Tuesday , April 7 2020
Breaking News
Home / ಇಸ್ಲಾಮಿಕ್ ಲೇಖನಗಳು / ‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ ಮೂಲಕ ಪ್ರವಾದಿ (ಸ.ಅ)ರು ನಮಗೆ ಕಲಿಸಿದ್ದಾರೆ. “ಇಬ್ನು ಉಮರ್ (ರ)ವರದಿ ಮಾಡುತ್ತಾರೆ; ”ಪ್ರವಾದಿ (ಸ.ಅ) ನನ್ನ ಹೆಗಲ ಮೇಲೆ ಕೈ ಇರಿಸಿ ಈ ರೀತಿ ಉಪದೇಶಿಸಿದರು;  “ನೀನು ಇಹಲೋಕದಲ್ಲಿ ಓರ್ವ ವಿದೇಶಿಯಂತೆ ಅಥವಾ ಓರ್ವ ಪ್ರಯಾಣಿಕನಂತೆ ಬದುಕಬೇಕು .” (ಬುಖಾರಿ). ಈ ಉಪದೇಶವನ್ನು ನನ್ನ ಹೆಗಲನ್ನು ಹಿಡಿದು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಈ ಉಪದೇಶವು ಬಹಳ ಮಹತ್ವವುಳ್ಳದ್ದು ಅದೇ ರೀತಿ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಮನುಷ್ಯನ ನಿಜವಾದ ಶಾಶ್ವತವಾದ ವಾಸಸ್ಥಾನವು ಪರಲೋಕವಾಗಿದೆ. ಪರಲೋಕ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲಿಕ್ಕಾಗಿ ನಾವು ಇಹಲೋಕಕ್ಕೆ ಬಂದಿರುತ್ತೇವೆ. ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಸಮಯದವರೆಗೆ ಕೆಲಸ ಮಾಡಲು ಮತ್ತು ಪರಲೋಕಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲು ಅವಕಾಶವನ್ನು ನೀಡಲಾಗಿದೆ. ಅವನ ಅವದಿಯು ಮುಗಿದ ಕೂಡಲೇ ಮರಳಿ ಹೋಗಲೇಬೇಕು. ಅವಿತುಕೊಳ್ಳಲು ಅಥವಾ ಹಣಪಾವತಿಸಿ ತಪ್ಪಿಸಿಕೊಳ್ಳಲು ಖಂಡಿತವಾಗಿ ಸಾಧ್ಯವಿಲ್ಲ. ಇಹಲೋಕ ಮತ್ತು ಪರಲೋಕ ಜೀವನವನ್ನು ಜೊತೆಯಾಗಿ ಪರಿಗಣಿಸಿದರೆ ಇಹಲೋಕ ಜೀವನವು ಸಂಪೂರ್ಣ ಪ್ರಯಾಣವಾಗಿದೆ. ಉದಾ:- “ಓರ್ವ ಪ್ರಯಾಣಿಕ ವಿದೇಶವನ್ನು ಸ್ವದೇಶವೆಂದು ಭ್ರಮಿಸಿ ಅಲ್ಲಿಯ ಸುಖ ಸೌಕರ್ಯಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಲಭಿಸಿದ್ದುದನ್ನೆಲ್ಲ ಅಲ್ಲಿಯೇ ಖರ್ಚು ಮಾಡುತ್ತಾ ಇದ್ದರೆ ಅವನ ಅವಸ್ಥೆ ಏನಾಗಿರಬಹುದು? ಸಮಯ ಮುಗಿದ ನಂತರ ಸ್ವದೇಶಕ್ಕೆ ಮರಳುವಾಗ ವಾಹನಕ್ಕೆ ನೀಡಬೇಕಾದ ಟಿಕೆಟ್ ನ ಹಣವು ಇಲ್ಲದ ಪರಿಸ್ಥಿತಿ ಉಂಟಾಗಬಹುದು. ಈ ರೀತಿಯಾಗಿ ಬಿಟ್ಟರೆ ಬಲ ಪ್ರಯೋಗದಿಂದ ಅಲ್ಲಿಂದ ಹೊರಕಟ್ಟಲಾಗುವುದು. ಊರಿಗೆ ಮರಳಿದರು ಅವನನ್ನು ಸ್ವಾಗತಿಸಲು, ಗೌರವಿಸಲು ಯಾರು ಇರಲಾರರು. ನಿಂದನಿಯವಾದ ಶೋಚನಿಯವಾದ ಜೀವನವನ್ನು ಊರಿನಲ್ಲಿ ಆ ವ್ಯಕ್ತಿ ಕಳೆಯಬೇಕಾಗಿ ಬರುವುದು. ಇಹಲೋಕ ಜೀವನವನ್ನೇ ಸಂಪೂರ್ಣ ಜೀವನ ಎಂದು ಭ್ರಮಿಸಿ ಕೊಂಡಿರುವವರಿಗು ಇದೇ ರೀತಿಯ ಪರಿಣಾಮ ಕಾದಿರುವುದು.

ಇಹಲೋಕ ಜೀವನವು ಒಂದು ಪ್ರಯಾಣವಾಗಿದೆ ಅಥವಾ ಪ್ರಯಾಣದ ಮದ್ಯೆ ಸಿಗುವ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಸಮಾನವಾಗಿದೆ. ಅಲ್ಪ ದಿನಗಳಿಗೆ ಅಗತ್ಯ ಇರುವ ವಸ್ತುಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಬೇಕು. ಪರಲೋಕ ಜೀವನಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಿಡುವುದೇ ಈ ಪ್ರವಾಸಿ ಜೀವನದ ಉದ್ದೇಶವಾಗಿದೆ. ಆದುದರಿಂದ ಮನುಷ್ಯ ಅವನ ಬುದ್ದಿಶಕ್ತಿಯನ್ನು ಶ್ರಮವನ್ನು ಅತಿ ಹೆಚ್ಚಾಗಿ ಪರಲೋಕ ಜೀವನಕ್ಕೆ ಅಗತ್ಯವಾದ ಸಂಪತ್ತನ್ನು ಸಂಗ್ರಹಿಸಲಿಕ್ಕಾಗಿ ವಿನಿಯೋಗಿಸಬೇಕಾಗಿದೆ. ಪ್ರಯಾಣಿಕರು ತಂಗುದಾಣದಲ್ಲಿ ನಿಲ್ಲುವವರು ಸದಾ ಪ್ರಯಾಣಕ್ಕೆ ಸಿದ್ದರಾಗಿರಬೇಕು. ಆ ಊರಿನ ಜನರು ಬಯಸಿದರೆ ಯಾವ ನಿಮಿಷದಲ್ಲಾದರೂ ಅವರು ಆ ಊರನ್ನು ತೊರೆಯಬೇಕಾಗಿ ಬರಬಹುದು. ಸಿಕ್ಕಿದ ಸಂದರ್ಭದಲ್ಲಿ ಮೊತ್ತ ಮೊದಲಾಗಿ ಅವನು ಪ್ರಯಾಣದ ಉದ್ದೇಶವನ್ನು ಪೂರ್ಣಗೊಳಿಸಲು ತ್ವರೆ ಮಾಡಬೇಕು. ಇಲ್ಲದೆ ಹೋದರೆ ಏನನ್ನೂ ಮಾಡದೆ ಬರಿಗೈಯಲ್ಲಿ ಅಥವಾ ಸಾಲದ ಹೊರೆಯೊಂದಿಗೆ ಹಿಂತಿರುಗಿ ಹೋಗಬೇಕಾಗಿ ಬರಬಹುದು.

ಇಹಲೋಕ ಜೀವನದ ಬೆಡಗಿನಲ್ಲಿ ಮುಳುಗಿ ಪರಲೋಕ ಜೀವನಕ್ಕೆ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಲು ಮರೆತು ಬಿಡುವರು‌ ಅಥವಾ ನಾಡಿದ್ದು ಮಾಡುವ , ನಾಳೆ ಮಾಡುವ ಎಂದು ಕರ್ತವ್ಯಗಳನ್ನು ಮುಂದಕ್ಕೆ ಹಾಕುವವರ ಅವಸ್ಥೆಯು ಇದೇ ಆಗಿದೆ. ಈ ಪ್ರವಾದಿ (ಸ.ಅ)ರ ವಚನವನ್ನು ವ್ಯಾಖ್ಯಾನಿಸುತ್ತಾ ಇಬ್ನು ಉಮರ್ (ರ)ಹೇಳುತ್ತಾರೆ; “ಸಾಯಂಕಾಲವಾದರೆ ಪ್ರಭಾತವನ್ನು ನಿರೀಕ್ಷಿಸಬೇಡಿರಿ, ಬೆಳಗಾದರೆ ಸಾಯಂಕಾಲವನ್ನು ನಿರೀಕ್ಷಿಸಬೇಡಿರಿ. ಆರೋಗ್ಯವಂತರಾಗಿರುವಾಗ ರೋಗಿಯಾಗಿರುವದಕ್ಕೆ ಬೇಕಾಗಿರುವುದನ್ನು ಸಂಗ್ರಹಿಸಿಟ್ಟುಕೊಳ್ಳಿರಿ‌. ಸತ್ಯವಿಶ್ವಾಸಿ ತನ್ನ ಕರ್ತವ್ಯವನ್ನು ಎಂದು ಮುಂದೂಡಬಾರದು” ಎಂಬುದಾಗಿ ಇಬ್ನು ಉಮರ್ (ರ)ಉಪದೇಶಿಸಿದರು.

ಸಾಯಂಕಾಲವಾಗುವ ಹೊತ್ತಿಗೆ ಮಾಡಿ ಮುಗಿಸಬೇಕಾದ ಕೆಲಸಗಳನ್ನು ಮಾಡಿ ಮುಗಿಸಬೇಕು, ಇಂದಿನದ್ದನ್ನು ನಾಳೆ ಮಾಡುವ ಎಂದು ನಿರಿಕ್ಷಿಸಬಾರದು. ನಾಳೆ ಜೀವಂತವಿರುವಿರಿ ಎಂಬುದು ಏನು ಖಾತರಿ? ಮರಣ ಹೊಂದಿದರೆ ನಮ್ಮ ಕರ್ತವ್ಯ ಒಂದು ಬಾಕಿ ಉಳಿಸಿ ಬಿಡುವುದಕ್ಕೆ ಅವಕಾಶವಾಗುತ್ತದೆ. ಆರೋಗ್ಯ ಇದ್ದಾಗ ಸಂಪಾದಿಸಿದರೆ ಮಾತ್ರ ಅನಾರೋಗ್ಯ ವೇಳೆಯಲ್ಲಿ ಉಪಯೋಗಿಸಲು ಸಾಧ್ಯ. ಅದೇ ರೀತಿಯಲ್ಲಿ ಜೀವನದಲ್ಲಿ ಸಂಗ್ರಹಿಸಿಟ್ಟರೆ ಮರಣಾನಂತರ ಉಪಕಾರಕ್ಕೆ ಒದಗಿಬರುವುದು.

ಓರ್ವ ದಾರ್ಶನಿಕ ಹೇಳುತ್ತಾರೆ;  ”ಇಹಲೋಕ ಜೀವನದಲ್ಲಿ ಓರ್ವ ವ್ಯಕ್ತಿಯು ಈ ದಿನದ ಕೊನೆಯನ್ನು ಕಾಣಲು ನಾನು ಇರಲಾರ ಎಂದು ಭಾವಿಸಿ ಕೆಲಸ ಮಾಡಿದ ದಿನವು ಆ ಸತ್ಯವಿಶ್ಚಾಸಿಯ ಪಾಲಿಗೆ ಬಹಳ ಫಲಪ್ರದ ದಿನವಾಗಿರುವುದು. ಅಬೂಬಕರ್ ಮಝ್ನಿ ಎಂಬ ಮಹಾನುಭಾವರು ಈ ರೀತಿ ಹೇಳಿರುವರು; ” ನಿಮ್ಮ ನಮಾಝ್ ಪ್ರಯೋಜನಾಕಾರಿಯಾಗಬೇಕಾದರೆ, ಇನ್ನು ಬೇರೆ ನಮಾಝ್ ನಿರ್ವಹಿಸಲು ನನಗೆ ಅವಕಾಶ ಸಿಗಲಾರದು. ಎಂದು ಭಾವಿಸಿ ನಮಾಝ್ ಮಾಡಬೇಕು. ನೀನು ಅಂತಿಮವಾಗಿ ಮರಳಿ ಹೋಗುವವನ ನಮಾಝ್ ನಿರ್ವಹಿಸು ಎಂಬ ಪ್ರವಾದಿ ವಚನದ ಸಾರಾಂಶವು ಇದುವೇ ಆಗದೆ.

ಪ್ರವಾದಿ (ಸ.ಅ)ಹೇಳಿದರು; “ಹೆಚ್ಚಿನ ವ್ಯಕ್ತಿಗಳು ನಷ್ಟಪಡಿಸುವ ಎರಡು ಅನುಗ್ರಹಗಳಿವೆ ಆರೋಗ್ಯ ಮತ್ತು ಬಿಡುವು” ಒಮ್ಮೆ ಪ್ರವಾದಿ (ಸ.ಅ)ರು ಒಬ್ಬ ವ್ಯಕ್ತಿಗೆ ಈ ರೀತಿ ಉಪದೇಶಿಸಿದರು.  “ಐದು ವಿಷಯಗಳಿಗಿಂತ ಮುನ್ನ ಐದು ವಿಷಯಗಳನ್ನು ಉಪಯೋಗಿಸಬೇಕು.  ವಾರ್ದಕ್ಯಕ್ಕೆ ಮುನ್ನ ಯೌವನ, ರೋಗಕ್ಕೆ ಮುನ್ನ ಆರೋಗ್ಯ, ದಾರಿದ್ರಕ್ಕೆ ಮುನ್ನ ಐಶ್ವರ್ಯ, ನಿಬಿಡತೆಗೆ ಮುನ್ನ ಬಿಡುವಿನ ಸಮಯ, ಮರಣಕ್ಕೆ ಮುನ್ನ ಜೀವನ.

ಲೇಖಕ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

Check Also

ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಇಸ್ಲಾಂ ಜೀವನದ ಪರಮ ಗುರಿಯನ್ನು ತಝ್ಕಿಯ ಎಂದಿದೆ. ಹೀಗೆ ಜೀವನದ ಸಕಲ ರಂಗ ಪಾವನವಾಗಿರಬೇಕು. ಇದುವೇ ಧರ್ಮದ ಉದ್ದೇಶ ಮತ್ತು …

Leave a Reply

Your email address will not be published. Required fields are marked *