Friday , November 15 2019
Breaking News
Home / ಇಸ್ಲಾಮಿಕ್ ಲೇಖನಗಳು / ಜುಮಾ ದಿವಸ ಸಾಮಾನ್ಯವಾಗಿ ನಾವೆಲ್ಲರೂ ಮಾಡಲು ಸಾಧ್ಯವಿರುವ 5 ತಪ್ಪುಗಳು

ಜುಮಾ ದಿವಸ ಸಾಮಾನ್ಯವಾಗಿ ನಾವೆಲ್ಲರೂ ಮಾಡಲು ಸಾಧ್ಯವಿರುವ 5 ತಪ್ಪುಗಳು

ಮುಸ್ಲಿಮರಿಗೆ ಜುಮುಅ ದಿವಸ ಅಂದರೆ ಶುಕ್ರವಾರ ಇತರ ಸಾಮಾನ್ಯ ದಿವಸಗಳಂತಲ್ಲ, ಜುಮುಅ ದಿನದಂದು ಬೆಳಗ್ಗೆ ಯಿಂದಲೇ ತಯಾರಿ ಮಾಡಿ ಮಸೀದಿಗೆ ಹೊರಡುವವರಿದ್ದಾರೆ. ಹೊರಡಬೇಕು ಕೂಡ. ಇನ್ನು ಕೆಲವರು ಆವತ್ತಿನ ದಿನ ಕೆಲಸಕ್ಕೆ ರಜೆ ಹಾಕಿ ಮಸೀದಿಗೆ ಹೋಗಲು ಸಿದ್ಧವಾಗುತ್ತಾರೆ. ಜುಮುಅ ನಮಾಝ್ ಎಂಬುದು ಪ್ರಾಯಕ್ಕೆ ಬಂದಿರುವ ಪ್ರತಿಯೊಬ್ಬ ಪುರುಷರ ಮೇಲೆ ನಿರ್ಬಂಧವಾಗಿದೆ. ಮಹಿಳೆಯರಿಗೆ ಈ ನಮಾಝ್ ನಿರ್ಬಂಧವಿಲ್ಲ. ಅವರು ಝುಹರ್ ನಮಾಝ್ ನಿರ್ವಹಿಸಿದರೆ ಸಾಕು. ಆದರೆ ಜುಮುಅ ನಮಾಝ್ ಮಹಿಳೆಯರು ನಿರ್ವಹಿಸಬಯಸುವುದಾದಲ್ಲಿ ಅದಕೆಕ್ ತಡೆ ಏನೂ ಇಲ್ಲ. ಅದರ ಪ್ರತಿಫಲ ಅವರಿಗೆ ಖಂಡಿತಾ ಲಭ್ಯವಾಗುತ್ತದೆ.

ಇಲ್ಲಿ ನಾವು ಸಾಮಾನ್ಯವಾಗಿ ಜುಮುಅ ದಿನದಂದು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಬಹುದಾದ ಈ 5 ಸಾಮಾನ್ಯ ತಪ್ಪುಗಳ ಬಗ್ಗೆ ನಿಮ್ಮನ್ನು ರಿಮೈಂಡ್ ಮಾಡಲು ಬಯಸುತ್ತಿದ್ದೇವೆ. ಈ ತಪ್ಪುಗಳು ಸಾಮಾನ್ಯವಾಗಿ ಸಂಬಂವಿಸಬಹುದಾದ ತಪ್ಪುಗಳಾಗಿದ್ದರೂ ಕೂಡ, ಇದನ್ನು ಸಾಮಾನ್ಯವಾಗಿ ಪರಿಗಣಿಸುವಂತಿಲ್ಲ. ಕೆಲವೊಮ್ಮೆ ಇದರಿಂದಾಗಿ ನಿಮ್ಮ ಜುಮುಅ ನಮಾಝ್‌ನ ಪ್ರತಿಫಲ ನಷ್ಟವಾಗುವ ಸಾಧ್ಯತೆ ಇದೆ. ಆ ತಪ್ಪುಗಳು ಏನಂತ ನೋಡೋಣ.

1. ಖುತುಬಾ ಪ್ರವಚನ ನಡೆಯುವಾಗ ಮಾತನಾಡುವುದು:
ಇದು ಸಾಮಾನ್ಯವಾಗಿ ಪರಿಗಣಿಸುವಂತಹ ತಪ್ಪಲ್ಲ. ಇದನ್ನು ಪ್ರವಾದಿ ಮುಹಮ್ಮದ್(ಸ)ರವರು ವಿರೋಧಿಸಿದ್ದಾರೆ. ನೀವು ಮಾತನಾಡಬಾರದು ಮಾತ್ರವಲ್ಲ, ಇನ್ನೊಬ್ಬ ಮಾತನಾಡುತ್ತಿದ್ದರೆ ಅವನನ್ನು ಸುಮ್ಮನಿರು ಎಂದವನಿಗೆ ಕೂಡ ಖುತುಬಾದ ಪ್ರತಿಫಲ ನಷ್ಟವಾಗುತ್ತದೆ ಎಂದಿದ್ದಾರೆ.

2. ಖುತುಬಾ ಪ್ರವಚನ ನಡೆಯುವಾಗ ಅತ್ತಿಂದ ಇತ್ತ ಓಡಾಡುವುದು:
ಕೆಲವರು ಮಸೀದಿಯಲ್ಲಿ ಇಮಾಮ್ ಖುತುಬಾ ಪ್ರವಚನ ನೀಡುವಾಗ ಅತ್ತಿಂದ ಇತ್ತ ಓಡಾಡುತ್ತಾ, ಲೈನ್ ಸರಿ ಇದೆಯೇ ಎಂದು ಪರಿಶೀಲಿಸುತ್ತಾ ಕಾಲ ಕಲೆಯುತ್ತಾರೆ. ಖುತುಬಾದ ಪ್ರತಿಫಲ ಅಲ್ಲಿ ಹಾಜರಿದ್ದ ಮಾತ್ರಕ್ಕೆ ಲಭ್ಯವಾಗಲಾರದು. ಖುತುಬಾ ಎಂಬುದು ಒಂದು ಕಡೆ ಮರ್ಯಾದೆಯಿಂದ ಕೂತು ಗಮನವಿಟ್ಟು ಕೇಳಿ ಅರ್ಥೈಸ ಬೇಕಾಗಿರುವಂತಹ ಸಲಹೆಯಾಗಿದೆ. ಚಂಚಲವಾಗಿರುವವರಿಗೆ ಆ ಪ್ರತಿಫಲ ಸಿಗಲಾರದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

3. ಜುಮುಅ ಸಮಯದಲ್ಲಿ ಬೇರೆ ಕೆಲಸದಲ್ಲಿ ನಿರತವಾಗಿರುವುದು:
ಇದು ಸಾಮನ್ಯವಾಗಿ ನಾವು ನೋಡುವಂತಹದ್ದೇ ಆಗಿದೆ. ವ್ಯಾಪಾರಿಗಳು ಈ ವಿಷಯದಲ್ಲಿ ಮುಂದಿದ್ದಾರೆ. ಜುಮುಅ ದಿನ ಖತೀಬ್ ಮಿಂಬರ್ ಗೆ ಹತ್ತುವ ವರೆಗೆ ವ್ಯಾಪಾರ ಮಾಡುತ್ತಾ ಇರುತ್ತಾರೆ. ಇಂತಹ ಜನರಿಗೆ ಜುಮಾದ ಮಹತ್ವ ಗೊತ್ತಿಲ್ಲ ಎನ್ನಬಹುದಷ್ಟೇ. ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಸ್ವಲ್ಪ ಸಮಯ ಸ್ಥಗಿತ ಗೊಳಿಸಿ ನಮಾಝ್‍‌ಗೆ ಬನ್ನಿ ಎಂಬುದಾಗಿದೆ ಅಲ್ಲಾಹನ ಆಜ್ಜೆ. ವ್ಯಾಪರದಲ್ಲಿ ಅನುಗ್ರಹ ನೀಡುವವನು ಅಲ್ಲಾಹನಾಗಿರುವ ಕಾರಣ ಯಾವುದೇ ನಾಶ ನಷ್ಟದ ಬಗ್ಗೆ ಚಿಂತಿಸಬೇಕಾದ ಅಗತ್ಯ ಒಬ್ಬ ನೈಜ ವಿಶ್ವಾಸಗೆ ಖಂಡಿತಾ ಇರಲಾರದು.

4. ತಡವಾಗಿ ಬರುವುದು:
ಕೆಲವರು ನಮಾಝ್ ಶುರುವಾಗುವ ಸಮಯಕ್ಕೆ ಬಂದು ಸೇರಿಕೊಳ್ಳುತ್ತಾರೆ. ಇವರಿಗೆ ಜುಮುಅದ ಪೂರ್ಣ ಪ್ರತಿಫಲ ಲಭ್ಯವಾಗಲಾರದು ಎಂದು ವಿದ್ವಾಂಸರು ಕಲಿಸಿದ್ದಾರೆ. ಜುಮುಅ ನಮಾಝ್ ಗೆ ಬೇಗ ಬರುವವರ ಪ್ರತಿಫಲ ಪ್ರವಾದಿ(ಸ)ರವರು ಹದೀಸ್‌ನಲ್ಲಿ ಕಲಿಸಿದ್ದಾರೆ. ಅದಕ್ಕಾಗಿ ಪ್ರಯತ್ನಿಸಬೇಕಾದುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ.

5. ಶುದ್ದಿ ಇಲ್ಲದ ಅಥವಾ ಫ್ಯಾಷನ್ ಬಟ್ಟೆ ಧರಿಸುವುದು:
ಇದೂ ಕೂಡ ನಾವು ಸಾಮಾನ್ಯವಾಗಿ ಕಾಣುತ್ತಿರುವಂತಹ ಸಂಗತಿಯಾಗಿದೆ. ಸಹಾಬಾಗಳಾ ಬಳಿ ಅಂತಹ ಯಾವುದೇ ಉತ್ತಮ ವಸ್ತ್ರಗಳು ಇರಲಿಲ್ಲ. ಆದರೆ ಜುಮುಅ ನಮಾಝ್ ಗಾಗಿ ಅವರು ಒಂದು ಜೊತೆ ಉತ್ತಮ ಬಟ್ಟೆಯನ್ನು ತೆಗೆದಿಟ್ಟಿದ್ದರು. ಸಭ್ಯ ಬಿಳಿ ವಸ್ತ್ರ ಧರಿಸಲು ಪ್ರವಾದಿಯವರು ಆಧ್ಯತೆ ನೀಡಿದ್ದಾರೆ. ಅದಿಲ್ಲದಿದ್ದರೆ. ಬೇರೆ ಯಾವುದೇ ಸಭ್ಯ ವಸ್ತ್ರ ಧರಿಸಬಹುದು. ಆದರೆ ಅದು ಶುದ್ಧಿಯುಳ್ಳ ವಸ್ತ್ರ ವಾಗಿರಬೇಕು. ಫ್ಯಾಷನ್ ಆಗಿ ಇಲ್ಲಿ ಕಟ್ ಅಲ್ಲಿ ಕಟ್ ಅನ್ನುವಂತಹ ವಸ್ತ್ರ ಆಗಿರಬಾರದು.

ಬರಹ: ನೌಫಲ್, ದೇರಳಕಟ್ಟೆ

Check Also

ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಇಸ್ಲಾಂ ಜೀವನದ ಪರಮ ಗುರಿಯನ್ನು ತಝ್ಕಿಯ ಎಂದಿದೆ. ಹೀಗೆ ಜೀವನದ ಸಕಲ ರಂಗ ಪಾವನವಾಗಿರಬೇಕು. ಇದುವೇ ಧರ್ಮದ ಉದ್ದೇಶ ಮತ್ತು …

Leave a Reply

Your email address will not be published. Required fields are marked *