Saturday , April 4 2020
Breaking News
Home / ಓದುಗರ ಲೇಖನ / ಸ್ವಾವಲಂಬಿ ಬದುಕಿಗೆ ಇನ್ನೊಂದು ಹೆಸರೇ ನಮ್ಮ ಪಾನೇಲ ಖಾದಿರಾಕ‌

ಸ್ವಾವಲಂಬಿ ಬದುಕಿಗೆ ಇನ್ನೊಂದು ಹೆಸರೇ ನಮ್ಮ ಪಾನೇಲ ಖಾದಿರಾಕ‌

ಮನುಷ್ಯ ತನ್ನ ಜೀವಿತಾವಧಿಯಲ್ಲಿ ತನ್ನೊಳಗೊಂಡ ನೈಜ ತತ್ವಗಳೇ ಅವರ ವ್ಯಕ್ತಿತ್ವ, ಸರಳತೆ, ಸಜ್ಜನಿಕೆ, ಶಾಂತತೆ, ಗಾಂಭೀರ್ಯತೆ, ಮುಗ್ಧತೆ, ಗುಣನಡತೆ, ಸತ್ಯ. ಸ್ವಾಭಿಮಾನ..! ಅಂತಹ ಒಂದು ನಿರ್ಮಲ ಅಪರೂಪದ ಅನುಭೂತಿಯೇ ನಮ್ಮನ್ನಗಲಿದ ನಮ್ಮೂರ ಹಿರಿ ಜೀವ ಅಬ್ದುಲ್ ಖಾದರ್ ಮಲಾರ್.! (ಖಾದಿರಾಕ ಮಲಾರ್)..!!!

ಖಾದಿರಾಕ ಮೂಲತಃ ಆರ್ಕುಳ (ಪರಂಗಿಪೇಟೆ) ದವರು ಅವರು ಬೆಳೆದು ಬಂದದ್ದು ಎಲ್ಲವೂ ಅಲ್ಲಿಯೇ ಆದರೆ ನಮ್ಮ ಜನರೇಶನ್’ಗೆ ಅವರು ಮಲಾರಿನವರೆಂದೆ ಪರಿಚಯ_! ಅದಕ್ಕಾಗಿ ಅವರನ್ನು ಮಲಾರ್ ಖಾದಿರಾಕ ಎಂದೇ ಘೋಷಿಸುವುದುಂಟು.! ಖಾದಿರಾಕರಿಗೆ ವಿಹಾವಾದದ್ದು; ಅವರ ಪತ್ನಿ ಅಲಿಮಮ್ಮ ಮಲಾರಿನವರಾಗಿದ್ದಾರೆ. ನಂತರ ಅವರ ಸಂಸಾರ ನೌಕೆ ಆರ್ಕುಳ ತೊರೆದು ಮಲಾರಿನಲ್ಲಿಯೇ ನೆಲೆಯೂರುತ್ತೆ. ಸ್ವಾಭಿಮಾನದ ಬದುಕು ತೂಗಿಕೊಂಡಿದ್ದ ಖಾದಿರಾಕ ’ಬೀಡಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದರು, ಅವರ ಕುಲ ಕಸುಬು ಬೀಡಿಯೇ ಎನ್ನಬಹುದು. ಖಾದಿರಾಕ ಮಲಾರಿನಲ್ಲಿ ಇದ್ದರೂ…ಬೀಡಿಗೂಲಿಯ ಕೇಂದ್ರ ಮಾತ್ರ ಪರಂಗಿಪೇಟೆಯಾಗಿತ್ತು. {ಈ ಬೀಡಿ ವ್ಯವಹಾರ ಬ್ರಿಟೀಷ್ ಪೋರ್ಚುಗಲ್’ನಿಂದ ಬಂದಿರುವುದಾಗಿದೆ ಎಂದು ಇತಿಹಾಸವು ಮುನ್ನುಡಿ ಕೊಡುತ್ತೆ. ಬ್ರಿಟಷರ ಆಳ್ವಿಕೆ ಕಾಲದಲ್ಲಿ ಬಂದರು ಬಿಟ್ಟರೆ ಮಂಗಳೂರುಗಿಂತ ಜನಸಂದಣಿ, ಜನಪ್ರಿಯ ಹೆಚ್ಚು ವ್ಯಾಪಾರ ವಹಿವಾಟುಗಳ ಕಾವೇರುತಿದ್ದ ಪ್ರದೇಶ ಪರಂಗಿಪೇಟೆಯಾಗಿತ್ತು. ಆದ್ದರಿಂದ ಇಂದಿಗೂ ಯಥೇಚ್ಛ ಬೀಡಿ ಕಂಪನಿ, ಕಾರ್ಮಿಕರನ್ನು ಪರಂಗಿಪೇಟೆಯಲ್ಲಿ ಕಾಣಬಹುದು.!} ಹಾಗಾಗಿ ದಿನ ಬೀಡಿ ಕೆಲಸಕ್ಕೆಂದು ಆರ್ಕುಳಕ್ಕೆ ತೆರಳುತ್ತಿದ್ದರು. ಹೀಗೆ ಮುಂದುವರಿದು ಜೀವನೋಪಾಯಕ್ಕೆ ಸ್ವಂತ ಬೀಡಿ ಬ್ರೆಂಚ್’ವೊಂದನ್ನು ಮಲಾರಿನಲ್ಲಿಯೇ ತೆರೆದರು.

ತರುವಾಯ ಮಲಾರು ಬಿಟ್ಟು ಪತ್ನಿ ಮಕ್ಕಳೊಂದಿಗೆ ಪಾನೇಲಕ್ಕೆ ಬಂದ ಖಾದಿರಾಕ ಸೈಟ್’ನಲ್ಲಿ ಕಾಸಿಮಾಕರ ತಮ್ಮ ಸುಲೈಮಾಕರು ನೆಲೆಸಿದ್ದ ಮಣ್ಣಿನ ಗೋಡೆಯ ಹೆಂಚಿನ ಮನೆಯನ್ನು ಕೊಂಡು ಜೀವನದ ಹೊಸ ಹಳಿಗಳಲ್ಲಿ ಸಂಚಾರ ಹೂಡಲಾರಂಭಿಸುತ್ತಾರೆ. ಪಾನೇಲದಿಂದ ಪ್ರತೀದಿನ ಬೆಳಿಗ್ಗೆ ಐದು ಗಂಟೆಗೆದ್ದು ನಮಾಝ್ ಮುಗಿಸಿ ಬೀಡಿ ಸಂಗ್ರಹಿಸಲು ಖಾದಿರಾಕ ಪಾನೇಲ ಗುಡ್ಡೆಯಿಂದ ಕೆಂಪು ಕಲ್ಲಿನ ಕೋರೆ ಸುರುಳುಗಳ ಕಾಲುದಾರಿಯನು ಹಾದು ಮಾಲಾರ್ ಸೇರಿಕೊಳ್ಳುತ್ತಿದ್ದರು. ಆ ವೇಳೆಗೆ ನಮ್ಮೂರಿಂದ ಪಜೀರಾಗಿ ಗ್ರಾಮ ಚಾವಡಿ ವರೆಗಿನ ರಸ್ತೆಗಳು ಚೇತರಿಸಿರಲಿಲ್ಲ.! ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಶ್ರಮಜೀವಿ ಬೋಬ(ಅಜ್ಜ) ಖಾದಿರಾಕರ ಆತ್ಮೀಯತೆ ಪ್ರಾಮಾಣಿಕತೆ ಎಲ್ಲರನ್ನೂ ಆಕರ್ಷಿಸುತ್ತಾ ತನ್ನ ಕೆಲಸದಲ್ಲಿ ಸಫಲತೆಯನ್ನು ಕಂಡಿದ್ದರು. ತನ್ನ ಬ್ರೆಂಚಿಗೆ ಬೀಡಿ ತರುತ್ತಿದ್ದ ಪ್ರತೀ ಆಳುಗಳಲ್ಲಿ ಅನೋನ್ಯತೆಯಿಂದ ಬೆರೆತು ಮೆದುವಾಗಿ ವ್ಯವಹರಿಸುತಿದ್ದರು. ಹೀಗೆ ದಿನಾಲೂ ಮಲಾರ್ನಿಂದ ಬೀಡಿ ಸಂಗ್ರಹಿಸಿ ಅದನ್ನು ಕಂಪನಿಗೆ ಸಾಗಿಸಿ ಮರಳಿ ಸೂರು ಸೇರುವಾಗ ಹೊತ್ತು ಮೀರಿಹೋಗುತ್ತಿತ್ತು.

ಖಾದಿರಾಕರ ದಿನಚರಿ ಸವೆದು ಹೋದಂತೆ ಜವಾಬ್ಧಾರಿ ದುಪ್ಪಟ್ಟಾಗುತ್ತೆ. ನಾಲ್ಕು ಹೆಣ್ಣು ಇಬ್ಬರೂ ಗಂಡು ಮಕ್ಕಳ ಕುಟುಂಬ ನಿರ್ವಹಣೆಗೆ ಊರುಗೋಲು ಆಗುವ ಮೂಲಕ ಮಲಾರ್’ನಲ್ಲಿದ್ದ ಬ್ರೆಂಚನ್ನು ಕೊಟ್ಟು ಪಾನೇಲ ಸೈಟ್’ನಲ್ಲೆ ಆಮಾದಾಕರಿಂದ ಒಂದು ಸಣ್ಣ ಮನೆ ವಿನ್ಯಾಸವನ್ನು ಪಡೆದು ಅದರಲ್ಲಿ ಬೀಡಿ ವ್ಯವಹಾರದೊಂದಿಗೆ ದಿನಸಿ ಸಾಮಾಗ್ರಿಗಳನ್ನಾಕಿ ಅಂಗಡಿಯಾಗಿ ಪ್ರವರ್ತಿಸುತ್ತಾ.. ಯೌವ್ವನದ ಸವಂತ್ಸರಗಳನ್ನ ಕಳೆದು ಮುಪ್ಪಿನ ಹೊಸ್ತಿಲನ್ನು ತೆರೆಯುತ್ತಾರೆ. ಪಾನೇಲ ಎಂಬ ಪುಟ್ಟ ಗ್ರಾಮವು ಬಡತನದ ತಳಹದಿಯ ಮೇಲಿತ್ತು. ಇಲ್ಲೂ ನಮ್ಮ ಅಮ್ಮಂದಿರು ಬೀಡಿಯನ್ನೆ ಅವಲಂಬಿಸಿದ್ದರಿಂದ ಖಾದಿರಾಕರಿಗೆ ಬೀಡಿಯ ಕೊರತೆ ಕಾಣಲಿಲ್ಲ. ಹೀಗೆ ಖಾದಿರಾಕರ ದೊಡ್ಡ ಮಗ ಮೊಹಮ್ಮದ್ (ಮೋನಾಕ) ಮುಂಬಯಿ ಬಿಟ್ಟು ಊರಿಗೆ ಬಂದಿದ್ದರಿಂದ_ತಂದೆಗೆ ಸಹಕಾರಿಯಾಗಿ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಊರಲ್ಲೇ ಉಳಿಯುತ್ತಾರೆ. ಖಾದಿರಾಕ ದಿನ ಬೀಡಿ ಸಂಗ್ರಹಿಸಿ ಅದನ್ನು ಪರಂಗಿಪೇಟೆ ಸಾಗಿಸುತ್ತಿದ್ದ ಕಂಪನಿ ದಿಡೀರ್ ಮಂಗಳೂರಿಗೆ ವರ್ಗಾವಣೆಯಾಗಿ ನಂತರ ಬೀಡಿಯನ್ನು ಮಂಗಳೂರಿಗೆ ಕೊಂಡೋಗಬೇಕಿತ್ತು. ಖಾದಿರಾಕ ಇಲ್ಲದ ಸಮಯದಲ್ಲಿ ಮೋನಾಕ ಒಬ್ಬರೇ ಬೀಡಿ ತೆಗೆಯುವುದರೊಂದಿಗೆ ಅಂಗಡಿಯನ್ನು ನಿಭಾಯಿಸುತ್ತಿದ್ದರು.

ಖಾದಿರಾಕರ ಬ್ರೇಂಚಿಗೆ ಪಜೀರು, ಕಟ್ಟಪುಣಿ ಕೇರಿ ಪ್ರದೇಶದ ಜನರು ಬೀಡಿ ಕಟ್ಟಲು ಶುರು ಮಾಡಿದಾಗ ಅದಕ್ಕೆ ಪ್ರೇರಿತವಾಗಿ ಕಟ್ಟಪುಣಿಯಲ್ಲೆ ಇಸ್ಮಲಾಕರ ಅಂಗಡಿಯಲ್ಲಿ ಬೀಡಿ ತೆಗೆಯಲು ತೊಡಗಿದರು. ಅಲ್ಲಿಗೆ ಹೆಚ್ಚಿನ ಬೀಡಿಗಳು ಪಜೀರು ಅಡ್ಕಾದಿಂದ ಬರುತ್ತಿತ್ತು ಮತ್ತೆ ಅಲ್ಲಿಂದ ಪಜೀರು ಅಡ್ಕ ಪ್ರದೇಶಕ್ಕೆ ತಮ್ಮ ಬ್ರೆಂಚನ್ನು ಸ್ಥಳಾಂತರಿಸ ಬೇಕಾಗಿ ಬಂತು. ಖಾದಿರಾಕರ ಸೌಮ್ಯ ಶಾಂತ ಸ್ವಭಾವಕ್ಕೆ ಮುಗ್ಧತೆಯ ಪ್ರತಿರೂಪಕ್ಕೆ ಅಲ್ಲಿನ ಒಬ್ಬ ಹಿಂದೂ ಸಹೋದರ ತನ್ನ ಗದ್ದೆಯ ಮೂಲೆಯಲ್ಲಿ ಒಂದು ಜೋಪಡಿಯ ಅಂಗಡಿಯನ್ನು ಕೊಟ್ಟು ಆಸರೆಯಾಗಿದ್ದರು. ಇಲ್ಲೂ ಹೆಚ್ಚು ಬೀಡಿ ಸಿಗುತ್ತಿದ್ದರಿಂದ ಇತ್ತ ಪಾನೇಲ ಸೈಟ್’ನಲ್ಲಿ ಮಗ ಮೋನಾಕ ಒಬ್ಬರೇ ಅಂಗಡಿ ನೋಡಿಕೊಳ್ಳಬೇಕಾಯಿತು.

ಪಜೀರು ಅಡ್ಕ ಮುಸ್ಲಿಮೇತರ ಬಾಹುಳ್ಯ ಪ್ರದೇಶವಾಗಿತ್ತು. ಅಲ್ಲಿಯವರಿಗೆ ತೋಟ ಗದ್ದೆ ಕೆಲಸ ಬಿಟ್ಟರೆ ಖಾದಿರಾಕರ ಬೀಡಿಯೇ ಜೀವನಾಡಿಯಾಗಿತ್ತು. ಬೀಡಿ ಜೊತೆ ಅಗತ್ಯ ದಿನಸಿ ಸಾಮಾನುಗಳನ್ನು ಇಟ್ಟಿದ್ದರು. ಅಡ್ಕದ ಎಲ್ಲರಿಗೂ ಖಾದಿರಾಕ ಚಿರಪರಿಚಿತರು, ಅಲ್ಲಿನ ಹಿಂದೂ ಕ್ರೈಸ್ತರಲ್ಲಿ ಒಳ್ಳೆಯ ಬಾಂಧವ್ಯವನ್ನು ಬೆಳೆಸಿದ್ದರು. ಜಾತಿ, ಧರ್ಮದ ಗೊಡವೆಗಳಿಲ್ಲದ ಆ ಸ್ವಚ್ಛಂದ ಸೀಮೆಯೊಳಗೆ, ಸುಲಲಿತ ಮಾತುಗಳ, ಸರಳ ಸಜ್ಜನಿಕೆಯ ಪ್ರತಿತರಾಗಿ ಅಲ್ಲಿನ ಎಲ್ಲರ ಮನಸ್ಸನ್ನು ಹೊಲಿದ ಶಿಶುನಾಳ ಶರೀಫರಂತಿದ್ದರು.

ಅಡ್ಕಾದದಿಂದ ರಾತ್ರಿ ಒಂಭತ್ತು ಗಂಟೆಗೆ ಅಂಗಡಿ ಮುಚ್ಚಿ ನಿರ್ಜನ ಕಾಡುದಾರಿಯಲ್ಲಿ ಒಬ್ಬರೇ ಮೂರು ಮೈಲಿದೂರ ಹಗುರವಾದ ಹೆಜ್ಜೆಗಳನ್ನಿತ್ತು ಕಾಲ್ನಡಿಗೆಯಲ್ಲಿಯೇ ಮನೆ ಸೇರುತ್ತಿದ್ದರು. ದಿನ ಮನೆಗೆ ಬರುವಾಗ ಒಂದು ಕೈಯಲ್ಲಿ ಚೀಲ ಇನ್ನೊಂದು ಕೈಯಲ್ಲಿ ಟಾರ್ಚ್ ಲೈಟ್ ಬೀಸುತ್ತಾ , ಚೀಲೆ ತುಂಬಾ ಮನೆಗೆ ಸಾಮಾನು ಮೊಮ್ಮಕ್ಕಳಿಗೆ ಬೇಕಾಗಿ ತಿಂಡಿಗಳನ್ನು ತರುತ್ತಿದ್ದರು. ನಾಲ್ಕನೇ ಕ್ಲಾಸು ಕಲಿತಿದ್ದ ಖಾದಿರಾಕ ಕನ್ನಡವನ್ನು ಸರಾಗವಾಗಿ ಓದುತ್ತಿದ್ದ ಗೀಜಿಗೆ’ ದಿನಾ ಸಂಜೆಯ ವಾರ್ತಾ ಪತ್ರಿಕೆಯೊಂದು ತಪ್ಪದೆ ಅವರ ಚೀಲದಲ್ಲಿರುತಿತ್ತು. ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಮನೆಯ ಯಾರಿಗಾದರೂ ಶೀತ, ಜ್ವರ, ತಲೆನೋವು ಇಂತಹ ಸಣ್ಣ ಪುಟ್ಟ ಭಾದ್ಯತೆಗಳಿಗೆ ಅವರ ಆ ಚೀಲದಲ್ಲಿ ಮದ್ದು ಗುಳಿಗೆಗಳು ಲಭ್ಯವಾಗುತ್ತಿತ್ತು.! ಎಷ್ಟೇ.. ತಡರಾತ್ರಿಯಾದರೂ ನಮಾಝ್ ಮುಗಿಸಿ ಖುರಾನ್ ಓದಿಯೇ ಮಲಗುತ್ತಿದ್ದರು. ಅವರ ಅಕ್ಕಪಕ್ಕ ಸುಮಾರು ಮನೆಗಳಲ್ಲಿ ನೆರೆ ಮನೆಯಾಗಿ ನಮ್ಮದು ಒಂದು. ರಾತ್ರಿಯ ನೀರವ ಯಾನದಲ್ಲಿ ಊರೇ ನಿದಿರೆಯ ಜಾರಿಯಲ್ಲಿದ್ದರೆ, ಖಾದಿರಾಕರ ಖುರಾನ್ ಓದುಮಾತ್ರ ನಮ್ಮ ಕಿವಿ ಇಂಬುತಿತ್ತು. ಅವರು ಯಾವುದೇ ಕಾರಣಕ್ಕೂ ನಮಾಝ್ ತೊರೆಯುತ್ತಿರಲಿಲ್ಲ. ಪಜೀರಿನ ಆ ಸಣ್ಣ ಜೋಪಡಿ ಒಳಗೂ ನಮಾಝ್ ನಿರ್ವಹಿಸುತಿದ್ದರು ಎಂದು ಅಲ್ಲಿನ ಹಿಂದೂ ಸಹೋದರರು ಹೇಳುತ್ತಿದ್ದರು.! ಸಾಮಾನ್ಯರಲ್ಲಿ ಅಸಾಮಾನ್ಯರಂತೆಹೆ ಶ್ರಮ ಜೀವದ ಪರಾಕಾಷ್ಠೆಯಾಗಿದ್ದರು.

ವೃದ್ಧಾಪ್ಯ ಎಲ್ಲವನ್ನೂ ಮೊಟಕುಗೊಳಿಸುತ್ತದೆ, ಇದುವರೆಗೆ ತನ್ನ ಮಕ್ಕಳಿಗೂ ಭಾರವಾಗದೆ ತಾನಾಯಿತು ತನ್ನ ಕೆಲಸವಾಯಿತೆಂದು ನಂಬಿ ಯಾರ ಹಂಗು ಇಲ್ಲದೆ ಬಾಳೆಂಬ ಪಯಣದಲ್ಲಿ ಸುಂದರವಾಗಿ ಜೀವನ ಸಾಗಿಸಿದರು. ಆದರೆ ಎಂಭತೈದು ವಯಸ್ಸಿನ ಖಾದಿರಾಕ ತನ್ನ ಜೀವಿತಾವಧಿಯ ಕೊನೆಯ ಎಣಿಕೆಯ ದಿನಗಳವರೆಗೂ ಚಿಟ್ಟುಗಟ್ಟಿದ ದೇಹವನ್ನು ಹೊತ್ತು ಮಸೀದಿಗೆ ಹೋಗುತ್ತಿದ್ದರು. ಕೊನೆಯ ಮೂರು ದಿನಗಳು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮನೆಯಲ್ಲೇ ಉಳಿಯುವಂತಾಗುತ್ತೆ. ಎಲ್ಲರಿಗೂ ಹಿತವನ್ನೇ ಬಯಸುತ್ತಾ ಯಾರಲ್ಲೂ ಮುನಿಸು, ದ್ವೇಷ, ಮುಂಗೋಪ, ವೈರಾಗ್ಯ ಬೆಳೆಸಿರಲಿಲ್ಲ. ಅಹಂಮ್ಮಿನ ಆಹಾ_ಭಾವಗಳಿರಲಿಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ವಿಶಾಲ ಮನಸ್ಸು ಅವರಲ್ಲಿತ್ತು. ಕುಹುಕ ಮಾತುಗಳಿಲ್ಲ, ತಮಾಷೆಗೂ ಯಾರನ್ನು ನೋಯಿಸಿದ್ದಿಲ್ಲ. ಮೋರಿಕಟ್ಟೆಯಲ್ಲಿ ಕೂತು ಅನಾವಶ್ಯಕ ಹರಟೆ ಹೊಡೆದ ಜೀವ ಅದಲ್ಲ. ಏರು ದನಿಯ ಗದರಿಕೆಯ ಮಾತುಗಳಿರಲಿಲ್ಲ. ಸದ್ಗುಣ, ಸನ್ನಡತೆ, ತಾಳ್ಮೆ ಸಹನೆ ಇವೆಲ್ಲವೂ ಖಾದಿರಾಕರಿಗೆ ಅಲ್ಲಾಹನು ಕೊಟ್ಟ ಔದಾರ್ಯವೇ ಸರಿ. ಮರಣ ಎಲ್ಲರಿಗೂ ನಿಶ್ಚಿತ.! ಆದರೆ ಇರುವಷ್ಟು ದಿನ ಯಾರಿಗೂ ತೊಂದರೆಯಾಗದಂತೆ ಸ್ವಾಭಿಮಾನ ಗೌರವದಿಂದ ಬದುಕಿದ ಖಾದಿರಾಕರಂತಹ ಮಹತ್ವಪೂರ್ಣ ಜೀವನ ನಮಗೆ ಆದರ್ಶವೇ.! ಶುಕ್ರವಾರದ ಮುಸ್ಸಂಜೆಯಲಿ ಶಾಶ್ವತವಾಗಿ ಕಣ್ಣುಮುಚ್ಚಿದ ಖಾದಿರಾಕರ ಮರಣದ ವಾರ್ತೆ ಊರಿಡಿ ಹಬ್ಬಿದಾಗ ಅವರ ಜನಾಝ’ನ್ನು ನೋಡಲು ಬಂದ, ಎಲ್ಲಾ ಜಾತಿ, ಧರ್ಮದ ಜನರ, ಕಂಬನಿಯಲಿ ತೇಲಿದ ಖಾದಿರಾಕ ಎಂಬ ಸಾಧಾರಣ ವ್ಯಕ್ತಿಯ ಅನನ್ಯ ವ್ಯಕ್ತಿತ್ವ ನಮ್ಮ ಜೀವನಕ್ಕೊಂದು ಆದರ್ಶವೂ ಹೌದು..!!! ಅಲ್ಲಾಹನು ಅವರ ಖಬರ್ ಜೀವನವನ್ನು ವಿಶಾಲಗೊಳಿಸಲಿ_ಆಮೀನ್.

ಲೇಖಕ: ಸಿ.ಆ ಪಾನೇಲ

Check Also

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು …

Leave a Reply

Your email address will not be published. Required fields are marked *