ಸಂದೇಶ ಇ-ಮ್ಯಾಗಝಿನ್: ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈವ ಸಲ್ಲಮ್ ಅವರು ಕಲ್ಲಂಗಡಿ ಹಣ್ಣನ್ನು ಕಳಿತ(ಹಣ್ಣಾದ) ಖರ್ಜೂರದೊಂದಿಗೆ ಸೇವಿಸುತ್ತಿದ್ದರು. ಖರ್ಜೂರ ಉಷ್ಣ ಆಹಾರವಾಗಿದ್ದು, ಕಲ್ಲಂಗಡಿ ಹಣ್ಣು ಶೀತ ಆಹಾರವಾಗಿದೆ. ಖರ್ಜೂರದ ಉಷ್ಣತೆಯನ್ನು ಕಲ್ಲಂಗಡಿಯ ಶೀತತೆಯು ತಟಸ್ಥಗೊಳಿಸುತ್ತದೆ ಎಂದು ಪ್ರವಾದಿಯವರು ಹೇಳಿದ್ದಾರೆ ಎಂದು ಅಬೂ ದಾವೂದ್, ತಿರ್ಮಿದಿ ಗ್ರಂಥಗಳಲ್ಲಿ ವರದಿಯಾದ ಹದೀಸ್ಗಳಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ ಇನ್ನೂ ಹಲವು ಪ್ರವಾದಿ ವಚನಗಳಲ್ಲಿ ಕಲ್ಲಂಗಡಿ ಹಣ್ಣಿನ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಮೇಲೆ ತಿಳಿಸಿದ ಹದೀಸಿನ ಹೊರತು ಇತರ ಯಾವುದೇ ಹದೀಸ್ಗಳೂ ಕೂಡ ಅಧಿಕೃತ ಪರಂಪರೆಯಲ್ಲಿ ವರದಿಯಾಗಿಲ್ಲ.
ಹಸಿರು ಕಲ್ಲಂಗಡಿ ಹಣ್ಣು ಶೀತ, ತೇವ ಮತ್ತು ಸಿಹಿಯಾಗಿರುತ್ತದೆ. ಇದು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ. ಉಷ್ಣ ಹವಾಮಾನ ಹೊಂದಿರುವ ಸಮಯದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಬಹಳ ಪ್ರಯೋಜನಕಾರಿ. ಇದು ಸೌತೆ(ಕುಕುಂಬುರ್)ಗಿಂತ ವೇಗವಾಗಿ ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ. ಆದರೆ ಇದು ತುಂಬಾ ಶೀತತೆಯಿಂದ ಕೂಡಿರುವಂತಹ ಒಂದು ಹಣ್ಣು ಆದರಿಂದ ಇದನ್ನು ತಿನ್ನುವಾಗ ಕೆಲವರು ಶುಂಠಿಯನ್ನು ಬಳಸುತ್ತಾರೆ. ಕಲ್ಲಂಗಡಿ ಹಣ್ಣಿನ ಶೀತತೆಯನ್ನು ಸರಿದೂಗಿಸಲು ಇದು ಸಹಾಯಕವಾಗುತ್ತದೆ. ಅಥವಾ ಪ್ರವಾದಿ ಮುಹಮ್ಮದ್(ಸ)ರವರು ಕಲಿಸಿದಂತೆ ಖರ್ಜೂರದೊಂದಿಗೂ ಇದನ್ನು ಸೇವಿಸಬಹುದು.
ಆದರೆ ಕಲ್ಲಂಗಡಿಯನ್ನು ಊಟಕ್ಕಿಂತ ಮೊದಲು ಸೇವಿಸಬೇಕು. ಇಲ್ಲದಿದ್ದಲ್ಲಿ ಇದು ವಾಕರಿಕೆಗೆ ಕಾರಣವಾಗುವ ಸಾಧ್ಯತೆ ಇದೆ. ಕೆಲವು ವೈದ್ಯರು ಕಲ್ಲಂಗಡಿಯನ್ನು ಊಟಕ್ಕಿಂತ ಮೊದಲು ಸೇವಿಸುವಂತೆ ಸಲಹೆ ನೀಡುತ್ತಾರೆ. ಇದು ಹೊಟ್ಟೆಯನ್ನು ಶುದ್ಧೀಕರಿಸಿ ಹೊಟ್ಟೆಯಲ್ಲಿರುವ ಅಸ್ವಸ್ಥತೆಗಳನ್ನು ಹೊರಹಾಕುತ್ತದೆ.