Friday , April 3 2020
Breaking News
Home / ಇಸ್ಲಾಮಿಕ್ ಲೇಖನಗಳು / ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ ಬೀವಿ(ರ.ಅ). ದಿನನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ನಮಾಝ್ ನಿರ್ವಹಿಸಿ ಕುರಾನ್ ಪಾರಾಯಣ ಮಾಡಿದ ತರುವಾಯ ಪತಿ ಅಲಿ(ರ.ಅ) ಹಾಗು ಎಳೆಯ ಮಕ್ಕಳಾದ ಹಸನ್ ಹುಸೈನ್ ರವರಿಗೆ ತಿಂಡಿ ಮಾಡಿ ಬಳಸಿದ ನಂತರ ಬಿಸಿ ನೀರು ಕಾಯಿಸಿ ಮಕ್ಕಳನ್ನು ಸ್ನಾನ ಮಾಡಿಸುವುದು ವಾಡಿಕೆಯಾಗಿತ್ತು.

ಪ್ರತಿ ದಿನದಂತೆ ಆ ದಿನ ಮುಂಜಾನೆ ಹಝ್ರತ್ ಅಲಿ(ರ.ಅ) ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಮನೆಗೆ ಬಂದು ನೋಡಿದಾಗ ಫಾತಿಮಾ(ರ.ಅ) ಎಂದಿನಂತೆ ತಿಂಡಿ ತಯಾರಿಸಿ ಮಕ್ಕಳನ್ನು ಸ್ನಾನಮಾಡಿಸಲು ಬಿಸಿನೀರು ಕಾಯಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಇದನ್ನು ಗಮನಿಸಿದ ಅಲಿ(ರ.ಅ) ಫಾತಿಮಾರವರಲ್ಲಿ ಅಳುತ್ತಿರುವ ಕಾರಣವನ್ನು ಕೇಳುತ್ತಾರೆ. ಎಷ್ಟು ಕೇಳಿದರೂ ಫಾತಿಮಾ(ರ.ಅ) ರವರು ಕಾರಣ ಹೇಳದೆ ಅಳುವುದನ್ನು ಮುಂದುವರಿಸುತ್ತಾರೆ. ಕೊನೆಯದಾಗಿ ಅಲಿ(ರ.ಅ)ರವರು ಆಣೆಹಾಕಿ ಕಾರಣ ಕೇಳಿದಾಗ ಫಾತಿಮಾರವರು ಹೇಳುತ್ತಾರೆ..ನನ್ನ ಪ್ರಿಯ ಅಲಿಯವರೇ “ನಿನ್ನೆ ರಾತ್ರಿ ನನ್ನ ತಂದೆಯವರಾದ ಮುಹಮ್ಮದ್(ಸ.ಅ) ರವರನ್ನು ನಾನು ಕನಸಿನಲ್ಲಿ ಕಂಡೆ ಮತ್ತು ತಂದೆಯವರು ಅಲ್ಲಿ ಯಾರನ್ನೋ ಹುಡುಕುತ್ತಿದ್ದರು. ಆಗ ನಾನು ತಂದೆಯವರಲ್ಲಿ ನೀವು ಯಾರನ್ನು ಹುಡುಕುತ್ತಿದ್ದೀರಿ ಅಪ್ಪಾ ಎಂದು ಅವರನ್ನು ಪ್ರಶ್ನಿಸಿದೆ. ಆಗ ನನ್ನ ತಂದೆಯವರು ಹೇಳಿದರು ಫಾತಿಮಾ ನಾನು ನಿನ್ನನ್ನೇ ಹುಡುಕುತ್ತಿದ್ದೇನೆ. ನೀನು ನನ್ನ ಬಳಿ ಬರುವ ಸಮಯವಾಗಿದೆ ಎಂದರು”. ಆದುದರಿಂದ ಅಲಿಯವರೇ ನಾನು ನಿಮ್ಮನ್ನು ಅಗಲಬೇಕಾದ ಸಮಯ ಸಮೀಪಿಸುತ್ತಿದೆ. ನಾನು ನನ್ನ ಪ್ರೀತಿಯ ಪತಿ ಹಾಗು ಎಳೆಯ ಮಕ್ಕಳನ್ನು ಬಿಟ್ಟು ಹೋಗಬೇಕಲ್ಲಾ ಎಂಬ ದುಖವು ನನ್ನನ್ನು ಕಾಡುತ್ತಿದೆ ಅಲಿಯವರೇ ಅದಕ್ಕಾಗಿ ನಾನು ಅಳುತ್ತಿದ್ದೇನೆ”.

ಸಾಂದರ್ಭಿಕ ಚಿತ್ರ

ಇದನ್ನು ಕೇಳಿದ ಅಲಿ(ರ.ಅ) ಚಿಂತಾಕ್ರಾಂತರಾಗಿ ರೋದಿಸುತ್ತಾ ಫಾತಿಮಾರವರನ್ನು ಆಲಿಂಗಿಸಿ “ಯಾ ಫಾತಿಮಾ ನನ್ನ ಪ್ರೀತಿಯ ಲೋಕಪ್ರವಾದಿ ಹಾಗು ನಿನ್ನ ಪಿತರಾದ ಮುಹಮ್ಮದ್ ನಬಿ(ಸ.ಅ)ರವರು ವಫಾತಾಗಿ ಕೇವಲ ಆರು ತಿಂಗಳು ಕೂಡ ಕಳೆಯಲಿಲ್ಲ. ಅವರ ಆ ಮರಣದ ದುಖವು ಇನ್ನೂ ನನ್ನಿಂದ ಮರೆಯಾಗಿಲ್ಲ. ಇದೀಗಲೇ ನೀನು ಕೂಡ ನನ್ನ ಬಿಟ್ಟು ಹೋದರೆ ನಾನು ಹೇಗೆ ಸಹಿಸಿಕೊಳ್ಳಲಿ ಫಾತಿಮಾ” ಎಂದು ಅಳ ತೊಡಗಿದರು. ಮಾತ್ರವಲ್ಲಾ ಈ ಮರಣ ವೇದನೆಯ ವೇಳೆಯಲ್ಲೂ ನೀನು ಯಾತಕ್ಕಾಗಿ ಅಡುಗೆ ತಯಾರಿಸಿ ಬಿಸಿನೀರು ಕಾಯಿಸುತ್ತಿರುವೆ ಫಾತಿಮಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಫಾತಿಮಾ(ರ.ಅ) ಮರಣ ವೇದನೆಯ ನೋವಿನೊಂದಿಗೆ ಹೇಳುತ್ತಾರೆ; “ನನ್ನ ಅಲಿಯವರೇ ನಾನು ಇನ್ನು ಸ್ವಲ್ಪ ಹೊತ್ತಿನಲ್ಲೇ ಅಲ್ಲಾಹನ ಬಳಿ ಹೋಗುವವಳಿದ್ದೇನೆ. ನಾನು ಹೋದ ಮೇಲೆ ನೀವು ಮತ್ತು ಮಕ್ಕಳಾದ ಹಸನ್ ಹುಸೈನ್ ಯಾರೊಂದಿಗೂ ಆಹಾರಕ್ಕಾಗಿ ಕೈಯೊಡ್ಡಬಾರದು ಯಾಕೆಂದರೆ ಅಲ್ಲಾಹು ನನ್ನಲ್ಲಿ ಈ ಕುರಿತು ಪ್ರಶ್ನಿಸದಿರಲಾರನು. ಅದಕ್ಕಾಗಿ ನಾನು ನಿಮಗೆ ಅಹಾರ ತಯಾರಿಸಿಟ್ಟಿದ್ದೇನೆ ಮಾತ್ರವಲ್ಲ ಅಲಿಯವರೇ ನನ್ನಿಂದಾಗಿ ನಿಮಗೆ ಅನೇಕ ಕಷ್ಟಗಳನ್ನು ಸಹಿಸಬೇಕಾಗಿ ಬಂದಿರಬಹುದು ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಅಲಿಯವರೇ ಎಂದು ಫಾತಿಮಾ(ರ.ಅ) ರವರು ಹೇಳಿದಾಗ ಕಣ್ಣೀರಿನಲ್ಲಿ ಮುಳುಗಿದ ಅಲಿಯವರು ಹೇಳುತ್ತಾರೆ “ಫಾತಿಮಾ ಲೋಕ ಪ್ರವಾದಿಯಾದ ಮುಹಮ್ಮದ್ ಮುಸ್ತಫಾ (ಸ.ಅ)ರ ಪ್ರೀತಿಯ ಮಗಳಾದ ನಿನಗೆ ಸರಿಯಾಗಿ ಎರಡು ಹೊತ್ತು ಊಟ ನೀಡಲು ನನ್ನಿಂದ ಸಾದ್ಯವಾಗಿಲ್ಲ ಆದುದರಿಂದ ನನ್ನನ್ನು ನೀನು ಕ್ಷಮಿಸು ಫಾತಿಮಾ ಎಂದು ಪತ್ನಿಯಲ್ಲಿ ಹೇಳುತ್ತಾರೆ. ನಂತರ ಅಲಿಯವರನ್ನು ಹತ್ತಿರ ಕರೆದು ಅವರ ಕಿವಿಯಲ್ಲಿ ವಸಿಯ್ಯತ್(ಅಂತಿಮ ಇಚ್ಚೆ) ಹೇಳುತ್ತಾರೆ.. “ಅಲಿಯವರೇ ನನ್ನ ಮರಣಾನಂತರ ನೀವು ಬೇರೆ ಮದುವೆಯಾಗಿ ಆದರೆ ಯಾವಾಗಳಾದರೊಂದು ರಾತ್ರಿ ನಮ್ಮ ಮಕ್ಕಳಾದ ಹಸನ್ ಹುಸೈನ್ ಜೊತೆಯಲ್ಲಿ ನಿದ್ರಿಸಬೇಕು ಯಾಕೆಂದರೆ ಇನ್ನೂ ಎಳೆಯ ಮಕ್ಕಳಾದ ಅವರ ಮನಸ್ಸಿನಲ್ಲಿ ನನ್ನ ಅಗಲಿಕೆಯ ಕೊರತೆ ದುಖವನ್ನು ಉಂಟುಮಾಡಬಾರದು.

ಎರಡನೆಯದಾಗಿ ಹೇಳುತ್ತಾರೆ ಅಲಿಯವರೇ ನಾನು ಮರಣಹೊಂದಿದ ವಿಷಯವನ್ನು ಯಾರಿಗೂ ಹೇಳಬಾರದು. ಒಂದು ವೇಳೆ ನಾನು ಮರಣಹೊಂದಿದ ಸುದ್ದಿ ತಿಳಿದಲ್ಲಿ ನೆಬಿಯವರ ಮಗಳು ಹಾಗು ಅಲಿಯವರ ಪತ್ನಿ ವಫಾತಾದರು ಎಂಬ ವಿಷಯ ತಿಳಿದು ಮುಹಾಜಿರಿಗಳು ಅನ್ಸಾರಿಗಳು ಹಾಗು ಇತರರು ನನ್ನ ಮಯ್ಯತ್ ನೋಡಲು ಬರಬಹುದು. ಜೀವಿತಕಾಲದಲ್ಲಿ ನನ್ನ ಮುಖವನ್ನು ಒಂದೇ ಒಂದು ಅನ್ಯಪುರುಷನೂ ನೋಡಿಲ್ಲ. ಆದುದರಿಂದ ನನ್ನ ಮರಣಾನಂತರವೂ ನನ್ನ ಮುಖವನ್ನು ಅನ್ಯಪುರುಷರು ನೋಡುವುದು ನನಗಿಷ್ಟವಿಲ್ಲ. ಆದುದರಿಂದ ನೀವು ಈ ವಿಷಯವನ್ನು ಪ್ರಚರಿಸಬೇಡಿರಿ. ಮಾತ್ರವಲ್ಲ ನನ್ನ ಮಯ್ಯತ್ ಸ್ನಾನ ಹಾಗು ಪರಿಪಾಲನೆಯನ್ನು ನೀವು ಹಾಗು ನನ್ನಿಬ್ಬರು ಮಕ್ಕಳಲ್ಲದೆ ಮೂರನೆಯವರಲ್ಲಿ ಮಾಡಿಸಬೇಡಿ ಕೊನೆಯದಾಗಿ ನನ್ನ ಮಯ್ಯತ್ ದಫನ ಕಾರ್ಯವನ್ನು ರಾತ್ರಿ ಹೊತ್ತು ಮಾಡಿರಿ ಯಾಕೆಂದರೆ ರಾತ್ರಿ ಹೊತ್ತು ಕಫನ್ ಬಟ್ಟೆಯೊಳಗಿನ ನನ್ನ ಶರೀರದ ಆಕಾರವು ಯಾರಿಗೂ ಕಾಣಬಾರದು…ಇದಾಗಿತ್ತು ಫಾತಿಮಾ(ರ.ಅ)ರವರ ಕೊನೆಯ ವಸಿಯ್ಯತ್.

ಸಹೋದರಿಯರೇ ಫಾತಿಮಾ(ರ.ಅ)ರವರ ಕೊನೆಯ ನಿಮಿಷದ ಮಾತುಗಳಲ್ಲಿ ನಾವು ಬಹಳಷ್ಟು ಕಲಿಯುವುದಿದೆ. ಮೊದಲನೆಯದಾಗಿ ಮರಣದ ವೇಳೆಯಲ್ಲೂ ತನ್ನ ಪತಿ ಹಾಗೂ ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆಂದರೆ ಸಹಿಸಲಸಾದ್ಯ ಮರಣ ವೇದನೆಯ ವೇಳೆಯಲ್ಲೂ ಪತಿ ಹಾಗೂ ಮಕ್ಕಳಿಗಾಗಿ ಅಡುಗೆಗಾಗಿ ಸಿದ್ದತೆಗಳನನ್ನು ನಡೆಸಿದ್ದರು. ಇದು ಫಾತಿಮಾ(ರ.ಅ) ರವರ ಕರ್ತವ್ಯ ನಿಷ್ಠೆಯನ್ನು ಹಾಗೂ ತ್ಯಾಗವನ್ನು ಎತ್ತಿ ತೋರಿಸುತ್ತದೆ. ಎರಡನೆಯದಾಗಿ ಅಲಿ(ರ.ಅ) ಅಷ್ಟು ಕಷ್ಟದಲ್ಲಿದ್ದೂ ಎರಡು ಹೊತ್ತಿನ ಊಟ ಮಾಡದೆ ಫಾತಿಮಾ ನಿರಹಾರರಾಗಿ ಕಳೆದ ಅದೆಷ್ಟೋ ದಿನಗಳನ್ನು ತನ್ನ ಕುಟುಂಬದವರ ಬಳಿಯಾಗಲಿ ಅಥವಾ ಇನ್ನಿತರರ ಬಳಿಯಾಗಲೀ ಹೇಳಿಕೊಳ್ಳಲಿಲ್ಲ. ಇದು ಫಾತಿಮಾ(ರ.ಅ) ಸಹನೆ ಹಾಗೂ ಗೌಪ್ಯತೆಯನ್ನು ಎತ್ತಿ ತೋರಿಸುತ್ತದೆ. ಮೂರನೆಯದಾಗಿ ತಾನು ಮರಣಹೊಂದಿದ ವಿಷಯವನ್ನು ಯಾರಿಗೂ ತಿಳಿಸಬಾರದು ಹಾಗು ತನ್ನನ್ನು ರಾತ್ರಿ ಹೊತ್ತು ದಫನ ಮಾಡಬೇಕೆಂಬ ಬಯಕೆ ಅಲ್ಲಾಹನ ಕುರಿತ ಭಯ ಭಕ್ತಿಯನ್ನು ಹಾಗು ಓರ್ವ ಹೆಣ್ಣಿಗೆ ಇರಬೇಕಾದ ಲಜ್ಜೆಯನ್ನು ಎತ್ತಿ ತೋರಿಸುತ್ತದೆ.

ಸಾಂದರ್ಭಿಕ ಚಿತ್ರ

ಒಟ್ಟಿನಲ್ಲಿ ಹೇಳುವುದಾದರೆ ಫಾತಿಮ(ರ.ಅ)ರವರ ಜೀವನದ ಪ್ರತೀ ಕ್ಷಣಕ್ಷಣವು ಪ್ರತಿಯೊಬ್ಬ ಮಹಿಳೆ ಮಗಳಾಗಿ ಪತ್ನಿಯಾಗಿ ತಾಯಿಯಾಗಿ ಹೇಗೆ ಬದುಕಬೇಕೆಂಬ ಪಾಠವನ್ನು ಕಲಿಸುವುದರ ಜೊತೆಗೆ ಅವರ ಅಂತಿಮ ನಿಮಿಷಗಳೂ ಕೂಡ ಮಹಿಳೆಯರಿಗಿರಬೇಕಾದ ಗೌಪ್ಯತೆ ಸಹನೆ ಕರ್ತವ್ಯನಿಷ್ಠೆ ತ್ಯಾಗ ಹಾಗೂ ಅಲ್ಲಾಹನ ಮೇಲಿರಬೇಕಾದ ಭಯಭಕ್ತಿಯನ್ನು ಎತ್ತಿ ತೋರಿಸುತ್ತದೆ. ಬದುಕಿನುದ್ದಕ್ಕೂ ಸ್ತ್ರೀಯರಿಗೆ ಮಾದರಿಯಾಗಿ ಬದುಕಿದ ಫಾತಿಮಾ(ರ.ಅ) ಮರಣದಲ್ಲೂ ಪ್ರಪಂಚದ ಎಲ್ಲಾ ಸ್ತ್ರೀಯರಿಗೂ ಮಾದರಿಯಾಗಿದ್ದಾರೆ.

-ಎಸ್.ಎ.ರಹಿಮಾನ್ ಮಿತ್ತೂರು

Check Also

ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಇಸ್ಲಾಂ ಜೀವನದ ಪರಮ ಗುರಿಯನ್ನು ತಝ್ಕಿಯ ಎಂದಿದೆ. ಹೀಗೆ ಜೀವನದ ಸಕಲ ರಂಗ ಪಾವನವಾಗಿರಬೇಕು. ಇದುವೇ ಧರ್ಮದ ಉದ್ದೇಶ ಮತ್ತು …

Leave a Reply

Your email address will not be published. Required fields are marked *