Tuesday , April 7 2020
Breaking News
Home / ಓದುಗರ ಲೇಖನ / ನಾವು ಏನನ್ನು ಪಡೆದಿದ್ದೇವೆಂಬುದು ಮುಖ್ಯವಲ್ಲ, ನಾವೆಷ್ಟು ನೀಡಿದ್ದೇವೆಂಬುದು ಮುಖ್ಯ

ನಾವು ಏನನ್ನು ಪಡೆದಿದ್ದೇವೆಂಬುದು ಮುಖ್ಯವಲ್ಲ, ನಾವೆಷ್ಟು ನೀಡಿದ್ದೇವೆಂಬುದು ಮುಖ್ಯ

ಮನುಷ್ಯನು ಹುಟ್ಟುತ್ತಾನೆ. ಒಂದು ನಿರ್ದಿಷ್ಟ ಕಾಲಾವಧಿಯ ವರೆಗೆ ಜೀವಿಸುತ್ತಾನೆ, ನಂತರ ಮರಣ ಹೊಂದುತ್ತಾನೆ. ಒಬ್ಬೊಬ್ಬರಿಗೆ ನೀಡಲಾಗಿರುವ ಕಾಲಾವಧಿ ಎಷ್ಟು ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಆ ಕಾಲಾವಧಿಯನ್ನು ಫಲಪ್ರದಗೊಳಿಸುವುದು ಖಂಡಿತ ವಾಗಿಯೂ ನಮ್ಮ ಕೈಯಲ್ಲಿದೆ. ಜೀವನ ಎಂಬುದು ಒಂದು ಸುಂದರವಾದ ಉಡುಗೊರೆ. ಈ ಕಾಲಾವಧಿಯು ನಮಗೆ ಸಿಕ್ಕಿರು ವಂತಹ ಒಂದು ಸುವರ್ಣಾವಕಾಶ. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳುವಾಗ ಲವಲವಿಕೆಯೊಂದಿಗೆ ಏಳಬೇಕು. ಏಕೆಂದರೆ ಜೀವನದ ಮತ್ತೊಂದು ಸುಪ್ರಭಾತ ಬಂದಿದೆ! ಒಂದು ಹೊಸ ದಿನ! ನಿನ್ನೆಯ ತಪ್ಪುಗಳನ್ನು ಸರಿಪಡಿಸಲೊಂದು ಅವಕಾಶ. ನಿನ್ನೆ ಅಪೂರ್ಣವಾಗಿ ಬಿಟ್ಟ ಕಾರ್ಯಗಳನ್ನು ಪೂರ್ಣಗೊಳಿಸುವ ಸುಯೋಗ. ನಿನ್ನೆ ಕಂಡ ಕನಸುಗಳನ್ನು ನನಸಾಗಿಸುವ ಅದೃಷ್ಟ. ಹಾಗೆ ನೋಡಿದರೆ ಮನುಷ್ಯನು ಸದಾ ತನ್ನ ಬದುಕಿನ ಹಾದಿಯನ್ನು ಆದಷ್ಟು ಹೆಚ್ಚು ಸುಗಮಗೊಳಿಸಲು ಹೋರಾಡುತ್ತಾ ಇರುತ್ತಾನೆ. ಇತ್ತೀಚಿನ ಆವಿಷ್ಕಾರಗಳನ್ನು ನೋಡಿದರೆ ಅವೆಲ್ಲವನ್ನೂ ಮನುಷ್ಯನು ತನ್ನ ಸಮಯವನ್ನು ಉಳಿಸಲಿಕ್ಕಾಗಿ ಮಾಡಿದ್ದಾನೆ ಎಂದು ಭಾಸವಾಗುತ್ತದೆ. ಕ್ಷಿಪ್ರವಾಗಿ ಕಾರ್ಯವೆಸಗುವ ಕಂಪ್ಯೂಟರ್‍ಗಳು, ವಿಮಾನ, ಮನೆ ಗೆಲಸಗಳನ್ನು ಸಲೀಸಾಗಿ ನಿರ್ವಹಿಸುವ ಉಪಕರಣಗಳು ಇತ್ಯಾದಿ ಬಹಳಷ್ಟು. ಸಮಯವನ್ನು ಉಳಿಸುತ್ತದೆ. ಇಲ್ಲಿ ಆಲೋಚಿಸಬೇಕಾದ ವಿಷಯವೇನೆಂದರೆ ಈ ಉಳಿಸಲಾದ ಸಮಯವೆಲ್ಲ ಎಲ್ಲಿದೆ? ಅದು ಎಲ್ಲಿ ವ್ಯಯವಾಗುತ್ತದೆ? ನಮಗೆ ಸಿಕ್ಕಿ ದಂತಹ ಈ ಕಾಲಾವಧಿಯಲ್ಲಿ ಗಮನಾರ್ಹವಾದ ಒಳಿತಿನ ಕಾರ್ಯ ಗಳನ್ನು ಮಾಡುತ್ತಿದ್ದೇವೆಯೇ? ಸುಂದರವಾಗಿರುವ ಈ ಭೂಮಿ ಯನ್ನು ಇನ್ನೂ ಸುಂದರವಾಗಿಸುವ ಪ್ರಯತ್ನ ನಡೆಯುತ್ತಿದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಸ್ವತಃ ನಮ್ಮೊಂದಿಗೇ ಕೇಳಬೇಕಾಗಿದೆ.

ಮನುಷ್ಯನು ಸಾಧಾರಣವಾಗಿ ತನಗೆ ಜೀವನದಲ್ಲಿ ಏನೇನು ಲಭ್ಯವಿದೆ? ತನಗೆ ಇತರರು ಏನನ್ನು ನೀಡಿದ್ದಾರೆ? ಎಂಬ ಚಿಂತೆಯಲ್ಲೇ ಇರುತ್ತಾನೆ. ತಾನು ಇತರರಿಗಾಗಿ ಮಾಡಿದ್ದೇನು ಎಂಬ ಪರಿವೆಯೇ ಇರುವುದಿಲ್ಲ. ಒಮ್ಮೆ ಒಬ್ಬನು ತನ್ನ ಹೊಸ ಕಾರನ್ನು ಬಹಳ ಉತ್ಸಾಹ ದಿಂದ ಶುಚಿಗೊಳಿಸುತ್ತಿದ್ದನಂತೆ. ಆಗ ಆತನ ನೆರೆಯವನು “ನಿಮ್ಮ ಹೊಸ ಕಾರು ಬಹಳ ಚೆನ್ನಾಗಿದೆ. ಯಾವಾಗ ಖರೀದಿಸಿದ್ದೀರಿ?” ಎಂದು ಕೇಳಿದ. ಅದಕ್ಕವನು “ಇದನ್ನು ನನ್ನ ಸಹೋದರನು ನನಗೆ ಉಡುಗೊರೆ ಯಾಗಿ ನೀಡಿದ್ದಾನೆ” ಎಂದು ಉತ್ತರಿಸಿದ. ತಕ್ಷಣ ಆ ನೆರೆಯವನು “ನನ್ನ ಬಳಿಯೂ ಇಂತಹ ಕಾರು ಇರಬೇಕಿತ್ತು!” ಎಂದು ಬೇಸರ ವ್ಯಕ್ತಪಡಿಸಿದಾಗ ಕಾರು ಶುಚಿಗೊಳಿಸು ತ್ತಿದ್ದ ಆ ವ್ಯಕ್ತಿಯು ಬಹಳ ಹೆಮ್ಮೆಯಿಂದ “ನಿನಗೂ ನನ್ನ ಸಹೋದರನಂತಹ ಸಹೋದರನಿರಬೇಕಿ ತ್ತೆಂದು ಆಶಿಸು!” ಎಂದನಂತೆ. ಮೂರನೆ ವ್ಯಕ್ತಿಯೊಬ್ಬರು ದೂರದಲ್ಲಿ ನಿಂತು ಇವರಿಬ್ಬರ ಸಂಭಾಷಣೆಯನ್ನು ಕೇಳು ತ್ತಿದ್ದರು. ಅವರ ಪ್ರತಿಕ್ರಿಯೆಯು ಬಹಳ ಮಾರ್ಮಿಕವಾಗಿತ್ತು. ಅವರು “ಅಯ್ಯೋ! ನಾನು ಅಂತಹ ಸಹೋದರನಾಗ ಬೇಕಿತ್ತು!” ಎಂದರು. ಎಂತಹ ಸುಂದರ ವಾದ ಕನಸು! ಎಂತಹ ಸದುದ್ದೇಶ!

ಸಾಮಾನ್ಯವಾಗಿ ನಮ್ಮಲ್ಲಿ ಎರಡು ವಿಧದ ಜನರಿರುತ್ತಾರೆ. ‘ನೀಡುವ ವರು’ ಮತ್ತು ‘ಪಡೆಯುವವರು’. ನೀಡುವವರು ಈ ಸಮಾಜಕ್ಕೆ ನಾನೇನು ನೀಡಬೇಕೆಂಬ ಆಲೋಚನೆಯಲ್ಲಿರುತ್ತಾರೆ. ಪಡೆಯುವವರು, ‘ನನಗೇನೂ ಸಿಗಲಿಲ್ಲ’, ‘ನನಗಾರೂ ಕೊಡುವುದಿಲ್ಲ’, ‘ನನಗೆ ವಾಸ್ತವದಲ್ಲಿ ಅದು ಸಿಗಬೇಕಿತ್ತು’ ಎಂಬಿತ್ಯಾದಿ ಪ್ರಲಾಪಗಳೊಂದಿಗೆ ಜೀವನವನ್ನು ನಡೆಸುತ್ತಾರೆ. ನೀಡುವವನು ಸಂತೃಪ್ತಿ ಮತ್ತು ಸಂತೋಷದ ಹೊಳೆಯಲ್ಲಿ ಮಿಂದು ಸದಾ ಸಂತುಷ್ಟನಾಗಿರುತ್ತಾನೆ. ಪಡೆಯುವವನು ಪಡೆಯುತ್ತಲಿರಬೇಕೆಂಬ ದುರಾಸೆಯಿಂದಾಗಿ ಸದಾ ಅಸಂತೃಪ್ತಿ ಮತ್ತು ಅಸಂತೋಷದ ರೋಗಕ್ಕೆ ತುತ್ತಾಗುತ್ತಾನೆ. ಹಾಗಿರುವಾಗ ಜೀವನವೆಂಬ ಈ ಅಮೂಲ್ಯ ಉಡುಗೊರೆಯನ್ನು ಸಂತೃಪ್ತಿಯೊಂದಿಗೆ ಕಳೆಯಬೇಕೋ ಅಥವಾ ಅಸಂತೃಪ್ತಿ ಯೊಂದಿಗೆ ದೂಡಬೇಕೋ ಎಂಬು ದನ್ನು ನಾವೇ ನಿಶ್ಚಯಿಸೋಣ.

ಇಂತಹ ಆಲೋಚನೆಗಳ ಮಧ್ಯೆ ಒಂದು ಪ್ರಧಾನವಾದ ವಿಷಯ ವನ್ನಂತೂ ಮರೆಯಲೇಬಾರದು. ಅದೇನೆಂದರೆ, ಈ ಜೀವನವನ್ನು ದಯಪಾಲಿಸಿದ ಆ ಸೃಷ್ಟಿಕರ್ತನು ಖಂಡಿತವಾಗಿಯೂ ಒಂದು ಸ್ಪಷ್ಟ ವಾದ ಉದ್ದೇಶದೊಂದಿಗೆ ಇದನ್ನು ನೀಡಿರುವನು ಮತ್ತು ಆ ಉದ್ದೇಶ ವನ್ನು ಪೂರ್ತಿಗೊಳಿಸುವುದರಲ್ಲಿ ನಾವು ಸಫಲರೋ ವಿಫಲರೋ ಎಂಬುದನ್ನು ಆ ಸೃಷ್ಟಿಕರ್ತನ ಮುಂದೆ ನಿಂತು ಸಾದರಪಡಿಸಬೇಕಾ ಗಿದೆ. ಪ್ರವಾದಿ ಮುಹಮ್ಮದ್(ಸ)ರು ಬಹಳ ಆಕರ್ಷಕವಾಗಿ ಇದನ್ನು ಹೀಗೆ ವರ್ಣಿಸಿದ್ದಾರೆ, “ಇಹಲೋಕವು ಸಿಹಿಯಾಗಿದೆ ಮತ್ತು ಹಸಿರಾಗಿದೆ (ಸಮೃದ್ಧಿಯಿಂದ ಕೂಡಿದೆ).” ಸೃಷ್ಟಿ ಕರ್ತನು ನಿಮಗೆ ಇದರ ಉಸ್ತು ವಾರಿಯನ್ನು ನೀಡಿರುವನು ಮತ್ತು ನೀವು ಆ ಜವಾಬ್ದಾರಿಕೆಯನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತೀರಿ ಎಂದು ನೋಡುವನು.” ಹಾಗಾಗಿ ನಾವು ಹೋದಲ್ಲೆಲ್ಲಾ ಒಳಿತನ್ನು ಪಸರಿಸಬೇಕು, ನಮ್ಮ ಇರುವಿಕೆಯಿಂದ ಪರರಿಗೆ ಹಿತವಾಗಬೇಕು, ನಾವು ಸಂಚರಿಸುವಲ್ಲೆಲ್ಲ ನಮ್ಮ ಅಸ್ತಿತ್ವದ ಧನಾತ್ಮಕ ಕುರುಹುಗಳಿರಬೇಕು.

ನಮ್ಮೊಂದಿಗಿರುವುದೆಲ್ಲವೂ ತಾತ್ಕಾ ಲಿಕ, ನಮ್ಮ ಜೀವನವು ಒಂದೊಮ್ಮೆ ಕೊನೆಗೊಳ್ಳುತ್ತದೆ ಮತ್ತು ನಮ್ಮ ಒಡೆತನದಲ್ಲಿರುವುದೆಲ್ಲವೂ ಇತರರ ಸ್ವಾಧೀನಕ್ಕೆ ಹೋಗುತ್ತದೆ. ಆಗ ಪ್ರಾಧ್ಯಾನ್ಯತೆ ಇರುವುದು ನಮ್ಮ ವ್ಯಾಸಂಗದ ಮಟ್ಟಕ್ಕಲ್ಲ, ನಾವದರಿಂದ ಕಲಿತದ್ದೇನು ಎಂಬುದಕ್ಕೆ. ನಮ್ಮ ಬಾಯಿಯಿಂದ ಹೊರಟ ಮಾತುಗಳು ಮುಖ್ಯವಾಗುವುದಿಲ್ಲ, ಆ ಮಾತು ಗಳಿಂದ ನಮ್ಮ ಇಂಗಿತ ಏನಾಗಿತ್ತು ಎಂಬುದು ಮುಖ್ಯವಾಗುತ್ತದೆ. ನಾವೆಷ್ಟು ಸಂಪತ್ತನ್ನು ಗಳಿಸಿದ್ದೇ ವೆಂಬುದು ಪ್ರಧಾನವಾಗುವುದಿಲ್ಲ ನಾವದನ್ನು ಹೇಗೆ ವಿನಿಯೋಗಿಸುತ್ತಿ ದ್ದೇವೆಂಬುದು ಪ್ರಧಾನವಾಗುತ್ತದೆ. ನಮ್ಮ ಯೋಜನೆಗಳು ಗಣ್ಯವಾಗು ವುದಿಲ್ಲ ಅದರಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದೇವೆಂಬುದು ಗಣ್ಯವಾಗುತ್ತದೆ. ನಾವು ಏನನ್ನು ಪಡೆದಿದ್ದೇವೆಂಬುದು ಮುಖ್ಯವಲ್ಲ, ನಾವೆಷ್ಟು ನೀಡಿದ್ದೇವೆಂಬುದು ಮುಖ್ಯ, ನಾವು ಬೋಧಿಸಿದ್ದನ್ನು ಪರಿಗಣಿಸಲಾಗುವುದಿಲ್ಲ ನಮ್ಮ ಜೀವನದ ಪದ್ಧತಿಯನ್ನು ಪರಿಗಣಿಸ ಲಾಗುತ್ತದೆ. ಜೀವನವೆಂಬ ಈ ಸುವರ್ಣಾವಕಾಶವು ಆಲಸ್ಯ ಮತ್ತು ಅಹಂಕಾರದಿಂದಾಗಿ ಹಾಳಾಗಬಾರದು. ಪ್ರತಿದಿನವನ್ನೂ ಹಿಂದಿನ ದಿನದ ಕಳಪೆ ಕೆಲಸಗಳನ್ನು ಸರಿಪಡಿಸಲು ಮತ್ತು ಒಳಿತನ್ನು ಇನ್ನೂ ಹೆಚ್ಚಿಸಲು ಇರುವ ಅವಕಾಶವಾಗಿ ಮಾರ್ಪಡಿಸೋಣ. ಪ್ರತಿದಿನವು ಸಂಜಾತವಾದಾಗ ಈ ಸುಂದರವಾದ ಬಾಳನ್ನು ದಯಪಾಲಿ ಸಿದ ಆ ಸೃಷ್ಟಿಕರ್ತನನ್ನು ಸ್ತುತಿಸುತ್ತಾ ದಿನವನ್ನು ಪ್ರಾರಂಭಿಸೋಣ.

-ಸಮೀನಾ ಅಫ್ಶಾನ್ ಎಂ.

Check Also

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು …

Leave a Reply

Your email address will not be published. Required fields are marked *