ಸಂದೇಶ ಇ-ಮ್ಯಾಗಝಿನ್: ಕರಾವಳಿಯ ಕೋಮು ದ್ವೇಷಕ್ಕೆ ಹೆಸರುವಾಸಿಯಾದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ಲೆಕ್ಕ ವಿಲ್ಲದಷ್ಟು ಹಿಂದೂ ಮುಸ್ಲಿಮ್ ಕೋಮು ಗಲಭೆಗಳು ಹಿಂದಿನಿಂದಲೂ ನಡೆದಿದೆ. ಆದರೆ ಇದರ ಮಧ್ಯೆ ಇಲ್ಲಿಯೂ ಹಿಂದೂ ಮುಸ್ಲಿಮರು ಕೋಮು ಸೌಹಾರ್ದತೆಯ ಬದುಕು ಬದುಕುತ್ತಿದ್ದಾರೆಂದರೆ ಖಂಡಿತಾ ನೀವು ಅಚ್ಚರಿ ಪಡುವಿರಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಯುವಕ ಶೈಲೇಶ್ ಮೊನ್ನೆ ಶ್ರುತಿ ಎಂಬವರ ಜೊತೆ ವಿವಾಹವಾಗಿದ್ದು, ಈ ವಿವಾಹ ಸಮಾರಂಭದ ಪ್ರಯುಕ್ತ ಮುಡಿಪು ಸಂಬಾರ ತೋಟ ನೂರಾನಿಯ ಜುಮಾ ಮಸೀದಿಯಲ್ಲಿ ಮುಸ್ಲಿಮ್ ಬಾಂಧವರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಮುಡಿಪು ಸಾಂಬಾರ ತೋಟದಲ್ಲಿ “ಅಮ್ಮ ಎಂಟರ್ಪ್ರೈಸಸ್” ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮಾರಾಟ ಮಾಡುವ ತನ್ನದೇ ಆದ ಸ್ವಂತ ಅಂಗಡಿಯನ್ನು ಹೊಂದಿರುವ ಶೈಲೇಶ್, ಸರ್ವಧರ್ಮಿಯರು ಕೇವಲ ತನ್ನ ವ್ಯಾಪಾರಕ್ಕೆ ಮಾತ್ರ ಸೀಮಿತ ಅಲ್ಲ. ನನ್ನ ಜೀವನದ ಎಲ್ಲ ಕಷ್ಟ ಸುಖಗಳಿಗೂ ಸೀಮಿತ ಎನ್ನುವ ನಿಟ್ಟಿನಲ್ಲಿ, ಶ್ರೀಯುತ ಶೈಲೇಶ್ ಅವರು ತನ್ನ ಕರ್ಮಭೂಮಿಯ ಸುತ್ತಮುತ್ತಲಿನ ಎಲ್ಲಾ ಮುಸಲ್ಮಾನ ಬಂದುಗಳಿಗೆ ತನ್ನ ಸುಂದರ ಸಾಂಸಾರಿಕ ಜೀವನಕ್ಕೆ ನಾಂದಿಹಾಡುವ ಪುಣ್ಯಕಾರ್ಯಕ್ಕೆ ಆಮಂತ್ರಣ ನೀಡಿದ್ದಾರೆ.
ಈಸಂದರ್ಭದಲ್ಲಿ ಮುಸ್ಲಿಮರು ರಂಝಾನ್ ಉಪವಾಸದಲ್ಲಿರುವುದನ್ನು ತಿಳಿದು ಎಲ್ಲಾ ಮುಸ್ಲಿಮರು ಮದುವೆಯ ರಾತ್ರಿ ತನ್ನ ಮನೆಗೆ ಔತಣಕೂಟಕ್ಕೆ ಬಂದು ನಮ್ಮ ಹರಸಬೇಕೆಂದಿದ್ದಲ್ಲದೆ, ಜುಮಾ ಮಸೀದಿ ಸಂಬಾರ ತೋಟದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ತನ್ನ ಸೌಹಾರ್ದ ಮನೋಭಾವನೆಯನ್ನು ಇಡೀ ಮನುಕುಲಕ್ಕೆ ಸಾರಿದ್ದಾರೆ.
ಶೈಲೇಶ್ ಅವರ ಈ ಕೋಮು ಸೌಹಾರ್ದ ಮನೋಭಾವವನ್ನು ಮೆಚ್ಚಿ ಮದುವೆಯಲ್ಲಿ ಪಾಲ್ಗೊಂಡಿರುವ ಸಂಬಾರ ತೋಟದ ಮುಸ್ಲಿಮ್ ಬಾಂಧವರು, ಆ ಬಳಿಕ ಶೈಲೇಶ್ ಅವರು ಮಾಡಿರುವ ಮಹತ್ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಮದುವೆಗೆ ಶುಭ ಹಾರೈಸಿದ್ದಾರೆ.