Tuesday , April 7 2020
Breaking News
Home / ಓದುಗರ ಲೇಖನ / ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು ಆಗಿದ್ದಾರೆ. ಅದನ್ನು ಯಾವ ಮುಸ್ಲಿಮರೂ ನಿರಾಕರಿಸುವುದಿಲ್ಲ. ಆದರೆ ಆಯಿಷಾರವರ ವಯಸ್ಸಿನ ಬಗ್ಗೆ ಭಿನ್ನಾಭಿಪ್ರಾಯ ಇದೆ. ಆಯಿಷಾರವರ ವಯಸ್ಸು ಕುರಾನಿನಲ್ಲಿ ಚರ್ಚೆಗೆ ಬಂದಿಲ್ಲ. ಪ್ರವಾದಿ ಸ ಕಾಲದಲ್ಲಿ ಬಂದಿಲ್ಲ. ಅವರ ಮರಣದ ಸುಮಾರು ನೂರು ವರ್ಷಗಳ ನಂತರ ಪ್ರವಾದಿಯವರು ಹೇಳಿದ ಮಾತನ್ನು ಮತ್ತು ಅಂದಿನ ಇತಿಹಾಸವನ್ನು ಜನರು ಒಬ್ಬರಿಂದ ಒಬ್ಬರ ಮುಖಾಂತರ ಬಾಯಿಯ ಮೂಲಕ ಕೇಳಿ ನಂತರ ಅದು ಹದೀಸ್ (ಪ್ರವಾದಿ ವಚನ) ಎಂಬ ಡಾಕುಮೆಂಟ್ ಆಗಲು ಪ್ರಾರಂಭ ಆಯಿತು. ಅದರ ಬಗ್ಗೆ ಬಹಳ ಸಂಶೋಧನೆಗಳನ್ನು ‌ಪಂಡಿತರು ಮಾಡಿದ್ದಾರೆ. ಅದರಲ್ಲೂ ಆಯಿಷಾರವರ ವಯಸ್ಸಿನ ಬಗ್ಗೆ ವಿಸ್ತೃತವಾದ ಚರ್ಚೆ ಆಗಿಲ್ಲ.

ಆರನೇ ಶತಮಾನದಲ್ಲಿ ಐತಿಹಾಸಿಕವಾಗಿ ಚರ್ಚೆಗೊಳಗಾಗದ ಮತ್ತು ಅಂದಿನ ಪ್ರವಾದಿಯ ಪಕ್ಕಾ ವಿರೋಧಿಗಳು, ಶತ್ರುಗಳು ನಕಾರಾತ್ಮಕವಾಗಿ ಚರ್ಚೆ ಮಾಡದ ವಿಷಯವನ್ನು ಈಗ ಅದೂ 21ನೇ ಶತಮಾನದಲ್ಲಿ ಚರ್ಚಿಸುವುದರ ಔಚಿತ್ಯವೇನು? ಯಾರಾದರೂ ಮುಸಲ್ಮಾನರು ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ಈಗ ಮದುವೆಯಾಗುವುದು ಧಾರ್ಮಿಕ ಕರ್ತವ್ಯ ಅಥವಾ ಧಾರ್ಮಿಕ ವಿಷಯ ಎಂದು ಪ್ರತಿಪಾದಿಸುತ್ತಾರೆಯೇ? ಅಥವಾ ನಿಮಗೆ ಪರಿಚಯ ಇರುವ ಸಮಾಜದಲ್ಲಿ ಹಾಗೆ ಯಾರಾದರೂ ಮದುವೆ ಆಗುವ ಸಂಪ್ರದಾಯ ಇದೆಯೇ ಎಂದು ಅವಲೋಕಿಸಿ ನೋಡಿ.

ನಮ್ಮ ಅಜ್ಜ ಅಜ್ಜಿಯ ಅಜ್ಜಂದಿರಿಗೆ ಮದುವೆ ಆಗುವಾಗ ವಯಸ್ಸು ಎಷ್ಟು ಎಂದು ಯಾರಿಗಾದರೂ ನಿರ್ಣಯಿಸಬಹುದೇ? ಹೆಚ್ಚು ಆಗಿಲ್ಲ…ಒಂದು 200 ವರ್ಷಗಳ ಹಿಂದಿನ ಇತಿಹಾಸ. ಹಿಂದಿನ ಕಾಲದಲ್ಲಿ ಯಾರದಾದರೂ ಮದುವೆಯ ವಯಸ್ಸು ಚರ್ಚೆಗೆ ಒಳಗಾಗಿರುವುದನ್ನು ಕೇಳಿದ್ದೇವೆಯೇ??? ಸಣ್ಣ ವಯಸ್ಸಿನಲ್ಲಿ ಮದುವೆಯಾಗುವ ಸಂಪ್ರದಾಯ ಎಲ್ಲಾ ಸಮಾಜದಲ್ಲಿ ಇರಲಿಲ್ಲವೇ?

ಪ್ರವಾದಿ ಮುಹಮ್ಮದ್ (ಸ) ಆಯಿಷಾರನ್ನು ವಿವಾಹ ಆಗುವಾಗ ಆಯಿಷಾರ ವಯಸ್ಸು: ಪ್ರವಾದಿ ಸ ರವರ ಪತ್ನಿ ಆಯಿಷಾರವರಿಗೆ ಮದುವೆ ಆಗುವಾಗ ಆರು ವರ್ಷ ಎಂದು ಇತಿಹಾಸದಲ್ಲಿ ಹೇಳಿದ್ದರೆ, ಇನ್ನೊಂದು ಇತಿಹಾಸದಲ್ಲಿ ಅವರಿಗೆ ಮದುವೆ ಆಗುವಾಗ 16 ವರ್ಷ ಎಂಬ ಉಲ್ಲೇಖ ಇದೆ. ಇಸ್ಲಾಮಿನ ಕಟ್ಟಕಡೆಯ ಪ್ರಮಾಣ ಕುರಾನ್. ಅದರಲ್ಲಿ ಪ್ರವಾದಿ ಪತ್ನಿಯರನ್ನು “ನಿಸಾಅ್” ಎಂದು ಕರೆಯಲಾಗಿದೆ. ಆಯಿಷಾ (ರ) ರವರ ಮೇಲೆ ವಿರೋಧಿಗಳು ಸುಳ್ಳಾರೋಪ ಹಾಕಿದ ಸಂದರ್ಭಗಳಲ್ಲಿ ಅವತೀರ್ಣ ಆದ ಸೂಕ್ತಗಳಲ್ಲೂ ಪ್ರವಾದಿ ಪತ್ನಿಯರಿಗೆ ನಿಸಾಅ್ ಅರ್ಥ ಮಹಿಳೆ ಹಾಗೆಯೇ ಉಮ್ಮ ಅರ್ಥ ತಾಯಿ ಎಂದು ಕರೆಯಲಾಗಿದೆ‌. ಸ್ವಲ್ಪ ಆಲೋಚಿಸಬಹುದು ಆರು ವರ್ಷದ ಸಣ್ಣ ಬಾಲೆಯನ್ನು ನಿಸಾಅ್ ಎಂದು ಅರಬಿಯಲ್ಲಿ ಕರೆಯುವುದಿಲ್ಲ. ಪಕ್ವವಾದ ಪ್ರಬುದ್ಧವಾದ ಮಹಿಳೆಯರಿಗೆ ನಿಸಾಅ್ ಅಥವಾ ಮಹಿಳೆಯರು ಎಂದು ಅರಬಿಯಲ್ಲಿ ಕೆರೆಯಲಾಗುತ್ತದೆ. ಪ್ರವಾದಿ ಪತ್ನಿಯರಿಗೆ “ಉಮ್ಮ” ಅಥವಾ ತಾಯಿ ಎಂದು ಕರೆಯಲಾಗಿದೆ. ತಾಯಿ ಎಂಬ ಪದವೂ ಪಕ್ವವಾದ ಮಹಿಳೆಯರಿಗೆ ಬಳಸುವ ಪದವಾಗಿದೆ.

ಪ್ರವಾದಿ ಮುಹಮ್ಮದ್ (ಸ) ಸಣ್ಣ ವಯಸ್ಸಿನ ಆಯಿಷಾರನ್ನು ಮದುವೆ ಆಗುವ ಉದ್ದೇಶ ಏನಾಗಿತ್ತು? ಈ ಜಗತ್ತಿನಲ್ಲಿ ಎರಡು ರೀತಿಯ ಜ್ಞಾನ ಇದೆ. ಒಂದು ಭೌತಿಕ ಜ್ಞಾನ. ಇನ್ನೊಂದು ಪಾರಮಾರ್ಥಿಕ ಜ್ಞಾನ. ಭೌತಿಕ ಜ್ಞಾನ ಕಾಲ ಕಾಲಕ್ಕೆ ಮಾನವರ ಬೇಡಿಕೆಗೆ ಅನುಸಾರವಾಗಿ ವಿವಿಧ ಜನರ ಸೃಷ್ಟಿಯಾಗುತ್ತದೆ. ಇಂಜಿನಿಯರ್, ಡಾಕ್ಟರ್, ವಿಜ್ಞಾನಿ, ವ್ಯಾಪಾರಿ, ಕಾರ್ಮಿಕ. ಅದಕ್ಕೆ ದೈವಿಕ ಜ್ಞಾನದ ಅಗತ್ಯ ಇಲ್ಲ. 500 ವರ್ಷಗಳ ಹಿಂದೆ ಪೆಟ್ರೋಲ್ ಒಂದು ಕೊಳಚೆ ನೀರಾಗುತ್ತಿತ್ತು. ಆದರೆ 21 ನೇ ಶತಮಾನದಲ್ಲಿ ಅದರ ಮಹತ್ವ ನಮಗೆ ತಿಳಿದಿದೆ.

ಇನ್ನೊಂದು ಜ್ಞಾನ ಪಾರಮಾರ್ಥಿಕ ಅಥವಾ ದೇವರಿಂದ ಮಾತ್ರ ನಮಗೆ ಲಭ್ಯ ಆಗುವಂತಹದ್ದು. ಮನುಷ್ಯ ಯಾರು? ಆತನ ಜನ್ಮದ ಉದ್ದೇಶ ಏನು? ಮರಣದ ವಾಸ್ತವಿಕತೆ ಏನು? ಜೀವನದ ನೈಜ ಉದ್ದೇಶ ಏನು? ಹೇಗೆ ದೇವನಿಗೆ ಅಧೀನವಾಗಿ, ನೈತಿಕ ಮೌಲ್ಯಾಧಾರಿತವಾಗಿ ಬದುಕಬೇಕು? ಮರಣದ ಬಳಿಕ ಮುಂದಿನ ಜೀವನ ಇದೆಯೇ? ಮನುಷ್ಯನ ಈ ಬದುಕಿಗೆ ಪರಲೋಕದಲ್ಲಿ ವಿಚಾರಣೆ ಇದೆಯೇ?

ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ದೇವರು ತನ್ನ ಸಜ್ಜನ ದಾಸರಿಗೆ ಪ್ರವಾದಿತ್ವವನ್ನು ನೀಡಿ, ಅವರಿಗೆ ಗ್ರಂಥ ನೀಡಿ ಮತ್ತು ಅದನ್ನು ಪ್ರವಾದಿಗಳ ಜೀವನದಲ್ಲಿ ಪ್ರಾಯೋಗಿಕವಾಗಿ ಜನರಿಗೆ ಕಲಿಸಿಕೊಡುವ ಕೆಲಸ ನಡೆಯಿತು. ಅದೇ ಉದ್ದೇಶಕ್ಕಾಗಿ 1 ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳು ಬಂದರು. ಅವರು ಯಾವುದನ್ನು ಭೋದಿಸುತ್ತಾರೆ. ಅದನ್ನು ಸಮಾಜದಲ್ಲಿ ಅನುಷ್ಠಾನಕ್ಕೆ ತರುತ್ತಾರೆ. ಅದರಂತೆಯೇ ಪ್ರವಾದಿ ಮುಹಮ್ಮದ್ (ಸ) ಮತ್ತು ಇತರೆಲ್ಲಾ ಪ್ರವಾದಿಗಳು ಮಾಡಿದ್ದರು. ಹೀಗೆ ನಿರ್ಣಾಯಕ ದಿನದರವರೆಗೆ ಸಮಾಜದಲ್ಲಿ ಚಾಲ್ತಿಯಲ್ಲಿರುವ ವಿಲಕ್ಷಣಗಳ ಸಂಪ್ರದಾಯಗಳನ್ನು ಅವರು ತಿದ್ದುತ್ತಿದ್ದರು.

ಪ್ರವಾದಿ ಮುಹಮ್ಮದ್ (ಸ) ಎಲ್ಲಾ ವಿವಾಹಗಳು ಇದೇ ಉದ್ದೇಶಕ್ಕಾಗಿ ನಡೆದಿತ್ತು. ಉದಾ: ದತ್ತು ಪುತ್ರನ ಪತ್ನಿಯೊಂದಿಗೆ ವಿವಾಹ ಆಗಬಾರದು ಎಂಬ ವಿಲಕ್ಷಣ ಸಂಪ್ರದಾಯ ಅರೇಬಿಯಾದಲ್ಲಿ ಇತ್ತು. ಪ್ರವಾದಿ ಮುಹಮ್ಮದ್ (ಸ) ರವರ ದತ್ತುಪುತ್ರ ಝೈದ್ ಬಿನ್ ಹಾರಿಸ್ ರವರ ವಿವಾಹ ಮುರಿದು ಬಿತ್ತು. ಆ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ರಿಗೆ ದತ್ತು ಪುತ್ರನ ವಿಚ್ಛೇದಿತ ಪತ್ನಿಯನ್ನು ವಿವಾಗಹ ಆಗಬೇಕು ಎಂಬ ಆಜ್ಞೆಯಾಗಿತ್ತು. ದೇವನ ಈ ಆಜ್ಞೆಯನ್ನು ಪ್ರವಾದಿ ಮುಹಮ್ಮದ್ ಅನುಷ್ಠಾನಕ್ಕೆ ತರಲು ಕಷ್ಟ ಆಗಿತ್ತು. ನಂತರ ಕುರಾನಿನ ಸೂಕ್ತಗಳ ಮೂಲಕ ಮತ್ತೊಮ್ಮೆ ಶಕ್ತವಾಗಿ ಆಜ್ಞೆ ನೀಡಲಾಯಿತು. ಆ ಬಳಿಕ ಸಮಾಜದ ಆರೋಪ, ಅಪಕಲ್ಪನೆ, ಮೂದಲಿಕೆಯನ್ನು ಗಣನೆಗೆ ತೆಗೆಯದೆ ದತ್ತು ಪುತ್ರನ ವಿಚ್ಛೇದಿತ ಪತ್ನಿಯೊಂದಿಗೆ ಮುಹಮ್ಮದ್ (ಸ) ವಿವಾಹ ಆದರು. ಇದೊಂದು ಉದಾಹರಣೆ ಮಾತ್ರ. ಪ್ರವಾದಿ ಮುಹಮ್ಮದ್ ರವರ. ಎಲ್ಲಾ ವಿವಾಹಗಳ ಹಿಂದೆ ವಿವಿಧ ಹಿನ್ನೆಲೆ, ಸಂದರ್ಭ, ಸಾಮಾಜಿಕ ಸನ್ನಿವೇಶ ಮತ್ತು ಲೋಕ ಕಲ್ಯಾಣದ ಸಂದೇಶ ಅಡಗಿತ್ತು. ಕಿರಿಯ ವಯಸ್ಸಿನ ಆಯಿಷಾರನ್ನು ಮುಹಮ್ಮದ್ (ಸ) ಮದುವೆಯಾಗುವುದಕ್ಕೂ ಹಿನ್ನೆಲೆ, ಸನ್ನಿವೇಶ, ಮತ್ತು ಲೋಕ ಕಲ್ಯಾಣದ ಉದ್ದೇಶ ಇತ್ತು.

ಮುಂದುವರಿಯುವುದು…

ಲೇಖಕರು: ಅಬೂಕುತುಬ್

Check Also

ಮುಸ್ಲಿಮರೇ ಓಲೈಕೆಯ ರಾಜಕಾರಣಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಚ್ಚರವಿರಲಿ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೀಗ ರಾಜಕೀಯ ಪಕ್ಷಗಳ ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಆರಂಭಿಸಿವೆ, ಈ ಬಾರಿ ಪಕ್ಷಗಳು ಮುಸ್ಲಿಮರ …

Leave a Reply

Your email address will not be published. Required fields are marked *