ಸಂದೇಶ ಇ-ಮ್ಯಾಗಝಿನ್: ಗೋರಕ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ ಸುಮಾರು ಎರಡು ವರ್ಷಗಳ ಕಾಲ ಸೇವೆಯಿಂದ ಅಮಾನತ್ತಾಗಿ 9 ತಿಂಗಳು ಜೈಲಲ್ಲೂ ಕಳೆದಿದ್ದ ಆಸ್ಪತ್ರೆಯ ನೂಡಲ್ ಅಧಿಕಾರಿ ವೈದ್ಯ ಡಾ. ಕಫೀಲ್ ಅಹ್ಮದ್ ಖಾನ್ ಅವರು ಕೊನೆಗೂ ನಿರಪರಾಧಿ ಎಂದು ಆರೋಪ ಮುಕ್ತರಾಗಿದ್ದಾರೆ.
ಇಂದು ಹೊರಬಿದ್ದ ತೀರ್ಪನ ಬಗ್ಗೆ ಮಾತನಾಡಿರುವ ಡಾ. ಕಫೀಲ್ ಖಾನ್, “ನಾನು ಇವತ್ತು ಬಹಳ ಸಂತೋಷವಾಗಿದ್ದೇನೆ. ಅಪಾರ ದುಃಖದ ಎರಡು ವರ್ಷಗಳ ನಂತರ ಕೊನೆಗೂ ನನ್ನ ಇಡೀ ಕುಟುಂಬಕ್ಕೆ ಬಹಳ ಒಳ್ಳೆಯ ಸುದ್ದಿ ಬಂದಿದೆ. ” ಎಂದು ಪ್ರತಿಕ್ರಿಯಿಸಿದ್ದಾರೆ.
ಆಗಸ್ಟ್ 22, 2017 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ತನಿಖೆಗೆ ಆದೇಶಿಸಿದ್ದ ಈ ಪ್ರಕರಣ 90 ದಿನಗಳಲ್ಲಿ ಮುಗಿಯಬೇಕಿತ್ತಾದರೂ 2 ವರ್ಷಗಳಷ್ಟು ದೀರ್ಘಕಾಲ ನಡೆಯುವಂತಾಯಿತು. ಆದರೂ ನ್ಯಾಯ ದೊರಕಿರುವುದು ಖುಷಿ ಕೊಟ್ಟಿದೆ ಎಂದು ಡಾ. ಕಪೀಲ್ ಅಹ್ಮದ್ ಹೇಳಿದ್ದಾರೆ.
ಆಗಸ್ಟ್ 10, 2017 ರಂದು ಬಿಆರ್ಡಿ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದಲ್ಲಿ ಆಮ್ಲಜನಕದ ಸಿಲಿಂಡರ್ ಪೂರೈಕೆ ಸ್ಥಗಿತವಾಗಿದ್ದರಿಂದ ಸುಮಾರು 70 ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಡಾ. ಕಪೀಲ್ ಖಾನ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಬಂಧಿಸಲಾಗಿತ್ತು.