Tuesday , July 23 2019
Breaking News
Home / ಇಸ್ಲಾಮಿಕ್ ಲೇಖನಗಳು / ಪ್ರವಾದಿ ಮುಹಮ್ಮದ್ (ಸ್ವ.ಅ) ರ ಸಚ್ಚಾರಿತ್ರ್ಯ ಹಾಗೂ ಮದೀನದ ಮುನಾಫಿಕ್ ಗಳು

ಪ್ರವಾದಿ ಮುಹಮ್ಮದ್ (ಸ್ವ.ಅ) ರ ಸಚ್ಚಾರಿತ್ರ್ಯ ಹಾಗೂ ಮದೀನದ ಮುನಾಫಿಕ್ ಗಳು

ನುಬುವ್ವತ್ (ಪ್ರವಾದಿತ್ವ) ನ ಪ್ರಕಾಶ ಹಿರಾ ಗುಹೆಯ ಪ್ರವೇಶದಿಂದ ಆರಂಭಗೊಂಡಿತು. ಮೊತ್ತ ಮೊದಲನೆಯದಾಗಿ ಇದರ ಪ್ರತಿಬಿಂಬವು ಮಕ್ಕಾ ನಗರ ವಾಸಿಗಳ ಸಂಸ್ಕ್ರತಿಯ ಮೇಲೆ ಬಿತ್ತು. ಒಂದು ಮಾತಂತೂ ತಿಳಿದಿರಬೇಕು. ಸ್ವತಃ ಪ್ರವಾದಿ (ಸ್ವ.ಅ) ಯವರು ಮಕ್ಕಾದ ಅತೀ ಶ್ರೇಷ್ಠ ಗೋತ್ರವನ್ನು ಹೊಂದಿದವರಾಗಿದ್ದರು. ಈ ಪ್ರಕಾರ ಒಂದು ಹೊಸ ಧರ್ಮದ ಉಗಮದ ಬಗ್ಗೆ ಮಕ್ಕಾದ ಶ್ರೇಷ್ಠ ವ್ಯಕ್ತಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅರಿವಾಯಿತು. ಈ ಬಗ್ಗೆ ಜನರು ಅಲ್ಲಲ್ಲಿ ಚರ್ಚೆಗಳನ್ನು ಮಾಡಲು ಪ್ರಾರಂಭಿಸಿದರು. ಆ ಕಾಲದಲ್ಲಿ ಮಕ್ಕಾವಾಸಿಗಳಲ್ಲಿ ಎರಡು ತರಹದ ಕುಟುಂಬಗಳಿದ್ದವು. 1) ಕಾಫಿರ್ (ಸತ್ಯ ನಿಷೇಧಿಗಳು ) ಗಳು. ಇವರು ಇಸ್ಲಾಮಿನ ಬದ್ಧ ವೈರಿಗಳಾಗಿದ್ದರು. 2) ತೀರಾ ಸಂಕಷ್ಟದ ಬದುಕನ್ನು ಎದುರಿಸುತ್ತಿರುವ ದುರ್ಬಲರಾದ ಮುಸ್ಲಿಮರು.

ಈ ನಡುವೆ ಪ್ರವಾದಿ (ಸ್ವ.ಅ) ಯವರ ಕರೆಗೆ ಓಗೊಟ್ಟು ಮೊತ್ತ ಮೊದಲು ಇಸ್ಲಾಮನ್ನು ಸ್ವೀಕರಿಸಿದ ಮಹಿಳೆ ಪ್ರವಾದಿ (ಸ್ವ.ಅ) ರವರ ಪತ್ನಿಯಾದ ಹಝ್ರತ್ ಖದೀಜಾ (ರ.ಅ) ರವರಾಗಿದ್ದಾರೆ. ಪುರುಷರಲ್ಲಿ ಹಝ್ರತ್ ಅಬೂಬಕರ್ ಸಿದ್ದೀಕ್ (ರ.ಅ), ಮಕ್ಕಳಲ್ಲಿ ಹಝ್ರತ್ ಅಲೀ ಬಿನ್ ಅಬೂ ತಾಲಿಬ್ (ರ.ಅ) ಹಾಗೂ ಗುಲಾಮರಲ್ಲಿ ಹಝ್ರತ್ ಝೈದ್ ಬಿನ್ ಸಾಬಿತ್ (ರ.ಅ) ರವರಾಗಿದ್ದಾರೆ . ಪುನಃ ಇಸ್ಲಾಮ್ ಸ್ವೀಕಾರದ ಈ ಪರಂಪರೆ ಮುಂದುವರಿಯುತ್ತಾ ಹೋಯಿತು.

ಪವಿತ್ರ ಮಕ್ಕಾದಲ್ಲಿ ಯಹೂದಿಗಳಾಗಲೀ, ಕ್ರಿಶ್ಚಿಯನ್ ಗಳಾಗಲೀ ಇರಲಿಲ್ಲ. ಮಕ್ಕಾದಲ್ಲಿ ಹಝ್ರತ್ ಇಬ್ರಾಹೀಮ್ (ಅ.ಸ) ರವರ ದೀನನ್ನು ವಿರೂಪಗೊಳಿಸಿದ ಒಂದು ನಕ್ಷೆ ಹಾಗೂ ಮೂರ್ತಿಪೂಜೆ ನಡೆಯುತ್ತಿತ್ತು. ಇದಕ್ಕೆ ಹೊರತಾಗಿ ಪವಿತ್ರ ಮದೀನಾ ಮುನವ್ವರದ ವಾತಾವರಣ ನಾನಾ ವಿಷಯಗಳಲ್ಲಿ ಭಿನ್ನತೆಯನ್ನು ಹೊಂದಿತ್ತು. ಮಕ್ಕಾದಲ್ಲಿ ಮುನಾಫಿಕ್ (ಕಪಟ ವಿಶ್ವಾಸಿ) ಗಳಿರಲಿಲ್ಲ. ಒಂದೋ ಸತ್ಯ ನಿಷೇಧಿಗಳು (ಕಾಫಿರ್ )ಅಥವಾ ಸತ್ಯವಿಶ್ವಾಸಿ (ಮುಅಮಿನ್) ಗಳಾಗಿದ್ದರು. ಮದೀನಾದಲ್ಲಿ ಮುನಾಫಿಕ್ ಗಳ ಬಹುದೊಡ್ಡ ಸಮೂಹವೇ ಇತ್ತು. ಈ ಸಮೂಹವು ಶ್ರೀಮಂತರು, ಗೌರವಾನ್ವಿತ ವ್ಯಕ್ತಿಗಳನ್ನು ಹೊಂದಿತ್ತು. ಇವರು ಪವಿತ್ರ ಇಸ್ಲಾಮನ್ನು ನಾಶಗೊಳಿಸಲು ಒಳಗಿಂದೊಳಗೇ ನಾನಾ ಸಂಚಿನ ಮೂಲಕ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದರು. ಪ್ರವಾದಿ (ಸ್ವ.ಅ) ರವರ ಕೊಲೆಯೂ ಈ ಸಂಚಿನ ಒಂದು ಭಾಗವಾಗಿತ್ತು.

ಆದರೆ ಪ್ರವಾದಿ (ಸ್ವ.ಅ) ರವರ ರಕ್ಷಣೆಯ ಹೊಣೆಯನ್ನು ಸ್ವತಃ ಅಲ್ಲಾಹನೇ ವಹಿಸಿಕೊಂಡಿದ್ದರಿಂದ ಯಾವನೇ ವ್ಯಕ್ತಿಯು ತನ್ನ  ಈ ದುರುದ್ದೇಶದಲ್ಲಿ ಸಫಲಗೊಳ್ಳಲು ಸಾಧ್ಯವಾಗಲಿಲ್ಲ. ಸೂರತ್ ಅನ್ನಹಲ್ ನಲ್ಲಿ ಅಲ್ಲಾಹನು ಹೇಳುತ್ತಾನೆ. ಪ್ರವಾದಿಯವರೇ, ಅಲ್ಲಾಹನು ಜನರಿಂದ ನಿಮಗೆ ಸಂರಕ್ಷಣೆಯನ್ನು ನೀಡುವನು. ಅಲ್ಲಾಹನು ಇಷ್ಟೊಂದು ಸುಸ್ಪಷ್ಟವಾಗಿ ರಕ್ಷಣೆಯ ಭರವಸೆಯನ್ನು ನೀಡಿದ ನಂತರ ಪ್ರವಾದಿ (ಸ್ವ.ಅ) ರವರು ತನ್ನ ಭದ್ರತಾ ಸಿಬ್ಬಂದಿಗಳನ್ನು ಭದ್ರತೆಗೆ ನಿರಾಕರಿಸಿದರು. ಇನ್ನು ನಿಮ್ಮ ಭದ್ರತೆಯ ನನಗೆ ಅಗತ್ಯವಿಲ್ಲ. ನೀವು ನಿಮ್ಮ ಕೆಲಸಗಳಲ್ಲಿ ಮಗ್ನರಾಗಿ ನನ್ನ ಭದ್ರತೆಯ ಹೊಣೆಯನ್ನು ಸ್ವತಃ ಅಲ್ಲಾಹನೇ ವಹಿಸಿದ್ದಾನೆ ಎಂದರು.

ಮುನಾಫಿಕ್ (ಕಪಟ ವಿಶ್ವಾಸಿ) ಗಳಲ್ಲಿ ಮೊದಲನೆಯ ಸ್ಥಾನದಲ್ಲಿ ಅಬ್ದುಲ್ಲಾ ಬಿನ್ ಉಬೈ ಸಲೂಲ್ ನ ಹೆಸರು ಕುಖ್ಯಾತಿಯನ್ನು ಪಡೆದಿತ್ತು. ಔಸ್ ಹಾಗೂ ಖಝ್ರಜ್ ಎಂಬ ಎರಡು ಗೋತ್ರಗಳು ಅಲ್ಲಿದ್ದವು. ಅವು ಯಮನ್ ನಿಂದ ಬಂದಂತಹ ಗೋತ್ರಗಳಾಗಿತ್ತು. ಯಮನೀ ಹಾಗೂ ಮುಝರೀ ಎಂಬ ಎರಡು ಗೋತ್ರಗಳಲ್ಲಿ ಅತ್ಯಂತ ತೀವೃತರವಾದ ಭಿನ್ನಾಭಿಪ್ರಾಯಗಳೂ, ಜಗಳಗಳೂ ನಡೆಯುತ್ತಿದ್ದವು. ವಿಚಿತ್ರವೆಂದರೆ ಈ ಯಮನೀ ಗೋತ್ರಗಳಿಂದಲೇ ಇಸ್ಲಾಮಿನ ಕೈಗಳು ಬಲಗೊಂಡವು. ಇದೇ ಕಾರಣದಿಂದಾಗಿ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಹಾಗೂ ನಾಲ್ಕು ಖಲೀಫಾಗಳ ಕಾಲದಲ್ಲಿ ಯಮನೀ, ಮುಝರೀ ಈ ಎರಡು ಗೋತ್ರಗಳ ಯಾವುದೇ ಕಲಹಗಳು ನಡೆಯಲಿಲ್ಲ. ಮದೀನಾದ ಅನ್ಸಾರ್ (ಮಕ್ಕಾದಿಂದ ಹಿಜರಾ ಹೋದವರ ಸೇವೆಯನ್ನು ಮಾಡಿದವರು) ಗಳು ಯಮನೀಗಳಾಗಿದ್ದರು. ಪ್ರವಾದಿ (ಸ್ವ.ಅ) ರವರು ಮುಝರೀ ಗೋತ್ರದವರಾಗಿದ್ದರು. ಈ ಎರಡು ವಿಷಯಗಳು ಇಸ್ಲಾಮಿನ ಚರಿತ್ರೆಯನ್ನು ಅರಿಯಲಿಕ್ಕೆ ತೀರಾ ಅಗತ್ಯವಾಗಿದೆ.

ಈ ಸಂಘರ್ಷವು ಉನ್ದುಲುಸ್ (ಸ್ಪೈನ್) ನಲ್ಲಿ ಮುಸ್ಲಿಮರ ಸೋಲಿಗೆ ಕಾರಣವಾಯಿತು. ಅಧಿಕಾರವು ನುಚ್ಚು ನೂರುಯಿತು. ಈ ಸೋಲಿನಲ್ಲಿ ಯಮನೀ ಮತ್ತು ಮುಝರೀ ಈ ಎರಡು ಗೋತ್ರಗಳ ಪ್ರಧಾನ ಪಾತ್ರವಿದೆ. ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ತನ್ನ ನುಬುವ್ವತ್(ಪ್ರವಾದಿತ್ವ) ನ ದೂರದೃಷ್ಟಿಯಿಂದ ಇವರೀರ್ವರ ನಡುವಿನ ಸಂಘರ್ಷಕ್ಕೆ ಕೊನೆಯನ್ನು ಹಾಡಿದರು. ಮುಂದುವರಿದು ಪ್ರವಾದಿ (ಸ್ವ.ಅ) ರವರು ಹೇಳಿದರು, ಈಮಾನ್ (ಸತ್ಯ ವಿಶ್ವಾಸ ) ಅಂತೂ ಯಮನಿಯವರದ್ದಾಗಿದೆ. ಇವರ ಹೃದಯಗಳು ಅತ್ಯಂತ ಕೋಮಲವಾಗಿರುತ್ತವೆ. ಸತ್ಯದ ವಿಷಯಗಳಲ್ಲಿ ಇವರು ತೆರೆದ ಹೃದಯದವರಾಗಿದ್ದಾರೆ.

ವರ್ಷಾನುಗಟ್ಟಲೆಯ ಪರಸ್ಪರ ಭಿನ್ನಾಭಿಪ್ರಾಯಗಳಿಗೆ ಒಂದು ತಾರ್ಕಿಕ ಅಂತ್ಯವು ಕಂಡಿತು. ಇದರಿಂದ ಪ್ರವಾದಿ (ಸ್ವ.ಅ) ರವರ ದೂರದೃಷ್ಟಿಯುಳ್ಳ ಜ್ಞಾನದ ಅರಿವಾಗುತ್ತದೆ. ಒಂದು ಕಡೆ ಕಾಲಾನುಕಾಲದಿಂದ ಎರಡು ಗೋತ್ರಗಳ ನಡುವೆ ನಡೆದು ಬಂದ ದಾರಿ, ಇನ್ನೊಂದು ಕಡೆ ಔಸ್ ಹಾಗೂ ಖಝ್ರಜ್ ಗಳ ನಡುವೆ ನೂರಾರು ವರ್ಷಗಳಿಂದ ಸಾಗುತ್ತಿರುವ ಸಂಘರ್ಷಗಳಿಗೆ ತಣ್ಣೀರನ್ನು ಸುರಿಸಿ ಬೆಂಕಿಯನ್ನು ತಣ್ಣಾಗಾಗಿಸುವಲ್ಲಿ ಯಶಸ್ವಿಯಾದರು. ಪ್ರವಾದಿ (ಸ್ವ.ಅ) ರವರು ಬುಆಸ್ ಯುಧ್ದದ ಜ್ವಾಲೆಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸಿದರು. ಔಸ್ ಹಾಗೂ ಖಝ್ರಜ್ ಎರಡು ಗೋತ್ರಗಳ ನಡುವೆ ಸಂಭವಿಸಿದಂತಹ ಕೊನೆಯ ಮಹಾ ಯುಧ್ದಕ್ಕೆ, ಬುಆಸ್ ಯುಧ್ದ ಎಂದು ಹೇಳಲಾಗುತ್ತದೆ. ಇದರಲ್ಲಿ ಇತ್ತಂಡಗಳ ಸಾವಿರಾರು ಜನರ ಮಾರಣಹೋಮ ನಡೆದಿದೆ. ಇದಕ್ಕೆ ಪ್ರಧಾನ ಕಾರಣ ಪ್ರತಿಯೊಬ್ಬರ ಬಗ್ಗೆ ನಾನಾ ರೀತಿಯ ಪೂರ್ವಾಗ್ರಹಗಳಾಗಿದ್ದವು.

ಒಂದು ಬಾರಿ ಔಸ್ ಹಾಗೂ ಖಝ್ರಜ್ ನ ಎರಡೂ ಕಡೆಯವರು ಒಂದು ಸ್ಥಳದಲ್ಲಿ ಜಮಾಗೊಂಡಿದ್ದರು. ಪರಸ್ಪರ ಪ್ರೀತಿ, ವಿಶ್ವಾಸದ ಮಾತುಗಳಾನ್ನಾಡುತ್ತಿದ್ದರು. ಅಷ್ಟರಲ್ಲಿ ಜದ್ದ್ ಬಿನ್ ಶಮಾಸ್ ಎಂಬ ಯಹೂದಿಯು ಆ ಸ್ಥಳದಿಂದ ಹಾದು ಹೋಗುತ್ತಿದ್ದ. ಪವಿತ್ರ ಇಸ್ಲಾಮ್ ನಿಂದಾಗಿ ಇವರ ನಡುವೆ ಪ್ರೀತಿ,ಶಾಂತಿ ಏರ್ಪಟ್ಟದ್ದನ್ನು ಕಂಡು ಅವನಿಂದ ಸಹಿಸಲಾಗಲಿಲ್ಲ. ದ್ವೇಷ ಉಕ್ಕಿ ಬಂತು. ಇದಕ್ಕೆ ಪ್ರತೀಕಾರವನ್ನು ಸಲ್ಲಿಸಲಿಕ್ಕಾಗಿ ಒಬ್ಬ ಹದಿಹರೆಯದ ಯಹೂದಿ ಯುವಕನನ್ನು ತಂದನು. ಅವನಿಗೆ ಬುಆಸ್ ಯುಧ್ದದಲ್ಲಿ ಔಸ್ ಹಾಗೂ ಖಝ್ರಜ್ ಗೋತ್ರಗಳ ಕವಿಗಳು ಹಾಡಿದ ಪ್ರತೀಕಾರದ ರೂಪದಲ್ಲಿರುವ ಹಾಡುಗಳನ್ನು ಕಲಿಸಿದನು. ಈ ಕವನಗಳನ್ನು ಈ ಎರಡು ಗೋತ್ರಗಳ ನಡುವೆ ಹೋಗಿ ಹಾಡು ಎಂದು ಹೇಳಿದನು. ಈ ಹಾಡುಗಳನ್ನು ಕೇಳಿದಾಕ್ಷಣ ಮುರುಟಿ ಹೋದ ದ್ವೇಷಗಳು  ಉಕ್ಕಿ ಬಂದವು. ಇತ್ತಂಡಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದವು. ಆಯುಧಗಳು ಹೊರ ಬಂದವು. ಯುದ್ಧಕ್ಕಾಗಿ ಮೈದಾನದಲ್ಲಿ ಜಮಾವಣೆಗೊಂಡರು. ಪ್ರವಾದಿ ಮುಹಮ್ಮದ್ (ಸ್ವ.ಅ) ರಿಗೆ ಈ ವಿಷಯದ ಅರಿವಾದಾಗ ತಕ್ಷಣ ಯುದ್ಧಭೂಮಿಯಲ್ಲಿ ಹಾಜರಾದರು. ಎರಡೂ ಕಡೆಯವರನ್ನು ಹತ್ತಿರ ಕರೆಸಿ, “ ನಾನು ನಿಮ್ಮ ನಡುವೆ ಜೀವಂತವಿದ್ದೇನೆ. ಆದರೆ ನೀವು ಅಜ್ಞಾನದ ಯುಧ್ದವನ್ನು ಮಾಡಲು ಹೊರಟಿದ್ದೀರಿ. ಪ್ರವಾದಿ (ಸ್ವ.ಅ) ರವರ ತಕ್ಷಣದ ಉಪದೇಶದಿಂದ ಇತ್ತಂಡಗಳು ಸಮಾಧಾನಗೊಂಡವು. ಇದು ನಿಜವಾಗಿ ಶೈತಾನನ ಕುಯುಕ್ತಿ ಹಾಗೂ ಯಹೂದಿಯ ತಂತ್ರಗಾರಿಕೆಯಾಗಿತ್ತು. ಕೂಡಲೇ ಎರಡೂ ಕಡೆಯವರು ತೌಬಾ ( ಪಶ್ಚಾತ್ತಾಪ ) ಮಾಡಿದರು. ಪರಸ್ಪರರು ಆಲಂಗಿಸಿ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಜೊತೆಗೂಡಿ ಮುಂದೆ ಸಾಗಿದರು.

ಮದೀನಾ ಮುನವ್ವರದಲ್ಲಿ ಬುಡಕಟ್ಟು ಜನಾಂಗದ ನಡುವೆ ಯಾವ ರೀತಿಯ ವೈಷಮ್ಯಗಳಿದ್ದವು, ದ್ವೇಷದ ಸ್ವರೂಪಗಳು ಯಾವ ಯಾವ ರೀತಿಯಲ್ಲಿ ಮನಸ್ಸುಗಳಲ್ಲಿ ಹುದುಗಿದ್ದವು ಎಂಬವುದನ್ನು ಈ ಘಟನೆಯಿಂದ ತಿಳಿಯಬಹುದು. ಇಲ್ಲಿ ಈ ರೀತಿ ಉರಿಯುತ್ತಿದ್ದ ಬೆಂಕಿಯ ಒಂದು ಕೆನ್ನಾಲಗೆಯು ಪವಿತ್ರ ಇಸ್ಲಾಮನ್ನು ಬುಡಮೇಲು ಮಾಡುವ ಶಕ್ತಿಯನ್ನು ಹೊಂದಿತ್ತು. ಆದರೆ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ವಿವೇಕಿತನ ಹಾಗೂ ಅವರ ತತ್ವಾದರ್ಶಗಳು ಎಲ್ಲಾ ತರಹದ ಕೇಡುಗಳನ್ನು ಮುರುಟಿ ಹೋಗುವಂತೆ ಮಾಡಿತು. ಇಲ್ಲದಿದ್ದಲ್ಲಿ ಯಹೂದೀಕರಣ ಹಾಗೂ ನಿಫಾಕ್ (ಕಪಟ ವಿಶ್ವಾಸ) ಇವೆರಡು ಇಲ್ಲಿ ಬಹುದೊಡ್ಡ ವಿಷಜಂತುಗಳಾಗಿದ್ದವು.

ಅಬ್ದುಲ್ಲಾ ಬಿನ್ ಉಬೈ ಸಲೂಲ್ ತನ್ನ ಅಜ್ಜಿ (ತಂದೆಯ ತಾಯಿ) ಯ ಹೆಸರಿನಿಂದ ಹೆಸರುವಾಸಿಯಾಗಿದ್ದ. ಅಜ್ಜಿಯ ಹೆಸರು ಸಲೂಲ್ ಆಗಿತ್ತು. ಆದ್ದರಿಂದ ಬಿನ್ ಸಲೂಲ್ ಎಂದು ಕರೆಯಲ್ಪಡುತ್ತಿದ್ದ. ಬುಆಸ್ ಯುಧ್ದದ ನಂತರ ಅವನು ಇನ್ನಷ್ಟು ಮುನ್ನೆಲೆಗೆ ಬಂದ. ಔಸ್ ಹಾಗೂ ಖಝ್ರಜ್ ಎರಡು ಗೋತ್ರದವರು ಸೇರಿ ಇವನನ್ನು ಮದೀನಾ ಮುನವ್ವರದ ರಾಜನನ್ನಾಗಿ ಮಾಡಲು ತೀರ್ಮಾನಿಸಿದ್ದರು. ಕಿರೀಟ ಧಾರಣೆಗೆ ಸರ್ವ ತಯಾರಿಯನ್ನೂ ಮಾಡಲಾಗಿತ್ತು. ಈ ಮಧ್ಯೆ ನುಬುವ್ವತ್(ಪ್ರವಾದಿತ್ವ) ನ ಕಿರಣಗಳು ಮದೀನಾ ಮುನವ್ವರದಲ್ಲಿ ಬೀಳಲು ಪ್ರಾರಂಭಗೊಂಡವು. ಪ್ರವಾದಿ (ಸ್ವ.ಅ) ಹಾಗೂ ಸ್ವಹಾಬಿಗಳು (ಅನುಯಾಯಿಗಳು) ಮದೀನಾ ಮುನವ್ವರಕ್ಕೆ ಹಿಜ್ರಾ (ಯಾತ್ರೆ) ಮಾಡಿದರು. ಅದಾಗಲೇ ವಾತಾವರಣ ಬದಲಾಗತೊಡಗಿತು.

ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ಆಗರ್ಭ ಶ್ರೀಮಂತನಾಗಿದ್ದ. ನೋಡಲು ತುಂಬಾ ಸುಂದರನಾಗಿದ್ದ. ಮನಮುಟ್ಟುವ ವ್ಯಕ್ತಿತ್ವವನ್ನು ಹೊಂದಿದ್ದ. ಮದೀನಾದಲ್ಲಿ ಎಲ್ಲಿ ನೋಡಿದರಲ್ಲಿಯೂ ಇವನದ್ದೇ ಚರ್ಚೆಯಾಗುತ್ತಿತ್ತು. ಖಝ್ರಜ್ ಗೋತ್ರದ ಸರದಾರನಾಗಿದ್ದ. ಔಸ್ ಗೋತ್ರಕ್ಕಿಂತ ತುಂಬಾ ಬೃಹದಾದ ಗೋತ್ರ ಇದಾಗಿತ್ತು. ಇದೇ ಕಾರಣದಿಂದ ಔಸ್ ಗೋತ್ರವು ಎರಡು ಯಹೂದಿ ಗೋತ್ರಗಳೊಂದಿಗೆ ಸಂಭಂದವನ್ನು ಇಟ್ಟುಕೊಂಡಿದ್ದರು. ಇವುಗಳು ಕ್ರಮವಾಗಿ ಬನೂ ನಝೀರ್ ಹಾಗೂ ಬನೀ ಕುರೈಝಾ ಆಗಿತ್ತು. ಯಹೂದಿಗಳ ಇನ್ನೊಂದು ಚಿಕ್ಕ ಗೋತ್ರ ಬನೀ ಕೈನುಕಾ ಆಗಿತ್ತು. ಇವರೊಂದಿಗೂ ಯಹೂದಿಗಳ ದೊಡ್ಡ ಗೋತ್ರವು ಒಪ್ಪಂದವನ್ನು ಮಾಡಿತ್ತು. ಪರಿಸ್ಥಿತಿ ಹೀಗಿದ್ದರೂ ಇವರು ಒಳಗಿಂದೊಳಗೇ ದೊಡ್ಡ ಸಂಚನ್ನು ಯಾಕೆ ಮಾಡಲಿಲ್ಲ ಎಂದು ಸ್ವಲ್ಪ ಆಶ್ಚರ್ಯವಾಗುತ್ತಿದೆ. ಇಸ್ಲಾಮಿನ ಪ್ರಚಾರಕ್ಕೆ ಅಡ್ಡಿಮಾಡಲಿಲ್ಲ. ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ನೇತೃತ್ವವನ್ನು ಬಾಹ್ಯ ನೋಟದಲ್ಲಿ ಸ್ವೀಕರಿಸಿದ ಹಾಗೆ ಕಾಣುತ್ತಿತ್ತು.

ಅಲ್ಲಾಹನ ಕರುಣೆಯನ್ನಂತು ನೋಡಿ, ಅವನ ಸ್ವಂತ ಮಗ ಅಬ್ದುಲ್ಲಾ, ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ಪವಿತ್ರ ಇಸ್ಲಾಮನ್ನು ಸ್ವೀಕರಿಸಿದರು. ಮಗಳಾದ ಜಮೀಲಾ ರವರೂ ಇಸ್ಲಾಮನ್ನು ಸ್ವೀಕರಿಸಿದರು. ಇವರ ಮಗಳ ಗಂಡ ಹನ್ಝಲಾ ಬಿನ್ ಆಮಿರ್ (ರ.ಅ) ಶಹೀದ್ (ಹುತಾತ್ಮ) ಆದರು. ಗಸೀಲುಲ್ ಮಲಾಯಿಕ (ದೇವದೂತರಿಂದ ಮಯ್ಯಿತ್ ಸ್ನಾನ ಮಾಡಿಸಲಟ್ಟವರು) ಎಂಬ ಬಿರುದನ್ನು ಪಡೆದವರಾಗಿದ್ದರು.

ಒಟ್ಟಲ್ಲಿ ಅಬ್ದುಲ್ಲಾ ಬಿನ್ ಉಬೈ ಸಲೂಲ್ ಕಿರೀಟಧಾರಣೆಯ ಸಂತೋಷವನ್ನು ಎದುರು ನೋಡುತ್ತಿದ್ದನು. 2 ನೇ ಹಿಜರಾದಲ್ಲಿ ಬದ್ರ್ ಯುಧ್ದದಲ್ಲಿ ಮುಸ್ಲಿಮರಿಗೆ ಅಭೂತಪೂರ್ವ ಗೆಲುವು ಲಭಿಸಿತು. ಮಕ್ಕಾದ ಹೆಸರುವಾಸಿ ಸರದಾರರು ಈ ಯುಧ್ದದಲ್ಲಿ ಮರಣಗೊಂಡರು. ಇದಾದದ್ದೆ ತಡ. ಮದೀನಾದ ಯಹೂದಿಗಳು ಹೆದರಿ ಹೈರಾಣಾಗಿದ್ದರು. ಹೆದರಿಕೆಯಿಂದ ಹಾಗೂ ಮುಸ್ಲಿಮರ ಸೈನ್ಯದ ಶಕ್ತಿಯನ್ನು ಕಂಡು ಬಿನ್ ಸಲೂಲ್ ಇಸ್ಲಾಮನ್ನು ಸ್ವೀಕರಿಸಿನು. ಆದರೆ ಇವನ ಇಸ್ಲಾಮ್ ಬರೇ ಬಾಹ್ಯ ರೂಪದ್ದಾಗಿತ್ತು. ಒಳಗಿನಿಂದ ಕಾಫಿರ್ (ಸತ್ಯ ನಿಷೇಧಿ) ಆಗಿದ್ದ. ಬರೇ ಮುನಾಫಿಕ್ (ಕಪಟ ವಿಶ್ವಾಸಿ) ಮಾತ್ರವಲ್ಲ, ಮುನಾಫಿಕ್ ಗಳ ಸರದಾರನಾಗಿದ್ದ. 300 ಪುರುಷರ ಹಾಗೂ 70 ಮಹಿಳೆಯರ ಕಪಟ ವಿಶ್ವಾಸಿಗಳ ಒಂದು ತಂಡ ಇವನ ನೇತೃತ್ವದಲ್ಲಿ ಇತ್ತು. ಇವರು ಮುಸ್ಲಿಮರ ನಡುವೆ ಒಂದು ಭಾಂದವ್ಯವನ್ನೂ ಹೊಂದಿದ್ದರು. ಮುಸ್ಲಿಮರ ನಡುವೆ ಮುಸ್ಲಿಮರೆಂದು ಕರೆಯಲ್ಪಡುತ್ತಿದ್ದರು. ನಮಾಝ್ , ಉಪವಾಸವನ್ನು ಆಚರಿಸುತ್ತಿದ್ದರು. ಒಳಗಿಂದೊಳಗೆ ಇಸ್ಲಾಮಿನ ವಿರುಧ್ದ ಸಂಚನ್ನು ರೂಪಿಸುತ್ತಿದ್ದರು. ಮುಸ್ಲಿಮರಿಗೆ ಸಂಕಷ್ಟಗಳನ್ನು ನೀಡಲು ಸಿಗುವಂತಹ ಅವಕಾಶಕ್ಕೆ ಹೊಂಚು ಹಾಕುತ್ತಿದ್ದರು. ಇಂತಹ ವಿರೋಧಿಗಳನ್ನು ಗುರುತಿಸಿ ಎದುರಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಅಗಾಧ ಜ್ಞಾನ, ನಡವಳಿಕೆ, ಅನುಭವ, ಸೌಮ್ಯ ಸ್ವಭಾವ, ದೊಡ್ಡ ಮಟ್ಟದ ಸದ್ವರ್ತನೆಯು ಆ ಸಮಯದಲ್ಲಿ ತನ್ನ ಬಲವನ್ನು ತೋರಿಸಿತು. ಈ ಗುಂಪಿನೊಂದಿಗೆ ಬಹುದೊಡ್ಡ ಮಟ್ಟದ ಸೌಮ್ಯತೆಯನ್ನು ಪ್ರವಾದಿ (ಸ್ವ.ಅ) ಯವರು ತೋರಿಸಿದರು. ಮುನಾಫಿಕರ (ಕಪಟ ವಿಶ್ವಾಸಿ) ದುರ್ವರ್ತನೆಯನ್ನು ಸಹಿಸಿಕೊಂಡರು.

ಯುಧ್ದಗಳಲ್ಲಿ ಮುನಾಫಿಕರು ಭಾಗಿಯಾಗುತ್ತಿರಲಿಲ್ಲ. ಒಂದು ವೇಳೆ ಭಾಗಿಯಾದರೂ ಅಲ್ಲಿ ಫಿತ್ನ(ಕ್ಷೋಭೆ)ವನ್ನು ಮಾಡುತ್ತಿದ್ದರು. ಅಬ್ದುಲ್ಲಾ ಬಿನ್ ಸಲೂಲ್ ರು ಯುಧ್ದಗಳಲ್ಲಿ ಭಾಗಿಯಾಗುವುದು ತುಂಬಾ ಕಡಿಮೆಯಾಗಿತ್ತು. ಮದೀನಾದ ಖಝ್ರಜ್ ಗೋತ್ರದಲ್ಲಿ ಇವರು ತುಂಬಾ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಪ್ರವಾದಿ (ಸ್ವಅ) ಯವರೂ ಇವರಿಗೆ ವಿಶೇಷ ಗೌರವವನ್ನು ನೀಡುತ್ತಿದ್ದರು. ಖಝ್ರಜ್ ಗೋತ್ರದ ಸ್ವಹಾಬಿಗಳು ಪ್ರವಾದಿ (ಸ್ವ.ಅ) ಯವರಲ್ಲಿ, ಓ ಪ್ರವಾದಿ (ಸ್ವ.ಅ) ಯವರೇ, ಇವರ ಮೇಲೆ ಕರುಣೆಯನ್ನು ತೋರಿರಿ. ಮದೀನಾ ಮುನವ್ವರದಲ್ಲಿ ತಮ್ಮ ಆಗಮನದಿಂದ ಇವರ ರಾಜಾಧಿಪತ್ಯ ಅಂತ್ಯಗೊಂಡಿದೆ ಎಂಬ ವಿಶ್ವಾಸವನ್ನು ಇವರು ಇಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ಒಂದು ವೇಳೆ ಕೊಲೆ ಮಾಡುತ್ತಿದ್ದಲ್ಲಿ ಅಥವಾ ಶಿಕ್ಷೆಯನ್ನು ಕೊಡುತ್ತಿದ್ದಲ್ಲಿ ಇವರ ನಡುವಿನ ಮುಸ್ಲಿಮರ ಒಪ್ಪಂದಕ್ಕೆ ಬಹು ದೊಡ್ಡ ಚ್ಯುತಿ ಬರುವ ಅಪಾಯವಿತ್ತು. ಇದಕ್ಕಾಗಿಯೇ ಇವರಿಗೆ ಯಾವುದೇ ರೀತಿಯ ಶಿಕ್ಷೆಯನ್ನು ನೀಡಲಿಲ್ಲ.

ಬನೀ ಮುಸ್ತಲಿಕ್ ಯುಧ್ದದಲ್ಲಿ ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ಭಾಗಿಯಾಗಿದ್ದರು. ನೀರಿನ ವಿಷಯದಲ್ಲಿ ಓರ್ವ ಜುಹನೀ ಸ್ವಹಾಬಿ ಹಾಗೂ ಮುಹಾಜಿರ್ ಸ್ವಹಾಬಿಯ ನಡುವೆ ಗದ್ದಲವಾಯಿತು. ಜುಹನಿ ಸ್ವಹಾಬಿ ಅನ್ಸಾರ್ ಸ್ವಹಾಬಾಗಳನ್ನು ಸಹಾಯಕ್ಕಾಗಿ ಕರೆದರು. ಮುಹಾಜಿರ್, ಮುಹಾಜಿರ್ ಸ್ವಹಾಬಿಗಳನ್ನು ಕರೆದರು. ಆಗ ಬಿನ್ ಸಲೂಲ್ ಅನ್ಸಾರ್ ಸ್ವಹಾಬಿಗಳನ್ನು ಉದ್ದೇಶಿಸಿ, ನಿಮ್ಮೆಲ್ಲರ ಬಹುದೊಡ್ಡ ಪ್ರಶಂಸೆಯ ಕೆಲಸವೆಂದರೆ, ನೀವು ಮುಹಾಜಿರ್ ಗಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಿದ್ದೀರಿ. ತಮ್ಮ ಸ್ವತ್ತಿನ ಅರ್ಧದಷ್ಟು ಭಾಗವನ್ನು ಅವರಿಗೆ ನೀಡಿದ್ದೀರಿ. ಅವರ ಮೇಲೆ ಆರ್ಥಿಕವಾಗಿ ಸಹಾಯವನ್ನು ನಿರಂತರವಾಗಿ ಮಾಡುತ್ತಿದ್ದೀರಿ. ನಾನು ಒಂದು ಮಾತನ್ನು ಹೇಳುತ್ತೇನೆ, ನೀವು ಅವರ ಸಹಾಯವನ್ನು ಮಾಡುವುದನ್ನು ನಿಲ್ಲಿಸಿ. ಆಗ ಇವರೆಲ್ಲರೂ ಬೇರೆ ಎಲ್ಲಾದರೂ ಓಡಿ ಹೋಗುವರು. ಮದೀನಾದಲ್ಲಂತೂ ನಾನು ಇವರನ್ನು ನೋಡಿಕೊಳ್ಳುತ್ತೇನೆ. ಗೌರಾವಿನ್ವಿತರಾದ ನಾವು ಅಗೌರವಿತರನ್ನು ಹೊರಗೆ ಹಾಕುವ. ಆ ಸಂಧರ್ಭದಲ್ಲಿ ಅರ್ಕಮ್ ಬಿನ್ ಅರ್ಕಮ್ ಎಂಬ ಓರ್ವ ಯುವ ಸ್ವಹಾಬಿ ಅಲ್ಲಿದ್ದರು. ಅವರು ಕೂಡಲೇ ಪ್ರವಾದಿ (ಸ್ವ.ಅ) ರವರ ಬಳಿ ಹೋಗಿ ಎಲ್ಲಾ ಘಟನೆಯನ್ನು ವಿವರಿಸಿದರು. ಪ್ರವಾದಿ (ಸ್ವಅ) ರವರು ಸುಮ್ಮನಾದರು. ಆ ಸಮಯದಲ್ಲಿ ಹಝ್ರತ್ ಉಮರ್(ರ.ಅ) ರವರು ಅಲ್ಲಿ ಹಾಜರಿದ್ದರು. ತಕ್ಷಣ, ಓ ಪ್ರವಾದಿ (ಸ್ವ.ಅ) ಯವರೇ ನನಗೆ ಅನುಮತಿಯನ್ನು ನೀಡಿ, ನಾನು ಈ ಮುನಾಫಿಕ್(ಕಪಟ ವಿಶ್ವಾಸಿ) ನನ್ನು ಮುಗಿಸಿಬಿಡುತ್ತೇನೆ. ಆಗ ಪ್ರವಾದಿ (ಸ್ವ.ಅ) ರವರು ಸಮಾಧಾನಪಡಿಸುತ್ತಾ, ಉಮರ್ (ರ.ಅ) ಹಾಗೆ ಮಾಡಬೇಡಿ, ಮುಹಮ್ಮದ್ (ಸ್ವ.ಅ) ರವರು ತನ್ನ ಸಂಗಾತಿಗಳ ಕೊಲೆ ಮಾಡಿಸುತ್ತಾರೆ ಎಂಬ ಅಪವಾದವು ಹರಡಬಹುದು ಎಂದು ಹೇಳಿದರು.

ಈ ಘಟನೆಯು ಎಷ್ಟೊಂದು ತೀವೃವಾಗಿತ್ತೆಂದರೆ, ಓರ್ವ ಸ್ವಹಾಬಿಯವರು ಹೇಳಿದರು, ಇಬ್ನ್ ಸಲೂಲ್ ರನ್ನು ಮುಗಿಸಬೇಕು. ಆಗ ಇನ್ನೋರ್ವ ಖಝ್ರಜ್ ಗೋತ್ರದ ಸ್ವಹಾಬಿ ಕೋಪದಿಂದ ಕೆಂಡವಾಗಿ ಹೇಳಿದರು , ನೀವು ಇಬ್ನ್ ಸಲೂಲ್ ನನ್ನು ಯಾಕೆ ಬಿಡುತ್ತಿದ್ದೀರಿ. ಅವನನ್ನು ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲವೇ ? ಈ ನಡುವೆ ಪ್ರವಾದಿ (ಸ್ವ.ಅ) ಯವರು ವಾತಾವರಣವನ್ನು ತಿಳಿಗೊಳಿಸಿದರು. ಈ ಬಗ್ಗೆ ಪ್ರವಾದಿ(ಸ್ವ.ಅ) ರಿಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿದೆ ಎಂಬ ಮಾಹಿತಿ ಇಬ್ನ್ ಸಲೂಲ್ ಗೆ ತಿಳಿಯಿತು. ಆ ಕೂಡಲೇ ಅವನು ಮುಹಮ್ಮದ್(ಸ್ವ.ಅ) ರ ಬಳಿ ಬಂದು ಅಲ್ಲಾಹನ ಆಣೆಯನ್ನು ಹಾಕಿ, ಪ್ರವಾದಿಯವರೇ(ಸ್ವ.ಅ) ನಾನೆಂದೂ ಇಂತಹ ಮಾತನ್ನು ಹೇಳಲೇ ಇಲ್ಲ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದನು. ಈ ಘಟನೆಯ ಸ್ವಲ್ಪವೇ ಸಮಯದ ನಂತರ ಪವಿತ್ರ ಕುರ್ ಆನಿನ 63 ನೇ ಸೂಕ್ತ “ ಸೂರಃ ಅಲ್ ಮುನಾಫಿಕೂನ್ ” ಅವತೀರ್ಣಗೊಂಡಿತು. ತನ್ಮೂಲಕ ಇಬ್ನ್ ಸಲೂಲ್ ನ ಸುಳ್ಳಿನ ಆಣೆಯು ಬಯಲುಗೊಂಡಿತು. ಈ ಬಗ್ಗೆ ಅರ್ಕಮ್ ಬಿನ್ ಅರ್ಕಮ್ (ರ.ಅ) ಎಂಬ ಹೆಸರಿನ ಸ್ವಹಾಬಿಯವರು ಕೊಟ್ಟ ಮಾಹಿತಿಯು ಸರಿ ಎಂದು ಸಾಬೀತಾಯಿತು. ಪ್ರವಾದಿ (ಸ್ವ.ಅ) ರವರು ಅರ್ಕಮ್ (ರ.ಅ) ರವರನ್ನು ಕರೆಸಿ ಸೂರತುಲ್ ಮುನಾಫಿಕ್ ಓದಿದರು. ಇನ್ನು ಔಸ್ ಹಾಗೂ ಖಝ್ರಜ್ ಗೋತ್ರಗಳ ನಡುವೆ ಭಿನ್ನಾಭಿಪ್ರಾಯಗಳು ಸಂಭವಿಸುವ ಸಂಶಯವಿತ್ತು. ಇದನ್ನು ಶಮನಗೊಳಿಸಲಿಕ್ಕಾಗಿ ಪ್ರವಾದಿ (ಸ್ವ.ಅ) ರವರು ಯಾತ್ರೆಯನ್ನು ಮಾಡುವ ಆದೇಶವನ್ನು ನೀಡಿದರು. ಪ್ರವಾದಿ (ಸ್ವ.ಅ) ಯವರು ಆ ಸಮಯದಲ್ಲಿ ಯಾತ್ರೆಯನ್ನು ಮಾಡುವ ಇರಾದೆಯಲ್ಲಿ ಇರಲಿಲ್ಲ. ಈ ಘಟನೆ ನಡೆದ ನಂತರ ಇಡೀ ರಾತ್ರಿ ಹಾಗೂ ಹಗಲು ಯಾತ್ರೆಯನ್ನು ಮಾಡಿದರು. ಸುಸ್ತಾದ ನಂತರ ವಿಶ್ರಾಂತಿಗಾಗಿ ಸ್ವಹಾಬಿಗಳಿಗೆ ಆದೇಶವನ್ನು ನೀಡಿದರು. ಎಲ್ಲರೂ ಸುಸ್ತಾಗಿ ನಿದ್ದೆಗೆ ಮೊರೆ ಹೋಗಿದ್ದರು. ಅಷ್ಟರಲ್ಲಿ ಓರ್ವ ಸ್ವಹಾಬಿಯವರು ಪ್ರವಾದಿ (ಸ್ವ.ಅ) ರವರಲ್ಲಿ ಬಂದು ಕೇಳಿದರು, ಓ ಪ್ರವಾದಿ(ಸ್ವ.ಅ) ಯವರೇ ತಾವು ಈ ಸಮಯದಲ್ಲಿ ಯಾವುದೇ ಯಾತ್ರೆಯನ್ನು ಮಾಡುವುದಿಲ್ಲ ಆದರೆ ಈಗ ಯಾಕೆ ಮಾಡಿದ್ದೀರಿ? ಆಗ ಪ್ರವಾದಿ (ಸ್ವ.ಅ) ಯವರು ಹೇಳಿದರು, ಏನು ನೀವು ಇಬ್ನ್ ಸಲೂಲ್ ನ ಮಾತನ್ನು ಕೇಳಲಿಲ್ಲವೇ ? ಉದ್ದೇಶ ಏನೆಂದರೆ ಮುಂದೆ ಸಂಭವಿಸಬಹುದಾದಂತಹ ಅನಾಹುತಗಳನ್ನು ತಡೆಯಲಿಕ್ಕಾಗಿ ಹೀಗೆ ಮಾಡಲಾಯಿತು.

ಇದೇ ಯಾತ್ರೆಯಲ್ಲಿ ಇಫ್ಕ್ ನ ಘಟನೆಯು ಸಂಭವಿಸಿತು. ಹಝ್ರತ್ ಆಯಿಶಾ(ರ.ಅ) ರವರು ತಮ್ಮ ಅಗತ್ಯದ ಪೂರೈಕೆಗಾಗಿ ತಾವು ತಂಗಿರುವ ಸ್ಥಳಕ್ಕಿಂತ ಸ್ವಲ್ಪ ದೂರ ಹೋಗಿದ್ದರು. ಇದು ಯಾರಿಗೂ ತಿಳಿದಿರಲಿಲ್ಲ. ತಾವು ಆ ಸ್ಥಳದಿಂದ ವಾಪಾಸು ಆಗುವ ಸಮಯದಲ್ಲಿ ತನ್ನ ಕುತ್ತಿಗೆಯಲ್ಲಿ ಇದ್ದ ಹಾರವನ್ನು ನೋಡಿದಾಗ ಅದು ಕಾಣೆಯಾಗಿತ್ತು. ತಾವು ಅದನ್ನು ಹುಡುಕಲು ಪುನಃ ಬಂದ ದಾರಿಯಲ್ಲೇ ಹಿಂದೆ ಹೋದರು. ಸಮಯ ತುಂಬಾ ಮೀರಿ ಹೋಗಿತ್ತು. ಈ ಕಡೆ ತಮ್ಮ ಜೊತೆಯಲ್ಲಿದ್ದ ಯಾತ್ರಿಕರ ಗುಂಪು ಮುಂದೆ ಸಾಗಿತ್ತು. ನಿರ್ದಿಷ್ಟ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಆಶ್ಚರ್ಯವಾಗಿತ್ತು. ಅಲ್ಲಿ ಯಾರೂ ಇರಲಿಲ್ಲ. ಕೊನೆಗೆ ಸುಸ್ತಾಗಿ ಒಂದು ಮರದ ಕೆಳಗೆ ಕುಳಿತುಕೊಂಡರು. ಅಲ್ಲಿಗೇ ಅವರಿಗೆ ನಿದ್ರೆ ಬಂತು. ಹಝ್ರತ್ ಬಿಲಾಲ್ ಬಿನ್ ಉಮಯ್ಯ(ರ.ಅ) ಯಾತ್ರಿಕರಲ್ಲಿ ಕೊನೆಯಲ್ಲಿ ಬರುವವರಾಗಿದ್ದರು. ಅವರ ದೃಷ್ಟಿ ಹಝ್ರತ್ ಆಯಿಶಾ(ರ.ಅ) ರವರ ಮೇಲೆ ಬಿತ್ತು. ಕೂಡಲೇ ಅವರು ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್ ಎಂದು ಹೇಳಿದರು. ಅದನ್ನು ಕೇಳಿದಾಕ್ಷಣ ಹಝ್ರತ್ ಆಯಿಶಾ(ರ.ಅ) ಬೆಚ್ಚಿ ಬಿದ್ದು ಎದ್ದರು. ಬಿಲಾಲ್ ಬಿನ್ ಉಮಯ್ಯಾ (ರ.ಅ) ರವರು ತನ್ನ ಒಂಟೆಯನ್ನು ಕುಳ್ಳಿರಿಸಿದರು. ಹಝ್ರತ್ ಆಯಿಶಾ(ರ.ಅ) ಅದರಲ್ಲಿ ಕುಳಿತುಕೊಂಡರು. ಹಝ್ರತ್ ಬಿಲಾಲ್(ರ.ಅ) ಒಂಟೆಯ ಮೂಗುದಾರವನ್ನು ಹಿಡಿದು ಮುಂದೆ ಸಾಗುತ್ತಿದ್ದರು. ಕೊನೆಗೂ ಅವರು ತಲುಪಬೇಕಾದ ಸ್ಥಳಕ್ಕೆ ತಲುಪಿದರು. ಈ ಘಟನೆ ನಡೆದದ್ದೇ ತಡ. ಇಬ್ನ್ ಸಲೂಲ್ ಇದನ್ನು ಅವನು ದುರುಪಯೋಗಪಡಿಸಿಕೊಂಡ. ಹಝ್ರತ್ ಆಯಿಶಾ(ರ.ಅ) ರವರ ಮೇಲೆ ನಾನಾ ತರಹದ ಅಪವಾದಗಳನ್ನು ಹೊರಿಸಲು ಆರಂಭಿಸಿದ. ಇವನು ಹೊರಿಸುವಂತಹ ಅಪವಾದಗಳಿಗೆ ಮಾರು ಹೋಗಿ, ಅದಾಗಲೇ ಇಸ್ಲಾಮನ್ನು ಸ್ವೀಕರಿಸಿದಂತಹ ಕೆಲ ಸ್ವಹಾಬಿಗಳು ಅವನ ಜೊತೆಗೆ ದನಿಗೂಡಿಸಿದರು. ಇವರಲ್ಲಿ ಹಝ್ರತ್ ಹಸ್ಸಾನ್ ಬಿನ್ ಸಾಬಿತ್ ಅನ್ಸಾರೀ(ರ.ಅ), ಹಝ್ರತ್ ಹಮ್ನಾ ಬಿಂತ್ ಜೆಹೆಶ್(ರ.ಅ), ಹಝ್ರತ್ ಉಸಾಮಾ ಬಿಂತ್ ಮಿಸ್ತಾ(ರ.ಅ) ಒಳಗೊಂಡಿದ್ದರು.

ಅದಾಗಲೇ ಕೆಲವು ದಿನಗಳಲ್ಲಿ ಘಟನೆಯ ನೈಜತೆಯನ್ನು ತಿಳಿಸಲು ಕುರ್ ಆನ್ ನ ಸಂಪೂರ್ಣ ಒಂದು ಸೂರತ್ “ ಸೂರಃ ಅನ್ನೂರ್” ಅವತೀರ್ಣಗೊಂಡಿತು. ಈ ಸೂರತ್ ನಲ್ಲಿ ಹಝ್ರತ್ ಆಯಿಶಾ(ರ.ಅ) ರವರ ಮೇಲೆ ಹೊರಿಸಲಾದ ಅಪವಾದವನ್ನು ಸಂಪೂರ್ಣ ಸುಳ್ಳು ಹಾಗೂ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಈ ಸೂರತ್ ಸಾಬೀತು ಮಾಡಿತು. ಇಸ್ಲಾಮಿನ ಕಾನೂನಿನ ಪ್ರಕಾರ ಮೂವರಿಗೂ 80, 80 ಛಡಿಯೇಟುಗಳನ್ನು ನೀಡಲಾಯಿತು. ಆದರೆ ಅಬ್ದುಲ್ಲಾ ಬಿನ್ ಸಲೂಲ್ ನಿಗೆ ಯಾವುದೇ ಶಿಕ್ಷೆಯನ್ನೂ ನೀಡಲಿಲ್ಲ. ಹಾಗೂ ಈ ಬಗ್ಗೆ ಯಾವುದೇ ವಿಚಾರಣೆಗೂ ಅವನನ್ನು ಒಳಪಡಿಸಲಿಲ್ಲ.  ಅಲ್ಲಾಹನು ನನ್ನ ನಿರಪರಾಧಿತ್ವದ ಬಗ್ಗೆ ಪ್ರತ್ಯೇಕ ಒಂದು ಸೂರತನ್ನು ಅವತೀರ್ಣಗೊಳಿಸಿದ್ದಾನೆ ಎಂದು ಹಝ್ರತ್ ಆಯಿಶಾ(ರ.ಅ) ರಿಗೆ ಅರಿವಾದಾಕ್ಷಣ, ಅವರು ಅಲ್ಲಾಹನ ಅಪಾರ ಕರುಣೆಯನ್ನು ಸ್ಮರಿಸಿ ಅವನ ಶುಕ್ರ್ (ಸ್ತುತಿಸ್ತೋತ್ರ)ಗಳನ್ನು ಮಾಡಿದರು.

ಇಬ್ನ್ ಸಲೂಲ್ ನ ಗೌರವವನ್ನು ಈ ಮೂಲಕವೂ ನಾವು ಅರಿಯಬಹುದು, ಅವನಿಗಾಗಿ ಮಸ್ಜಿದ್ ನಬವಿಯಲ್ಲಿ ಖುತುಬಾ(ಉಪದೇಶ) ನೀಡುವ ಮಿಂಬರ್ ನ ಬಳಿ ಅವನಿಗಾಗಿಯೇ ವಿಶೇಷ ಆಸನವನ್ನು ತಯಾರಿಸಲಾಗಿತ್ತು. ಈ ವಿಶೇಷ ಆಸನದಲ್ಲಿ ಕೂತು ಸಭಿಕರಿಗೆ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದ. ಇಷ್ಟಾಗಿಯೂ ಉಹುದ್ ಯುಧ್ದದ ಸಂರ್ಭ ಬಂದಾಗ ಪ್ರವಾದಿ(ಸ್ವ.ಅ) ರವರು ಈ ಕಪಟ ವಿಶ್ವಾಸಿಯ ಯಾವುದೇ ಸಲಹೆಗಳನ್ನು ಸ್ವೀಕರಿಸಲಿಲ್ಲ. ಯಾಕೆಂದರೆ ಬಹುತೇಕ ಸ್ವಹಾಬಿಗಳ ಸಲಹೆ , ಪ್ರಸಕ್ತ ಯುಧ್ದವನ್ನು ಮದೀನಾ ಪಟ್ಟಣದಿಂದ ಹೊರಭಾಗದಲ್ಲಿ ಮಾಡುವುದಿತ್ತು. ಪ್ರವಾದಿ(ಸ್ವ.ಅ) ರವರ ಇರಾದೆಯು ಮದೀನಾ ಪಟ್ಟಣದಲ್ಲಿದ್ದೇ ಯುಧ್ದವನ್ನು ಎದುರಿಸುವುದಾಗಿತ್ತು. ಕೊನೆಗೆ ಬಹುತೇಕ ಸ್ವಹಾಬಿಗಳ ಸಲಹೆಗಳನ್ನು ಸ್ವೀಕರಿಸಿ ಮದೀನಾದಿಂದ ಹೊರಭಾಗದಲ್ಲಿ ಯುಧ್ದವನ್ನು ಮಾಡುವ ತೀರ್ಮಾನವನ್ನು ಮಾಡಿದರು. ಪ್ರವಾದಿ(ಸ್ವ.ಅ) ರವರು ಜುಮಾ ನಮಾಝ್ ಮಾಡಿ ಸಂಪೂರ್ಣ ತಯಾರಿಯೊಂದಿಗೆ ಯುಧ್ದ ಭೂಮಿಗೆ ಹೊರಟರು. ಮದೀನಾದ ಹೊರಭಾಗದಲ್ಲಿ ರಾತ್ರಿ ಕಳೆದರು. ಇಬ್ನ್ ಸಲೂಲ್ ಮುನಾಫಿಕ್ (ಕಪಟಿ) ಪ್ರವಾದಿ (ಸ್ವ.ಅ) ರವರ ಜೊತೆ ಸೇರಿಕೊಂಡ. ಅವನ ಜೊತೆಗೆ ಅವನ ಹಿಂಬಾಲಕರಾದ 300 ಮಂದಿಯೂ ಯುಧ್ದಕ್ಕೆ ತಯಾರಾದರು. ಬೆಳಿಗ್ಗೆ ಪ್ರವಾದಿ(ಸ್ವ.ಅ) ರವರು ಉಹುದ್ ಯುಧ್ದಕ್ಕಾಗಿ ಉಹುದ್ ಮೈದಾನದತ್ತ ನಡೆದರು. ಕಾಫಿರ್ (ಸತ್ಯ ನಿಷೇಧಿ) ಗಳು ಮೊದಲಿನಿಂದಲೇ ತಯಾರಾಗಿದ್ದರು. ಇನ್ನೇನು ಯುಧ್ದವು ಸಂಭವಿಸುತ್ತಿದೆ ಎಂದಾಗ ಇಬ್ನ್ ಸಲೂಲ್ ಹಾಗೂ ಅವನ ಹಿಂಬಾಲಕರು ಎಲ್ಲಾ ಮುಸ್ಲಿಮರನ್ನು ಅಲ್ಲೇ ಬಿಟ್ಟು ಮದೀನಾದತ್ತ ಹೊರ ನಡೆದ. ಇಬ್ನ್ ಸಲೂಲ್ ಹೇಳತೊಡಗಿದ, ಪ್ರವಾದಿ(ಸ್ವ.ಅ) ರವರು ನನ್ನ ಸಲಹೆಯನ್ನು ತಿರಸ್ಕರಿಸಿದರು. ಕೆಲವು ಯುವ ಸ್ವಹಾಬಿಗಳ ಮಾತುಗಳನ್ನು ಕೇಳಿದರು. ಒಂದು ವೇಳೆ ನಿಜವಾಗಿಯೂ ಇದು ಯುಧ್ದ ಎಂದಾದಲ್ಲಿ ನಾವು ಖಂಡಿತವಾಗಿಯೂ ಇದರಲ್ಲಿ ಭಾಗಿಯಾಗುತ್ತಿದ್ದೆವು.

ಮುನಾಫಿಕ್ ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ನ ಈ ನಡವಳಿಕೆಯಿಂದ ಕೆಲವೊಂದು ಸವಾಲುಗಳು ಎದುರಾಗುತ್ತವೆ. ಒಂದು ವೇಳೆ ಮದೀನಾದಿಂದ ಹೊರ ಭಾಗದಲ್ಲಿ ಯುಧ್ದ ಮಾಡುವುದರ ವಿರುಧ್ದ ಇವನಿರುತ್ತಿದ್ದರೆ ಪ್ರವಾದಿ(ಸ್ವ.ಅ) ರ ಜೊತೆಗೂಡಿ ಯುಧ್ದಕ್ಕೆ ಸನ್ನದ್ದರಾದವರಂತೆ ಯುಧ್ದೋಪಕರಣಗಳೊಂದಿಗೆ ಯಾಕೆ ಬಂದ ?  ಪ್ರವಾದಿ(ಸ್ವ.ಅ) ರವರ ಜೊತೆಯಲ್ಲಿ ರಾತ್ರಿ ಯಾಕೆ ಕಳೆದ ? ಇದರಿಂದ ತಿಳಿಯುವುದೇನೆಂದರೆ ಈ ಕುತಂತ್ರಗಳ ಹಿಂದೆ ಬಹುದೊಡ್ಡ ಪಿತೂರಿ ಇದೆ. ಯುಧ್ದವು ಸಂಭವಿಸುವ ಸಮಯದಲ್ಲಿ ವೈರಿಗಳ ಎದುರು ತನ್ನ ಹಿಂಬಾಲಕರನ್ನು ಅಲ್ಲಿಂದ ವಾಪಾಸು ಕರೆಸುವ ಮೂಲಕ, ಒಂದು ಕಡೆ ಮುಸ್ಲಿಮರು ಅಧೀರರಾಗುತ್ತಾರೆ, ಇನ್ನೊಂದು ಕಡೆ ಕುಫ್ಫಾರ್ (ಸತ್ಯ ನಿಷೇಧಿ) ಗಳು ಧೈರ್ಯವಂತರಾಗುತ್ತಾರೆ. ಇದುವೇ ಅವನ ಉದ್ದೇಶ ಆಗಿತ್ತು.

`ಕಠೋರ ಮನಸ್ಸಿನ ಕಪಟ ವಿಶ್ವಾಸಿ, ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ಇವನ ಪುತ್ರರಾದ ಹಝ್ರತ್ ಅಬ್ದುಲ್ಲಾ(ರ.ಅ) ರವರಿಗೆ ಪವಿತ್ರ ಇಸ್ಲಾಮನ್ನು ಸ್ವೀಕರಿಸುವ ತೌಫೀಕ್ ಸಿಕ್ಕಿತು. ಅವರ ತಂದೆಯ ಬಗ್ಗೆ ಪ್ರವಾದಿ(ಸ್ವ.ಅ) ರವರು ಮಾಡಿದ ತೀರ್ಮಾನವನ್ನು ಕೇಳಿ ಓಡೋಡಿ ಬಂದರು. ಪ್ರವಾದಿ (ಸ್ವ.ಅ) ರವರೇ, ನನಗೆ ನಾನು ನನ್ನ ತಂದೆಯನ್ನು ಅಪಾರವಾಗಿ ಪ್ರೀತಿಸುತ್ತೇನೆ. ನನ್ನ ತಂದೆಯ ಕೊಲೆಯಾದಲ್ಲಿ ತಂದೆಯ ಮೇಲಿನ ಪ್ರೀತಿಯು ಪ್ರತೀಕಾರದ ರೂಪವನ್ನು ಪಡೆದುಕೊಳ್ಳಬಹುದು. ಕೊಲೆ ಮಾಡಿದ ಸ್ವಹಾಬಿಯವನ್ನು ದ್ವೇಷದಿಂದ ನಾನು ಕೊಲ್ಲಬಹುದು. ಇದರಿಂದಾಗಿ ಒಂದು ಸತ್ಯವಿಶ್ವಾಸಿಯ ಕೊಲೆ ಮಾಡಿದ ಪಾಪದಿಂದಾಗಿ ನಾನು ಸೀದಾ ನರಕವಾಸಿಯಾಗುವೆನು ಎಂಬ ಭಯ ನನಗಿದೆ ಎಂದರು. ಆದ್ದರಿಂದ ಪ್ರವಾದಿ(ಸ್ವ.ಅ) ರವರೇ ಇಂತಹ ಪಾಪಿಯಾದ ಇಬ್ನ್ ಸಲೂಲ್ ನನ್ನು ಸ್ವತಃ ನಾನೇ ಕೊಲೆ ಮಾಡಿ ಅವನ ರುಂಡವನ್ನು ತಮ್ಮ ಮುಂದೆ ತಂದು ಇರಿಸಲೇ ? ಈ ಮಹಾತ್ಕಾರ್ಯದಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ತಕ್ಷಣ ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ಹೇಳಿದರು, ಎಲ್ಲಿಯವರೇಗೆ ನಿಮ್ಮ ತಂದೆಯು ನನ್ನ ಜೊತೆಯಲ್ಲಿರುತ್ತಾರೋ ಅಲ್ಲಿಯವರೇಗೆ ನಾನು ಅವರೊಂದಿಗೆ ಅತ್ಯುತ್ತಮ ಸ್ವಭಾವದೊಂದಿಗೆ ಇರುವೆನು. ತನ್ಮೂಲಕ ಪ್ರವಾದಿ (ಸ್ವ.ಅ) ಆ ಮುನಾಫಿಕ್( ಕಪಟಿ)ನೊಂದಿಗೆ ಅವನ ಜೀವಿತಾವಧಿಯಲ್ಲಿ ತೋರಿದ ಸದ್ವರ್ತನೆಯನ್ನು ವರ್ಣಿಸಲು ಅಸಾಧ್ಯ. ನನ್ನಿಂದಾಗಿ ಇವನಿಗೆ ಸ್ವರ್ಗ ಸಿಗುವುದಾದರೆ ಸಿಗಲಿ ಎಂದು ಇವನ ಮರಣದ ಸಮಯದಲ್ಲಿ ತನ್ನ ಜುಬ್ಬಾವನ್ನು ಪ್ರವಾದಿ(ಸ್ವ.ಅ) ರವರು ಅವನಿಗೆ ನೀಡಿದರು. ಇವನ ಜನಾಝ ನಮಾಝನ್ನು ನಿರ್ವಹಿಸಿದರು. ಇವನಿಗಾಗಿ ಅಲ್ಲಾಹನಿಂದ ಮಗ್ಫಿರತ್ (ಮೋಕ್ಷ) ನ ದುವಾ ಮಾಡಿದರು.

ಕಪಟ ವಿಶ್ವಾಸಿಗಳು ಮುಸ್ಲಿಮರ ಬಗ್ಗೆ ಕ್ಷೋಭೆಯನ್ನು ಮಾಡಲು ಚರ್ಚೆಗಳನ್ನು ಮಾಡುವುದನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದರು. ಉದಾಹರಣೆಗೆ, ಖಂದಕ್ ಯುಧ್ದದಲ್ಲಿ ಒರ್ವ ಮುನಾಫಿಕ್ (ಕಪಟ ವಿಶ್ವಾಸಿ) ಹೇಳುತ್ತಾನೆ, ಪ್ರವಾದಿ (ಸ್ವ.ಅ) ರವರು ಹೇಳುತ್ತಾರೆ, ನಾವು ಕೈಸರ್, ಕಿಸ್ರಾ (ಪರ್ಶಿಯನ್ ರೋಮನ್ ) ಗಳ ಆಡಳಿತವನ್ನು ಕೊನೆಗೊಳಿಸುತ್ತೇವೆ. ಇಂದು ನಮ್ಮ ಅವಸ್ಥೆ ಎಲ್ಲಿಯವರೇಗೆ ತಲುಪಿದೆಯೆಂದರೆ ನಾವು ನಮ್ಮ ಅಗತ್ಯ ಕಾರ್ಯಗಳಿಗೂ ಹೊರ ಹೋಗದಂತಹ ಪರಿಸ್ಥಿತಿ ಎದುರಾಗಿದೆ. ವಾಸ್ತವದಲ್ಲಿಯೂ ಕುಫ್ಫಾರ್ (ಸತ್ಯ ನಿಷೇಧಿ) ಗಳು ಮುಸ್ಲಿಮರನ್ನು  ಈ ರೀತಿಯಾಗಿ ನಡೆಸುಕೊಳ್ಳುತ್ತಿದ್ದರು. ಆದರೆ ಇಂತಹ ಸಾಮಾನ್ಯ ವಿಷಯಗಳು ಈ ಮುನಾಫಿಕ್ ನ ಬಲಹೀನ ಈಮಾನ್( ಕಾಪಟ್ಯತೆಗೆ) ಎತ್ತಿ ಹಿಡಿದ ಕನ್ನಡಿಯಾಗಿತ್ತು. ಕೊನೆಯಲ್ಲಿ ಪ್ರವಾದಿ(ಸ್ವ.ಅ) ರವರು ನೀಡಿದಂತಹ ಎಲ್ಲಾ ಸುವಾರ್ತೆಗಳು ಸತ್ಯವಾದದ್ದು ಚರಿತ್ರೆಯಿಂದ ನಾವು ಚೆನ್ನಾಗಿ ಅರಿಯಬಹುದು.

ಒಮ್ಮೆ ಓರ್ವ ಮುನಾಫಿಕ್(ಕಪಟ ವಿಶ್ವಾಸಿ) ತಬೂಕ್ ಯುಧ್ದದ ಸಂಧರ್ಭದಲ್ಲಿ, ಪ್ರವಾದಿ ಮುಹಮ್ಮದ್(ಸ್ವ.ಅ) ರವರು ಅಲ್ಲಾಹನ ರಸೂಲರು (ಸಂದೇಶವಾಹಕರು) ಎಂಬುವುದರಲ್ಲಿ ಸಂಶಯವನ್ನು ವ್ಯಕ್ತಪಡಿಸುತ್ತಾ ಹೇಳಿದನು. ಇವರ ಬಳಿ ಆಕಾಶದಿಂದ ದಿವ್ಯವಾಣಿ ಬರುತ್ತಿದೆ ಎನ್ನುತ್ತಾರೆ ಆದರೆ ಇವರಿಗೆ ಇವರ ಒಂಟೆ ಎಲ್ಲಿದೆ ಎಂದು ಗೊತ್ತಿಲ್ಲ.  ಈ ಮಾತು ಪ್ರವಾದಿ(ಸ್ವ.ಅ) ರ ಬಳಿ ತಲುಪಿದಾಗ ಹೇಳುತ್ತಾರೆ, ನಿಸ್ಸಂಶಯವಾಗಿಯೂ ನನ್ನ ಒಂಟೆ ಎಲ್ಲಿಗೆ ಹೋಗಿದೆ ಎಂದು ನನಗೆ ಅರಿವಿಲ್ಲ. ಆದರೆ ಇದೀಗ ನನಗೆ ಅಲ್ಲಾಹನ ಬಳಿಯಿಂದ ನನ್ನ ಒಂಟೆ ಇಂತಹ ಸ್ಥಳದಲ್ಲಿ ಇದೆ ಎಂದು ತಿಳಿಯಿತು, ಆಗಲೇ ಓರ್ವ ಸ್ವಹಾಬಿಯವರಿಗೆ ಹೇಳಿದರು, ನನ್ನ ಒಂಟೆ ಇಂತಹ ಸ್ಥಳದಲ್ಲಿ ಇದೆ, ನೀವು ಅಲ್ಲಿಗೆ ಹೋಗಿ ಅದನ್ನು ಹಿಡಿದುಕೊಂಡು ಬನ್ನಿ. ಇದೇ ತರಹದ ಇನ್ನೋರ್ವ ಮುನಾಫಿಕ್ ಜದ್ದ್ ಬಿನ್ ಕೈಸ್. ರಾತ್ರಿಯ ಗಾಢ ಕತ್ತಲಿನ ವೇಳೆ ಪ್ರವಾದಿ(ಸ್ವ.ಅ) ರವರನ್ನು ದೊಡ್ಡ ಪ್ರಪಾತಕ್ಕೆ ದೂಡಿ ಹಾಕಬೇಕು ಎಂದು ಎಣಿಸಿದ್ದ. ಆದರೆ ಇವನ ಸಂಚಿನ ಸಂಪೂರ್ಣ ವಿಷಯವು ಪ್ರವಾದಿ(ಸ್ವ.ಅ) ಯವರಿಗೆ ತಿಳಿಯಿತು. ಮುನಾಫಿಕರಿಗೂ ಇದರ ಅರಿವಾಯಿತು. ಪ್ರವಾದಿ ಮುಹಮ್ಮದ್(ಸ್ವ.ಅ) ರವರು ಇದರ ಬಗ್ಗೆ ವಿಚಾರಿಸಿದರು. ಆದರೂ ಯಾರಿಗೂ ಕೊಲೆಯ ಸಂಚಿಗಾಗಿ ಯಾವುದೇ ರೀತಿಯ ಶಿಕ್ಷೆಯನ್ನು ನೀಡಲಿಲ್ಲ. ಬದಲಾಗಿ ಮಾಫ್ ಮಾಡಿದರು.(ಮನ್ನಿಸಿದರು). ನಿಜವಾಗಿಯೂ ಈ ಸಂಧರ್ಭದಲ್ಲಿ ಹಝ್ರತ್ ಆಯಿಶಾ(ರ.ಅ) ರವರ ಮಾತು ನೆನಪಾಗುತ್ತಿದೆ. ಪ್ರವಾದಿ ಮುಹಮ್ಮದ್(ಸ್ವ.ಅ) ರವರ ಅಖ್ಲಾಕ್(ಚಾರಿತ್ರ್ಯ) ಪವಿತ್ರ ಕುರ್ ಆನ್ ಆಗಿತ್ತು.

ವಿಶ್ವದ ದೊಡ್ಡ ದೊಡ್ಡ ಇತಿಹಾಸದ ಹೀರೋಗಳನ್ನು ಒಮ್ಮೆ ಅವಲೋಕಿಸಿ. ಇಂತಹ ಮಹಾನ್ ಮಾನವತಾವಾದಿ, ಚಾರಿತ್ರ್ಯದ ಉತ್ತುಂಗಕ್ಕೇರಿದ, ತೆರೆದ ಕುರ್‍ಆನ್ ನಂತಿರುವ ಮಹಾನ್ ವ್ಯಕ್ತಿತ್ವವನ್ನು ಎಲ್ಲೂ, ಎಂದೆಂದೂ ಕಾಣಲಿಕ್ಕೆ ಸಾಧ್ಯವಿಲ್ಲ. ಮುನಾಫಿಕ್ (ಕಪಟ ವಿಶ್ವಾಸಿ) ಗಳು ಒಟ್ಟು 300 ಪುರುಷರು ಹಾಗೂ 70 ಮಹಿಳೆಯರಿದ್ದರು. ಆದರೂ ಯಾರಿಗೂ ಯಾವುದೇ ರೀತಿಯ ಶಿಕ್ಷೆಯನ್ನು ನೀಡಲಿಲ್ಲ. ಒಂದು ದೃಷ್ಟಿಯನ್ನು ಇಂದಿನ ಅಧಿಕಾರವನ್ನು, ಅಂತಸ್ತುಗಳನ್ನು ಹೊಂದಿರುವ ಜನರ ಕಡೆ ಹಾಯಿಸೋಣ. ಅಧಿಕಾರದ  ಈ ಮದದಿಂದಾಗಿ ವಿರೋಧಿಗಳನ್ನು ತಕ್ಕ ಶಾಸ್ತಿಗೆ ತಲುಪಿಸಲು ಕ್ಷಣಮಾತ್ರವೂ ಸಹಿಸದಂತಹ ವ್ಯಕ್ತಿಗಳು ನಮ್ಮ ಮುಂದಿದ್ದಾರೆ. ಅಮೇರಿಕದಂತಹ ದೇಶಗಳನ್ನು ನೋಡಿದರೆ ಇಂತಹ ಸಾವಿರಾರು ಘಟನೆಗಳು ಜ್ವಲಂತ ಉದಾಹರಣೆಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತವೆ. ತನ್ನ ಕಬಂದಬಾಹುಗಳನ್ನು ವಿಶ್ವಾದಾದ್ಯಂತ ಚಾಚಿರುವ ದೃಶ್ಯಗಳನ್ನು ನೋಡಿದರೆ ಅದನ್ನು ಹೇಳತೀರದು. ಆದರೆ ಕರುಣಾಮಯಿಯಾದ ಮಹಾನ್ ಅಂತ್ಯ ಪ್ರವಾದಿ ಮುಹಮ್ಮದ್ (ಸ್ವ.ಅ) ಜೀವನಪರ್ಯಂತ ಮುನಾಫಿಕ್ (ಕಪಟ ವಿಶ್ವಾಸಿ) ಗಳ ಸಂಕಷ್ಟಗಳನ್ನು ಸಹಿಸುತ್ತಾ ಹೋದರು. ಆದರೂ ನಿರಂತರವಾಗಿ ಅವರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದರು. ಒಮ್ಮೆಯೂ ಪ್ರತೀಕಾರದ ಬಗ್ಗೆ ಚಕಾರವೆತ್ತಲಿಲ್ಲ. ಬದಲಾಗಿ ಯಾರ್‍ಯಾರು ಬಂದು ಕ್ಷಮೆಯನ್ನು ಕೇಳಿದರೋ ಅವರಿಗೆಲ್ಲ ಒಂದೇ ಕ್ಷಣದಲ್ಲಿ ಕ್ಷಮಿಸಿದರು.

ಒಂದೊಮ್ಮೆ ಆಲೋಚಿಸಿ, ತಬೂಕ್ ಯುಧ್ದದ ಸಮಯದಲ್ಲಿ ಮುನಾಫಿಕ್ (ಕಪಟ ವಿಶ್ವಾಸಿ) ಗಳು ತಮ್ಮ ಕಾಪಟ್ಯತೆಯನ್ನು ಹರಡಲಿಕ್ಕಾಗಿ ಒಂದು ಅಡ್ಡೆಯನ್ನು ನಿರ್ಮಿಸಿದ್ದರು. ಇದಕ್ಕೆ ಅವರು ಮಸ್ಜಿದ್‍ನ ಹೆಸರು ನೀಡಿದ್ದರು. ಪವಿತ್ರ ಕುರ್‍ಆನಿನಲ್ಲಿ ಇದರ ಹೆಸರು ಮಸ್ಜಿದೆ ಝಿರಾರ್ ಎಂದಾಗಿದೆ. ಈ ಮಸೀದಿಯನ್ನು ಅಬೂ ಆಮಿರ್ ನ ನೇತೃತ್ವದಲ್ಲಿ ನಿರ್ಮಿಸಲಾಯಿತು. ಪ್ರವಾದಿ ಮುಹಮ್ಮದ್(ಸ್ವ.ಅ) ರವರು ಈ ಮಸೀದಿಯಲ್ಲಿ ನಮಾಝನ್ನು ನಿರ್ವಹಿಸಬೇಕೆಂದು ಅವರ ಇಚ್ಛೆಯಾಗಿತ್ತು. ಆದರೆ ಕುರ್‍ಆನ್ ಇವರ ಸಂಚನ್ನು ಬಯಲುಮಾಡಿತು. ಸೂರ ತೌಬ 107 ದಲ್ಲಿ ಅದರ ಸಂಪೂರ್ಣ ವಿವರವಿದೆ.

ಅಲ್ಲಾಮ ಶಬ್ಬೀರ್ ಅಹ್ಮದ್ ಉಸ್ಮಾನಿ (ರ.ಅ) ರವರು ಈ ಮಸೀದಿಯ ನಿರ್ಮಾಣದ ಉದ್ದೇಶ ಹಾಗೂ ಮುಸ್ಲಿಮರ ನಡುವೆ ದ್ವೇಷವನ್ನು ಹರಡಲಿಕ್ಕೆ ಬೇಕಾಗುವ ಮುನಾಫಿಕರ ಸಂಚನ್ನು ಬಯಲು ಮಾಡುತ್ತಾ ವಿವರಿಸುತ್ತಾರೆ, ಪ್ರವಾದಿ ಮುಹಮ್ಮದ್(ಸ್ವ.ಅ) ರವರು ಮಕ್ಕಾದಿಂದ ಹಿಜ್ರತ್ (ಪ್ರಯಾಣ) ಮಾಡಿ ಮದೀನಾಕ್ಕೆ ಬಂದು ಮದೀನಾ ಪಟ್ಟಣದಿಂದ ಹೊರೆಗೆ “ ಬನೀ ಅಮ್ರ್ ಬಿನ್ ಔಫ್ ” ರವರ ಮೊಹಲ್ಲಾದಲ್ಲಿ ತಂಗಿದರು. ಕೆಲವು ದಿನಗಳ ನಂತರ ಮದೀನಾ ಪಟ್ಟಣಕ್ಕೆ ಹೋದರು. ಅಲ್ಲಿ ಅವರು ಮಸ್ಜಿದ್ ನುಬುವಿ (ಮದೀನಾದಲ್ಲಿರುವ ಮಸೀದಿ) ಯನ್ನು ಕಟ್ಟಿದರು. ಮೊದಲು ಬಂದು ಪ್ರವಾದಿ(ಸ್ವ.ಅ) ರವರು ತಂಗಿದಂತಹ ಸ್ಥಳದಲ್ಲಿ ಆ ಮೊಹಲ್ಲಾದವರು ಮಸೀದಿಯನ್ನು ನಿರ್ಮಿಸಿದರು. ಇದು ಮಸ್ಜಿದ್ ಕುಬಾ ಹೆಸರಿನಿಂದ ಹೆಸರುವಾಸಿಯಾಗಿದೆ. ಪ್ರವಾದಿ(ಸ್ವ.ಅ) ಪ್ರತೀ ಶನಿವಾರದ ದಿವಸ ಅಲ್ಲಿ ಹೋಗಿ ನಮಾಝ್ ಮಾಡುತ್ತಿದ್ದರು. ಈ ಮಸೀದಿಯ ನಾನಾ ತರಹದ ಶ್ರೇಷ್ಟತೆಯನ್ನೂ ಹೇಳುತ್ತಿದ್ದರು. ಇದನ್ನು ನೋಡಿ ಸಹಿಸಲಾಗದೇ ಮುನಾಫಿಕರು ಮಸೀದಿಯ ಹೆಸರಿನಲ್ಲಿ ಮಸ್ಜಿದ್ ಕುಬಾದ ಹತ್ತಿರವೇ ಒಂದು ಮನೆಯನ್ನು ನಿರ್ಮಿಸಿದರು. ಇವರ ಉದ್ದೇಶ ದುರ್ಬಲ ಮುಸ್ಲಿಮರನ್ನು ಮರುಳುಮಾಡಿ ಮಸ್ಜಿದ್ ಕುಬಾದಿಂದ ದೂರವಿಡುವುದು. ವಾಸ್ತವದಲ್ಲಿ ಈ ಸಂಚನ್ನು ಹೂಡುವಲ್ಲಿ ಬಹುದೊಡ್ಡ ಪಾತ್ರ ಅಬೂ ಆಮಿರ್ ರಾಹಿಬ್ ಖಝ್ರಜಿಯವನದ್ದಾಗಿತ್ತು. ಹಿಜ್ರತ್ ಗಿಂತ ಮುಂಚೆ ಇವನು ನಸ್ರಾನಿ (ಕ್ರಿಶ್ಚನ್) ಆಗಿ ರಾಹಿಬ್ (ಸನ್ಯಾಸಿ) ಆಗಿ ಜೀವನ ನಡೆಸುತ್ತಿದ್ದ. ಮದೀನಾ ಪಟ್ಟಣದಲ್ಲಿ ವಿಶೇಷತಃ ಖಝ್ರಜ್ ಗೋತ್ರದ ಜನರು ಇವನ ಸಾದಾ ಸೀದಾ ಜೀವನವದಿಂದ ಪ್ರಭಾವಿತರಾಗಿದ್ದರು. ತುಂಬಾ ಗೌರವವನ್ನೂ ಇವನಿಗೆ ನೀಡುತ್ತಿದ್ದರು. ಈ ನಡುವೆ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಗೌರವಯುತ ಆಗಮನವು ಮದೀನಾದಲ್ಲಿ ಆಯಿತು. ಸತ್ಯವಿಶ್ವಾಸದ ಎಲ್ಲೆಲ್ಲೂ ಕಂಪು ಹರಡಲು ಪ್ರಾರಂಭವಾಯಿತು. ಇದರಿಂದ ಕಪಟವಿಶ್ವಾಸಿಗಳು ಹಾಗೂ ಪುರೋಹಿತರು ಚಲಾವಣೆಗೆ ಅಯೋಗ್ಯವಾದಂತಹ ನಾಣ್ಯಗಳಂತಾದರು.  ಪ್ರವಾದಿತ್ವದ ಪ್ರಕಾಶದ ಸೂರ್ಯ ಉದಯಿಸುತ್ತಿರುವಾಗ ಯಾರೂ ಇವರಿಗೆ ಕೇಳುವವರಿಲ್ಲದಂತಾದರು. ಅಬೂ ಆಮಿರ್ ಇದನ್ನು ನೋಡಿ ಕೆಂಡಾಮಂಡಲವಾದ. ಪ್ರವಾದಿ(ಸ್ವ.ಅ) ಯವರು ಮೊದಲು ಅವನಿಗೇ ಇಸ್ಲಾಮಿನ ಆಹ್ವಾನವನ್ನು ನೀಡಿದರು. ನಾನು ಇಬ್ರಾಹೀಮ್ ಅಲೈಹಿಸ್ಸಲಾಮ್ ರವರ ಮಿಲ್ಲತ್ (ನಂಬಿಕೆ ) ತಂದಿದ್ದೇನೆ ಎಂದರು. ಆಗ ಅವನು ಹೇಳತೊಡಗಿದ, ನಾನು ಮೊದಲಿನಿಂದಲೇ ಇದನ್ನು ಅನುಸರಿಸುತ್ತಾ ಬಂದಿದ್ದೇನೆ. ನೀವು ನಿಮ್ಮ ಕಡೆಯಿಂದ ಮಿಲ್ಲತ್ ಇಬ್ರಾಹೀಮ್ ಗೆ ವಿರುಧ್ದವಾದ ವಿಷಯಗಳನ್ನು ಇದರಲ್ಲಿ ಜೋಡಿಸಿದ್ದೀರಿ. ಇದನ್ನು ಕೇಳಿದ ಪ್ರವಾದಿ(ಸ್ವ.ಅ) ರವರು ತುಂಬಾ ಕಟುವಾದ ಶಬ್ದಗಳಿಂದ ಈ ಮಹಾ ಸುಳ್ಳನ್ನು ವಿರೋಧಿಸಿದರು. ತಕ್ಷಣ ಅವನು ಹೇಳತೊಡಗಿದ, ನಮ್ಮಲ್ಲಿ ಯಾರು ಸುಳ್ಳುಗಾರರೋ ಅಲ್ಲಾಹು ಅವನನ್ನು ತನ್ನ ವಾಸಪ್ರದೇಶದಿಂದ ದೂರ ಮಾಡಿ ಅತ್ಯಂತ ಹೀನಾಯವಾದ ಮರಣವನ್ನು ಅವನಿಗೆ ನೀಡಲಿ. ಇದಕ್ಕೆ ಪ್ರವಾದಿ(ಸ್ವ.ಅ) ರವರು ಆಮೀನ್, ಅಲ್ಲಾಹು ನಿನ್ನೆಚ್ಚೆಯಂತೆ ಮಾಡಲಿ ಎಂದು ಹೇಳಿದರು. ಬದ್ರ್ ಯುಧ್ದದ ನಂತರ ಇಸ್ಲಾಮಿನ ಬೇರುಗಳು ಬಲಿಷ್ಟವಾದವು. ಮುಸ್ಲಿಮರ ಏಳಿಗೆಯು ವಿರೋಧಿಗಳ ಕಣ್ಣನ್ನು ಕುಕ್ಕಿಸುತ್ತಿದ್ದವು. ಅಬೂ ಆಮಿರ್ ನ ದ್ವೇಷಕ್ಕಂತೂ ಕೊನೆಯೇ ಇಲ್ಲದಂತಾಯಿತು. ಸೀದಾ ಮಕ್ಕಾ ಪಟ್ಟಣಕ್ಕೆ ಓಡಿ ಹೋದ. ಮಕ್ಕಾದಲ್ಲಿ ವಿರೋಧಿ ಬಣವನ್ನು ಕಟ್ಟಿ ಪ್ರವಾದಿ(ಸ್ವ.ಅ) ರವರನ್ನು ಎದುರಿಸಲು ಸರ್ವಪ್ರಯತ್ನವನ್ನು ಮಾಡಿದ. ಉಹುದ್ ಯುಧ್ದದಲ್ಲಿ ಕುರೈಶ್ ಗಳ ಜೊತೆಗೂಡಿ ಸ್ವತಃ ತಾನೂ ಬಂದ. ಯುಧ್ದವು ಆರಂಭವಾಗುದ್ಕಕಿಂತ ಮುಂಚೆ ಮುನ್ನುಗ್ಗಿ ಮದೀನಾದ ಅನ್ಸಾರ್ ಗಳ ಕಡೆ ಮುಖ ಮಾಡಿದ. ಇವರು ಇಸ್ಲಾಮಿಗಿಂತ ಮುಂಚೆ ಇವನ ಬಹುದೊಡ್ಡ ಹಿಂಬಾಲಕರಾಗಿದ್ದರು. ಅವನ ಜೊತೆಗಿನ ಭಾಂದವ್ಯವನ್ನು ನೆನಪಿಸಿ ತನ್ನ ಕಡೆ ವಾಲಿಸಲು ಪ್ರಯತ್ನಿಸಿದ. ಪ್ರವಾದಿ ಮುಹಮ್ಮದ್(ಸ್ವ.ಅ) ರವರ ಪ್ರವಾದಿತ್ವದ ಪ್ರಕಾಶವು ಸ್ವಹಾಬಿಗಳ ಮೇಲೆ ಬಿದ್ದ ನಂತರ ಗತ ಕಾಲದ ಚಮತ್ಕಾರವು ನಡೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಅವನು ಮರೆತಂತೆ ಕಾಣುತ್ತಿತ್ತು.  ಈ ಮೊದಲು ಮದೀನಾದ ಅನ್ಸಾರ್ ಗಳು ಅವನನ್ನು ರಾಹಿಬ್(ಸನ್ಯಾಸಿ) ಎಂದು ಕರೆಯುತ್ತಿದ್ದರು. ಇದೀಗ, ಅವನ ಕರೆಗೆ ಉತ್ತರವಾಗಿ, ಓ ಫಾಸಿಕ್(ಪಾಪಿ), ಅಲ್ಲಾಹನ ವೈರಿಯೇ ಕೇಳು, ಅಲ್ಲಾಹು ನಿನ್ನ ಕಣ್ಣುಗಳನ್ನು ಶಾಶ್ವತವಾಗಿ ತಣ್ಣಗಾಗದಂತೆ ಮಾಡಲಿ. ಪ್ರವಾದಿ ಮುಹಮ್ಮದ್ (ಸ್ವ.ಅ) ರಿಗೆ ವಿರುಧ್ದವಾಗಿ ನಿನಗೆ ನಮ್ಮ ಸಹಾಯ ದೊರೆಯಲು ಸಾಧ್ಯವೇ? ಅನ್ಸಾರ್ ಗಳ ಈ ಪ್ರತಿಕ್ರಿಯೆಗಳನ್ನು ಕೇಳಿದಾಕ್ಷಣ ಕ್ಷಣಕಾಲ ಸ್ಥಂಭೀಭೂತನಾದ. ತಕ್ಷಣ ಸಾವರಿಸಿಕೊಂಡು, ಓ ಪ್ರವಾದಿ(ಸ್ವ.ಅ) ಯವರೇ ಮುಂದಿನ ದಿನಗಳಲ್ಲಿ ಯಾವುದಾದರೊಂದು ಗೊತ್ರವು ತಮ್ಮ ವಿರುಧ್ದ ಯುಧ್ದಕ್ಕೆ ಸನ್ನಧ್ದರಾದಲ್ಲಿ ನಾನಂತೂ ನಿರಂತರವಾಗಿ ಅವರ ಜೊತೆಗಿರುವೆನು. ಆ ಪ್ರಕಾರ  ಹುನೈನ್ ಯುಧ್ದವು ಸಂಭವಿಸುವವರೇಗೆ ಕಾಫಿರ್(ಸತ್ಯ ನಿಷೇಧಿ) ಗಳ ಜೊತೆಗೂಡಿ ಮುಸ್ಲಿಮರ ವಿರುಧ್ದ ಯುಧ್ದ ಮಾಡಿದ. ಉಹುದ್ ಯುಧ್ದದಲ್ಲಿ ಇವನ ಕುತಂತ್ರಗಳಿಂದಾಗಿ ಪ್ರವಾದಿ (ಸ್ವ.ಅ) ರಿಗೆ ಕೆಲವೊಂದು ಸಂಕಷ್ಟಗಳು ಎದುರಾದವು. ಯಾರಿಗೂ ಅರಿವಾಗದ ರೂಪದಲ್ಲಿ ಕೆಲವೊಂದು ಗುಂಡಿಗಳನ್ನು ತೋಡಿಸಿದನು. ಅದೇ ಸ್ಥಳದಲ್ಲಿ ಪ್ರವಾದಿ(ಸ್ವ.ಅ) ರವರ ಮುಖಕ್ಕೆ ಗಾಯವಾಯಿತು ಹಾಗೂ ಅವರ ಒಂದು ಹಲ್ಲು ಶಹೀದ್ ಆಯಿತು. ಹುನೈನ್ ಯುಧ್ದದ ನಂತರ ಅಬೂ ಆಮಿರ್, ಭವಿಷ್ಯದಲ್ಲಿ ಇಸ್ಲಾಮನ್ನು ನಿರ್ನಾಮ ಮಾಡುಲು ಅರಬ್ ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ತಿರ್ಮಾನ ಮಾಡಿಕೊಂಡ. ಇದನ್ನೇ ಅರಿತು ಸಿರಿಯಾಕ್ಕೆ ಓಡಿ ಹೋದ. ಅಲ್ಲಿ ಹೋಗಿ ಮದೀನಾದ ಮುನಾಫಿಕರಿಗೆ (ಕಪಟ ವಿಶ್ವಾಸಿಗಳಿಗೆ) ಪತ್ರವನ್ನು ಬರೆದನು. ನಾನು ರೋಮ್‍ನ ಆಡಳಿತಗಾರ (ಕೈಸರ್) ಇವನ ಜೊತೆಗೂಡಿ ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ವಿರುಧ್ದ ಒಂದು ದೊಡ್ಡ ಸೈನ್ಯವನ್ನೇ ತರುವವನಿದ್ದೇನೆ. ಇದರಿಂದ ಮುಸ್ಲಿಮರ ಎಲ್ಲಾ ತರಹದ ಯೋಜನೆಗಳು ವಿಫಲಗೊಂಡು ಮುಸ್ಲಿಮರು ನಾಶವಾಗಲಿದ್ದಾರೆ. ಆದ್ದರಿಂದ ನೀವು ಇದೀಗ ಮಸೀದಿಯ ಹೆಸರಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿ. ಅದರಲ್ಲಿ ನಮಾಝಿನ ಹೆಸರಿನಲ್ಲಿ ಜನರನ್ನು ಒಗ್ಗೂಡಿಸಿ ಇಸ್ಲಾಮಿಗೆ ವಿರುಧ್ದವಾಗಿ ನಾನಾ ತರಹದ ಕ್ಷೋಭೆಗಳನ್ನು ಮಾಡುವಂತಾಗಬೇಕು. ನನ್ನ ಎಲ್ಲಾ ವ್ಯವಹಾರಗಳು, ಪತ್ರ ವ್ಯವಹಾರಗಳು ಗುಪ್ತವಾಗಿ ನನ್ನ ಜನರಿಂದ ತಮಗೆ ತಲುಪುತ್ತಿರಬೇಕು. ನಾನು ಅಲ್ಲಿಗೆ ಬರುವಂತಹ ಸಮಯದಲ್ಲಿ ನನಗೆ ತಂಗಲು ವಿಶಿಷ್ಟ ವ್ಯವಸ್ಥೆ ಆಗಬೇಕು. ಇವೇ ಕೆಲವು ಷಡ್ಯಂತರಗಳಾಗಿದ್ದವು. ಇವುಗಳ ಅನುಷ್ಟಾನಕ್ಕಾಗಿ ಮಸ್ಜಿದೇ ಝಿರಾರ್ ಎಂಬ ಮಸೀದಿಯನ್ನು ನಿರ್ಮಿಸಲಾಯಿತು.  ಈ ಚಾಣಾಕ್ಷತೆಯು ಪ್ರವಾದಿ(ಸ್.ಅ) ರವರ ಅರಿವಿಗೆ ಬಾರಬಾರದೆಂದು ಆಣೆಯನ್ನು ಹಾಕಿ ಹೇಳತೊಡಗಿದ. ನಮ್ಮ ನೀಯ್ಯತ್‍ನಲ್ಲಿ ಯಾವುದೇ ಕಾಟಟ್ಯತೆ ಇಲ್ಲ. ಚಳಿಯಲ್ಲಿ, ಮಳೆ ಗಾಳಿಯಲ್ಲಿ, ವಿಪರೀತ ಸೆಕೆಯಿಂದಾಗಿ ನಮಗೆ ಕುಬಾದಲ್ಲಿರುವ ಮಸೀಗೆ ಹೋಗಲು ಕೆಲವೊಮ್ಮೆ ಕಷ್ಟವಾಗುತ್ತದೆ. ಇದಕ್ಕಾಗಿ ಮಸೀದಿಯನ್ನು ನಿರ್ಮಿಸಿಕೊಂಡಿದ್ದೇವೆ. ಇದರಿಂದ ಮಸೀದಿಯಲ್ಲೇ ನಮಾಝ್ ಮಾಡುವವರಿಗೆ ಸೌಲಭ್ಯವಾಗಬಹುದು, ಮಸ್ಜಿದೆ ಕುಬಾದ ಸ್ಥಳಾವಕಾಶದ ಕೊರತೆಯೂ ನೀಗಬಹುದು.  ಈ ಎಲ್ಲಾ ಕಾರಣಗಳಿಂದಾಗಿ ಪ್ರವಾದಿ(ಸ್ವ.ಅ) ಯವರು ಒಮ್ಮೆ ಅಲ್ಲಿ ನಮಾಝನ್ನು ನಿರ್ವಿಹಿಸಿದರೆ ನಮಗೆ ಊಹಿಸಲಾರದಷ್ಟು ಸಂತೋಷವಾಗಬಹುದು. ಹಾಗೂ ಬರ್ಕತ್ ಸಿಗಬಹುದು. ಈ ಮರುಳು ಮಾಡುವ ಮಾತುಗಳು ಸ್ಚಲ್ಪ ಚಿಂತಿಸುವವರಿಗೆ ಅರಿವಾಗದೇ ಇರಲಿಕ್ಕೆ ಸಾಧ್ಯವೇ ಇಲ್ಲ. ಇದರ ಉದ್ದೇಶ ಕೆಲ ಸೀದಾ ಸಾದಾ ಮುಸ್ಲಿಮರನ್ನು ತನ್ನ ಬಲೆಯಲ್ಲಿ ಸಿಕ್ಕಿಸಿಹಾಕಿಕೊಳ್ಳವುದಿತ್ತು. ಅದು ಪ್ರವಾದಿ(ಸ್ವ.ಅ) ರವರು ತಬೂಕ್ ಯುಧ್ದಕ್ಕೆ ಹೊರಟ ಸಮಯವಾಗಿತ್ತು. ಆಗ ಪ್ರವಾದಿ(ಸ್ವ.ಅ) ಯವರು ಹೇಳಿದರು, ಒಂದು ವೇಳೆ ಅಲ್ಲಾಹನ ಇಛ್ಛೆ ಇದೇ ರೀತಿ ಆಗಿದ್ದಲ್ಲಿ ನಾನೇನೂ ಮಾಡಲಿಕ್ಕೆ ಸಾಧ್ಯವಿಲ್ಲ. ಯಾವಾಗ ಪ್ರವಾದಿ (ಸ್ವ.ಅ) ಯವರು ತಬೂಕ್ ನಿಂದ ಮದೀನಕ್ಕೆ ತೀರಾ ಹತ್ತಿರ ತಲುಪಿದರೋ ಆ ಕೋಡಲೇ ಜಿಬ್ರೀಲ್ (ದೇವದೂತರ ಸರದಾರ) (ಅ.ಸ) ರವರು ಕುರ್‍ಆನಿನ ಈ ಸೂಕ್ತಗಳೊಂದಿಗೆ ಹಾಜರಾದರು. ಈ ಆಯತ್‍ಗಳಲ್ಲಿ ಮುನಾಫಿಕ್‍ಗಳ ದುರುದ್ದೇಶಪೂರಿತ ಸಂಚುಗಳನ್ನು ಬಯಲುಮಾಡಲಾಯಿತು. ಹಾಗೂ ಇವರು ನಿರ್ಮಿಸಿದ ಮಸ್ಜಿದೆ ಝಿರಾರ್, ಇದರ ಉದ್ದೇಶಗಳನ್ನು ವಿವರಿಸಲಾಯಿತು. ಕೂಡಲೇ ಪ್ರವಾದಿ(ಸ್ವ.ಅ) ರವರು, ಮಾಲಿಕ್ ಬಿನ್ ಖಶ್ಮ್, ಮತ್ತು ಮಅನ್ ಬಿನ್ ಅದೀ (ರ.ಅ) ರವರಿಗೆ ಇವರು ನಿರ್ಮಿಸಿದಂತಹ ಈ ಕಟ್ಟಡವನ್ನು ನಿರ್ನಾಮಗೊಳಿಸಿ ಸುಡುವ ಆದೇಶವನ್ನು ನೀಡಿದರು. ಈ ಪ್ರಕಾರ ಮುನಾಫಿಕ್ ಅಬೂ ಆಮಿರ್ ನ ಮನಸ್ಸಿನಲ್ಲಿ ಹುದುಗಿರುವ ಆಕಾಂಕ್ಷೆಗಳು ಮಣ್ಣುಪಾಲಾಗಿ ಹೋದವು. ಅಬೂ ಆಮಿರ್ ಸಿರಿಯಾದಲ್ಲಿ ಈ ಮುಂಚೆ ಅವನು ಮಾಡಿದ ದುವಾಃ ಹಾಗೂ ಪ್ರವಾದಿ(ಸ್ವ.ಅ) ರವರು ಹೇಳಿದ ಆಮೀನ್ ನಿಂದಾಗಿ ಕಂಶಿರೀನ್ ಎಂಬಲ್ಲಿ ಯಾರೂ ಕಂಡು ಕೇಳರಿಯದಂತಹ ರೀತಿಯಲ್ಲಿ ಮರಣಕ್ಕೆ ದೂಡಲ್ಪಟ್ಟ.

ಇಸ್ಲಾಮಿನ ವಿರೋಧಿಗಳು ಮುಸ್ಲಿಮರ ರೂಪದಲ್ಲಿ ಮುಸ್ಲಿಮರ ನಡುವೆಯೇ ಇದ್ದರು. ಹಾಗೂ ನಾನಾ ರೀತಿಯಲ್ಲಿ ಷಡ್ಯಂತರವನ್ನು ಮಾಡಿದರು. ಇದನ್ನು ಕಾರ್ಯರೂಪಕ್ಕೆ ತರಲು ಶತಾಯಗತಾಯ ಪ್ರಯತ್ನಿಸಿದರು. ಈ ಎಲ್ಲಾ ವಿಷಯಗಳು ಮೇಲಿನ ಎಲ್ಲಾ ಘಟನೆಗಳಿಂದ ತಿಳಿದುಬರುತ್ತದೆ. ಮುನಾಫಿಕ್ (ಕಪಟ ವಿಶ್ವಾಸಿ) ಗಳ ಸಂಪರ್ಕ ಮಕ್ಕಾದ ಕಾಫಿರ್(ಸತ್ಯನಿಷೇಧಿ) ಗಳ ಜೊತೆ ಗಾಢವಾಗಿ ನಿರಂತರವಾಗಿತ್ತು. ಒಂದು ಬಾರಿ ಮಕ್ಕಾದ ಮುಶ್ರಿಕ್ ಗಳು ಮದೀನಾದಲ್ಲಿರುವ ಇಬ್ನ್ ಸಲೂಲ್ ನಿಗೆ ಪತ್ರ ಬರೆದು, ನೀವು ಮದೀನಾದಲ್ಲಿರುವ ಮುಸ್ಲಿಮರ ಮೇಲೆ ಯುಧ್ದ ಮಾಡಿ. ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಯುಧ್ದವನ್ನು ಮಾಡಲಿದ್ದೇವೆ ಎಂದು ಹೇಳಿದರು. ಈ ಪತ್ರದ ಬಗ್ಗೆ ಪ್ರವಾದಿ ಮುಹಮ್ಮದ್ (ಸ್ವ.ಅ) ರವರಿಗೆ ಮಾಹಿತಿ ದೊರೆಯಿತು. ಆಗ ಇಬ್ನ್ ಸಲೂಲ್ ನನ್ನು ಕರೆದು ಹೇಳಿದರು, ಸ್ವಲ್ಪ ಪ್ರಜ್ಞೆಯಿಂದ ಕೆಲಸ ಮಾಡು. ಯಾವ ಯುಧ್ದವನ್ನು ನೀನು ಮಾಡಲು ಉದ್ದೇಶಿಸಿದ್ದಿಯೋ, ಆ ಯುಧ್ದವು ನಿನ್ನ ಮಕ್ಕಳ, ಅಣ್ಣ ತಮ್ಮಂದಿರ, ಸಂಭಂದಿಕರ, ಆಪ್ತರ,ತೀರಾ ಹತ್ತಿರದವರ ಮೇಲೆ ಹೋಗಿ ಅವರ ಮರಣದೊಂದಿಗೆ ಅಂತ್ಯಗೊಳ್ಳುವುದು. ಪ್ರತಿಯೊಂದು ಗೋತ್ರದಲ್ಲೂ ಕಾಫಿರ್ ಗಳೂ ಇದ್ದಾರೆ. ಮುಸ್ಲಿಮರೂ ಇದ್ದಾರೆ. ತನ್ಮೂಲಕ ಒಬ್ಬ ವ್ಯಕ್ತಿಯು ತನ್ನ ಮಗನನ್ನು ಸಾಯಿಸುವನು ಇನ್ನೊಬ್ಬ ತನ್ನ ತಂದೆಯನ್ನು ಸಾಯಿಸುವನು.ಆದ್ದರಿಂದ ಯುಧ್ದ ಮಾಡುವುದಕ್ಕಿಂತ ಮುಂಚಿತವಾಗಿ ನೀನು ಏನನ್ನು ಮಾಡಲು ಮುನ್ನುಗ್ಗುತ್ತಿದ್ದಿ ಎಂದು ಸಾಕಷ್ಟು ಆಲೋಚನೆ ಮಾಡು ಎಂದು ಹೇಳಿದರು. ಪ್ರವಾದಿ ಮುಹಮ್ಮದ್(ಸ್ವ.ಅ) ರವರ ಮಾತು ನೂರಕ್ಕೆ ನೂರು ಸತ್ಯವಾಗಿತ್ತು. ಇದರಿಂದ ಮುನಾಫಿಕ್ ಗಳ ಕಣ್ಣುಗಳು ತೆರೆದವು. ಯುಧ್ದಮಾಡುವ ತೀರ್ಮಾನದಿಂದ ಹಿಂದೆ ಸರಿದರು. ಅದಾಗಲೇ ಇಬ್ನ್ ಸಲೂಲ್‍ನ ಸುಪುತ್ರ, ಮಗಳು, ಮಗಳ ಗಂಡ ಮುಸ್ಲಿಮರಾಗಿದ್ದರು.

ಮೇಲಿನ ಎಲ್ಲಾ ಘಟನೆಗಳಿಂದ ಅತ್ಯಂತ ಸ್ಪಷ್ಟವಾಗಿ ತಿಳಿಯುವ ವಿಷಯವೆಂದರೆ, ನಾವು ಪ್ರವಾದಿ ಮುಹಮ್ಮದ್ (ಸ್ವ.ಅ) ರವರ ಸಚ್ಚಾರಿತ್ರ್ಯ, ನಡವಳಿಕೆ, ಭಾಂಧವ್ಯ, ಉತ್ತಮ ಚರ್ಯೆಯನ್ನು ಅಧ್ಯಯನ ಮಾಡಬೇಕು. ಇದರಿಂದ ಒಂದು ಮಾತಂತೂ ಅತ್ಯಂತ ಸ್ಪಷ್ಟವಾಗಿ ತಿಳಿದುಬರುತ್ತದೆ, ನಿಜವಾಗಿಯೂ ಕುರ್‍ಆನ್ ಬಯಸಿರುವ ಅಖ್ಲಾಕ್( ಚರ್ಯೆ) ಇದುವೇ ಆಗಿದೆ. ಅವರು ಇದರಿಂದ ಪ್ರಭಾವಿತರಾಗದೇ ಇರಲಿಕ್ಕೆ ಸಾಧ್ಯವೇ ಇಲ್ಲ. ಇಂತಹ ಚಾರಿತ್ರ್ಯಗಳೊಂದಿಗೆ ಪ್ರವಾದಿ(ಸ್ವ.ಅ) ಯವರ ತನ್ನ ವಿರೋಧಿಗಳಾದ ಮುನಾಫಿಕ್‍ರ ಜೊತೆಗಿದ್ದು ಮಾದರೀ ಜೀವನವನ್ನು ನಡೆಸಿ ಪ್ರವಾದಿತ್ವದ ನೈಜ ಉದ್ದೇಶವನ್ನು ಜಗತ್ತಿಗೇ ತೋರಿಸಿದರು. ನನ್ನನ್ನು ಪ್ರವಾದಿಯನ್ನಾಗಿ ಕಳುಹಿಸಿದ ಉದ್ದೇಶ ಸಚ್ಚಾರಿತ್ರ್ಯದ ಉತ್ತುಂಗ. ಇದನ್ನು ತನ್ನ ಜೀವನದಲ್ಲಿ ಸಂಪೂರ್ಣ ಅಳವಡಿಸಿ ಎನ್ನುತ್ತಾ ಲೋಕಕ್ಕೇ ಮಾದರಿಯಾದರು.

ಪ್ರವಾದಿ(ಸ್ವ.ಅ) ಯವರ ಈ ಸತ್ಯದ ದೃಷ್ಟಾಂತದಿಂದ ಪಾಠವನ್ನು ಕಲಿಯುವ ಅಗತ್ಯವಿದೆ. ಮುಸ್ಲಿಮರಾದ ನಾವು ನಮ್ಮ ಜೀವನವನ್ನು ಪ್ರವಾದಿ(ಸ್ವ.ಅ) ಯವರ ಜೀವನದಿಂದ ಸಂಪೂರ್ಣವಾಗಿ ತರಬೇತುಗೊಳಿಸುವ ಅಗತ್ಯವಿದೆ.  ಅಲ್ಲಾಹನು ನಮ್ಮನ್ನು ಖೈರೆ ಉಮ್ಮತ್ (ಉತ್ತಮ ಅನುಯಾಯಿಗಳು) ಎಂದು ಸಂಭೋದಿಸಿದ್ದಾನೆ. ಖೈರೆ ಉಮ್ಮತ್ ಆಗಿರುವ ಲಕ್ಷಣಗಳನ್ನು ನಾವೇನು, ತಮ್ಮ ದೇಶದಲ್ಲಾಗಲೀ, ತಮ್ಮ ಪರಿಸರದಲ್ಲಾಗಲೀ, ತಮ್ಮ ಸಮಾಜದಲ್ಲಾಗಲೀ ಅಥವಾ ವಿಶ್ವದಲ್ಲಾಗಲೀ ಮಾದರಿಯಾಗಿ ತೋರಿಸುತ್ತಿದ್ದೇವೆಯೋ ಎಂಬುವುದರ ಮೇಲೆ ಗಾಢವಾಗಿ ಚಿಂತಿಸುವ ಅಗತ್ಯವಿದೆ. ಎಲ್ಲಿ ನೋಡಿದರಲ್ಲಿಯೂ ಅಶಾಂತಿಯ, ಅಸುರಕ್ಷತೆಯ ವಾತಾವರಣ ಕಾಣುತ್ತಿದೆ. ಈ ಪರಿಸ್ಥಿತಿಯಲ್ಲಿ ಸ್ವತಃ ಮುಸ್ಲಿಮರಾದ ನಮ್ಮ ನಡುವೆ ಐಕ್ಯತೆಯೂ ಇಲ್ಲ. ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಚಿಂತೆಯೂ ಇಲ್ಲ. ಈ ಭಿನ್ನಾಭಿಪ್ರಾಯಗಳಿಂದಾಗಿ ಮುಸ್ಲಿಮ್ ಸಮಾಜವು ಅಲ್ಲಲ್ಲಿ ಅಸುರಕ್ಷತೆಯನ್ನು, ನೂರಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ವಿಶ್ವದ ಎಲ್ಲಾ ಸಮುದಾಯಗಳು ಇವರ ಮೇಲೆ ಮುಗಿ ಬಿದ್ದಿವೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಾವು ಖೈರೆ ಉಮ್ಮತ್ ಆಗಲು ಪ್ರಯತ್ನಿಸೋಣ. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವ.ಅ) ರ ನೈಜ ಅನುಯಾಯಿಯಾಗಿ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರ ಒಂದಾಗಿ ವಿಶ್ವಕ್ಕೇ ಮಾದರಿಯಾಗೋಣ.

ಸೀರತ್ ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

Check Also

‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

201ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ …

Leave a Reply

Your email address will not be published. Required fields are marked *