Monday , September 16 2019
Breaking News
Home / ರಮದಾನ್ ವಿಶೇಷಾಂಕ / ಪ್ರವಾದಿಯವರ ಮಾದರಿಯಲ್ಲಿ ಈದ್ ಹಬ್ಬ ಆಚರಿಸುವ ಸಂಪೂರ್ಣ ರೀತಿ ಹೀಗಿದೆ

ಪ್ರವಾದಿಯವರ ಮಾದರಿಯಲ್ಲಿ ಈದ್ ಹಬ್ಬ ಆಚರಿಸುವ ಸಂಪೂರ್ಣ ರೀತಿ ಹೀಗಿದೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರಿಗೆ ಇರುವ ಎರಡೇ ಎರಡು ಹಬ್ಬವಾಗಿದೆ ಈದುಲ್ ಫಿತ್ರ್ ಹಾಗು ಈದುಲ್ ಅದಾ. ರಂಝಾನ್ ತಿಂಗಳು ಪೂರ್ತಿ ಉಪವಾಸ ಆಚರಿಸಿದ ಮುಸ್ಲಿಮರು ಆಚರಿಸುವ ಹಬ್ಬ ಈದುಲ್ ಫಿತ್ರ್ ಆದರೆ ದುಲ್ ಹಜ್ಜ್ ತಿಂಗಳ ಹಜ್ಜ್ ಸಮಯದಲ್ಲಿ ಆಚರಿಸುವ ಹಬ್ಬ ಈದುಲ್ ಅದಾ ಅಥವಾ ಬಕ್ರೀದ್ ಆಗಿದೆ. ಈದ್ ಹಬ್ಬವನ್ನು ಇಂದು ಆಧುನಿಕ ಜಗತ್ತಿನಲ್ಲಿ ಮುಸ್ಲಿಮರು ವಿವಿಧ ಮಾದರಿಯಲ್ಲಿ ಆಚರಿಸುತ್ತಾರೆ. ನಿಷಿದ್ದ ಶರಾಬು ಕುಡಿದು ಆಚರಿಸುವವರೂ ಇದ್ದಾರೆ. ಆದರೆ ಇಸ್ಲಾಮ್ ಈದ್ ಹಬ್ಬವನ್ನು ಆಚರಿಸುವಾಗ ವಿವಿಧ ರೀತಿ ನೀತಿಗಳನ್ನು ಪ್ರವಾದಿ ಮುಹಮ್ಮದ್(ಸ)ರ ಮೂಲಕ ಕಲಿಸಿದೆ. ಇದೇ ಮಾದರಿಯಲ್ಲಿ ಆಚರಿಸಿದರೆ ಮಾತ್ರ್ರ ನಿಮ್ಮ ಈದ್ ಪುಣ್ಯಕರ ವಾಗುತ್ತದೆ ಎಂದು ಇಸ್ಲಾಮ್ ಹೇಳಿದೆ.

1. ರಮದಾನಿನ ಕೊನೆಯ ದಿನದ ಸೂರ್ಯಾಸ್ತವಾದ ನಂತರ (ಅಂದರೆ ಮಗ್ರಿಬ್’ನ ನಂತರ) ಇಮಾಮರು ನಮಾಝ್ ನಿರ್ವಹಿಸಲು ಮುಸಲ್ಲಗೆ ಬರುವ ವರೆಗೆ ತಕ್ಬೀರ್ ಹೇಳುವುದು ಮುಸ್ತಹಬ್ಬ್ (ಪ್ರೋತ್ಸಾಹನೀಯ) ಆಗಿದೆ.

ಗಂಡಸರು ಮಾರುಕಟ್ಟೆಗಳಲ್ಲಿ , ಮಸೀದಿಗಳಲ್ಲಿ ಹಾಗೂ ಮನೆಗಳಲ್ಲಿ ಏರು ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಇರಬೇಕು. ಹೆಂಗಸರು ಮೆಲು ಸ್ವರದಲ್ಲಿ ತಕ್ಬೀರ್ ಹೇಳಬೇಕು.

2. ನಮಾಝ್ ನಿರ್ವಹಿಸಲು ಈದ್ ಗಾಹ್’ಗೆ ಹೊರಡುವ ಮುಂಚೆ ಬೆಸ ಸಂಖ್ಯೆಯಲ್ಲಿ ಖರ್ಜೂರ ತಿನ್ನಬೇಕು.

3. ಗಂಡಸರು ಉತ್ತಮ ವಸ್ತ್ರವನ್ನು ಧರಿಸಬೇಕು. ಆದರೆ ಹೆಂಗಸರಿಗೆ ಸಂಬಂಧಿಸಿದಂತೆ, ಅವರು ಆಕರ್ಷಣೀಯ ವಸ್ತ್ರವನ್ನು ಧರಿಸಿ ಈದ್ ಗಾಹ್’ಗೆ ಹೊರಡುವುದು ಅನುವದನೀಯವಲ್ಲ. ಏಕೆಂದರೆ, ಪ್ರವಾದಿ(ಸ) ಹೇಳಿದ್ದಾರೆ; ಹೆಂಗಸರು ಹೊರಗಡೆ ಹೋಗುವಾಗ ಸಭ್ಯ ವಸ್ತ್ರವನ್ನು ಧರಿಸಲಿ. ಹೆಂಗಸರ ವಸ್ತ್ರವು ಸಾಮಾನ್ಯ ಧಾರ್ಮಿಕ ವಸ್ತ್ರವಾಗಿರಬೇಕು. ಅಲಂಕಾರಿಕವಾಗಿರಬಾರದು. ಹೆಂಗಸರು ಸುಗಂಧ ಹಚ್ಚಿ ಮೇಕಪ್ ಮಾಡಿ ಹೊರಗಡೆ ಹೋಗುವುದು ಹರಾಂ ಆಗಿದೆ.

4. ಕೆಲವು ವಿದ್ವಾಂಸರು ಈದ್’ನ ದಿನ ಸ್ನಾನ ಮಾಡುವುದು ಮುಸ್ತಹಬ್ಬ್ ಎಂದಿದ್ದಾರೆ.

5. ಈದ್ ನಮಾಝ್ ನಿರ್ವಹಿಸುವುದು. ಕೆಲವು ವಿದ್ವಾಂಸರು ಇದನ್ನು ಸುನ್ನತ್ ಎಂದಿದ್ದಾರೆ. ಕೆಲವರು ‘ಫರ್ದ್ ಕಫಾಯ'(ಸಾಮುದಾಯಿಕ ಭಾದ್ಯತೆ) ಎಂದಿದ್ದಾರೆ. ಇನ್ನು ಕೆಲವರು ‘ಫರ್ದ್ ಅಯಿನ್'(ವೈಯುಕ್ತಿಕ ಭಾದ್ಯತೆ) ಎಂದಿದ್ದಾರೆ.

ಈ ನಮಾಝಿನಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿದೆ (ವಿನಾಯಿತಿ ಇರುವವರ ಹೊರತು). ಉಮ್ಮು ಅತಿಯ್ಯ (ರ) ವರದಿ ಮಾಡಿರುವ ಒಂದು ಹದೀಸಿನಲ್ಲಿ ಈ ರೀತಿ ಇದೆ. ಈದ್’ನ ದಿನ ಪ್ರೌಢ ಬಾಲಕಿಯರನ್ನು ಹಾಗೂ ಅವಿವಾಹಿತ ಸ್ತ್ರೀಯರನ್ನು (ಅಂದರೆ ಸಾಮಾನ್ಯವಾಗಿ ಹೊರಗಡೆ ಹೋಗದಂತಹವರು) ನಮ್ಮೊಡನೆ ನಮಾಝಿಗೆ ಕರೆದು ಕೊಂಡು ಬರಲು ಆದೇಶಿಸಿದರು. ಅವರಲ್ಲಿ ಋತು ಸ್ರಾವವಿರುವ ಸ್ತ್ರೀಯರು ನಿಮ್ಮ ನಮಾಝಿನ ಮುಸಲ್ಲಗಳಿಂದ ದೂರ ಉಳಿಯಲಿ ಎಂದು ಆದೇಶಿಸಿದರು. [ಸಹೀಹ್ ಅಲ್ ಬುಖಾರಿ – 974]

ಋತುಸ್ರಾವವಿರುವವರು ಮಸೀದಿ ಪ್ರವೇಶಿಸುವುದು ಅನುವದನೀಯವಲ್ಲ. ಆದರೆ ಖುತ್ಬಾ ಕೇಳಲು ಹಾಗೂ ಜನರನ್ನು ಭೇಟಿಯಾಗುವ ಉದ್ದೇಶದಿಂದ ಅಂತಹ ಸ್ತ್ರೀಯರು ಹೊರಗಡೆಯಿಂದ ಭಾಗವಹಿಸುವುದು ಒಳ್ಳೆಯ ಕಾರ್ಯವಾಗಿದೆ.

6. ಈದ್ ನಮಾಝಿನ ಮುಂಚೆ ಅಥವಾ ನಂತರ ಯಾವುದೇ ಸುನ್ನತ್ ನಮಾಝ್ ಇಲ್ಲ. ಒಂದು ವೇಳೆ ಮಳೆಯ ಕಾರಣ ಈದ್ ಗಾಹ್’ನ ಬದಲಿಯಾಗಿ ಮಸೀದಿಯಲ್ಲಿ ನಮಾಝ್ ನಿರ್ವಹಿಸುವ ಪರಿಸ್ಥಿತಿ ಒದಗಿ ಬಂದ ಸಂದರ್ಭದಲ್ಲಿ ಮಸೀದಿಗೆ ಪ್ರವೇಶಿಸಿದ ನಂತರ ಕುಳಿತು ಕೊಳ್ಳುವ ಮೊದಲು ಮಸೀದಿಯ ತಹ್ಯಿಯ್ಯತ್ತ್ ನಮಾಝ್ ನಿರ್ವಹಿಸಬೇಕಾಗಿದೆ.

7. ಈದ್ ನಮಾಝಿಗೆ ತೆರಳುವ ಮುಂಚಿತವಾಗಿ ಫಿತ್ರ್ ಝಕಾತ್ ಕೊಟ್ಟು ಮುಗಿಸಬೇಕು. ಈದ್ ಗಿಂತ ಎರಡು ದಿವಸ ಮುಂಚೆ ಇದನ್ನು ಕೊಡಲು ಅನುಮತಿ ಇದೆ. ಫಿತ್ರ್ ಝಕಾತನ್ನು ಈದ್ ನಮಾಝಿನ ನಂತರದವರೆಗೂ ವಿಳಂಬ ಮಾಡುವುದು ಹರಾಂ ಆಗಿದೆ. ನಂತರ ನೀಡುವುದು ಸಾಮಾನ್ಯ ದಾನದಲ್ಲಿ ಪರಿಗಣಿಸಲ್ಪಡುತ್ತದೆಯಷ್ಟೆ.

8. ಜನರು ಒಬ್ಬರಿಗೊಬ್ಬರು ಈದ್ ಶುಭಾಶಯ ಕೋರಬೇಕು. ಆದರೆ ಈ ಶುಭಾಶಯ ನಿಷಿದ್ಧ ಮಾರ್ಗದಲ್ಲಾದರೆ ಅದು ಶೈತಾನನ ಕ್ರಿಯೆ ಆಗಿದೆ. ಅಂದರೆ ಮಹ್ರಮ್ ಅಲ್ಲದ ಸ್ತ್ರೀಯರು ಅಥವಾ ಹಿಜಾಬ್ ಮಾಡಿರದಂತಹ ಸ್ತ್ರೀಯರಿರುವ ಮನೆಗಳಿಗೆ ಗಂಡಸರು ಪ್ರವೇಶಿಸುವುದು, ಕೈಕುಲುಕುವುದು ಮುಂತಾದವು.

ಕೆಲವು ಜನರು ಕಬರ್ ನಿವಾಸಿಗಳಿಗೆ ಶುಭಾಶಯ ಕೋರಲು ಕಬರಸ್ಥಾನಗಳಿಗೆ ಹೊರಡುತ್ತಾರೆ. ಆದರೆ ಇವರ ಈದ್ ಶುಭಾಶಯದ ಯಾವುದೇ ಅವಶ್ಯಕತೆ ಕಬರ್ ನಿವಾಸಿಗಳಿಗೆ ಇಲ್ಲ. ಯಾಕೆಂದರೆ ಅವರು ಉಪವಾಸ ಹಿಡಿದಿಲ್ಲ ಹಾಗೂ ಕಿಯಾಮ್(ನಮಾಝ್) ಕೂಡ ನಿರ್ವಹಿಸಿಲ್ಲ.

ಕಬರಸ್ಥಾನಗಳಿಗೆ ಈದ್, ಜುಮಾ ಈ ರೀತಿ ಪ್ರತ್ಯೇಕವಾದ ದಿನವೇ ಸಂದರ್ಶನ(ಝಿಯಾರತ್) ಮಾಡಬೇಕೆಂದು ನಿಯಮವೇನೂ ಇಲ್ಲ. ಪ್ರವಾದಿ(ಸ) ರಿಂದ ವರದಿಯಾದಂತೆ ಪ್ರವಾದಿ(ಸ) ಯವರು ರಾತ್ರಿ ಕೂಡ ಕಬರ್ ಸಂದರ್ಶನ ಮಾಡುತ್ತಿದ್ದರು. ಆಯಿಶಾ(ರ) ರವರು ವರದಿ ಮಾಡಿದ ಮುಸ್ಲಿಮ್ ಹದೀಸಿನಲ್ಲಿ ಪ್ರವಾದಿ(ಸ) ಹೇಳಿದರು; “ನಿಮ್ಮ ಪರಲೋಕವನ್ನು ನೆನಪಿಸಲು ಕಬರ್ ಸಂದರ್ಶನ ಮಾಡಿರಿ.” ಪ್ರವಾದಿ(ಸ) ರವರು ತಮ್ಮ ಜೀವನದಲ್ಲಿ ಆಚರಿಸಿದ ಈದ್’ಗಳಲ್ಲಿ ಒಂದೇ ಒಂದು ಈದ್’ನ ದಿನವೂ ಕೂಡ ಕಬರ್ ಸಂದರ್ಶನಕ್ಕೆ ತೆರಳಿರುವುದಾಗಿ ವರದಿಯಾಗಿಲ್ಲ.

9. ಗಂಡಸರು ಈದ್’ನ ದಿನ ಒಬ್ಬರನ್ನೊಬ್ಬರು ಆಲಂಗಿಸುವುದರಲ್ಲಿ ಯಾವುದೇ ತಪ್ಪಿಲ್ಲ.

10. ಈದ್’ನ ದಿನ ಈದ್ ನಮಾಝ್’ಗೆ ಒಂದು ದಾರಿಯಾಗಿ ತೆರಳಿ ಹಿಂದಿರುಗುವಾಗ ಇನ್ನೊಂದು ದಾರಿಯ ಮುಖಾಂತರ ಬರುವುದು ಪ್ರವಾದಿ ಚರ್ಯೆಯಾಗಿದೆ. ಈ ಸುನ್ನತ್ ಈದ್ ನಮಾಝ್’ಗೆ ಮಾತ್ರ ಅನ್ವಯವಾಗುವ ಬೇರೆ ಯಾವುದೇ ನಮಾಝ್’ಗೂ ಇಲ್ಲದ ಪ್ರತ್ಯೇಕ ಸುನ್ನತ್ ಆಗಿದೆ.

ಲೇಖನ: ನೌಫಲ್ ದೇರಳಕಟ್ಟೆ

Check Also

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

001ಸಂದೇಶ ಇ-ಮ್ಯಾಗಝಿನ್: ಮಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾ ಅವರು ಉಮ್ರಾ ಎಂದು ಕರೆಯಲ್ಪಡುವ ಮುಸ್ಲಿಮರ ಚಿಕ್ಕ ಮಕ್ಕಾ …

Leave a Reply

Your email address will not be published. Required fields are marked *