕ್ ನೀಡುವಾಗ ಪತ್ನಿಯು ಶುಧ್ದಿಯಲ್ಲಿದ್ದು (ಮುಟ್ಟಾಗಿರಬಾರದು), ಪತಿಯು ಆ ಅವಧಿಯಲ್ಲಿ ಸಂಭೋಗವನ್ನು ಮಾಡಿರಬಾರದು. ಈಗ ಒಂದು ತಲಾಕನ್ನು ನೀಡುವ ಮೂಲಕ ಇದ್ದತ್ (ತಲಾಕ್ ನ ನಂತರ ಮೂರು ಮುಟ್ಟಿನ ಸಮಯ) ನ ಅವಧಿಯಲ್ಲಿ ಪುನಃ ಪತ್ನಿಯನ್ನು ಹಿಂಪಡೆಯಬಹುದು. ಅಂದರೆ ಪತಿ, ಪತ್ನಿಯರು ತಮ್ಮ ನಡುವಿನ ಸಂಪರ್ಕವನ್ನು ಪುನಃ ನಿಕಾಹ್ ಇಲ್ಲದೇ ಬಾಕಿ ಇರಿಸಬಹುದು.

ಒಂದು ವೇಳೆ ಇದ್ದತ್ ನ ಅವಧಿ ಪೂರ್ತಿಗೊಂಡ ನಂತರ ಇಬ್ಬರೂ ತಮ್ಮ ವೈವಾಹಿಕ ಸಂಭಂಧವನ್ನು ಮುಂದುವರಿಸಬೇಕೆಂದು ಬಯಸಿದಲ್ಲಿ ಪುನಃ ನಿಕಾಹ್ ಮಾಡಿ ಜೊತೆಯಲ್ಲಿರಬಹುದು. ಮಾತ್ರವಲ್ಲ, ಇದ್ದತ್ ನ ಅವಧಿ ಮುಗಿದ ನಂತರ ಬೇರೆ ಪುರುಷನೊಂದಿಗೆ ನಿಖಾಃ ಮಾಡಬೇಕೆಂದು ಬಯಸಿದಲ್ಲಿ ಅದಕ್ಕೂ ಅವಕಾಶವಿರುತ್ತದೆ. ಒಟ್ಟಲ್ಲಿ ಸಂಭಂಧವನ್ನು ಮರು ಸ್ಥಾಪಿಸಲಿಕ್ಕೂ ಅಥವಾ ಇದ್ದತ್ ನ ನಂತರ ಬೇರ್ಪಟ್ಟು ಬೇರೆ ನಿಖಾಃವನ್ನು ಮಾಡಲಿಕ್ಕೂ ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಸಾರಾಂಶವೇನೆಂದರೆ, ತಲಾಕ್ ಅಲ್ಲದೇ ಬೇರೆ ಉಪಾಯವೇ ಇಲ್ಲ ಎಂಬ ಸಂದರ್ಭದಲ್ಲಿ ಬರೇ ಒಂದು ತಲಾಕ್ ಗೇ ಸೀಮಿತಗೊಳಿಸಬೇಕು. ಇದ್ದತ್ ನ ಅವಧಿಯಲ್ಲಿ ತಾನು ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವ ಸಂದರ್ಭ ಬಂದರೆ ಪುನಃ ನಿಕಾಹ್ ಮಾಡಿಕೊಳ್ಳುವುದಕ್ಕೆ ದಾರಿಯು ಸುಗಮವಾಗಿರಬೇಕು. ಒಂದೇ ಬಾರಿ ಮೂರು ತಲಾಕನ್ನು ಹೇಳುವುದರಿಂದ ಸಂಪೂರ್ಣವಾಗಿ ದೂರವಿರಬೇಕು. ಯಾಕೆಂದರೆ ಹೀಗೆ ಮಾಡುವುದರಿಂದ ಪುನಃ ನಿಖಾಹ್ ಮಾಡುವ ಅಥವಾ ಪತ್ನಿಯನ್ನು ಮರುಪಡೆಯುವ ಅವಕಾಶವು ಕೈತಪ್ಪಿದಂತಾಗುತ್ತದೆ.

ತಲಾಕ್ ಹೇಳುವ ಸ್ವಾತಂತ್ರ್ಯ ಪುರುಷನಿಗೆ ಯಾಕೆ ?
ಸಾಮಾನ್ಯವಾಗಿ ಪುರುಷರಲ್ಲಿ ಮಹಿಳೆಯರಿಗಿಂತ ಆಲೋಚನಾ ಶಕ್ತಿ, ತಾಳ್ಮೆ, ಸಹನೆ ಜಾಸ್ತಿ ಇರುತ್ತದೆ. ಪ್ರಕೃರ್ತಿ ಸಹಜವಾಗಿ ಅಲ್ಲಾಹನು ಪುರುಷರಿಗೆ ನೀಡಿದಂತಹ ಅಸಾಮಾನ್ಯ ಶಕ್ತಿ, ಬೃಹತ್ ಕೆಲಸಗಳನ್ನು ನಿರ್ವಹಿಸುವಂತಹ ಸಾಮರ್ಥ್ಯವನ್ನು ನೋಡಿದರೆ ಈ ವಿಶೇಷತೆಯು ಮಹಿಳೆಗೆ ನೀಡಲಾಗಿಲ್ಲ. ಆದ್ದರಿಂದ ನಾಯಕತ್ವವನ್ನು ಪುರುಷನೇ ಸಮರ್ಥವಾಗಿ ನಿರ್ವಹಿಸಬಲ್ಲ. ಈ ವಿಷಯವನ್ನು ನಾವು ನಮ್ಮ ಬುದ್ಧಿಶಕ್ತಿಯಿಂದ ಅಳೆಯುವುದಕ್ಕಿಂತ ಇವರೀರ್ವರನ್ನೂ ಸೃಷ್ಟಿಸಿದ ಅಲ್ಲಾಹನಿಂದ ಅರಿಯೋಣ, ಅಲ್ಲಾಹನು ಪವಿತ್ರ ಕುರ್ ಆನ್ ನಲ್ಲಿ ಅತ್ಯಂತ ಸ್ಪಷ್ಟವಾಗಿ ಈ ಸಂಶಯವಕ್ಕೆ ಉತ್ತರವನ್ನು ನೀಡುತ್ತಾನೆ. ಸೂರಃ ಬಕರ, ಸೂಕ್ತ 228, ಸೂರಃ ನಿಸಾಅ್ : ಸೂಕ್ತ 34. ಪುರುಷನೇ ಜೀವನದ ಪ್ರಯಾಣದ ನಾಯಕತ್ವವನ್ನು ನೀಡಲು ಅರ್ಹನು. ತೀರ್ಪನ್ನು ನೀಡುವ ಹಕ್ಕು ಪುರುಷನಿಗೇ ಸಲ್ಲುತ್ತದೆ. ಅದಾಗಿಯೂ ಪುರುಷನು ತನ್ನೆಲ್ಲಾ ಕಾರ್ಯಗಳಲ್ಲಿ ಮಹಿಳೆಯನ್ನೂ ಜೊತೆಗಾರನಾಗಿಸಬೇಕು. ಇವೇ ಕಾರಣಗಳಿಂದಾಗಿ ತಲಾಕ್ ನೀಡುವ ಹಕ್ಕನ್ನು ಶರೀಅತ್ ನಲ್ಲಿ ಪುರುಷನಿಗೆ ನೀಡಲಾಗಿದೆ.

ಖುಲಾ : ಶರೀಅತ್ ನಲ್ಲಿ ವೈವಾಹಿಕ ಕರಾರನ್ನು ಕೊನೆಗೊಳಿಸುವ ನಿಯಮಗಳಲ್ಲಿ “ಖುಲಾ” ಕೂಡಾ ಒಂದಾಗಿದೆ. ಪುರುಷನ ಕಿರುಕುಳಗಳನ್ನು ತಾಳಲಾರದೆ, ಅತ್ತ ತಲಾಕನ್ನೂ ನೀಡದೇ ಪತಿಯು ಸತಾಯಿಸುತ್ತಿದ್ದಲ್ಲಿ ಮಹಿಳೆಗೆ ಅಧಿಕಾರವನ್ನು ನೀಡಲಾಗಿದೆ. ಒಂದೋ ತನ್ನ ಮೆಹರನ್ನು( ವಧು ದಕ್ಷಿಣೆ) ಹಿಂದುರುಗಿಸಬೇಕು. ಅಥವಾ ಇಂತಿಷ್ಟು ಹಣವನ್ನು ನೀಡಿ ಆತನ ಪರಸ್ಪರ ಒಪ್ಪಿಗೆಯ ಮೂಲಕ ತನ್ನನ್ನು ಅವನಿಂದ ಬೇರ್ಪಡಿಸಬೇಕು. ಇದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಖುಲಾದಲ್ಲಿ ಇಬ್ಬರ ಒಪ್ಪಿಗೆ ಕಡ್ಡಾಯ. ಇಲ್ಲದಿದ್ದಲ್ಲಿ ಖುಲಾ ಆಗುವುದಿಲ್ಲ. ತಲಾಕ್ ನಲ್ಲಿ ಹೇಗೆ ಇದ್ದತ್ ಇದೆಯೋ, ಅದೇ ತರಹ ಖುಲಾದ ನಂತರವೂ ಇದ್ದತ್ ಖಡ್ಡಾಯ. ಪುನಃ ಒಂದು ವೇಳೆ ಇಬ್ಬರೂ ಸತಿ, ಪತಿಯರಾಗಿ ಮುಂದುವರಿಯಬೇಕೆಂದು ಬಯಸಿದಲ್ಲಿ ನಿಖಾಹ ಖಡ್ಡಾಯವಾಗಿ ಮಾಡಲೇಬೇಕು. ಹಾಗೂ ಪರಸ್ಪರರ ಒಪ್ಪಿಗೆಯೂ ಅನಿವಾರ್ಯ.

ತಲಾಕ್ ನ ವಿಧಗಳು:

  • 1) ತಲಾಕ್ ರಜ್ಈ
  • 2) ತಲಾಕ್ ಬಾಯಿನ್
  • 3) ತಲಾಕ್ ಮುಘಲ್ಲಝ.

ತಲಾಕ್ ರಜ್ಈ : ಸ್ಪಷ್ಟವಾದ ಮಾತುಗಳ ಮೂಲಕ ಒಂದು ಅಥವಾ ಎರಡು ತಲಾಕನ್ನು ನೀಡುವುದು. ಉದಾಃ, ಪತಿಯು, ಪತ್ನಿಗೆ “ ನಾನು ನಿನಗೆ ತಲಾಕ್ ನೀಡಿದೆ “ ಎಂದು ಹೇಳುವುದು. ಈ ತಲಾಕ್ ನಿಂದ ಕೂಡಲೇ ನಿಖಾಃ ಕೊನೆಗೊಳ್ಳುವುದಿಲ್ಲ. ಇದ್ದತ್ ನ ಅವಧಿ ಪೂರ್ತಿಗೊಳ್ಳುವ ತನಕ ನಿಖಾಃ ಬಾಕಿ ಇರುವುದು. ಇದ್ದತ್ ನ ಅವಧಿಯಲ್ಲಿ ಪತಿಯು ಯಾವಾಗ ಬೇಕಾದರೂ ಪತ್ನಿಯನ್ನು ನಿಖಾಃ ಮಾಡದೆಯೇ ಹಿಂಪಡೆಯಬಹುದು. ಈ ಅವಧಿಯಲ್ಲಿ ಪತ್ನಿಯನ್ನು ವಾಪಾಸು ಪಡೆಯುವುದಾದರೆ ಪತ್ನಿಯ ಅನುಮತಿಯ ಅಗತ್ಯವೂ ಇಲ್ಲ ಎಂಬುವುದು ನೆನಪಿನಲ್ಲಿರಲಿ.

ತಲಾಕ್ ಬಾಯಿನ್ : ಅತ್ಯಂತ ಸ್ಪಷ್ಟವಾಗಿ ತಲಾಕ್ ನ ಸೂಚನೆಯನ್ನು ನೀಡಬಲ್ಲಂತಹ ಶಬ್ದಗಳಲ್ಲದ ರೂಪದಲ್ಲಿ ಪತ್ನಿಯನ್ನು ತ್ಯಜಿಸುವುದು. ಉದಾಃ, ನೀನು ನಿನ್ನ ತಾಯಿಯ ಮನೆಗೆ ತೆರಳು, ನಾನು ನಿನಗೆ ಬಿಟ್ಟು ಬಿಟ್ಟೆ, ಮುಂತಾದ ವಾಕ್ಯಗಳಲ್ಲಿ ತಲಾಕ್ ನ ವಿವರಣೆ ಇಲ್ಲ. ಆದರೆ ಪತಿಯು, ನನ್ನ ಉದ್ದೇಶ ಈ ವಾಕ್ಯಗಳ ಮೂಲಕ ತಲಾಕ್ ನಿಡುವುದಾಗಿದೆ ಎಂದು ಹೇಳಿದರೆ ತಲಾಕ್ ಸಿಂಧುವಾಗುವುದು. ಈ ವಾಕ್ಯಗಳ ಮೂಲಕ ನೀಡುವ ತಲಾಕ್ ಗಳನ್ನು “ತಲಾಕ್ ಬಾಯಿನ್” ಎಂದು ಹೇಳಲಾಗುತ್ತದೆ. ಇದರಿಂದ ನಿಕಾಹ್ ಕೂಡಲೇ ಕೊನೆಗೊಳ್ಳವುದು. ಕಾರಣಾಂತರದಿಂದ ಸಂಭಂದವನ್ನು ಬಾಕಿಇರಿಸಲು ಬಯಸಿದರೆ, ನಿಕಾಹ್ ಮಾಡುವ ಮೂಲಕ ಮಾತ್ರ ಇಬ್ಬರೂ ಸತಿ , ಪತಿಗಳಾಗಿ ಮುಂದುವರಿಯಲು ಸಾಧ್ಯ.

ತಲಾಕ್ ಮುಘಲ್ಲಝ : ಒಂದೇ ಬಾರಿಗೆ ಮೂರು ತಲಾಕನ್ನು ನೀಡುವುದು ಅಥವಾ ಮೂರು ಬಾರಿ ತಲಾಕನ್ನು ಬೇರೆ ಬೇರೆ ಸಮಯದಲ್ಲಿ ಹೇಳುವುದಕ್ಕೆ ತಲಾಕ್ ಮುಘಲ್ಲಝ ಎಂದು ಹೇಳಲಾಗುತ್ತದೆ. ಅದು ಒಂದೇ ಸ್ಥಳದಲ್ಲಾಗಲೀ ಅಥವಾ ಒಂದೇ ಶುಚಿ( ಮುಟ್ಟಾಗಿರುವ ಸಮಯವಲ್ಲ) ಯಲ್ಲಿ ನೀಡಿದ್ದಾಗಲೀ. ಇಂತಹ ಸಂಧರ್ಭದಲ್ಲಿ ಪತಿಗೆ ಪತ್ನಿಯನ್ನು ಹಿಂಪಡೆಯುವ ಅಥವಾ ಮರು ನಿಖಾಃವನ್ನು ಮಾಡಿ ಸತಿ, ಪತಿಗಳಾಗುವ ಯಾವುದೇ ಅವಕಾಶವಿರುವುದಿಲ್ಲ. ಪುನಃ ವೈವಾಹಿಕ ಜೀವನವನ್ನು ಮುಂದುವರಿಸಬೇಕೆಂದು ಬಯಸಿದಲ್ಲಿ ಅದಕ್ಕೆ ಕೆಲವೊಂದು ನಿಯಮಗಳಿವೆ. ಮಹಿಳೆ ಸ್ವ ಇಚ್ಛೆಯಿಂದ ಒಬ್ಬ ಪುರುಷನೊಂದಿಗೆ ನಿಖಾಃವನ್ನು ಮಾಡಿಕೊಳ್ಳಬೇಕು. ಇಬ್ಬರು ಪರಸ್ಪರ ಸಂಭೋಗವನ್ನೂ ಮಾಡಿರಬೇಕು. ನಂತರ ಎರಡನೇ ಪತಿಯ ಮರಣವು ಸಂಭವಿಸಿದಲ್ಲಿ ಅಥವಾ ಎರಡನೇ ಪತಿಯು ಸ್ವ ಇಚ್ಛೆಯಿಂದ ತಲಾಕ್ ನೀಡಿದಲ್ಲಿ , ಇದ್ದತ್ ನ ಅವಧಿಯು ಪೂರ್ಣಗೊಂಡ ನಂತರ ಮೊದಲನೇ ಪತಿಯೊಂದಿಗೆ ಪುನಃ ನಿಖಾಃ ಮಾಡಿಕೊಳ್ಳಬಹುದು. ಪವಿತ್ರ ಕುರ್ ಆನ್ ನ ಎರಡನೇ ಅಧ್ಯಾಯವಾದ ಸೂರಃ ಅಲ್ ಬಕರದ 230 ನೇ ಸೂಕ್ತದಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ.

فَاِنْ طَلَّقَہَا فَلَا تَحِلُّ لَہُ مِنْ بَعْدُ حَتَّی تَنْکِحَ زَوْجاً غَيرَہُ، فَاِنْ طَلَّقَہَا فَلَا جُنَاحَ عَلَيہِمَا اَن يَّتَرَاجَعَا اِنْ ظَنَّا اَن يُّقِيمَا حُدَوْدَ اللّٰہِ

(ಪತಿಯು ಮೂರನೇ ತಲಾಕನ್ನೂ ನೀಡಿದಲ್ಲಿ, ಎಲ್ಲಿಯವರೇಗೆ ಆ ಮಹಿಳೆಯ ನಿಖಾಃ ಬೇರೆ ಪುರುಷನೊಂದಿಗೆ ಆಗುವುದಿಲ್ಲವೋ ಅಲ್ಲಿಯವರೇಗೆ ಆ ಮಹಿಳೆ ಪುರುಷನಿಗೆ ಹಲಾಲ್ (ಧರ್ಮ ಸಮ್ಮತ) ಆಗುವುದಿಲ್ಲ. ಒಂದು ವೇಳೆ ಎರಡನೇ ಪತಿಯೂ ತಲಾಕ್ ನೀಡಿದಲ್ಲಿ ಇವರೀರ್ವರು ಮರು ನಿಖಾಃ ಮಾಡಿ ಜೊತೆಗಿರುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಅವರಿಬ್ಬರೂ ಅಲ್ಲಾಹನ ಆದೇಶವನ್ನು ಧಿಕ್ಕರಿಸುವುದಿಲ್ಲ ಎಂಬ ಧೃಢ ನಿರ್ಧಾರವನ್ನಿಟ್ಟಿರಬೇಕು.) ಇಂತಹ ಪ್ರಕ್ರಿಯೆಗೆ ಶರೀಅತ್ ನಲ್ಲಿ ಹಲಾಲಾ ಎಂದು ಹೇಳಲಾಗುತ್ತದೆ. ಕುರ್ ಆನ್ ನಲ್ಲಿ ಇದರ ಬಗ್ಗೆ ವ್ಯಾಖ್ಯಾನವಿದೆ. ಇದಕ್ಕೂ ಕೆಲವೊಂದು ನಿಭಂದನೆಗಳಿವೆ.

  • 1) ಎರಡನೇ ನಿಖಾಃ ಕಾನೂನು ಪ್ರಕಾರ ಆಗಿರಬೇಕು.
  • 2) ಎರಡನೇ ಪತಿಯು ಸಂಭೋಗವನ್ನು ಮಾಡಿರಬೇಕು.
  • 3) ಎರಡನೇ ಪತಿಯು ಸ್ವ ಇಚ್ಛೆಯಿಂದ ತಲಾಕನ್ನು ನೀಡಿರಬೇಕು. ಅಥವಾ ಮರಣ ಹೊಂದಿರಬೇಕು.
  • 4) ತಲಾಕ್ ನ ಇದ್ದತ್ ನ ಅವಧಿಯು ಪೂರ್ತಿಗೊಂಡಿರಬೇಕು. ಇದೇ ತರಹ ಬರೇ ಹಲಾಲ ಮಾಡುವ ಉದ್ದೇಶದಿಂದ ನಿಖಾಹ್ ಮಾಡುವುದನ್ನು ಇಸ್ಲಾಮ್ ಹರಾಮ್ (ಧರ್ಮಸಮ್ಮತವಲ್ಲ) ಎಂದು ಹೇಳಿದೆ.

ಪವಿತ್ರ ಇಸ್ಲಾಮ್ ಏನು ಬಯಸುತ್ತದೆ : ನಿಖಾಹ್ ದ ಸಂಭಂಧವನ್ನು ಜೀವನಪೂರ್ತಿಗಾಗಿ ಮಾಡಿಕೊಂಡಿರಬೇಕು. ಯಾವ ಕಾರಣಕ್ಕೂ ಇದನ್ನು ಕೊನೆಗೊಳಿಸುವ ಸಂದರ್ಭವೇ ಬಾರದ ಹಾಗೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಇದರ ಕೆಟ್ಟ ಪರಿಣಾಮಗಳು ಪತಿ, ಪತ್ನಿಯರ ನಡುವೆ ಮಾತ್ರವಲ್ಲ, ಮಕ್ಕಳ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಹಾಗೂ ಎರಡು ಪರಿವಾರಗಳ ನಡುವೆ ನಿರಂತರ ವೈಮಸ್ಯಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಇಡೀ ಸಮುದಾಯವೇ ನಲುಗುತ್ತದೆ. ಇವೇ ಕೆಲವು ಕಾರಣಗಳಿಂದಾಗಿ ಪತಿ, ಪತ್ನಿಯರಿಗೆ ಶರೀಅತ್‍ ಕೆಲವೊಂದು ನಿಭಂಧನೆಗಳನ್ನು ನೀಡಿದೆ. ಅವುಗಳನ್ನು ಪಾಲಿಸುವ ಮೂಲಕ ವೈವಾಹಿಕ ಜೀವನವು ಭದ್ರಗೊಳ್ಳುವುದು ಮಾತ್ರವಲ್ಲ, ಉತ್ತಮ ಸಮಾಜವು ನಿರ್ಮಾಣಗೊಳ್ಳುವುದು.

ಒಂದು ವೇಳೆ ಭಿನ್ನಾಭಿಪ್ರಾಯವಾದಲ್ಲಿ , ಮೊತ್ತ ಮೊದಲನೆಯದಾಗಿ ಇಬ್ಬರು ಸೇರಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಒಂದು ವೇಳೆ ಪತಿಯ ಇಚ್ಛೆಗೆ ವಿರುಧ್ದವಾದ ಯಾವುದಾದರೂ ಸಮಸ್ಯೆಯನ್ನು ಪತ್ನಿಯಲ್ಲಿ ಕಂಡಲ್ಲಿ, ಅವಳಿಗೆ ಬುಧ್ದಿವಾದ ಹೇಳುವ ಮೂಲಕ, ಕೆಲವೊಂದು ಎಚ್ಚರವನ್ನು ನೀಡುವ ಮೂಲಕ ವಿವಾದವನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದು ಪತಿಗೆ ಆದೇಶವನ್ನು ನೀಡಲಾಗಿದೆ. ಜೊತೆಗೆ ಪತಿಗೂ ಕೆಲವೊಂದು ಶಿಷ್ಟಾಚಾರಗಳನ್ನು ಕಲಿಸಲಾಗಿದೆ. ಪತ್ನಿಯನ್ನು ತನ್ನ ಕೆಲಸದ ಆಳು ಎಂದು ಯಾವ ಕಾರಣಕ್ಕೂ ತಿಳಿಯಬಾರದು. ಅವಳಿಗೆ ಅವಳದ್ದೇ ಕೆಲವೊಂದು ಹಕ್ಕುಗಳಿವೆ. ಅದನ್ನು ನಿಭಾಯಿಸಲೇಬೇಕು. ಪತ್ನಿಯನ್ನು ಕೆಲಸದಾಳು ಅಥವಾ ಸೇವಕಿ ಎಂದು ತಿಳಿಯಬಾರದು. ಅವಳಿಗೆ ಸಲ್ಲತಕ್ಕಂತಹ ಸೇವೆಗಳಲ್ಲಿ ಅವಳಿಗೆ ಊಟ, ವಸತಿ, ಬಟ್ಟೆ ಬರೆ ಮುಂತಾದ ಅಗತ್ಯತೆಗಳು ಸೇರಿವೆ. ಪ್ರವಾದಿ ಮುಹಮ್ಮದ್ (ಸ.ಅ) ರವರು ಒಂದು ಹದೀಸ್ ನಲ್ಲಿ ಹೇಳುತ್ತಾರೆ, ಯಾರು ತಮ್ಮ ಪತ್ನಿ, ಮಕ್ಕಳಿಗೆ ಉತ್ತಮರೋ ಅವರು ನಿಮ್ಮ ಪೈಕಿ ಅತ್ಯುತ್ತಮರಾಗಿದ್ದಾರೆ. ಒಂದು ಮಾತಂತೂ ಸತ್ಯ. ಯಾರು ಅವರ ಹಕ್ಕುಗಳನ್ನು ನೀಡುತ್ತಾರೋ, ಖಂಡಿತವಾಗಿಯೂ ಅವರು ಪತ್ನಿ, ಮಕ್ಕಳ ದೃಷ್ಟಿಯಲ್ಲಿ ಒಳ್ಳೆಯವರಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೊನೆಯದಾಗಿ ಪುನಃ ಒಮ್ಮೆ ನಮ್ಮ ಸಮುದಾಯಕ್ಕೆ ವಿನಂತಿಯನ್ನು ಮಾಡುವುದೇನೆಂದರೆ, ಒಂದೇ ಬಾರಿ ಮೂರು ತಲಾಕನ್ನು ಹೇಳುವಂತಹ ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಿ. ಅಂತಹ ಸಂದರ್ಭ ಬಂದದ್ದೇ ಆದಲ್ಲಿ ಬರೇ ಒಂದು ತಲಾಕನ್ನು ನೀಡಿ. ತಲಾಕ್ ಆದ ನಂತರ ಈ ಸಮಸ್ಯೆಗೆ ಪರಿಹಾರಕ್ಕಾಗಿ ನ್ಯಾಯಾಲಯದ ಕದ ತಟ್ಟುವ ಮುಂಚೆ ಸಮುದಾಯದ ಉಲಮಾಗಳನ್ನು ಸಂಪರ್ಕಿಸಿ. ಇದರಿಂದ ಶರೀಅತ್ ನ ನಿಯಮದ ಪ್ರಕಾರ ಸಮಸ್ಯೆಗಳು ಇತ್ಯರ್ಥಗೊಳ್ಳುವವು. ಅಲ್ಲಾಹು ಅಂತಹ ತೌಫೀಕ್ ನಮಗೆಲ್ಲರಿಗೂ ನೀಡಲಿ (ಆಮೀನ್)

ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ, ಕಾರ್ಕಳ.
[email protected]

Check Also

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು …

Leave a Reply

Your email address will not be published. Required fields are marked *