Tuesday , April 7 2020
Breaking News
Home / ಲೇಖನ / ಸ್ವಹಿತಕ್ಕಾಗಿ ಸಮುದಾಯದ ರಾಜಕೀಯ ಹಕ್ಕನ್ನು ಕಡೆಗಣಿಸುತ್ತಿರುವ ಸಮುದಾಯದ ನಾಯಕರು

ಸ್ವಹಿತಕ್ಕಾಗಿ ಸಮುದಾಯದ ರಾಜಕೀಯ ಹಕ್ಕನ್ನು ಕಡೆಗಣಿಸುತ್ತಿರುವ ಸಮುದಾಯದ ನಾಯಕರು

ಲೋಕಸಭಾ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಮಂಗಳೂರು ಲೋಕಸಭಾ ಕ್ಷೇತ್ರವು ರಾಜಕೀಯವಾಗಿ ಕುತೂಹಲ ಮೂಡಿಸ ತೊಡಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿದ್ದು, ಈ ಕ್ಷೇತ್ರದ ಫಲಿತಾಂಶದಲ್ಲಿ ನಿರ್ಣಾಯಕವಾಗಿದ್ದಾರೆ. ಅಷ್ಟಾಗಿಯೂ ಈ ಕ್ಷೇತ್ರದಲ್ಲಿ ರಾಜಕೀಯವಾಗಿ ಸಮುದಾಯವು ನಿರ್ಲಕ್ಷಿಸಲ್ಪಡುತ್ತಿದೆ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷದ ಪರವಾಗಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದರೂ ಸಮುದಾಯದ ಕೂಗಿಗೆ ಹೈಕಮಾಂಡ್ ಕ್ಯಾರೇ ಅನ್ನಲಿಲ್ಲ. ಇದು ಕಾಂಗ್ರೆಸ್ ಪಕ್ಷದ ನಿರ್ಲಕ್ಷವೋ ಅಥವಾ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರೆನಿಸಿಕೊಂಡವರ ದೌರ್ಬಲ್ಯವೋ ಅರ್ಥವಾಗುತ್ತಿಲ್ಲ.

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ಸಮುದಾಯದ ನಾಯಕರು ಚುನಾವಣಾ ಸಮಯದಲ್ಲಿ ಫೀಲ್ಡ್ ವರ್ಕ್ ಮಾಡಲು, ಪಕ್ಷದ ಬ್ಯಾನರ್ ಕಟ್ಟಲು ಹಾಗೂ ಮನೆಮನೆಗಳಿಗೆ ಪಕ್ಷದ ಪ್ಯಾಂಪ್ಲೆಟ್ ಹಂಚಲು ಮಾತ್ರ ಸೀಮಿತವಾಗಿದ್ದು, ಸಮುದಾಯದ ಮತಗಳ ಸಹಾಯದಿಂದ ಗೆಲ್ಲುತ್ತಿದ್ದ ಅಭ್ಯರ್ಥಿಗಳು ಗೆದ್ದ ನಂತರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸುವ ನೈಜ ಪ್ರಯತ್ನವನ್ನು ಮಾಡಲೇ ಇಲ್ಲ ಮಾತ್ರವಲ್ಲ ಸಮುದಾಯಕ್ಕೆ ರಾಜಕೀಯವಾಗಿ ಪ್ರಾತಿನಿದ್ಯವನ್ನೂ ನೀಡಿಲ್ಲ. ಚುನಾವಣಾ ಸಮಯದಲ್ಲಿ ಪಕ್ಷದ ಹೈಕಮಾಂಡಿನಿಂದ ದೊರೆಯುವ ನಿರ್ಜೀವ ಹುದ್ದೆಗಳಿಗೆ ತೃಪ್ತಿ ಪಡುತ್ತಿದ್ದ ಸಮುದಾಯದ ನಾಯಕರರೆನಿಸಿ ಕೊಂಡವರು ಇಂದು ಕೂಡ ಅದೇ ಮನಸ್ಥಿತಿಯುಳ್ಳವರಾಗಿದ್ದಾರೆ. ರಾಜಕೀಯವಾಗಿ ನಾವು ಸಬಲೀಕರಣಗೊಳ್ಳಬೇಕೆಂಬ ಮನಸ್ಥಿತಿ ಇಂದಿಗೂ ಸಮುದಾಯೆಡೆಯಲ್ಲಿ ಬೆಳೆಯಲೇ ಇಲ್ಲ.

ಆದರೆ ಈಗ ಸಮುದಾಯದ ಒಗ್ಗಟ್ಟು ಪ್ರದರ್ಶಿಸಿ ಇತರ ಸಮುದಾಯದವರಂತೆಯೇ ನಾವು ಕೂಡ ನಮ್ಮ ಹಕ್ಕನ್ನು ಕೇಳುವ ಸಮಯ ಪಕ್ವವಾಗಿದೆ. ಈಗಾಗಲೇ ಮುಸ್ಲಿಂ ಪ್ರಾಬಲ್ಯವಿರುವ ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಮುಸ್ಲಿಂ ಅಭ್ಯರ್ಥಿಗಳಿಗೆ ಮೀಸಲಿಡಬೇಕೆಂಬ ಆಗ್ರಹವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟರೂ ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ರಾಜ್ಯದಲ್ಲಿ ಶೇಖಡಾ 7ರಷ್ಟಿರುವ ಕುರುಬ ಸಮುದಾಯದವರು ತಮಗೆ ರಾಜ್ಯದಲ್ಲಿ 5ಕ್ಕಿಂತಲೂ ಅಧಿಕ ಲೋಕಸಭಾ ಕ್ಷೇತ್ರವನ್ನು ನೀಡಬೇಕೆಂದು ಹಕ್ಕೊತ್ತಾಯ ಮಾಡಲು ಸಾಧ್ಯವಾಗುವುದಾದರೆ, ಶೇಖಡಾ 17ರಷ್ಟಿರುವ ಮುಸಲ್ಮಾನರು 4 ಸ್ಥಾನಗಳನ್ನು ಕೇಳುವುದು ಅಪರಾಧವೇ?. ಸ್ವತಂತ್ರ ಭಾರತದಲ್ಲಿ ಸುಮಾರು 70 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಈ ದಮನಿತ ಸಮುದಾಯಕ್ಕೆ 4 ಸ್ಥಾನಗಳನ್ನು ನೀಡುವುದು ಅಧಿಕವೇ?.

ಇದು ಕಾಂಗ್ರೆಸ್ ಹೈಕಮಾಂಡಿನ ನಿರ್ಲಕ್ಷ್ಯ ಎನ್ನುವುದಕ್ಕಿಂತ ಸಮುದಾಯದ ನಾಯಕರ ದೌರ್ಬಲ್ಯ ಎನ್ನಬಹುದು. ನಮ್ಮಲ್ಲಿರುವ ಅನೈಕ್ಯತೆಯನ್ನು ಬಂಡವಾಳವಾಗಿ ಮಾಡುವ ಹುನ್ನಾರ ಇದೆಂದು ಹೇಳಬಹುದು. ಇದೀಗ ಲೋಕಸಭಾ ಚುನಾವಣೆಯು ಘೋಷಣೆಯಾಗಿದ್ದು ಸಮುದಾಯವು ಪಕ್ಷಾತೀತವಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಕಸಿಯಲ್ಪಟ್ಟ ತಮ್ಮ ಹಕ್ಕನ್ನು ಮರಳಿ ಪಡೆಯುವ ಸಮಯವು ಸನ್ನಿಹಿತವಾಗಿದೆ. ಇಂದು ಇದು ನಮ್ಮಿಂದ ಸಾಧ್ಯವಾಗದಿದ್ದರೆ ಮುಂದಕ್ಕೆ ಎಂದೆಂದಿಗೂ ಸಾಧ್ಯವಾಗಲಾರದು.

-ಎಸ್.ಎ.ರಹಿಮಾನ್ ಮಿತ್ತೂರು

Check Also

ಭಿಕ್ಷುಕರು ಮತ್ತು ಮುಸ್ಲಿಮ್ ಸಮುದಾಯ-ಕಣ್ಣು ತೆರೆಸುವ ಲೇಖನ

ಕಟ್ಟಿಗೆ ಕಡಿದು ಮಾರಿಯಾದರೂ  ಸ್ವಾಭಿಮಾನದಿಂದ ಬದುಕ ಬೇಕೆಂದು ಯಾವ ಧರ್ಮ ಕಲಿಸಿ ಕೊಟ್ಟಿತೋ ಮತ್ತು ಯಾವ ಧರ್ಮ ಬೇಡುವುದನ್ನು ನಿರುತ್ಸಾಹ …

Leave a Reply

Your email address will not be published. Required fields are marked *