Monday , August 26 2019
Breaking News
Home / ರಾಷ್ಟ್ರೀಯ / ಕಥುವಾ ಅತ್ಯಾಚಾರ ಪ್ರಕರಣ: 7 ಮಂದಿ ಆರೋಪಿಗಳಲ್ಲಿ 6 ಮಂದಿಗೆ ಶಿಕ್ಷೆ

ಕಥುವಾ ಅತ್ಯಾಚಾರ ಪ್ರಕರಣ: 7 ಮಂದಿ ಆರೋಪಿಗಳಲ್ಲಿ 6 ಮಂದಿಗೆ ಶಿಕ್ಷೆ

ಸಂದೇಶ ಇ-ಮ್ಯಾಗಝಿನ್: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏಳು ಆರೋಪಿಗಳಲ್ಲಿ ಆರು ಮಂದಿಯನ್ನು ಪಠಾಣ್‌ಕೋಟ್ ನ್ಯಾಯಾಲಯವು ದೋಷಿ ಎಂದು ಹೇಳಿದೆ. ನ್ಯಾಯಾಧೀಶರು ಆರೋಪಿಗಳಾದ ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (ಎಸ್ಪಿಒ) ದೀಪಕ್ ಖಜುರಿಯಾ ಮತ್ತು ಸುರೇಂದರ್ ವರ್ಮಾ, ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್, ಆನಂದ್ ದತ್ತಾ ಮತ್ತು ಪರ್ವೇಶ್ ಕುಮಾರ್ ಅವರನ್ನು ದೋಷಿಗಳೆಂದು ಘೋಷಿಸಿದ್ದಾರೆ. ಸಂಜೀ ರಾಮ್‌ನ ಮಗ ವಿಶಾಲ್ ನನ್ನು ಮಾತ್ರ ಪ್ರಕರಣದಲ್ಲಿ ನಿರ್ದೋಷಿ ಎನ್ನಲಾಗಿದೆ.

ಎಂಟು ವರ್ಷ ವಯಸ್ಸಿನ ಅಲೆಮಾರಿ ಮುಸ್ಲಿಂ ಬುಡಕಟ್ಟು ಜನಾಂಗದ ಹುಡುಗಿಯನ್ನು ಕಳೆದ ವರ್ಷ ಜನವರಿ 10 ರಂದು ಅಪಹರಿಸಿ, ಮಾದಕವಸ್ತು ನೀಡಿ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಪ್ರಕರಣದಲ್ಲಿ ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಏಪ್ರಿಲ್ 2018 ರಲ್ಲಿ ಆರಂಭವಾದ ವಿಚಾರಣೆಯು ಕಳೆದ ವಾರ ಜೂನ್ 3 ರಂದು ಕೊನೆಗೊಂಡಿತು.

ಪ್ರಕರಣದಲ್ಲಿ ಬಂಧಿತ ಬಾಲಾಪರಾಧಿಯೊಬ್ಬನ ವಯಸ್ಸಿನ ಬಗ್ಗೆ ದಾಖಲಾದ ಅರ್ಜಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಲ್ಲಿ ಇನ್ನೂ ವಿಚಾರಣೆಯಲ್ಲಿರುವ ಕಾರಣ ಬಾಲಪರಾಧಿಯನ್ನು ಸದ್ಯಕ್ಕೆ ವಿಚಾರಣೆಯಿಂದ ಕೈಬಿಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಕ್ರೈಂ ಬ್ರಾಂಚ್ ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್ ಮತ್ತು ಆತನ ಪುತ್ರ ವಿಶಾಲ್, ಆತನ ಸೋದರ ಸಂಬಂಧಿ ಬಾಲಾಪರಾಧಿ ಮತ್ತು ಆತನ ಸ್ನೇಹಿತ ಆನಂದ್ ದತ್ತ, ಮತ್ತು ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ದೀಪಕ್ ಖಜುರಿಯಾ ಮತ್ತು ಸುರೇಂದ್ರ ವರ್ಮಾ ಅವರನ್ನು ಬಂಧಿಸಿದ್ದಾರೆ.

ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತಾನನ್ನು ಸಂಜಿರಾಮ್ ನಿಂದ 4 ಲಕ್ಷ ಪಡೆದು ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಿದ್ದ ಆರೋಪದಲ್ಲಿ ಕ್ರೈಸ್ಂ ಬ್ರಾಂಚ್ ಬಂಧಿಸಿತ್ತು.

ಪ್ರಮುಖ ಆರೋಪಿಗಳಾದ -ಸಂಜೀ ರಾಮ್, ದೀಪಕ್ ಖಜುರಿಯಾ ಹಾಗೂ ಪರ್ವೇಶ್ ಕುಮಾರ್ -ಜಮ್ಮು ಕಾಶ್ಮೀರದ ರಣಬೀರ್ ಪೀನಲ್ ಕೋಡ್(RPC) ನ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಅಪರಾಧಿಗಳು ಎಂದು ಸಾಬೀತಾಗಿದ್ದು, ಅವರಿಗೆ ಈ ಕೆಳಕಂಡ ಶಿಕ್ಷೆ ನೀಡಲಾಗಿದೆ.

ಸೆಕ್ಷನ್ 302 (ಕೊಲೆ): ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ
ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ): ಜೀವನಕ್ಕಾಗಿ ಜೈಲು ಶಿಕ್ಷೆ ಮತ್ತು ರೂ 50,000 ದಂಡ
ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ): 25 ವರ್ಷಗಳ ಕಠಿಣ ಜೈಲು ಮತ್ತು ರೂ 50,000 ದಂಡ
ಸೆಕ್ಷನ್ 328 (ವಿಷದ ಆಹಾರದ ಮೂಲಕ ಹಾನಿಗೊಳಿಸಿರುವುದು): 10 ವರ್ಷಗಳ ಕಾಲ ಕಠಿಣ ಸೆರೆವಾಸ ಮತ್ತು 50,000 ದಂಡ
ಸೆಕ್ಷನ್ 363 (ಅಪಹರಣ): ಏಳು ವರ್ಷಗಳ ಕಾಲ ಕಠಿಣ ಸೆರೆವಾಸ ಮತ್ತು ರೂ 50,000 ದಂಡ

ಮೂವರ ಪೈಕಿ ಪರ್ವೇಶ್ ಕುಮಾರ್‌ಗೆ RPC ಸೆಕ್ಷನ್ 376 ಡಿ / 511 ರ ಅಡಿಯಲ್ಲಿ 10 ವರ್ಷಗಳ ಕಾಲ ಕಠಿಣ ಸೆರೆವಾಸ ಮತ್ತು 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಇನ್ನುಳಿದ ಮೂವರು ಆರೋಪಿಗಳಾದ ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತಾ, ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಮತ್ತು ಎಸ್ಪಿಒ ಸುರೇಂದ್ರ ವರ್ಮಾನಿಗೆ RPC ಸೆಕ್ಷನ್ 201 ರ ಅಡಿಯಲ್ಲಿ ಸಾಕ್ಷ್ಯಾಧಾರಗಳ ನಾಶಕ್ಕಾಗಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ ದಂಡ ವಿಧಿಸಲಾಯಿತು. ಈ ಪ್ರಕರಣದಲ್ಲಿ ಸಂಜೀರಾಮ್‌ನ ಮಗ ವಿಶಾಲ್ ಜಂಗೋತ್ರನನ್ನು ಖುಲಾಸೆಗೊಳಿಲಾಗಿದೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *