Tuesday , February 18 2020
Breaking News
Home / ಪ್ರವಾದಿ ಮಹಮ್ಮದ್(ಸ) / ಕಂದಕ ಯುದ್ದ- ದೇವ ಸಹಾಯ

ಕಂದಕ ಯುದ್ದ- ದೇವ ಸಹಾಯ

ಭಾಗ 121 ರಿಂದ ಮುಂದುವರಿಯುತ್ತದೆ.

ತೀವ್ರ ಚಳಿ, ತೀವ್ರ ಬಿರುಗಾಳಿಯೂ ಬೀಸುತ್ತಿದೆ. ಶತ್ರು ಸೇನೆಯ ಯೋಧರು ನಡುಗುತ್ತಿದ್ದಾರೆ. ರಾತ್ರಿಯ ಅಂಧಕಾರದಲ್ಲಿ ಬೆಂಕಿ ಉರಿಸುವುದು ಕೂಡ ಅಸಾಧ್ಯವಾಗಿದೆ. ತೀವ್ರ ಮಾರುತದ ಹೊಡೆತದಿಂದ ಡೇರೆಗಳ ಹಗ್ಗವು ಮುರಿಯುತ್ತಿದೆ. ಆಣಿಗಳು ಕಿತ್ತೊಗೆಯಲ್ಪಡುತ್ತಿವೆ. ಒಲೆಯ ಮೇಲಿಟ್ಟ ಮಡಕೆಗಳು ಅಡಿಮೇಲಾಗುತ್ತಿವೆ. ಮರಳಿನ ಕಣಗಳು ಮುಖದ ಮೇಲೆ ಬಾಣದಂತೆ ನಾಟುತ್ತಿವೆ. ಗಾಳಿಯಿಂದೇಳುವ ಮರಳ ರಾಶಿಯಿಂದ ಕಣ್ಣು ತೆರೆಯುವುದು ಅಸಾಧ್ಯವಾಗಿದೆ. ಬಾಯಿ ಮೂಗುಗಳೊಳಗೆ ಹೊಯ್ಗೆ ನುಗ್ಗುತ್ತಿದೆ. ಪ್ರತಿಯೊಬ್ಬನೂ ಗಾಬರಿಗೊಂಡಿದ್ದಾನೆ.

ಬಿರುಗಾಳಿ ಮತ್ತು ಚಳಿಯಿಂದಾಗಿ ಕುದುರೆ ಒಂಟೆಗಳು ಚೀರಾಡುತ್ತಾ ಅತ್ತಿತ್ತ ಓಡುತ್ತಿವೆ. ಎಲ್ಲೆಡೆ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ಅಬೂಸುಪ್ಯಾನ್ ತನ್ನ ಡೇರೆಯೊಳಗೆ ಕುಳಿತು ಚಳಿ ಕಾಯುತ್ತಿದ್ದಾನೆ. ಅವನ ಸುತ್ತ ಕೆಲವು ಮಂದಿ ಕುಳಿತಿದ್ದಾರೆ. ಅಷ್ಟರಲ್ಲಿ ಮುಹಮ್ಮದ್ (ಸ.ಅ)ರ ಬೇಹುಗಾರ ಹುದೈಪ(ರ) ತಮ್ಮ ಮುಖ ಮರೆಸಿಕೊಂಡು ಅವರೊಂದಿಗೆ ಶಾಮಿಲಾಗುತ್ತಾರೆ. ಅಬೂಸುಪ್ಯಾನ್ ಎದ್ದು ಹೇಳುತ್ತಾನೆ:” ಕುರೈಶ್ ಗೋತ್ರಜರೇ! ಕಾರ್ಗತ್ತಲ ರಾತ್ರಿಯಿದು. ಜಾಗೃತರಾಗಿರಿ. ಮುಸ್ಲಿಮರು ನಿಶಾಕ್ರಮಣ ಮಾಡಲೂಬಹುದು. ಅವರ ಬೇಹುಗಾರರು ನಮ್ಮ ಡೇರೆಗಳೊಳಗೆ ಪ್ರವೇಶಿಸಲೂಬಹುದು. ಆದ್ದರಿಂದ ಪ್ರತಿಯೊಬ್ಬನೂ ತನ್ನ ಹತ್ತಿರ ಇರುವವನ ಮೇಲ್ಮೈ ನಿಗಾ ಇಡಬೇಕು. ಇದರ ಕೇಳುತ್ತಲೇ ಹುದೈಪ(ರ) ತಮ್ಮ ಬಳಿಯಿರುವವನ ಮೈ ತಡವುತ್ತಾ “ನೀನು ಯಾರು?” ಎಂದು ಕೇಳುತ್ತಾರೆ. ಅವನು ತನ್ನ ಹೆಸರು, ಪರಿಚಯ ಹೇಳುತ್ತಾನೆ.

ಅಬೂಸುಪ್ಯಾನ್ ಮಾತನ್ನು ಮುಂದುವರಿಸುತ್ತಾ:-” ಕುರೈಶರೇ! ನಾವು ಡೇರೆ ಹೂಡಿರುವ ಸ್ಥಳವು ಸೂಕ್ತವಲ್ಲ. ನಮ್ಮ ಒಂಟೆ, ಕುದುರೆಗಳು ಸಾಯುತ್ತಿವೆ. ಕುರೈಝಾ ಗೋತ್ರದವರು ನಮ್ಮನ್ನು ಕೈ ಬಿಟ್ಟಿದ್ದಾರೆ. ಅವರ ವರ್ತನೆಯಿಂದ ನಮಗೆ ಅತ್ಯಂತ ಆಘಾತ ಮತ್ತು ನಿರಾಶೆ ಉಂಟಾಗಿದೆ. ಅದರ ಜೊತೆಗೆ ಈ ಕೆಟ್ಟ ಬಿರುಗಾಳಿ ಉಂಟು ಮಾಡಿರುವ ಕಷ್ಟ ನಷ್ಟಗಳು ನಿಮಗೆ ತಿಳಿದೆ ಇದೆ. ಆದ್ದರಿಂದ ಇಲ್ಲಿಂದ ಕಂಬಿ ಕೀಳುವುದು ಶ್ರೇಯಸ್ಕರ. ನಾನಂತೂ ಹೊರಡುವ ನಿರ್ಧಾರ ಮಾಡಿಕೊಂಡಿದ್ದೆನೆ. ಇನ್ನು ಇಲ್ಲಿ ನಮ್ಮ ವಿಜಯ ಸಂಶಯಾಸ್ಬದವಾಗಿದೆ”.

ಬೆಳಗಾಗುತ್ತಲೇ ಮದೀನಾದ ಜನರು ಕುರೈಶ್ ಸೇನೆಯು ಮದೀನಾದ ಪರಿಸರವನ್ನು ಖಾಲಿ ಮಾಡಿ ಹೊರಟಿರುವುದನ್ನು ಕಂಡು ಅಚ್ಚರಿಗೊಂಡರು. ಅವರು ಬೀಡು ಬಿಟ್ಟಿದ್ದ ಸ್ಥಳದಲ್ಲಿ ನೆಲಕ್ಕುರುಳಿದ ಡೇರೆ ಗಳು, ಕವಚಿ ಬಿದ್ದ ಅಡುಗೆ ಪಾತ್ರೆಗಳು, ಸತ್ತು ಬಿದ್ದ ಒಂಟೆ ,ಕುದುರೆಗಳು, ಎಸೆಯಲ್ಪಟ್ಟ ಧಾನ್ಯದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದುವು. ಕಂದಕ್ ಯುದ್ದದಲ್ಲಿ ಐದು ಮಂದಿ ಮುಸ್ಲಿಮರು ಹುತಾತ್ಮರಾಗಿ ಶತ್ರು ಸೇನೆಯ ನಾಲ್ಕು ಮಂದಿ ವಧಿಸಲ್ಪಟ್ಟಿದ್ದರು.

ಈ ಬಿರುಗಾಳಿಯು ಅಲ್ಲಾಹನ ವತಿಯಿಂದ ಒಂದು ಪರೋಕ್ಷ ಸಹಾಯವಾಗಿತ್ತು. ಅದನ್ನು ಅಲ್ಲಾಹನು ಪವಿತ್ರ ಕುರ್ ಆನಿನಲ್ಲಿ ಹೀಗೆ ವಿವರಿಸಿರುವನು; “ಸತ್ಯವಿಶ್ವಾಸಿಗಳೇ ಅಲ್ಲಾಹನು ನಿಮಗೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ.ನಿಮ್ಮ ಮೇಲೆ ಸೈನ್ಯಗಳು ಏರಿ ಬಂದಾಗ ನಾವು ಅವರ ಮೇಲೆ ಒಂದು ಬಲವಾದ ಬಿರುಗಾಳಿಯನ್ನು ಕಳುಹಿಸಿದೆವು ಮತ್ತು ನಿಮಗೆ ಕಾಣಿಸದಂತಹ ಸೈನ್ಯಗಳನ್ನು ರವಾನಿಸಿದೆವು. ನೀವು ಆಗ ಮಾಡುತ್ತಿದ್ದುದನ್ನೆಲ್ಲ ಅಲ್ಲಾಹ್ ನೋಡುತ್ತಿದ್ದನು”. (ಪವಿತ್ರ ಕುರ್ ಆನ್ 33:9)

ಅಹ್ ಝಾಬ್ ಸೇನೆಗಳು ಸೋತು ನಿರಾಶರಾಗಿ ಮರಳಿದ ಬಗ್ಗೆ ಪ್ರವಾದಿ (ಸ.ಅ)ರು ಈ ರೀತಿ ಹೇಳಿರುವರು
“ಇನ್ನು ಮುಂದೆ ಅವರು ನಮ್ಮ ಮೇಲೆ ಆಕ್ರಮಣ ಮಾಡಲಾರರು.ನಾವೇ ಅವರ ಮೇಲೆ ಆಕ್ರಮಣ ಮಾಡುವೆವು”.

ಇನ್ ಶಾ ಅಲ್ಲಾಹ್ ಮುಂದುವರಿಯುತ್ತದೆ.
ಬರಹ:- ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

Check Also

ಮದೀನಾದ ಯಹೂದಿ ಜನಾಂಗದ ಕುತಂತ್ರ-ಭಾಗ 119

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 118 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ಶವ್ವಾಲ್ ತಿಂಗಳ ಕೊನೆಯ ದಿನಗಳು ಕೈಬರ್ …

Leave a Reply

Your email address will not be published. Required fields are marked *