Tuesday , December 10 2019
Breaking News
Home / ಮುಫ್ತಿ ಟಾಕ್ / ಪ್ರಸಕ್ತ ಪರಿಸ್ಥಿತಿಯಲ್ಲಿ ಸಮುದಾಯದ ಉಲಮಾಗಳು ಎಚ್ಚೆತ್ತುಕೊಳ್ಳಬೇಕು: ಖಾಲಿದ್ ಸೈಫುಲ್ಲಾ ರಹ್ಮಾನಿ

ಪ್ರಸಕ್ತ ಪರಿಸ್ಥಿತಿಯಲ್ಲಿ ಸಮುದಾಯದ ಉಲಮಾಗಳು ಎಚ್ಚೆತ್ತುಕೊಳ್ಳಬೇಕು: ಖಾಲಿದ್ ಸೈಫುಲ್ಲಾ ರಹ್ಮಾನಿ

ಸಂದೇಶ ಇ-ಮಾಗಝಿನ್: ಕುರ್‍ಆನ್ ಮಾರ್ಗದರ್ಶಕ ಗ್ರಂಥವಾಗಿದೆ. ಇದರಲ್ಲಿ ಇಡೀ ಮಾನವಕುಲಕ್ಕೆ ಕಿಯಾಮತ್‍ವರೇಗೆ  ಎದುರಾಗುವ ಎಲ್ಲಾ ತರಹದ ಸಮಸ್ಯೆಗಳಿಗೆ ಪರಿಹಾರವಿದೆ. ಇಸ್ಲಾಮಿಕ್ ಫಿಕ್ಹ್ ಎಕೆಡೆಮಿ ಇದರ ಜನರಲ್ ಸೆಕ್ರೆಟ್ರಿಯಾಗಿರುವ ಹಝ್ರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿಯವರು ಹುಜ್ಜತುಲ್ ಇಸ್ಲಾಮ್ ಎಕೆಡೆಮಿ ದಾರುಲ್ ಉಲೂಮ್ ವಕ್ಫ್ ದೇವಬಂದ್‍ನ ಇಮಾಮ್ ಶಾಹ್ ವಲಿಯುಲ್ಲಾಹ್ ದೆಹಲವಿ ಕಾನ್ಫರೆನ್ಸ್ ಹಾಲ್ ನಲ್ಲಿ “ ಪ್ರಸಕ್ತ ಸಮಸ್ಯೆಗಳು ಹಾಗೂ ಅದರ ಪರಿಹಾರ ” ಎಂಬ ವಿಷಯದಲ್ಲಿ ಮಾತನಾಡುತ್ತಾ ಹೇಳಿದರು.

ಪ್ರವಾದಿ ಮುಹಮ್ಮದ್ (ಸ) ರವರ ಪ್ರವಾದಿತ್ವವು ಯಾವುದೇ ಪ್ರತ್ಯೇಕ ಪ್ರದೇಶಕ್ಕಾಗಲೀ, ಪ್ರತ್ಯೇಕ ಸಮುದಾಯಕ್ಕಾಗಲೀ ಸೀಮಿತವಾಗಿರಲಿಲ್ಲ. ಬದಲಾಗಿ ಇಡೀ ಮಾನವ ಕುಲಕ್ಕೆ ಮಾದರಿಯಾಗಿದೆ. ಕುರ್‍ಆನ್ ಹಾಗೂ ಹದೀಸ್‍ಗಳು ಹಲವಾರು ಸ್ಥಳಗಳಲ್ಲಿ ಈ ಬಗ್ಗೆ ನಮಗೆ ವಿಶೇಷ ಮಾರ್ಗದರ್ಶನಗಳನ್ನು ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟವಾದ ಆದೇಶಗಳು ಸಿಗುವುದಿಲ್ಲ. ಬದಲಾಗಿ ಅಂತಹ ವಿಷಯಗಳ ಬಗ್ಗೆ ಕೆಲವೊಂದು ಸೂತ್ರಗಳು ದೊರೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಆ ಸೂತ್ರಗಳನ್ನು ಮುಂದಿಟ್ಟುಕೊಂಡು ಸಮುದಾಯದ ಉಲಮಾಗಳು ಪ್ರಸಕ್ತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸಬೇಕು ಎಂದು ಮೌಲಾನಾ ಸಲಹೆ ನೀಡಿದರು.

ಮುಸ್ಲಿಮ್ ಉಮ್ಮತ್‍ಗೆ ಕುರ್‍ಆನ್ ಹಾಗೂ ಹದೀಸ್‍ನ ದೃಷ್ಟಿಯಲ್ಲಿ ಮಾರ್ಗದರ್ಶನವನ್ನು ಮಾಡಬೇಕಾಗಿದೆ. ಅಗತ್ಯ ಬಿದ್ದಲ್ಲಿ ನೂತನ ಟೆಕ್ನಾಲಜಿಗಳನ್ನು, ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕು. ಪ್ರತೀ ಕಾಲದಲ್ಲೂ, ಪ್ರತೀ ಸಮಯದಲ್ಲೂ ಉಲಮಾಗಳು ಈ ಬಗ್ಗೆ ಚಿಂತನೆಯನ್ನು ಮಾಡಿ ಸೃಷ್ಟೀಕರಣವನ್ನು ನೀಡುತ್ತಿದ್ದರು. ಈ ಕಾರಣದಿಂದಾಗಿಯೇ ಇಂದು ಫಿಕ್ಹ್ ಇಸ್ಲಾಮೀ (ಇಸ್ಲಾಮೀ ಕರ್ಮಶಾಸ್ತ್ರ) ಇಷ್ಟೊಂದು ವಿಶಾಲವಾಗಿ ಬೆಳೆದು ನಮ್ಮ ಮುಂದಿದೆ. ಇದುವೇ ಫಿಕ್ಹ್ ಇಸ್ಲಾಮಿಯ ಮುಂದುವರಿಕೆ ಹಾಗೂ ಇದರ ರಹಸ್ಯವಾಗಿದೆ. ಕಾಲಕ್ಕೆ ಅನುಗುಣವಾಗಿ ಇಂದು ನಾನಾ ತರಹದ ಪ್ರಶ್ನೆಗಳು ಸಮುದಾಯದ ಮುಂದಿದೆ. ಬೇರೆ ಬೇರೆ ಸಮಸ್ಯೆಗಳು ಉದ್ಬವಿಸುತ್ತಿರುತ್ತವೆ. ಇದರ ಪರಿಹಾರಕ್ಕಾಗಿ ತಮಗೆ ಮುಂದೆ ಬರುವ ಅಗತ್ಯವಿದೆ ಎಂದು ಮೌಲಾನಾ ಹೇಳಿದರು.

ಇಸ್ಲಾಮಿ ಶರೀಅತ್ ನಮಗೆ ಒಂದು ಕಡೆ ಕರ್ಮಾನುಷ್ಟಾನಗಳ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತಿದೆಯಾದರೆ ಇನ್ನೊಂದು ಕಡೆ ಜೀವನದ ಎಲ್ಲಾ ಸಮಸ್ಯೆಗಳು, ಅದು ನಮ್ಮ ಜೀವನಕ್ಕೆ ಸಂಭಂಧಪಟ್ಟದ್ದಾಗಲೀ ಅಥವಾ ವ್ಯಾವಹಾರಿಕ ಜೀವನಕ್ಕಾಗಲೀ ಪ್ರತಿಯೊಂದು ಮೈದಾನದಲ್ಲೂ, ಪ್ರತಿಯೊಂದು ಸಮುದಾಯಕ್ಕೂ ಇಸ್ಲಾಮೀ ವಿಧಿ ವಿಧಾನಗಳು ದೊರೆಯುತ್ತವೆ. ವಿಶೇಷವಾಗಿ ಮುಸ್ಲಿಮ್ ಸಮುದಾಯದವರು ತಮ್ಮ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕುರ್‍ಆನ್ ಹಾಗೂ ಹದೀಸ್‍ಗಳು ಹಾಗೂ ಇಸ್ಲಾಮೀ ವಿಧಿ ವಿಧಾನಗಳನ್ನೇ ಬಳಸಿಕೊಳ್ಳಬೇಕು ಎಂದು ವಿಶೇಷವಾಗಿ ಒತ್ತು ನೀಡಿದರು. ಉಲಮಾಗಳೊಂದಿಗೆ ಸಂಭಂಧವನ್ನು ಇಟ್ಟುಕೊಳ್ಳಬೇಕು. ವೈಮನಸ್ಯಗಳ ಸಂಧರ್ಭದಲ್ಲಿ ಪರಸ್ಪರ ಶಾಂತಿಯನ್ನು ಕಾಪಾಡುವ ವಾತಾವರಣವನ್ನು ನಿರ್ಮಿಸಬೇಕು. ಉಲಮಾರವರ, ಇಸ್ಲಾಮೀ ಕಾನೂನುಗಳನ್ನು ಅರಿಯುವವರ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ದೂರೀಕರಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ಸಂಧರ್ಭದಲ್ಲಿ ಸಮುದಾಯದ ಉಲಮಾಗಳೂ ಹಾಗೂ ಖಾಝಿಗಳು ಸಮುದಾಯದ ಶ್ರೇಯೋಭಿವೃಧ್ದಿಗಾಗಿ ಅಲ್ಲಾಹನ ಸಂಪ್ರೀತಿಯನ್ನು ಗಳಿಸಲಿಕ್ಕಾಗಿ ಶ್ರಮಪಡಬೇಕು. ಹಿಂದಿನ ಕಾಲದ ಉಲಮಾಗಳ ಗ್ರಂಥಗಳನ್ನು ಅತ್ಯಂತ ಸೂಕ್ಷತೆಯಿಂದ ಅಧ್ಯಯನ ಮಾಡಬೇಕು. ಅದರಿಂದ ಮಾರ್ಗದರ್ಶನಗಳನ್ನು ಪಡೆದುಕೊಳ್ಳಬೇಕು ಎಂದು ಮೌಲಾನಾರವರು ಹೇಳಿದರು.

ಈ ಸಂಧರ್ಭದಲ್ಲಿ ಹುಜ್ಜತುಲ್ ಇಸ್ಲಾಮ್ ಇದರ ಡೈರೆಕ್ಟರ್ ಆಗಿರುವ ಮೌಲಾನಾ ಡಾಕ್ಟರ್ ಮುಹಮ್ಮದ್ ಶಕೀಬ್ ಅಲ್ ಕಾಸಿಮೀಯವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮೌಲಾನಾರವರ ಪರಿಚಯವನ್ನು ಮಾಡಿಸಿದರು, ಕಾರ್ಯಕ್ರಮದ ವಿಶೇಷತೆಯ ಬಗ್ಗೆ ವಿವರಿಸಿದರು. ಹಾಗೂ ವಿಶೇಷ ಸ್ವಾಗತವನ್ನು ಮಾಡಿದರು.

ದಾರುಲ್ ಉಲೂಮ್ ವಕ್ಫ್ ದೇವಬಂದ್ ಇದರ ಪ್ರಾಂಶುಪಾಲರಾದ ಮೌಲಾನಾ ಮುಹಮ್ಮದ್ ಸುಫ್ಯಾನ್ ಅಲ್ ಕಾಸಿಮೀಯವರು, ಇಂದು ತಮ್ಮ ಮುಂದೆ ಪ್ರಸ್ತುತಪಡಿಸಿದಂತಹ ವಿಷಯ ಪ್ರಸಕ್ತ ತೀರಾ ಅಗತ್ಯವುಳ್ಳ ವಿಷಯವಾಗಿದೆ. ಮುಸ್ಲಿಮ್ ಸಮುದಾಯವು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪೇಚಾಡುವಂತಹ ಪರಿಸ್ಥಿತಿಯನ್ನು ಎದುರು ನೋಡುತ್ತಿದೆ. ಹೀಗಿರುವಾದ ಸಮುದಾಯದ ಉಲಮಾಗಳು ಇದರ ಬಗ್ಗೆ ಚಿಂತಿಸಿ ಇಸ್ಲಾಮೀ ಶರೀಅತ್‍ಗೆ ಅನುಗುಣವಾಗಿ ಪರಿಹಾರಕ್ಕಾಗಿ ಶ್ರಮಿಸುವುದು ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಈ ಬಗ್ಗೆ ಇಂದಿನ ಈ ಮಜ್ಲಿಸ್ ನಲ್ಲಿ ತಮಗೆ ಹಝ್ರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿಯವರು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಹಾಗೂ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ಹಝ್ರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿಯವರ ದುವಾದೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು.

ವರದಿ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

Check Also

ಸೂಫಿ ಎಂದರೆ ಯಾರು…ಇಸ್ಲಾಮಿನಲ್ಲಿ ಈ ಸಿದ್ಧಾಂತಕ್ಕಿರುವ ಮಾನ್ಯತೆ ಏನು?

ಸೂಫಿಗಳು ಭಾರತಕ್ಕೆ ಇಸ್ಲಾಮ್ ಧರ್ಮವನ್ನು ತಂದಿದ್ದಾರೆ ಅಂತ ಕೆಲವರು ಹೇಳುತ್ತಾರೆ. ಕೆಲವರು ಈ ಸೂಫಿ ಸಿದ್ಧಾಂತವನ್ನು ವಿರೋಧಿಸುತ್ತಾರೆ. ಅದಕ್ಕೂ ಇಸ್ಲಾಮಿಗೂ …

Leave a Reply

Your email address will not be published. Required fields are marked *