ಸಂದೇಶ ಇ-ಮ್ಯಾಗಝಿನ್: ಹೊಸದಾಗಿ ಮದುವೆಯಾದ ದಂಪತಿಗಳಿಗೆ ಇಬ್ಬರೇ ಎಲ್ಲಾದರೂ ಸುತ್ತಾಡಿ ಬರಬೇಕು ಅನ್ನುವಂತಹ ಆಸೆ ಇದ್ದದ್ದೇ, ದಂಪತಿಗಳು ಕುಟುಂಬದಿಂದ ಸ್ವಲ್ಪ ದಿನ ದೂರವಿದ್ದು ಏಕಾಂತದಲ್ಲಿ ತಮ್ಮ ಜೀವನವನ್ನು ಅತ್ಯುತ್ತಮವಾಗಿ ಎಂಜಾಯ್ ಮಾಡಲು ಬಯಸುತ್ತಾರೆ. ಹೊಸದಾಗಿ ಸಂಸಾರ ಪ್ರಾರಂಭಿಸಿರುವ ದಂಪತಿಗಳು ಒಬ್ಬರನ್ನೊಬ್ಬರು ಅರಿಯಲು ಇದು ಉತ್ತಮವಾದ ಯೋಜನೆಯಾಗಿದೆ. ಇದಕ್ಕಾಗಿ ಹೆಚ್ಚಿನವರು ನಮ್ಮದೇ ದೇಶದಲ್ಲಿರುವ ಗಿರಿಧಾಮ, ನಿಸರ್ಗ ಮುಂತಾದ ಸ್ಥಳವನ್ನು ಆಯ್ಕೆ ಮಾಡಿದರೆ, ಇನ್ನು ಕೆಲವು ಶ್ರೀಮಂತರು ವಿದೇಶಗಳಾದ ಯುರೋಪ್, ಅಮೇರಿಕಾ ಮುಂತಾದ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ.
ಆದರೆ ನಾವು ಮುಸ್ಲಿಮರೆಂಬ ನೆಲೆಯಲ್ಲಿ ನಮ್ಮ ಶರೀಅತ್ತ್ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡಬೇಕಾಗುತ್ತದೆ. ಶರೀಅತ್ತ್ನಲ್ಲಿ ಈ ಹನಿಮೂನ್ ಅನುವದನೀಯವೇ ಅಲ್ಲವೇ ಎಂಬ ವಿದ್ವಾಂಸರ ಮುಂದೆ ಬಂದಿದೆ. ಇದಕ್ಕೆ ಇಸ್ಲಾಮಿನ ಉನ್ನತ ವಿದ್ವಾಂಸರು ಉತ್ತರಿಸಿದ್ದಾರೆ.
ಸೌದಿ ಅರೇಬಿಯಾದ ವಿದ್ವಾಂಸರಾದ ಶೈಖ್ ಸಾಲಿಹ್ ಅಲ್ ಫೌಝಾನ್ ಅವರಲ್ಲಿ ಈ ಬಗ್ಗೆ ಕೇಳಿದಾಗ ಶೈಖ್ ಈ ರೀತಿ ಉತ್ತರಿಸಿದ್ದಾರೆ, “ದಂಪತಿಗಳ ಇಂತಹ ಪ್ರವಾಸದಲ್ಲಿ ಯಾವುದೇ ತಪ್ಪಿಲ್ಲ. ಶರೀಅತ್ ಇದಕ್ಕೆ ಅನುಮತಿ ನೀಡುತ್ತದೆ. ಆದರೆ ಯುವ ದಂಪತಿಗಳು ಇದಕ್ಕಾಗಿ ಕೆಲವು ಅನಿಸ್ಲಾಮಿಕ ದೇಶಗಳನ್ನು ಆಯ್ಕೆ ಮಾಡುತ್ತಾರೆ. ಇದರಲ್ಲಿ ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ಆದೇಶಗಳ ರೀತಿ ರಿವಾಜುಗಳನ್ನು ಪಾಲಿಸಿ, ಅನಿಸ್ಲಾಮಿಕವಾಗಿ ವರ್ತಿಸಿ ಮದ್ಯ ಸೇವಿಸುವುದು, ಅಶ್ಲೀಲ ಪಬ್ ಗಳಿಗೆ ಹೋಗುವುದು, ಅನಿಸ್ಲಾಮ್ ದೇಶಗಳಲ್ಲಿ ಚಾಲ್ತಿಯಲ್ಲಿರುವ ಅಶ್ಲೀಲ ಉಡುಗೆ ತೊಡುಗೆಗಳನ್ನು ಧರಿಸುವುದು ಮುಂತಾದ ಕೃತ್ಯಗಳನ್ನು ಎಸಗುವ ಸಾಧ್ಯತೆಗಳಿವೆ. ಆದುದರಿಂದ ಪತಿ ಪತ್ನಿಯರು ಅಂತಹ ಸ್ಥಳಗಳಿಗೆ ಹೊರಡುವ ಮುಂಚೆ ಅನಿಸ್ಲಾಮಿಕವಾದ ಕಾರ್ಯಗಳನ್ನು ಎಸಗುವುದಿಲ್ಲ ಎಂದು ನಿರ್ಧಾರ ಮಾಡಬೇಕು. ಮತ್ತು ಅದನ್ನು ಪಾಲಿಸಿ ಪ್ರವಾಸ ಮುಗಿಸಿ ಬರುವುದಾದರೆ ಅದರಲ್ಲಿ ತೊಂದರೆ ಏನೂ ಇಲ್ಲ.”