Monday , August 26 2019
Breaking News
Home / ಪ್ರವಾದಿ ಮಹಮ್ಮದ್(ಸ) / ಸೀರತುನ್ನಬಿಯ್ಯ್-ಲೋಕ ಪ್ರವಾದಿ(ಸ)ಯವರ ಜೀವನ ಮತ್ತು ಸಂದೇಶ: ಭಾಗ-35

ಸೀರತುನ್ನಬಿಯ್ಯ್-ಲೋಕ ಪ್ರವಾದಿ(ಸ)ಯವರ ಜೀವನ ಮತ್ತು ಸಂದೇಶ: ಭಾಗ-35

ಬರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

ನಿನ್ನೆಯ ಸಂಚಿಕೆಯನ್ನು ಓದದವರು ಇಲ್ಲಿ ಕ್ಲಿಕ್ಕಿಸಿ.

ದಿವ್ಯವಾಣಿಯ ಅವತರಣವು ಮತ್ತೊಮ್ಮೆ ಸ್ಥಗಿತಗೊಂಡಿತು. ಮುಹಮ್ಮದ್(ಸ.ಅ) ಮತ್ತೊಮ್ಮೆ ಕಳವಳಗೊಂಡರು. ಸುಮಾರು ನಲ್ವತ್ತು ದಿನಗಳು ಕಳೆದುವು. ಇಸ್ಲಾಮ್ ಮತ್ತು ಸತ್ಯನಿಷೇಧದ ಮಧ್ಯೆ ಹೋರಾಟ ಆರಂಭವಾಗಿತ್ತು. ಇಸ್ಲಾಮಿನ ಶಕ್ತಿಯ ನೈಜ ಚಿಲುಮೆಯೇ ಬತ್ತಿ ಹೋಗಿತ್ತು. ಅದುವೇ ಈ ಹೋರಾಟದಲ್ಲಿ ಮುಹಮ್ಮದ್(ಸ.ಅ)ರ ಏಕೈಕ ಆಸರೆಯಾಗಿತ್ತು. ಮಾರ್ಗದರ್ಶನದ ಆ ಕೇಂದ್ರದಿಂದ ಬರುತ್ತಿದ್ದ ಕಿರಣಗಳನ್ನು ನೋಡಲು ಕಣ್ಣುಗಳು ಹಾತೊರೆಯುತ್ತಿದ್ದುವು. ದಾರಿ ನೋಡುತ್ತಾ ಕಣ್ಣುಗಳು ಸೋತು ಹೋಗಿದ್ದುವು. ಹೃದಯ ಛಿದ್ರ ಛಿದ್ರವಾಗಿತ್ತು. ವೈರಿಗಳ ನಾಲಿಗೆಯು ಕತ್ತರಿಯಂತೆ ಚಲಿಸುತ್ತಿದ್ದುವು. ಅಣಕ ವ್ಯಂಗ್ಯದ ಮಾತಿನ ಬಾಣಗಳೇ ಹರಿದು ಬರುತ್ತಿದ್ದುವು.

ಮುಹಮ್ಮದ್(ಸ.ಅ) ಮನೆಯಿಂದ ಹೊರ ಬರುವುದೇ ತಡ ಬಹುದೇವಾರಾಧಕರು ಅಣಕಿಸ ತೊಡಗುತ್ತಿದ್ದರು. “ಮುಹಮ್ಮದರ ಪ್ರಭು ಅವರಿಂದ ಕ್ರುದ್ದನಾಗಿದ್ದಾನೆ. ಅವರನ್ನು ಈಗ ಪೂರ್ಣವಾಗಿ ಬಿಟ್ಟು ಬಿಟ್ಟಿದ್ದಾನೆ.” ಮನೆಯಲ್ಲಿದ್ದರೆ ನೆರಮನೆಯ ಗೋಡೆಯಿಂದ ಚಿಕ್ಕಮ್ಮ, ಅಬೂಲಹಬನ ಪತ್ನಿ ಉಮ್ಮು ಜಮೀಲ್ ಕೊರಳು ಚಾಚಿ ವ್ಯಂಗ್ಯ ಮಾಡುತ್ತಿದ್ದರು. “ಮುಹಮ್ಮದ್! ಈಗ ನಿನ್ನ ಶೈತಾನ್ ನಿನ್ನನ್ನು ಬಿಟ್ಟಿರುವಂತೆ ಕಾಣುತ್ತದಲ್ಲಾ! ಹಲವು ದಿನಗಳಿಂದ ಯಾವುದೇ ಹೊಸ ವಿಷಯವನ್ನು ನೀನು ಹೇಳಿಲ್ಲ. ನಿನಗೆ ಯಾವುದೋ ಭೂತ ಹಿಡಿದಿದೆ ಎಂದು ನಾನು ಹೇಳಿರಲಿಲ್ಲವೆ? ಅದನ್ನು ನೀನು ಈ ತನಕ ದಿವ್ಯವಾಣಿಯೆಂದು ಭ್ರಮಿಸಿದ್ದೆ.”

ಮನನೋಯಿಸುವ ಇಂತಹ ಮಾತುಗಳನ್ನು ಕೇಳಿ ಸಾಕಾಯಿತು. ಈಗೀಗ ಅವು ಅಸಹನೀಯವೆನಿಸತೊಡಗಿತು. ಆದರೆ ಅದನ್ನು ನಿಲ್ಲಿಸುವುದು ಹೇಗೆ? ನನ್ನಿಂದ ನನ್ನ ಪ್ರಭು ಕುಪಿತನಾಗುವಂತಹ ಯಾವುದಾದರೂ ತಪ್ಪು ಸಂಭವಿಸಿತೇ? ಅವನು ಅದಕ್ಕಾಗಿ ನನ್ನನ್ನು ಸತ್ಯ-ಮಿಥ್ಯಗಳ ಈ ಸಂಘರ್ಷದಲ್ಲಿ ಒಬ್ಬಂಟಿಗನಾಗಿ ಬಿಟ್ಟಿರುವನೆ? ಈ ದುಃಖ ದುಮ್ಮಾನವು ಅಸಹನೀಯವಾದಾಗ ಜಿಬ್ರೀಲ್(ಅ.ಸ) ಮತ್ತೆ ಸುವಾರ್ತೆಯೊಂದಿಗೆ ಹಾಜರಾಗುತ್ತಾರೆ.

“ಪ್ರಕಾಶಮಯ ಹಗಲಿನಾಣೆ ಮತ್ತು ರಾತ್ರಿಯಾಣೆ! ಅದು ಪ್ರಶಾಂತವಾಗಿ ಆವರಿಸುವಾಗ (ಸಂದೇಶವಾಹಕರೇ) ನಿಮ್ಮ ಪ್ರಭು ನಿಮ್ಮನ್ನು ಖಂಡಿತ ಕೈ ಬಿಡಲಿಲ್ಲ. ಮತ್ತು ಅವನು ಕೋಪಿಸಲು ಇಲ್ಲ. ಖಂಡಿತವಾಗಿಯೂ ಆನಂತರದ ಕಾಲಘಟ್ಟವು ನಿಮ್ಮ ಪಾಲಿಗೆ ಮುಂಚಿನ ಕಾಲಘಟ್ಟಕ್ಕಿಂತ ಉತ್ತಮವಾಗಿರುವುದು. ಸದ್ಯದಲ್ಲೇ ನಿಮ್ಮ ಪ್ರಭು, ನೀವು ಸಂತುಷ್ಟರಾಗುವಷ್ಟನ್ನು ನಿಮಗೆ ಕೊಡುವನು. ಅವನು ನಿಮ್ಮನ್ನು ಅನಾಥನಾಗಿ ಕಂಡು ಆಶ್ರಯವನ್ನು ಒದಗಿಸಲಿಲ್ಲವೇ? ಮತ್ತು ನಿಮ್ಮನ್ನು ಸನ್ಮಾರ್ಗವರಿಯದವರಾಗಿ ಕಂಡು ಮಾರ್ಗದರ್ಶನ ಮಾಡಲಿಲ್ಲವೇ? ನಿಮ್ಮನ್ನು ನಿರ್ಗತಿಕನಾಗಿ ಕಂಡು ಸ್ಥಿತಿವಂತನಾಗಿ ಮಾಡಲಿಲ್ಲವೇ? ಆದುದರಿಂದ ಅನಾಥನ ಮೇಲೆ ಕಾಠಿಣ್ಯ ತೋರಬೇಡಿರಿ ಮತ್ತು ಯಾಚಕನನ್ನು ಜರೆಯಬೇಡಿರಿ. ನಿಮ್ಮ ಪ್ರಭುವಿನ ಅನುಗ್ರಹವನ್ನು ಪ್ರಕಟಪಡಿಸಿರಿ.” (ಪವಿತ್ರ ಕುರ್ ಆನ್: 93/1-11) ಎಂಬ ಸೂಕ್ತವನ್ನು ತಲುಪಿಸುತ್ತಾರೆ. ಪ್ರವಾದಿ(ಸ.ಅ)ರ ಎಲ್ಲ ದುಃಖವು ಮಾಯವಾಗಿ ಅವರು ಪ್ರಸನ್ನವದನರಾಗುತ್ತಾರೆ. ದಿವ್ಯವಾಣಿ ಸ್ಥಗಿತಗೊಂಡುದುದು ತಮ್ಮ ಬಗ್ಗೆ ಅಲ್ಲಾಹನ ಅಸಂತುಷ್ಟಿಯಿಂದಲ್ಲ ಬದಲಾಗಿ ಅದರಲ್ಲಿ ಪ್ರಕಾಶಮಾನ ಹಗಲಿನ ಬಳಿಕ ರಾತ್ರಿಯ ನೆಮ್ಮದಿದಾಯಕ ಇರುಳನ್ನು ಆವರಿಸುವುದರಲ್ಲಿ ಇರುವಂತಹ ಔಚಿತ್ಯವೇ ಅಡಗಿದೆ ಎಂಬುದು ಅವರಿಗೆ ಮನವರಿಕೆಯಾಯಿತು.

ಇನ್ ಶಾ ಅಲ್ಲಾಹ್ ಭಾಗ-36ರಲ್ಲಿ ಮುಂದುವರಿಯುತ್ತದೆ.

Check Also

ಪ್ರವಾದಿ ಪತ್ನಿ ಆಯಿಷಾರ(ರ) ವಿರುದ್ಧ ಮಹಾ ಅಪವಾದ

111ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 116 ರಿಂದ ಮುಂದುವರಿಯುತ್ತದೆ. ಅಪವಾದ ಎಂಬುದು ಇಸ್ಲಾಮಿಗೆ ಹೊಸತೇನು ಅಲ್ಲ‌ ಸುಮಾರು ನಾಲ್ಕು ಸಾವಿರ …

Leave a Reply

Your email address will not be published. Required fields are marked *