Monday , September 16 2019
Breaking News
Home / ಇಸ್ಲಾಮಿಕ್ ಲೇಖನಗಳು / ಇಸ್ಲಾಮಿನಲ್ಲಿ ಮೊಹರ್ರಂ ತಿಂಗಳ ವಿಶೇಷತೆ

ಇಸ್ಲಾಮಿನಲ್ಲಿ ಮೊಹರ್ರಂ ತಿಂಗಳ ವಿಶೇಷತೆ

ಸಂದೇಶ ಇ-ಮ್ಯಾಗಝಿನ್: ಅಲ್ಲಾಹನು ಮೊಹರಂ ತಿಂಗಳನ್ನು ಒಂದು ದೊಡ್ಡ ಅನುಗ್ರಹದ ತಿಂಗಳಾಗಿ ಮಾಡಿದ್ದಾನೆ. ಇದು ಹಿಜ್ರಿ ವರ್ಷದ ಮೊದಲ ತಿಂಗಳು ಮತ್ತು ಅಲ್ಲಾಹನು ಹೇಳುವ ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ.

“ನಿಸ್ಸಂಶಯವಾಗಿ, ಅಲ್ಲಾಹನು ಸೃಷ್ಟಿಸಿದ ತಿಂಗಳುಗಳ ಸಂಖ್ಯೆ ಹನ್ನೆರಡು (ಒಂದು ವರ್ಷದಲ್ಲಿ), ಅಲ್ಲಾಹನು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದಿನದಂದು ಅದನ್ನು ವಿಧಿಸಿದನು; ಅವುಗಳಲ್ಲಿ ನಾಲ್ಕು ಪವಿತ್ರ, (ಅಂದರೆ ಇಸ್ಲಾಮಿಕ್ ಕ್ಯಾಲೆಂಡರ್‌ನ 1, 7, 11 ಮತ್ತು 12 ನೇ ತಿಂಗಳುಗಳು). ಅದುವೇ ಸರಿಯಾದ ಧರ್ಮ, ಆದ್ದರಿಂದ ನೀವು ಅದರಲ್ಲಿ ನಿಮ್ಮ ಮೇಲೆಯೇ ತಪ್ಪೆಸಗಬಾರದು.” [ಸೂರಃ ಅಲ್ ತೌಬಾ- 9:36].

ಇದನ್ನು ಅಬೂಬಕರ್ (ರ) ರವರು ಪ್ರವಾದಿ (ಸ) ಅವರಿಂದ ವರದಿ ಮಾಡಿದ್ದಾರೆ: “… ವರ್ಷವು ಹನ್ನೆರಡು ತಿಂಗಳುಗಳಾಗಿವೆ, ಅದರಲ್ಲಿ ನಾಲ್ಕು ಪವಿತ್ರವಾಗಿವೆ: ಸತತ ಮೂರು ತಿಂಗಳುಗಳಾದ, ದುಲ್-ಖಾದಾಹ್, ದುಲ್-ಹಿಜ್ಜಾ ಮತ್ತು ಮೊಹರಂ, ಮತ್ತು ಜುಮಾದಲ್ ಆಖಿರ ಮತ್ತು ಶಾಬಾನ್ ನಡುವೆ ಬರುವ ರಜಬ್ ತಿಂಗಳು.” (ಅಲ್ ಬುಖಾರಿ- 2958)

ಮೊಹರಂ ಅನ್ನು ಪವಿತ್ರ ಮೊಹರಂ ತಿಂಗಳು ಎಂದು ಕರೆಯಲಾಗುತ್ತದೆ. ಇದು ಅದರ ಪಾವಿತ್ರ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ. ಅಲ್ಲಾಹನ ಮಾತುಗಳಲ್ಲೂ ಈ ಪವಿತ್ರ ತಿಂಗಳು ಎಷ್ಟೊಂದು ಮಹತ್ವದ್ದು ಎಂದು ಗ್ರಹಿಸಬಹುದಾಗಿದೆ. ಅಲ್ಲಾಹನ ಮಾತುಗಳು (ಅರ್ಥದ ವ್ಯಾಖ್ಯಾನ): “ಅದರಲ್ಲಿ ನೀವು ನಿಮ್ಮ ಮೇಲೆಯೇ ತಪ್ಪೆಸಗಬಾರದು.” [ಸೂರಃ ಅಲ್ ತೌಬಾ- 9:36] ಇದರ ಅರ್ಥ: ಈ ಪವಿತ್ರ ತಿಂಗಳುಗಳಲ್ಲಿ ನೀವು ಪಾಪ ಕೃತ್ಯಗಳನ್ನು ಮಾಡಬೇಡಿ ಎಂದಾಗಿದೆ. ಏಕೆಂದರೆ ಹಾಗೆ ಮಾಡುವುದು ಇತರ ಸಮಯಗಳಲ್ಲಿ ಮಾಡುವ ಪಾಪಗಳಿಗಿಂತ ದೊಡ್ಡ ಪಾಪ ವಾಗಿರುತ್ತದೆ.

ಈ ಕುರ್ ಆನಿನ ಸೂಕ್ತದ ಬಗ್ಗೆ ಮಹಾನ್ ಕುರ್ ಆನ್ ವ್ಯಾಖ್ಯಾನಕಾರರಾದ ಇಬ್ನ್ ಅಬ್ಬಾಸ್(ರ) ಹೇಳುತ್ತಾರೆ; ಪಾಪಗಳನ್ನು ಎಸಗಬೇಡಿ ಎಂಬುದು ಎಲ್ಲಾ ತಿಂಗಳುಗಳಲ್ಲಿಯೂ ಅನ್ವಯಿಸುತ್ತದೆ. ನಂತರ ಅಲ್ಲಾಹನು ಈ ನಾಲ್ಕು ತಿಂಗಳುಗಳನ್ನು ಪ್ರತ್ಯೇಕಿಸಿ ಅವುಗಳನ್ನು ಪವಿತ್ರಗೊಳಿಸಿದನು ಮತ್ತು ಅದರ ಪಾವಿತ್ರ್ಯವನ್ನು ಒತ್ತಿಹೇಳಿದನು ಮತ್ತು ಈ ತಿಂಗಳುಗಳಲ್ಲಿ ಮಾಡುವ ಪಾಪಗಳಿಗೆ ಹೆಚ್ಚು ಶಿಕ್ಷೆ ಮತ್ತು ಮಾಡುವಂತಹ ಉತ್ತಮ ಕಾರ್ಯಗಳ ಪ್ರತಿಫಲವನ್ನು ಹೆಚ್ಚಿಸಿದನು.

“ಅದರಲ್ಲಿ ನಿಮ್ಮ ಮೇಲೆಯೇ ತಪ್ಪೆಸಗಬಾರದು” ಎಂಬ ಕುರ್ ಆನಿನ ಪದಗಳಿಗೆ ಸಂಬಂಧಿಸಿದಂತೆ ಖತಾದಾ ಹೇಳುತ್ತಾರೆ: “ಪವಿತ್ರ ತಿಂಗಳುಗಳಲ್ಲಿ ಪಾಪ ವೆಸಗುವುದು ಹೆಚ್ಚು ಗಂಭೀರ ವಿಷಯವಾಗಿದೆ ಮತ್ತು ಈ ಸಮಯದಲ್ಲಿ ಇತರ ತಿಂಗಳುಗಳಿಗಿಂತ ಪಾಪದ ಹೆಚ್ಚಿನ ಹೊರೆ ಬೀಳುತ್ತದೆ. ಯಾವುದೇ ಸಂದರ್ಭದಲ್ಲೂ ತಪ್ಪು ಮಾಡುವುದು ಗಂಭೀರ ವಿಷಯವೇ ಆಗಿದೆ.”

ತದನಂತರ ಖತಾದಾರವರೇ ಹೇಳುತ್ತಾರೆ; “ಅಲ್ಲಾಹನು ತನ್ನ ಸೃಷ್ಟಿಯಿಂದ ಗಣ್ಯರನ್ನು ಆರಿಸಿದ್ದಾನೆ: ದೇವಚರರಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು. ಮಾನವಕುಲದಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು. ಮಾತುಗಳಿಂದ ಅವನು ದಿಕ್ರ್(ಅಲ್ಲಾಹನ ಸ್ಮರಣೆ)ಗಳನ್ನು ಆರಿಸಿಕೊಂಡನು. ಭೂಮಿಯ ಮೇಲಿನ ಸ್ಥಳಗಳಿಂದ ಅವನು ಮಸೀದಿಗಳನ್ನು ಆರಿಸಿದನು. ತಿಂಗಳುಗಳಲ್ಲಿ ಅವರು ರಂಜಾನ್ ಮತ್ತು ಪವಿತ್ರ ತಿಂಗಳುಗಳನ್ನು ಆರಿಸಿಕೊಂಡನು. ದಿನಗಳಿಂದ ಅವನು ಶುಕ್ರವಾರ (ಜುಮುಅ) ದಿನವನ್ನು ಆಯ್ಕೆ ಮಾಡಿದನು. ಮತ್ತು ರಾತ್ರಿಗಳಿಂದ ಅವನು ಲೈಲತುಲ್ ಖದ್ರನ್ನು ಆಯ್ಕೆ ಮಾಡಿದನು. ಆದ್ದರಿಂದ ಅಲ್ಲಾಹನು ಆರಿಸಿಕೊಂಡದ್ದನ್ನು ಗೌರವಿಸಿ. ತಿಳುವಳಿಕೆ ಮತ್ತು ಬುದ್ಧಿವಂತಿಕೆಯುಳ್ಳ ಜನರು ಅಲ್ಲಾಹನಿಂದ ಆರಿಸಲ್ಪಟ್ಟದ್ದನ್ನು ಗೌರವಿಸುತ್ತಾರೆ.

ಅಬು ಹುರೈರಾ (ರ) ರವರು ಹೇಳುತ್ತಾರೆ; “ಅಲ್ಲಾಹುವಿನ ಸಂದೇಸವಾಹಕರು ಹೇಳುತ್ತಾರೆ, “ರಂಜಾನ್ ನಂತರದ ಅತ್ಯುತ್ತಮ ಉಪವಾಸವು ಮೊಹರಮ್ ತಿಂಗಳಲ್ಲಿ ಅನುಷ್ಟಿಸುವ ಉಪವಾಸವಾಗಿದೆ.” ಮುಸ್ಲಿಂ (1982).

ಆದರೆ ಪ್ರವಾದಿ (ಸ) ರ ರಂಜಾನ್ ಹೊರತುಪಡಿಸಿ ಯಾವುದೇ ತಿಂಗಳು ಪೂರ್ಣವಾಗಿ ಉಪವಾಸ ಮಾಡಲಿಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ ಈ ಹದೀತ್ ಅನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದರೆ ಮೊಹರಂ ತಿಂಗಳಲ್ಲಿ ಹೆಚ್ಚಿನ ಉಪವಾಸವನ್ನು ಪ್ರೋತ್ಸಾಹಿಸಲಾಗುತ್ತದೆ, ಇಡೀ ತಿಂಗಳು ಉಪವಾಸ ಮಾಡಬಾರದು.

ಶಾಬಾನ್ ತಿಂಗಳಲ್ಲಿ ಪ್ರವಾದಿ (ಸ) ಅವರು ಹೆಚ್ಚು ಐಚ್ಛಿಕ ಉಪವಾಸ ಮಾಡುತ್ತಿದ್ದರು ಎಂಬುದು ಸಾಬೀತಾಗಿದೆ. ಮತ್ತು ಬಹುಶಃ ಮೊಹರಂನ ಸದ್ಗುಣವು ಅವರ ಜೀವನದ ಕೊನೆಯ ಸಮಯದಲ್ಲಿ ಅಲ್ಲಾಹನು ಬಹಿರಂಗ ಪಡಿಸಿದನು ಎಂಬ ಕಾರಣದಿಂದಾಗಿರಬಹುದು.

Check Also

‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

202ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ …

Leave a Reply

Your email address will not be published. Required fields are marked *