Friday , April 3 2020
Breaking News
Home / ಇಸ್ಲಾಮಿಕ್ ಲೇಖನಗಳು / ಸಫರ್‌ ತಿಂಗಳು ಮತ್ತು ಅಪಶಕುನದ ಬುಧವಾರ (ಒಡುಕ್ಕತ್ತೆ ಪದನಾಸೆ)!

ಸಫರ್‌ ತಿಂಗಳು ಮತ್ತು ಅಪಶಕುನದ ಬುಧವಾರ (ಒಡುಕ್ಕತ್ತೆ ಪದನಾಸೆ)!

ಅರಬಿ ಕ್ಯಾಲೆಂಡರಿನ ಸಫರ್‌ ತಿಂಗಳ ಕೊನೆಯ ಬುಧವಾರ ಅಪಶಕುನ (ಒಡುಕ್ಕತ್ತೆ ಪದನಾಸೆ) ಎಂದು ನಂಬುವ ಮತ್ತು ಅದು ಪ್ರವಾದಿವರ್ಯರಿಗೆ(ಸ) ಕಠಿಣ ಜ್ವರ ಬಂದ ದಿನವೆಂಬ ನೆಪದಲ್ಲಿ ಅಂದು ಕೆಲವು ಪ್ರತ್ಯೇಕ ಅನಾಚಾರಗಳನ್ನು ಆಚರಿಸುವ ಮುಸ್ಲಿಮರಿದ್ದಾರೆ. ಅಪಶಕುನವನ್ನು ಓಡಿಸುವ ಬಹಳ ವಿಚಿತ್ರ ಚಿಕಿತ್ಸೆಯನ್ನೂ ಪುರೋಹಿತರೇ ಕಲಿಸಿ ಕೊಟ್ಟಿದ್ದಾರೆ. ನಾವೆಲ್ಲ ಮದ್ರಸದಲ್ಲಿ ಕಲಿಯುತ್ತಿದ್ದಾಗ, ಪ್ರವಾದಿವರ್ಯ(ಸ)ರಿಗೆ ಜ್ವರ ಬಂದ ದಿನವೆಂಬ ನೆಪದಲ್ಲಿ “ಒಡುಕ್ಕತ್ತೆ ಪದನಾಸೆ” (ಸಫರ್‌ ತಿಂಗಳ ಕೊನೆಯ ಬುಧವಾರ) ಎಂಬೊಂದು ಅನಾಚಾರವಿತ್ತು. ಅಂದು ಬೆಲ್ಲಗಂಜಿ ಅಥವಾ ಸಿಹಿ ವಿತರಿಸಲಾಗುತ್ತಿತ್ತು. ವಿಶೇಷವಾಗಿ, ಮನೆಯಿಂದ ಪಿಂಗಾಣಿ ಅಥವಾ ಪಿಂಗಾಣಿ ಬಟ್ಟಲನ್ನು ತರಿಸಿ, ಉಸ್ತಾದರು ಅದರಲ್ಲಿ ಏನೇನೋ ಅರಬಿ ಅಕ್ಷರಗಳನ್ನು ಶಾಯಿ(ink)ಯಿಂದ ಬರೆದು ಕೊಡುತ್ತಿದ್ದರು. ಮನೆಯಲ್ಲಿ ತಾಯಿ ಅದಕ್ಕೆ ನೀರು ಹಾಕಿ ಬರೆದ ಅಕ್ಷರಗಳನ್ನು ನೀರಲ್ಲಿ ಚೆನ್ನಾಗಿ ಕಲಸಿ, ಮನೆಯ ಎಲ್ಲರಿಗೂ ಬರ್ಕತ್‌ಗಾಗಿ ಅಮೃತವೆಂಬಂತೆ ಅಲ್ಪ ಸ್ವಲ್ಪ ಕುಡಿಸುತ್ತಿದ್ದರು.

ಹಾಗೆಯೇ ಕೆಲವೆಡೆ ಪ್ರತಿ ಮನೆಯಿಂದಲೇ ಒಂದು ಗ್ಲಾಸ್‌ ಶುದ್ಧ ನೀರು ತರಿಸಿ, ಅದನ್ನು ಮದ್ರಸದ ಡ್ರಮ್ಮಲ್ಲಿ ಸಂಗ್ರಹಿಸಿ, ನಂತರ ಮದ್ರಸದಲ್ಲಿದ್ದ ನಾಲ್ಕೈದು ಬಟ್ಟಲಲ್ಲಿ ಮೇಲಿನಂತೆ ಅರಬಿ ಅಕ್ಷರಗಳನ್ನು ಬರೆದು, ಬಳಿಕ ಆ ಅಕ್ಷರಗಳನ್ನು ಡ್ರಮ್ಮಿನ ನೀರಲ್ಲಿ ಬೆರೆಸಿ ಆ ನೀರನ್ನೇ ಮನೆಮನೆಗೆ ಹಂಚಲಾಗುತ್ತಿತ್ತು. ಅದು ಸರ್ವ ರೋಗ ಮತ್ತು ವಿಘ್ನಗಳಿಂದ ದೂರ ಸರಿಸುತ್ತದೆಂಬ ನಂಬಿಕೆ. ಒಟ್ಟಿನಲ್ಲಿ ಇಂಕ್‌ ಎಂಬ ರಾಸಾಯನಿಕ ದ್ರವವನ್ನು ಕುಡಿಯುವ “ಒಡುಕ್ಕತ್ತೆ ಪದನಾಸೆ” ಎಂಬುದೂ ಪ್ರವಾದಿವರ್ಯ(ಸ)ರ ಪ್ರೀತಿಯನ್ನು ಮಕ್ಕಳ ಹೃದಯದಲ್ಲಿ ಸ್ಥಾಪಿಸುವ ಆಚಾರವೆಂದು ಸಮರ್ಥಿಸುವ ಆಧ್ಯಾತ್ಮಿಕ ವ್ಯಾಪಾರಿಗಳಿದ್ದಾರೆ. ಪ್ರಾಯಶಃ ಅರಬಿ ಅಕ್ಷರಗಳಿರುವ ಹಾಳೆಗಳನ್ನು ಜಗಿದು ತಿಂದರೂ ಹಾಗೂ ಶರೀರವನ್ನು ಗಾಯ ಗೊಳಿಸುವ “ಕುತ್ತು ರಾತೀಬು” ಎಂಬ ಆಧ್ಯಾತ್ಮಿಕತೆಯ ಹುಚ್ಚು ಪೈಶಾಚಿಕ ಅಟ್ಟಹಾಸವನ್ನೂ ಪ್ರವಾದಿ ಪ್ರೇಮದ ಸಂಕೇತವೆಂದು ಸಮರ್ಥಿಸುವವರಿಗೆ ಬರಗಾಲವಿರದು. ವಾಸ್ತವದಲ್ಲಿ ಇಲ್ಲದ ನಂಬಿಕೆ ಅನಾಚಾರಗಳನ್ನೆಲ್ಲ ಎಳೆದು ಹಾಕಿ ನಾವೇ ನಮ್ಮ ಬದುಕನ್ನು ಮತ್ತಷ್ಟು ಸಂಕಷ್ಟಮಯ ಗೊಳಿಸುತ್ತಿದ್ದೇವೆ. ಪ್ರವಾದಿವರ್ಯ(ಸ)ರಿಗೆ ಮತ್ತು ಸ್ವಹಾಬತ್ತ್‌ಗಳಿಗೆ ಪರಿಚಯವಿಲ್ಲದ ಧಾರಾಳ ಮೂಢನಂಬಿಕೆಗಳು, ಅನಾಚಾರಗಳು ಹಾಗೂ ವಿಚಿತ್ರ ಚಿಕಿತ್ಸೆಗಳು ಸಮುದಾಯದಲ್ಲಿ ರಾರಾಜಿಸುತ್ತಿವೆ. “ಸಫರ್‌ ತಿಂಗಳು ಅಶುಭಕರ ತಿಂಗಳೆಂಬ ವಿಶ್ವಾಸ ಸರಿಯಲ್ಲ” ಎಂದು ಸ್ವಹೀಹುಲ್‌ ಬುಖಾರಿಯಲ್ಲಿದೆ.

ಸಾಮಾನ್ಯವಾಗಿ ದುಃಖ- ದುಮ್ಮಾನ, ಕಷ್ಟ-ನಷ್ಟಗಳ ವೇಳೆ ಜನರು ಕಾಲವನ್ನೂ ರೋಗವನ್ನೂ ಹಳಿಯುತ್ತಾರೆ. ಪ್ರವಾದಿವರ್ಯರ(ಸ) ಮುಂದೆ ಒಬ್ಬ ವ್ಯಕ್ತಿ ಜ್ವರವನ್ನು ಹಳಿದು, ಆಕ್ಷೇಪಿಸಿದನು. ಆದರೆ ಪ್ರವಾದಿವರ್ಯರು(ಸ) ಆ ವ್ಯಕ್ತಿಯೊಡನೆ, ಲಾ ತಸುಬ್ಬಹಾ=ಅದನ್ನು ಬಯ್ಯದಿರಿ ಅಂದರೆ, ರೋಗವನ್ನು ಬಯ್ಯುವುದು ಸತ್ಯವಿಶ್ವಾಸಿಗಳ ಸಂಸ್ಕಾರವಲ್ಲ ಎಂದರ್ಥ. ಫ ಇನ್ನಹಾ ತನ್‌ಫಿಝ್ಝನೂಬ=ಅದು ಪಾಪಗಳನ್ನು ನೀಗಿಸುತ್ತದೆ. ಅಂದರೆ ಸತ್ಯವಿಶ್ವಾಸಿಗಳು ಸಹನೆ ವಹಿಸಿದರೆ ರೋಗದಲ್ಲೂ ಅವರಿಗೆ ಒಳಿತಿದೆ. ಚಿಕಿತ್ಸೆಯಿಲ್ಲದ ಯಾವ ಕಾಯಿಲೆಯನ್ನೂ ಅಲ್ಲಾಹನು ಇಳಿಸಿಲ್ಲವೆಂದು ಪ್ರವಾದಿವರ್ಯರೇ(ಸ) ವಿವರಿಸಿದ್ದಾರೆ. ಒಟ್ಟಿನಲ್ಲಿ ರೋಗಿಯಾದಲ್ಲಿ “ದವಾ”ಕೆ ಸಾಥ್‌ “ದುಆ” ಬಹಳ ಪ್ರಾಧಾನ್ಯತೆಯುಳ್ಳದ್ದು. ಹೌದು! ಪ್ರವಾದಿಗಳು ಈ ಭೂಮಿಯ ಮೇಲೆ ನಡೆದಾಡಿದ್ದೇ ಮನುಷ್ಯರಿಗೆ ಸತ್ಯದ ಹಾದಿಯನ್ನು ತೋರಿಸಲು ಮತ್ತು ಅಸತ್ಯದ ದೀಪವನ್ನು ನಂದಿಸಲು. ಪ್ರವಾದಿಗಳು ಮನುಷ್ಯರನ್ನು ಬಿಗಿಯಲಾಗಿದ್ದ ಸಕಲ ಮೂಢನಂಬಿಕೆಗಳ ಸಂಕೋಲೆಗಳನ್ನು ಕಿತ್ತೆಸೆದರು. ಅಂಧವಿಶ್ವಾಸಗಳನ್ನು ಒಡೆದು ಹಾಕಿ ಜನರನ್ನು ವಿಮೋಚಿಸಿದರು. ಅಂತ್ಯ ಪ್ರವಾದಿ ಮುಹಮ್ಮದ್(ಸ)ರಂತೂ ಜನರ ಬದುಕನ್ನು ಸರಳ ಮತ್ತು ಸುಲಭಗೊಳಿಸಿದರು.

ಆದರೆ ಕಾಲ ಘಟ್ಟದ ಪುರೋಹಿತರುಗಳು ತಮ್ಮ ಉಪಜೀವನಕ್ಕಾಗಿ ಮತ್ತೆ ಮತ್ತೆ ಹೊಸ ಹೊಸ ಅನಾಚಾರಗಳನ್ನು ಪೋಣಿಸಿ, ಮುಗ್ಧ ಜನಸಾಮಾನ್ಯರ ವಿಶ್ವಾಸವನ್ನೇ ಮಲಿನಗೊಳಿಸುವರು. ಅದನ್ನು ಆಕ್ಷೇಪಿಸುವವರನ್ನು “ನೂತನವಾದಿ” ಎಂದು ಬಾಯಿ ಮುಚ್ಚಿಸಲಾಗುತ್ತದೆ ಮತ್ತು ಜಮಾಅತ್‌ನಿಂದಲೇ ಹೊರ ದಬ್ಬುತ್ತೇವೆಂದೂ ಧಮ್ಕಿ ಕೊಡಲಾಗುತ್ತದೆ. ಒಟ್ಟಿನಲ್ಲಿ ಒಡುಕ್ಕತ್ತೆ ಪದನಾಸೆ ಎಂಬ ಜಹಾಲತ್‌ ನಿಮ್ಮೂರಲ್ಲಿ ಇನ್ನೂ ಜೀವಂತವಿದೆಯೇ?

✍ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

Check Also

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ …

Leave a Reply

Your email address will not be published. Required fields are marked *