Tuesday , October 15 2019
Breaking News
Home / ವಿಶೇಷ / ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ. ದಯವಿಟ್ಟು ಅವರ ಆತ್ಮಕ್ಕಾಗಿ ಪ್ರಾರ್ಥಿಸಿ. ಸ್ವರ್ಗ ಅಂತ ಒಂದು ಇದ್ದರೆ, ನನ್ನ ಉಮ್ಮನಿಹೆ ಖಂಡಿತವಾಗಿಯೂ ಅಲ್ಲಿ ಒಂದು ಸ್ಥಳವನ್ನು ಹುಡುಕಿ ಕೊಡಿ” ಎಂದು ಶ್ರೀಧರನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು. ಇದು ವೇಗವಾಗಿ ವೈರಲ್ ಆಗಿದ್ದು, ಹಲವರ ಮನಸ್ಸು ಕರಗುವಂತೆ ಮಾಡಿದೆ. 46 ವರ್ಷದ ಶ್ರೀಧರನ್ ಅವರ ಈ ಫೇಸ್‌ಬುಕ್ ಪೋಸ್ಟ್ ಧರ್ಮ ಮತ್ತು ನಂಬಿಕೆಯನ್ನು ಮೀರಿ ಅಂತರ್ ಧರ್ಮದ ಬಂಧಗಳು ಹೇಗೆ ಇರಬೇಕು ಎಂಬ ಅದ್ಭುತ ಸಂದೇಶವನ್ನು ನೀಡಿದೆ.

ಶ್ರೀಧರನ್ ಅವರ ನೈಜ ವಿಧವೆ ತಾಯಿ ಚಕ್ಕಿಯವರು ಥೆನ್ನಾಡಾನ್ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಆದರೆ ಚಕ್ಕಿಯವರು ಅನಾರೋಗ್ಯದಿಂದ ಅಕಾಲಿಕ ಮರಣವನ್ನಪ್ಪಿದ ನಂತರ ಮುಸ್ಲಿಂ ದಂಪತಿಗಳಾದ ಸುಬೈದಾ ಥೆನಾಡ್ ಮತ್ತು ಅಬ್ದುಲ್ ಅಜೀಜ್ ಅವರು ಚಕ್ಕಿಯವರ ಮಕ್ಕಳನ್ನು ಪೋಷಿಸಿದರು. ಸಣ್ಣ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಸುಬೈದಾ ಸಣ್ಣ ಮಗುವಾಗಿದ್ದ ಶ್ರೀಧರನ್ ಮತ್ತು ಅವರ ಸಹೋದರಿಯರಾದ 11 ವರ್ಷದ ರಮಣಿ ಮತ್ತು 6 ವರ್ಷದ ಲೀಲಾಳನ್ನು ತನ್ನ ಮಡಿಲಲ್ಲಿ ಲಾಲಿಸಿ ಮುದ್ದಿಸಿ ಸಾಕಿದರು.

ಸಾಂಧರ್ಭಿಕ ಚಿತ್ರ

ಅಂತೆಯೇ ಈ ಮೂವರು ಮಕ್ಕಳು ಸುಬೈದಾ ಅವರ ಸ್ವಂತ ಮಕ್ಕಳಾದ ಶಾನವಾಸ್, ಜಾಫರ್ ಮತ್ತು ಜೋಶಿನಾ ಅವರೊಂದಿಗೆ ಅಬ್ದುಲ್ ಅಜೀಜ್ ಅವರ ಮನೆಯಲ್ಲಿ ಬೆಳೆದರು. ಮೂವರು ಹಿಂದೂ ಮಕ್ಕಳನ್ನು ಸುಬೈದಾ ಅವರು ಹಿಂದೂವಾಗಿಯೇ ತನ್ನ ಮನೆಯಲ್ಲಿ ತನ್ನದೇ ಆದ ಮೂರು ಮುಸ್ಲಿಂ ಮಕ್ಕಳೊಂದಿಗೆ ಬೆಳೆಸಿದರು. ಬೆಳಿಗ್ಗೆ ಸುಬೈದಾ ಅವರು ತಮ್ಮ ಸ್ವಂತ ಮಕ್ಕಳನ್ನು ಮದರಸಾಗೆ ಕಳುಹಿಸುವಾಗ, ಈ ಮೂವರು ಹಿಂದೂ ಮಕ್ಕಳನ್ನು ತಮ್ಮ ಧರ್ಮದ ಬಗ್ಗೆ ತಿಳಿಯಲು ದೇವಸ್ಥಾನಕ್ಕೆ ಕಳುಹಿಸುತ್ತಿದ್ದರಂತೆ. ಅಂತೆಯೇ, ಸಂಜೆ ಸುಬೈದಾ ಅವರ ಮುಸ್ಲಿಂ ಮಕ್ಕಳು ಪವಿತ್ರ ಕುರ್‌ಆನ್ ಓದಲು ಕುಳಿತರೆ, ಸಾಕು ಮಕ್ಕಳು ತಾವು ನಂಬುವ ಧರ್ಮದ ಪ್ರಾರ್ಥನೆ ಮಾಡಲು ಮನೆಯಲ್ಲಿ ಅವಕಾಶ ಕೊಡಲಾಗಿತ್ತು.

“ನಮ್ಮ ಸಾಕು ಪೋಷಕರು ನಮ್ಮನ್ನು ತಮ್ಮ ಮಕ್ಕಳಂತೆ ಬೆಳೆಸಿದರು ಮತ್ತು ನಮಗೆ ಶಿಕ್ಷಣ ನೀಡಿದರು. ಅವರು ನನ್ನ ಇಬ್ಬರು ಸಹೋದರಿಯರಿಗೆ ಮದುವೆ ಮಾಡಿಸಿದರು. ನಮ್ಮನ್ನು ಬುದ್ದಿ ಬರುವ ಮುಂಚೆ ಎಳೆ ವಯಸ್ಸಿನಿಂದ ಸಾಕಿದ್ದರೂ, ಅವರು ಎಂದಿಗೂ ನಮ್ಮನ್ನು ಮತಾಂತರಗೊಳಿಸಲು ಪ್ರಯತ್ನಿಸಲಿಲ್ಲ. ನಮಗೆ ಅವರು ಸಾಕು ತಾಯಿ ಅಲ್ಲ, ಅವರು ನಮ್ಮ ಸ್ವಂತ ತಾಯಿ.”ಎಂದು ಶ್ರೀಧರನ್ ತಮ್ಮ ಎಫ್‌ಬಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದೀಗ ಸುಬೈದಾ ಅವರು ನಿಧನರಾಗಿದ್ದು, ಒಮಾನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಶ್ರೀಧರನ್ ಅವರ ತಾಯಿಯ ಮರಣದ ನಂತರ ಫೇಸ್ಬುಕ್ ನಲ್ಲಿ ಈ ಸ್ಟೇಟಸ್ ಹಾಕಿದ್ದಾರೆ. ಈ ಬಾರಿ ಊರಿಗೆ ಹೋದಾಗ ಅವರಿಗೆ ನೀಡಲು ಸುಗಂಧ ದ್ರವ್ಯ ಖರೀಸಿದ್ದೆ, ಆದರೆ ಅದನ್ನು ಅವರಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಅವರ ನಿರ್ಜೀವ ದೇಹವನ್ನು ನೋಡುವ ಶಕ್ತಿ ನನ್ನಲ್ಲಿಲ್ಲ, ಆದ ಕಾರಣ ನಾನು ಅವರ ಮರಣಕ್ಕೆ ಹೋಗಲಿಲ್ಲ ಎಂದು ಶ್ರೀಧರನ್ ಹೇಳಿದ್ದಾರೆ.

Check Also

ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

017ಸಂದೇಶ ಇ-ಮ್ಯಾಗಝಿನ್: ಕೇರಳದ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆ ನೋವಿನಿಂದ ಅಸ್ವಸ್ಥರಾದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಮಯಕ್ಕೆ …

Leave a Reply

Your email address will not be published. Required fields are marked *