Friday , April 3 2020
Breaking News
Home / ಪ್ರವಾದಿ ಮಹಮ್ಮದ್(ಸ) / ಕಂದಕ್ ಯುದ್ಧ-ಕುರೈಝಾ ಗೋತ್ರದ ವಿದ್ರೋಹದ ಪರಿಣಾಮ

ಕಂದಕ್ ಯುದ್ಧ-ಕುರೈಝಾ ಗೋತ್ರದ ವಿದ್ರೋಹದ ಪರಿಣಾಮ

ಭಾಗ 122 ರಿಂದ ಮುಂದುವರಿಯುತ್ತದೆ.

ಹಿ.ಶ 5 ರ ದುಲ್ ಕ ಅದ್ ತಿಂಗಳ ೫ನೇ ದಿನಾಂಕ ಪ್ರವಾದಿ (ಸ.ಅ)ತಮ್ಮ ಸಂಗಾತಿಗಳ ಜತೆ ಕಂದಕ್ ನಿಂದ ಮದೀನಾಕ್ಕೆ ಹಿಂದಿರುಗುತ್ತಾರೆ. ಅವರು ತಮ್ಮ ಆಯುಧಗಳನ್ನು ಕಳಚಿಡುವಾಗಲೇ ಜಿಬ್ರೀಲ್ (ಅ.ಸ) ಹಾಜರಾಗುತ್ತಾರೆ.

“ಪ್ರವಾದಿವರ್ಯರೇ(ಸ.ಅ)! ತಾವು ಆಯುಧಗಳನ್ನು ಕಳಚಿಟ್ಟಿರಾ?” ಎಂದು ಪ್ರಶ್ನಿಸುತ್ತಾರೆ.
“ಹೌದು” ಎಂದು ಪ್ರವಾದಿ (ಸ.ಅ)ರು ಉತ್ತರಿಸುತ್ತಾರೆ.
ಜಿಬ್ರೀಲ್(ಅ.ಸ): “ತಮಗೆ ಕುರೈಝಾ ಗೋತ್ರದವರ ಕಡೆ ಪ್ರಯಾಣ ಬೆಳೆಸಲು ಆಜ್ಞಾಪಿಸಲಾಗಿದೆ.”
ಪ್ರವಾದಿ (ಸ.ಅ)ರು ಅಲೀ(ರ)ರನ್ನು ಕರೆದು ಕುರೈಝಾ ಗೋತ್ರದವರ ಕಡೆಗೆ ರವಾನಿಸುತ್ತಾರೆ. ಮುಅದ್ದಿನ್ ಕರೆದು “ಜನರು ಆಯುಧಗಳನ್ನು ಕಳಚದಿರಲಿ. ಅಸರ್ ನಮಾಝನ್ನು ಕುರೈಝಾ ಗೋತ್ರದ ಊರಿಗೆ ಹತ್ತಿರ ತಲುಪಿದ ಮೇಲೆ ನಿರ್ವಹಿಸಲಿ” ಎಂದು ಘೋಷಣೆ ಮಾಡುವಂತೆ ಆಜ್ಞಾಪಿಸಿದರು.

ಕುರೈಝಾ ಗೋತ್ರದವರಿಗೆ ತಮ್ಮ ಕೋಟೆಗಳ ಬಗ್ಗೆ ಬಹಳ ಗರ್ವ ಇತ್ತು. ಅವು ಅಭೇದ್ಯವಾಗಿವೆಯೆಂದು ಅವರು ಭಾವಿಸಿದ್ದರು. ಆದರೆ ಮುಸ್ಲಿಂ ಸೇನೆಯು ಅವರಿಗೆ ಮುತ್ತಿಗೆ ಹಾಕಿದಾಗ ಕೆಲವೇ ದಿನಗಳಲ್ಲಿ ಕುರೈಝಾ ಗೋತ್ರದವರ ಕಣ್ಣು ತೆರೆಯಿತು. ಅವರು ಮುತ್ತಿಗೆಯಿಂದಾಗಿ ಹಲವು ತರದ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಕೊನೆಗೆ ಒಂದು ದಿನ ಅವರ ಸರದಾರ ಕಅಬ್ ಬಿನ್ ಅಸದ್ ತನ್ನ ಗೋತ್ರಜರನ್ನು ಸೇರಿಸಿ ಹೀಗೆ ಹೇಳುತ್ತಾನೆ; “ಪರಿಸ್ಥಿತಿಯು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಬಿಗಡಾಯಿಸುತ್ತಿದೆ. ಹೊರಗಿನಿಂದ ಯಾರ ಕಡೆಯ ಕುಮ್ಮಕ್ಕು ಸಿಗುವ ಆಸೆಯೂ ಉಳಿದಿಲ್ಲ. ನಮ್ಮ ಧಾನ್ಯ ಭಂಡಾರ ಮುಗಿಯುತ್ತಾ ಬಂದಿದೆ. ಮುಸ್ಲಿಮರು ನಮಗೆ ನಮ್ಮ ವಚನ ಭಂಗದ ಶಿಕ್ಷೆ ನೀಡದೆ ಇಲ್ಲಿಂದ ಕದಲಲಾರರು. ಆದ್ದರಿಂದ ನಾನು ನಿಮ್ಮ ಮುಂದೆ ಮೂರು ಸಲಹೆಗಳನ್ನು ಇಡುತ್ತಿದ್ದೇನೆ. ಆ ಪೈಕಿ ನಿಮಗೆ ಯಾವುದು ಮೆಚ್ಚುಗೆಯಾಗುತ್ತದೋ ಅದರಂತೆ ವರ್ತಿಸಿರಿ”

“ಹೇಳಿರಿ ನಿಮ್ಮ ಸಲಹೆಗಳೇನು?” ಎಂಬ ಕೆಲವು ಸ್ವರಗಳು ಕೇಳಿ ಬರುತ್ತವೆ.
“ಕೇಳಿರಿ !ಒಂದನೆಯ ಸಲಹೆ ನಾವು ಮುಹಮ್ಮದ್ (ಸ.ಅ)ರ ಪ್ರವಾದಿತ್ವವನ್ನು ದೃಢಿಕರಿಸಿ ಅವರ ಮೇಲೆ ವಿಶ್ವಾಸವಿರಿಸಬೇಕು. ಏಕೆಂದರೆ ಅವರು ಅಲ್ಲಾಹನಿಂದ ನಿಯುಕ್ತರಾದ ಪ್ರವಾದಿಯೆಂಬುದು ಇದೀಗ ದೃಢ ಪಟ್ಟಿದೆ. ಅವರ ಆಗಮನದ ಬಗ್ಗೆ ನಮ್ಮ ಗ್ರಂಥಗಳಲ್ಲಿಯೂ ಉಲ್ಲೇಖವಿದೆ. ತನ್ಮೂಲಕ ನಿಮ್ಮ ಪ್ರಾಣ ಸೊತ್ತು ಮತ್ತು ಸಂತಾನಗಳು ಸುರಕ್ಷಿತವಾಗುವುವು”.

ಇದನ್ನು ಕೇಳುತ್ತಲೇ ಕೆಲವರು ಬೊಬ್ಬಿಡುತ್ತಾರೆ, “ನಾವು ತೌರಾತನ್ನು ಖಂಡಿತವಾಗಿ ತೊರೆಯಲಾರೆವು. ನಮಗೆ ನಿಮ್ಮ ಸಲಹೆ ಸ್ವೀಕಾರಾರ್ಹವಲ್ಲ.”

ಕಅಬ್: “ನನ್ನ ಎರಡನೆಯ ಸಲಹೆ ಏನೆಂದರೆ ನಿಮ್ಮ ಮಡದಿ ಮಕ್ಕಳನ್ನು ನೀವೆ ಕೊಂದು ಬಿಡಿ ಮತ್ತು ಖಡ್ಗ ಹಿಡಿದು ಮುಹಮ್ಮದ್ (ಸ.ಅ) ಮತ್ತವರ ಸಂಗಾತಿ ಗಳೊಂದಿಗೆ ಹೋರಾಟಕ್ಕಿಳಿಯಿರಿ. ಅನಂತರ ಅಲ್ಲಾಹನು ಯಾವ ತೀರ್ಮಾನ ಮಾಡುತ್ತಾನೋ ಅದನ್ನು ಒಪ್ಪಿಕೊಳ್ಳಿರಿ. ಒಂದು ವೇಳೆ ನೀವು ಕೊಲ್ಲಲ್ಪಟ್ಟರೆ ನಿಮಗೆ ನಿಮ್ಮ ನಂತರ ಉಳಿಯುವ ಮಕ್ಕಳು ಮರಿಗಳ ಚಿಂತೆ ಇರಲಾರದು. ಒಂದು ವೇಳೆ ನೀವು ಬದುಕುಳಿದರೆ ಅಲ್ಲಾಹನು ನಿಮಗೆ ಬೇರೆ ಮಡದಿ ಮಕ್ಕಳನ್ನೂ ದಯಪಾಲಿಸುವನು”.

ಇದಕ್ಕೂ ಅನೇಕ ಸ್ವರಗಳು ಏಳುತ್ತವೆ, “ನಮಗೆ ನಿಮ್ಮ ಈ ಸಲಹೆಯೂ ಸ್ವೀಕಾರಾರ್ಹವಲ್ಲ. ನಮ್ಮ ಮಡದಿ ಮಕ್ಕಳನ್ನು ಕೊಂದ ಬಳಿಕ ನಾವು ಜೀವಿಸಿ ಏನು ಫಲ?”

ಕಅಬ್: “ನನ್ನ ಮೂರನೆಯ ಸಲಹೆ ಏನೆಂದರೆ ಇಂದು ಸಬ್ಬಾತ್(ಶನಿವಾರ) ರಾತ್ರಿ. ಈಗ ರಾತ್ರಿ ಯಹೂದಿಗಳು ನಿಶಾಕ್ರಮಣ ಮಾಡಲಾರರೆಂದು ಮುಸ್ಲಿಮರು ನಿಶ್ಚಿಂತರಾಗಿರಬಹುದು. ಆದ್ದರಿಂದ ಈ ರಾತ್ರಿಯೇ ಅವರ ಮೇಲೆ ಹಠಾತ್‌ ಧಾಳಿ ಮಾಡಿ ಬಿಡಬೇಕು. “

ಇದಕ್ಕೆ ಉತ್ತರವಾಗಿ ಎಲ್ಲಾ ಕಡೆಯಿಂದಲೂ ಸ್ವರವೇಳುತ್ತದೆ, “ನಿಮ್ಮ ಈ ಸಲಹೆಯನ್ನು ನಾವು ಒಪ್ಪುವುದಿಲ್ಲ. ನಾವು ಸಬ್ಬಾತ್ ದಿನದ ಗೌರವವನ್ನು ಖಂಡಿತವಾಗಿ ಮುರಿಯಲಾರೆವು”.

ಮುತ್ತಿಗೆಗೆ ಹದಿನೈದು ದಿನಗಳು ಕಳೆದಿವೆ. ಕುರೈಝಾ ಗೋತ್ರದವರು ಬೇರೆ ದಾರಿಯಿಲ್ಲದೆ ಮುಹಮ್ಮದ್ (ಸ.ಅ)ರ ಮುಂದೆ ಶರಣಾಗಳು ನಿರ್ಧರಿಸುತ್ತಾರೆ. ಆದರೆ ತಮ್ಮ ಬಗ್ಗೆ ಸಅದ್ ಬಿನ್ ಮುಅದ್(ರ) ಯಾವ ತೀರ್ಮಾನ ಮಾಡುತ್ತಾರೋ ಅದಕ್ಕೆ ತಾವು ಒಪ್ಪುವುದಾಗಿ ಶರತ್ತು ಒಡ್ಡುತ್ತಾರೆ.

ರಫೀದ ಅಸ್ಲಮಿ ಎಂಬವರ ಚಿಕಿತ್ಸಾಲಯದಲ್ಲಿ ಸಅದ್ ಹಾಸಿಗೆಯೊಂದರಲ್ಲಿ ಬಿದ್ದು ಕೊಂಡಿರುವರು. ರಕ್ತಸ್ರಾವ ಹೆಚ್ಚಾದುದರಿಂದ ಬಲಹೀನತೆ ಹೆಚ್ಚಾಗಿದೆ. ಆದರೆ ಈ ಸ್ಥಿತಿಯಲ್ಲೂ ಅವರು ಮುಸ್ಲಿಮರ ಕ್ಷೇಮದ ಕುರಿತು ಚಿಂತಿತರಾಗಿದ್ದಾರೆ. ಅಷ್ಟರಲ್ಲಿ ಕೆಲವು ಮಂದಿ ಅವರ ಅಪ್ಪಣೆ ಪಡೆದು ಒಳಗೆ ಬಂದು ಹೀಗೆ ಹೇಳುತ್ತಾರೆ; “ನಿಮ್ಮನ್ನು ಪ್ರವಾದಿ(ಸ.ಅ)ರು ಕರೆಯುತ್ತಿದ್ದಾರೆ. ನಾವು ನಿಮ್ಮ ಸವಾರಿಗಾಗಿ ಕತ್ತೆಯನ್ನು ತಂದಿರುವೆವು.”

ಸಅದ್;- ” ನಾನು ಹೊರಟೆ. ಜನರು ಅವರನ್ನು ಆಧರಿಸಿ ಕತ್ತೆಯ ಮೇಲೆ ಕೂರಿಸುತ್ತಾರೆ. ಕುರೈಝಾ ಗೋತ್ರದ ವಿಷಯ ಚರ್ಚಿಸಲಿಕ್ಕಾಗಿ ನಿಮ್ಮನ್ನು ಕರೆಯಲಾಗಿದೆ ಎಂದು ಅವರು ಸಅದ್ ಬಿನ್ ಮುಆದ್ ರಿಗೆ ಹೇಳುತ್ತಾರೆ. ಪ್ರಾಯಶಃ ನಿಮ್ಮನ್ನು ಮದ್ಯಸ್ಥಿಕೆದಾರನಾಗಿ‌ ನೇಮಿಸಬಹುದು ಎಂದು ತಿಳಿಸುತ್ತಾರೆ. ರಸ್ತೆಯಲ್ಲಿ ಔಸ್ ಗೋತ್ರದ ಪ್ರಮುಖರು ಅವರನ್ನು ಸ್ವಲ್ಪ ಸಮಯ ನಿಲ್ಲಿಸಿ ಹೀಗೆ ನಿವೇದಿಸಿಕೊಳ್ಳುತ್ತಾರೆ. “ಸರದಾರರೇ! ಕುರೈಝಾ ಗೋತ್ರದವರ ಬಗ್ಗೆ ಮೃದು ನೀತಿಯನ್ನು ಅನುಸರಿಸಿರಿ. ಅವರು ನಮ್ಮ ಬೆಂಬಲಿಗರು. ನಾವು ಪರಸ್ಪರ ಸೋದರರಾಗಿದ್ದೇವೆ.”

ಸಆದ್ ಈ ರೀತಿ ಉತ್ತರಿಸುತ್ತಾರೆ: “ಸಆದ್ ನಿಗೆ ಅಲ್ಲಾಹನ ವಿಷಯದಲ್ಲಿ ಯಾವ ಆಕ್ಷೇಪಕನ ಆಪೇಕ್ಷವನ್ನು ಲೆಕ್ಕಿಸದೆ ಇರುವ ಸಮಯ ಬಂದಿದೆ.

ಮುಹಮ್ಮದ್ (ಸ.ಅ)ರ ಬಳಿ ತಲುಪಿ ಸಅದ್(ರ) ಆಸರೆಯೊಂದಿಗೆ ಕುಳಿತುಕೊಳ್ಳುತ್ತಾರೆ. ಆಗ ಪ್ರವಾದಿ (ಸ.ಅ)ರು; ಸಆದ್! ನಿಮ್ಮನ್ನು ಕುರೈಝಾ ಗೋತ್ರದವರ ಬಗ್ಗೆ ಮದ್ಯಸ್ಥಿಕೆದಾರನಾಗಿ ನೇಮಿಸಲಾಗಿದೆ. ಅವರು ನಿಮ್ಮ ತೀರ್ಮಾನವನ್ನು ಒಪ್ಪಲು ಸಿದ್ದರಿದ್ದಾರೆ”.

ಸಆದ್ ಪ್ರವಾದಿ (ಸ.ಅ)ರಿಗೆ ಕೃತಜ್ಞತೆ ಅರ್ಪಿಸಿದ ಬಳಿಕ ತಮ್ಮ ಗೋತ್ರದವರನ್ನು ಉದ್ದೇಶಿಸಿ ಹೀಗೆ ಪ್ರಶ್ನಿಸುತ್ತಾರೆ; “ನಾನು ಮಾಡಿದ ತೀರ್ಮಾನವೇ ಅಂತಿಮವೆಂದು ನೀವು ಅಲ್ಲಾಹನೆದುರು ವಾಗ್ದಾನ ಮಾಡಲು ಮಾಡಲು ಸಿದ್ದರಿರುವಿರಾ?”

ಎಲ್ಲರೂ ಒಪ್ಪಿಗೆ ಸೂಚಿಸಿದ ಬಳಿಕ ಸಆದ್(ರ) ಸಭಿಕರನ್ನುದ್ದೇಶಿಸಿ ಹೀಗೆ ಹೇಳುತ್ತಾರೆ; “ಕುರೈಝಾ ಗೋತ್ರದ ಎಲ್ಲಾ ಯೋಧರನ್ನು ವಧಿಸಿ ಬಿಡಬೇಕು. ಸ್ತ್ರೀ ಯರನ್ನು ಮಕ್ಕಳನ್ನು ಸೆರೆ ಹಿಡಿಯಬೇಕು ಮತ್ತು ಅವರ ಸೊತ್ತನ್ನು ವಿತರಣೆ ಮಾಡಿ ಬಿಡಬೇಕು ಎಂಬುದೇ ನನ್ನ ತೀರ್ಮಾನ.

ಇದನ್ನು ಕೇಳಿ ಪ್ರವಾದಿ (ಸ.ಅ)ರು ಹೀಗೆ ಹೇಳುತ್ತಾರೆ; ಸಆದ್! ಕುರೈಝಾ ಗೋತ್ರದವರ ಬಗ್ಗೆ ನೀವು ಅಲ್ಲಾಹನಿಂದ ಬಂದ ವಿಧಿಗೆ ಅನುಗುಣವಾಗಿಯೇ ತೀರ್ಮಾನ ಮಾಡಿರುವಿರಿ”.

ಈ ತೀರ್ಮಾನದಂತೆ ಯೋಧರನ್ನು ವಧಿಸಲಾಗುತ್ತದೆ. ಅವರಿಗೆ ಅವರ ವಚನ ಭಂಗದ ಶಿಕ್ಷೆ ಸಿಗುತ್ತದೆ. ಹಯ್ಯಿ ಬಿನ್ ಅಖ್ತಬ್ ಕೂಡ ವಧಿಸಲ್ಪಟ್ಟವರಲ್ಲಿ ಸೇರಿದ್ದಾನೆ. ಆತ ಕಅಬ್ ಬಿನ್ ಅಸದ್ ನೊಂದಿಗೆ ಮಾಡಿಕೊಂಡ ವಾಗ್ದಾನದಂತೆ ತನ್ನ ಮನೆಯಲ್ಲೇ ಇದ್ದನು. ವಧಿಸಲ್ಪಡುವುದಕ್ಕೆ ಮುಂಚೆ ತನ್ನ ಜನರನ್ನು ಉದ್ದೇಶಿಸಿ ಹೀಗೆ ಹೇಳಿದನು; “ಜನರೇ ಅಲ್ಲಾಹನ ಆಜ್ಞೆಯನ್ನು ಪಾಲಿಸುವುದರಲ್ಲಿ ಏನು ತೊಂದರೆ ಇಲ್ಲ. ಇದೊಂದು ದೇವಾಜ್ಞೆಯಾಗಿತ್ತು. ಅಲ್ಲಾಹನು ಬನೀ ಇಸ್ರಾಈಲರ ಮೇಲೆ ಲಿಖಿತ ಗೊಳಿಸಿದ್ದ ಒಂದು ಶಿಕ್ಷೆಯಾಗಿತ್ತು.”

ಇನ್ ಶಾ ಅಲ್ಲಾಹ್ ಮುಂದುವರಿಯುತ್ತದೆ.
ಬರಹ:- ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

Check Also

ಮದೀನಾದ ಯಹೂದಿ ಜನಾಂಗದ ಕುತಂತ್ರ-ಭಾಗ 119

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 118 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ಶವ್ವಾಲ್ ತಿಂಗಳ ಕೊನೆಯ ದಿನಗಳು ಕೈಬರ್ …

Leave a Reply

Your email address will not be published. Required fields are marked *