Friday , April 3 2020
Breaking News
Home / ಲೇಖನ / ಭಿಕ್ಷುಕರು ಮತ್ತು ಮುಸ್ಲಿಮ್ ಸಮುದಾಯ-ಕಣ್ಣು ತೆರೆಸುವ ಲೇಖನ

ಭಿಕ್ಷುಕರು ಮತ್ತು ಮುಸ್ಲಿಮ್ ಸಮುದಾಯ-ಕಣ್ಣು ತೆರೆಸುವ ಲೇಖನ

ಕಟ್ಟಿಗೆ ಕಡಿದು ಮಾರಿಯಾದರೂ  ಸ್ವಾಭಿಮಾನದಿಂದ ಬದುಕ ಬೇಕೆಂದು ಯಾವ ಧರ್ಮ ಕಲಿಸಿ ಕೊಟ್ಟಿತೋ ಮತ್ತು ಯಾವ ಧರ್ಮ ಬೇಡುವುದನ್ನು ನಿರುತ್ಸಾಹ ಪಡಿಸಿತೋ ಅದೇ ಧರ್ಮದಲ್ಲಿಂದು ಅತ್ಯಧಿಕ ಬೇಡುವವರಿದ್ದಾರೆ. ಅವರಲ್ಲಿ ಮೂಲಭೂತ ಅಗತ್ಯಕ್ಕಿಂತಲೂ ಮಿಗಿಲಾಗಿ ಯಾಚುವುದನ್ನೇ ದೈನಂದಿನ ಬದುಕನ್ನಾಗಿಸಿ ಕೊಂಡವರೇ ಅಧಿಕ. ಈ ಮಾಫಿಯಾದಲ್ಲಿ, ಸ್ತ್ರೀ-ಪುರುಷರ ಮಧ್ಯೆ ಪೈಪೋಟಿ ನಡೆಯುವಂತಿದೆ. ಅದೇ ಅಂಗಲಾಚುವ ಮಹಿಳೆಯರೊಡನೆ, ಮನೆ ಕೆಲಸಕ್ಕೆ ನಿಲ್ಲುವಿರಾ, ಸ್ವಾಭಿಮಾನದಿಂದ ಬದುಕಬಹುದಲ್ಲವೇ ಎಂದು ವಿಚಾರಿಸಿದರೆ, ನೆಪಗಳನ್ನು ಮುಂದಿಟ್ಟು ನುಣುಚಿಕೊಳ್ಳುತ್ತಾರೆ. ಅಂದರೆ ಭಿಕ್ಷಾಟನೆ ಒಳ್ಳೆಯ ಆದಾಯವಿರುವ ಒಂದು ಕಲೆ.

ಆದ್ದರಿಂದ ಅಲ್ಲೊಂದು ಕಡೆ – ಇಲ್ಲೊಂದು ಕಡೆ ವಿಳಾಸ ಬದಲಿಸಿ, ಕಣ್ಣೀರು ಸುರಿಸಿ ಅನುಕಂಪಗಿಟ್ಟಿಸಿ ಕೊಳ್ಳುವವರ ಬಗ್ಗೆ ಸಮಾಜ ನಿಗಾ ವಹಿಸಬೇಕು. ಅವರು ಯಾವ ಊರಿನಿಂದ ಬಂದಿದ್ದಾರೋ, ಅಲ್ಲಿನ ಜಮಾಅತ್ ಕಮಿಟಿ ಅಥವಾ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ನಿಜಾಂಶವನ್ನು ಅರಿತ ಬಳಿಕವೇ ಸಹಾಯವನ್ನು ಒದಗಿಸಬೇಕು. “ನಮಗ್ಯಾಕಪ್ಪ ಅಷ್ಟೆಲ್ಲಾ ಉಸಾಬರಿ, ಇದ್ದರೆ ಕೊಡುವುದು ಇಲ್ಲಾಂದ್ರೆ ಸುಮ್ನಿರುವುದು” ಎಂಬ ಹಾರಿಕೆಯ ಉತ್ತರ ನೀಡಿ, ನೇರವಾಗಿ ಅವರ ಕೈಗೆ ನೋಟುಗಳನ್ನು ನೀಡಿ ಸೋಮಾರಿಗಳನ್ನು ಬೆಳೆಸಿ ಪ್ರೋತ್ಸಾಹಿಸಬಾರದು. ಬಣ್ಣ ಮಾಸಿದ ಹರಕು ಮುರುಕು ಬುರ್ಖಾ ತೊಟ್ಟು, ಮುಸ್ಲಿಮೇತರ ಸಹೋದರರ ಅಂಗಡಿ ಬಾಗಿಲಲ್ಲೂ ಅಂಗಲಾಚುವ ದೃಶ್ಯಗಳು ನಿಜಕ್ಕೂ ಮರುಕ ಹುಟ್ಟಿಸುತ್ತಿವೆ. ಜತೆಗೆ ಸಮಾಜದ ಆಗುಹೋಗುಗಳನ್ನು ಅರಿಯದೆ ಮತ್ತು ವಸ್ತುಸ್ಥಿತಿಯನ್ನು ಅವಲೋಕಿಸದೆ ಸಮುದಾಯದ ಕೆಲವು ಪುರೋಹಿತರು ವರದಕ್ಷಿಣೆಯಂತೆ ಭಿಕ್ಷಾಟನೆಯನ್ನೂ ತಮ್ಮ ನಾಲಗೆಯನ್ನು ತಿರುವು ಮುರುವು ಗೊಳಿಸಿ ಸಮರ್ಥಿಸುವುದು ಮತ್ತೊಂದು ದುರಂತವಾಗಿದೆ.

ಹಾಗೆಯೇ, ನಮ್ಮಿಂದ ಚಿಲ್ಲರೆ ಪಡೆಯುವ ಸ್ಥಿರ ಯಾಚಕರ ಪ್ರಾರ್ಥನೆಯನ್ನು ನೀವೂ ಗಮನಿಸಿರಬಹುದು. “ಅಲ್ಲಾಹನು ನಿಮಗೆ ಇನ್ನೂ ಹೆಚ್ಚೆಚ್ಚು ದಾನ ಮಾಡಲು ಅನುಗ್ರಹಿಸಲಿ… ಇದಿಷ್ಟು ಸಿಕ್ಕಿದರೆ ನಾವಂತೂ ಬಹಳ ಖುಷಿ ಪಡುತ್ತೇವೆ. ಅಂದರೆ ಅದರ ಅರ್ಥ, ನಾವು ಸದಾ ದಾನ ಮಾಡಲೇ ಇರುವವರು ಮತ್ತು ಅವರು ಕಾಲಾಕಾಲ ಪಡೆಯುವವರು. ನೀವೇ ಅವಲೋಕಿಸಿ ನೋಡಿ! ಪಡೆದವರೇ ಪಡೆಯುತ್ತಿದ್ದಾರೆ. ಅದೇ ಮುಖಗಳು. ಅದೇ ಪರ್ದಾ, ಅದೇ ಟೋಪಿ-ಗಡ್ಡ. ಆದರೂ ಸಮಸ್ಯೆಗಳು ಜೀವಂತವಾಗಿಯೇ ಉಳಿದಿವೆ. ಭಿಕ್ಷಾಟನೆ ಕಾನೂನಿನ ದೃಷ್ಟಿಯಲ್ಲೂ ಅಪರಾಧವೇ.

ಕೊನೆಯದಾಗಿ:- ರಮಝಾನ್‌ ತಿಂಗಳ ದೈನಂದಿನ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್‌ಗಳು ಮನೆ ಬಾಗಿಲಿಗೆ ಬಂದವರಿಗೇ ವಿತರಿಸುವುದರಿಂದ, ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ ಮತ್ತು ಆ ಮೂಲಕ ಬೇಡುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಇದು ಖಂಡಿತ ಸರಿಯಲ್ಲ. ಸ್ವಾಭಿಮಾನದಿಂದಾಗಿ ಯಾರ ಮುಂದೆಯೂ ಅಂಗಲಾಚದವರು ಇದರಿಂದ ವಂಚಿತರಾಗುತ್ತಾರೆ. ಸಾಧ್ಯವಾದರೆ ಸರ್ವೇ ನಡೆಸಿ ನಾವೇ ವಿತರಿಸಬೇಕು ಅಥವಾ ವಿಶ್ವಸ್ಥ ಮತ್ತು ಪ್ರಾಮಾಣಿಕ ಸೇವೆ ಗೈಯ್ಯುವ ಸಂಘ-ಸಂಸ್ಥೆಗಳಿಗೆ ವಹಿಸಬೇಕು. ಬಾಹ್ಯ ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದರೂ ಆಂತರಿಕವಾಗಿ ಬಹಳಷ್ಟು ಕಷ್ಟ ಸಮಸ್ಯೆಗಳೊಂದಿಗೆ ಮೌನವಾಗಿ ಒದ್ದಾಡುವ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮವರ್ಗದ ಕುಟುಂಬಗಳ ಕುರಿತೂ ನಿಗಾ ಇರಲಿ.

ಒಟ್ಟಿನಲ್ಲಿ ಯಾವ ಕಾರಣಕ್ಕೂ ನಕಲಿಗಳ ಮಧ್ಯೆ ನಾವು ಅಸಲಿಗಳನ್ನು  ಕಡೆಗಣಿಸಬಾರದು. ಸ್ವಾಭಿಮಾನದಿಂದಾಗಿ ಯಾರ ಮನೆಬಾಗಿಲಲ್ಲೂ ಅಂಗಲಾಚದ ವಿಧವೆಯರ, ಅನಾಥರ ಮತ್ತು ಮಿಸ್ಕೀನರ ಮನೆಬಾಗಿಲಿಗೆ ನಮ್ಮ ಝಕಾತ್/ಸದಕಾಗಳು ತಲುಪಲೇ ಬೇಕು. ಅಲ್ಲಾಹನು ನಮ್ಮ ವಶಕ್ಕೆ ಕೊಟ್ಟ ಸಂಪತ್ತು-ದೌಲತ್ತು ಬರೀ ನಮ್ಮ ಪತ್ನಿ ಮಕ್ಕಳಿಗಾಗಿರಬಾರದು. ನೊಂದವರ ಪಾಲಿಗೆ ನಾವು ಆಸರೆಯಾಗಬೇಕು. ಇಲ್ಲಿ ಮುಂದಿಟ್ಟ ಒಟ್ಟು ವಿಷಯಗಳನ್ನು ಪರಿಗಣಿಸಿ, ಕುಟುಂಬದಲ್ಲಿ, ಮಸೀದಿಗಳಲ್ಲಿ ಮತ್ತು ಸಮುದಾಯದಲ್ಲಿ  ಚರ್ಚೆಯಾಗಬೇಕು. ಹಾಗೂ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಮುಂದಿಟ್ಟುಕೊಂಡು ಒಳ್ಳೆಯ ತೀರ್ಮಾನಗಳು ಜಿನುಗಬೇಕು… ಎಲ್ಲವೂ ಅಲ್ಲಾಹನಿಗಾಗಿ ಮಾತ್ರ. ಅವನ ಅನಂತಾನಂತ ಅನುಗ್ರಹಗಳು ಸದಾ ನಮ್ಮೆಲ್ಲರ ಮೇಲೆ ವರ್ಷಿಸುತ್ತಿರಲಿ.

-ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

Check Also

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು …

Leave a Reply

Your email address will not be published. Required fields are marked *