Friday , November 15 2019
Breaking News
Home / ಗಲ್ಫ್ ವಿಶೇಷ / ಮದೀನಾದ ಮಸೀದಿಯ 8 ಅಚ್ಚರಿದಾಯಕ ಅಪೂರ್ವ ಸಂಗತಿಗಳು

ಮದೀನಾದ ಮಸೀದಿಯ 8 ಅಚ್ಚರಿದಾಯಕ ಅಪೂರ್ವ ಸಂಗತಿಗಳು

ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿನ ಪವಿತ್ರ ನಗರವಾದ ಮದೀನಾವೆಂದರೆ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ತೆರನಾದ ಉತ್ಸಾಹ ಗರಿಗೆದರುತ್ತದೆ. ಮರುಭೂಮಿಯಾದರೂ ಅಲ್ಲಿನ ಸುಂದರ ಪರಿಸರ, ಆಹ್ಲಾದಕರ ಹವಾಮಾನ, ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾದಿ(ಸ) ರವರ ಪಾವನ ಶರೀರ ದಫನಗೊಂಡಿರುವಂತ ಆ ಪುಣ್ಯಭೂಮಿಯಲ್ಲಿರುವ ಪ್ರವಾದಿಯವರ ಮಸೀದಿ ಎಂದೇ ಅರಿಯಲ್ಪಡುವ ಮಸ್ಜಿದುನ್ನಬವಿ ಇರುವ ಈ ಊರನ್ನು ನೋಡಲು ಪ್ರತಿಯೊಬ್ಬ ಮುಸ್ಲಿಮರೂ ಮನಸ್ಸಿನಲ್ಲಿ ಆಸೆ ಅದುಮಿಟ್ಟು ಕೊಂಡಿರುತ್ತಾರೆ ಎಂಬುದು ಸುಳ್ಳಲ್ಲ.

ಮದೀನಾ ಇಸ್ಲಾಮಿನ ಇತರ ಪವಿತ್ರ ಭೂಮಿಗಳಾದ ಮಕ್ಕಾ, ಜೆರುಸಲೇಮ್ ಗಳ ಹಾಗೆ ತಲತಲಾಂತರ ಬಂದ ಪ್ರವಾದಿಗಳ ಜೀವನದಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಂದ ನಗರವಲ್ಲ. ಮದೀನಾ ಪ್ರಮುಖವಾಗಿ ಪ್ರಾಮುಖ್ಯತೆ ಪಡೆಯುವುದು ಪ್ರವಾದಿ ಮುಹಮ್ಮದ್(ಸ)ರ ಹಿಜಿರದ ನಂತರ. ಇಲ್ಲಿನ ಪ್ರಮುಖ ಆದಾಯ ಆ ಕಾಲದಲ್ಲಿ ಕೃಷಿಯಾಗಿತ್ತು. ಈಗಲೂ ಈ ಊರಿನಲ್ಲಿ ಯಥೇಷ್ಟವಾಗಿ ಕೃಷಿ ಚಟುವಟಿಕೆಯನ್ನು ಕಾಣಬಹುದು. ಈ ಮದೀನಾದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲಿ ನಿರ್ಮಿಸಲಾಗಿರುವ ಮಸೀದಿ ಇದೆ. ಇಸ್ಲಾಮಿನ ಮೂರು ಹರಮ್(ಪವಿತ್ರ ಮಸೀದಿ) ಗಳಲ್ಲಿ ಒಳಪಡುವ ಈ ಮಸೀದಿಗೆ ದೇಶ ವಿದೇಶದಿಂದ ಸಂದರ್ಶಕರು ದಿನಂಪ್ರತಿ ಭೇಟಿ ನೀಡುತ್ತಿರುತ್ತಾರೆ. ಈ ಮಸೀದಿಯ ಬಗ್ಗೆ ನಿಮಗೆ ಅರಿವಿಲ್ಲದ ಕೆಲವು ಸಂಗತಿಗಳು ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಅದೇನೆಂದು ತಿಳಿಯಲು ಮುಂದೆ ಓದಿ.

1. ಅರೇಬಿಯಾದಲ್ಲಿ ಮೊತ್ತ ಮೊದಲು ವಿದ್ಯುಚ್ಛಕ್ತಿ ಪಡೆದ ಮಸೀದಿ: ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಪ್ರಥಮವಾಗಿ ವಿದ್ಯುಚ್ಛಕ್ತಿ ಬೆಳಕು ಪಡೆದ ಮಸೀದಿ ಮಸ್ಜಿದುನ್ನಬವಿಯಾಗಿದೆ. ಮಸ್ಜಿದುನ್ನಬವಿಯಲ್ಲಿ 100ವರ್ಷಗಳಿಗಿಂತಲೂ ಹಳೆಯ ವಿದ್ಯುತ್ ಬಲ್ಬ್ ಗಳನ್ನು ಈಗಲೂ ಕಾಣಬಹುದು. ಇಸ್ತಾಂಬುಲ್’ನ ಸುಲ್ತಾನನ ಅರಮನೆ ಕೂಡ ಮಸ್ಜಿದುನ್ನವಿಯು ವಿದ್ಯುಚ್ಛಕ್ತಿಯ ಬೆಳಕು ಪಡೆದ ಅನೇಕ ವರ್ಷಗಳ ನಂತರ ಪಡೆಯಿತು ಎಂದು ದಾಖಲೆಗಳಲ್ಲಿ ವ್ಯಕ್ತವಾಗುತ್ತದೆ.

2.ಈಗಿನ ಮಸೀದಿ ಹಳೆಯ ಮದೀನಾ ನಗರಕ್ಕೀಂತ ದೊಡ್ಡದಾಗಿದೆ: ಹಳೆಯ ಮಸೀದಿಗಿಂತ ಪ್ರಸ್ತುತ ಮಸೀದಿ ಕನಿಷ್ಠ 100 ಪಟ್ಟು ದೊಡ್ಡದಿದೆ. ಇದರರ್ಥ ಪ್ರಸ್ತುತ ಮಸೀದಿ ಇಡೀ ಹಳೆಯ ನಗರವನ್ನು ಆವರಿಸಿದೆ. ಹಳೆಯ ಕಾಲದಲ್ಲಿ ಬಕಿಅ-ತುಲ್ ಘರ್ಕದ್ ಕಬಸ್ತಾನವು ನಗರದ ಹೊರವಲಯದಲ್ಲಿತ್ತು. ಆದರೆ ಈಗ ಅದು ಮಸೀದಿಯ ಪಕ್ಕದಲ್ಲಿದೆ. ಇದರಿಂದ ಹಳೆಯ ಮದೀನಾ ನಗರ ಎಷ್ಟು ಚಿಕ್ಕದಾಗಿತ್ತು ಎಂಬುದನ್ನು ಇಲ್ಲಿ ಗ್ರಹಿಸಬಹುದು. ಉಹುದ್ ಪರ್ವತವು ಮದೀನಾ ನಗರದ ಹೊರಗೆ ನೆಲೆಗೊಂಡಿದೆ ಎಂದು ಹದೀಸ್ ಗಳಲ್ಲಿ ಇನ್ನಿತರ ಹಳೆದ ಇಸ್ಲಾಮಿಕ್ ಆಧಾರಗಳಲ್ಲಿ ಕಾಣಬಹುದು. ಆದರೆ ಇಂದು ಉಹುದ್ ಪರ್ವತವು ಮದೀನಾ ನಗರದ ಒಳಭಾಗದಲ್ಲಿದೆ ಮತ್ತು ಮಸ್ಜಿದುನ್ನಬವಿಯಿಂದ ಅಲ್ಲಿಗೆ ಹೋಗಲು ಕೇವಲ ಎರಡು ನಿಮಿಷದ ಡ್ರೈವಿಂಗ್ ಸಾಕು.

3. ಪ್ರವಾದಿ(ಸ)ರ ಕಬರ್ ಇರುವ ಕೋಣೆಯಲ್ಲಿ ಖಾಲಿ ಸಮಾಧಿ ಜಾಗ: ಪ್ರವಾದಿ (ಸ), ಅಬೂ ಬಕರ್(ರ) ಮತ್ತು ಉಮರ್(ರ) ಈ ಮೂವರ ಸಮಾಧಿಯ ಪಕ್ಕದಲ್ಲಿ ಖಾಲಿ ಜಾಗವಿದೆ ಎಂದು ಹಲವರು ನಂಬುತ್ತಾರೆ. 1970 ರ ದಶಕದಲ್ಲಿ ಹುಜ್ರಾವನ್ನು ಬದಲಿಸಿದ ಜನರಿಂದ ಕೂಡ ಇದು ದೃಢೀಕರಿಸಲ್ಪಟ್ಟಿದೆ. ಈಸಾ(ಅ)ರವರು ಭೂಮಿಗೆ ಹಿಂದಿರುಗಿದ ನಂತರ ಮರಣ ಹೊಂದಿದಾಗ ಅವರನ್ನು ಇಲ್ಲಿ ದಫನ ಮಾಡುತ್ತಾರೆ ಎಂದು ಹೇಳುತ್ತಾರೆ ಆದರೆ ಇದಕ್ಕೆ ಯಾವುದೇ ಧಾರ್ಮಿಕ ಪ್ರಮಾಣದ ದೃಢೀಕರಣವಿಲ್ಲ.

4. ಅಗ್ನಿ ಅವಘಡದಿಂದ ಹಾನಿಗೀಡಾಗಿತ್ತು: ಪ್ರವಾದಿ ಮುಹಮ್ಮದ್ (ಸ) ಮರಣಿಸಿದ ಶತಮಾನಗಳ ನಂತರ ಇಲ್ಲಿ ವ್ಯಾಪಕ ಬೆಂಕಿ ಅವಘಡ ಸಂಭವಿಸಿತ್ತು. ಅದರಿಂದಾಗಿ ಪ್ರವಾದಿಯವರ ಮಿಂಬರ್(ಪ್ರವಚನ ಪೀಠ) ಸೇರಿದಂತೆ ಮಸೀದಿಯ ಹಲವಾರು ಸೊತ್ತುಗಳು ನಾಶವಾಗಿದ್ದವು. ಬೆಂಕಿಯು ಪ್ರವಾದಿ(ಸ)ರ ಸಮಾಧಿ ಇರುವ ಕೋಣೆಯ ಗೋಡೆ ಮತ್ತು ಛಾವಣಿಯನ್ನು ಭಾಗಶಃ ಹಾನಿ ಮಾಡಿತ್ತು ಮತ್ತು ಈ ಸಂದರ್ಭದಲ್ಲಿ 600 ವರ್ಷಗಳಲ್ಲಿ ಪ್ರಥಮಬಾರಿಗೆ ಪ್ರವಾದಿ(ಸ)ರ ಸಮಾಧಿ ಸ್ಥಳವು ಗೋಚರಿಸಿತು.

5. ಎರಡು ಗುಮ್ಮಟಗಳಿವೆ: ಪ್ರವಾದಿ(ಸ)ರ ರ ಮರಣದ ನಂತರ 600ವರ್ಷಗಳಿಗಿಂತಲೂ ಹೆಚ್ಚು ಕಾಲ ಪ್ರವಾದಿ (ಸ)ಯವರ ಸಮಾಧಿಯ ಮೇಲ್ಛಾವಣೆಯ ಮೇಲೆ ಯಾವುದೇ ಗುಮ್ಮಟವಿರಲಿಲ್ಲ ಮತ್ತು ಈಗ ಎರಡು ಗುಮ್ಮಟವಿದೆ. ಮೊದಲನೆಯದಾಗಿ ಮಮ್ಲುಕ್ ಸುಲ್ತಾನ್ ನಿರ್ಮಿಸಿದ ಮರದಿಂದ ಮಾಡಲ್ಪಟ್ಟ ಗುಮ್ಮಟ.ಇನ್ನೊಂದು ಗುಮ್ಮಟ ಒಳಭಾಗದಲ್ಲಿದೆ. ಆ ಗುಮ್ಮಟದ ಒಳಭಾಗದಲ್ಲಿ ಪ್ರವಾದಿ ಮಹಮ್ಮದ್ (ಸ), ಅಬೂ ಬಕರ್(ರ) ಮತ್ತು ಉಮರ್(ರ) ರ ಹೆಸರನ್ನು ಕೆತ್ತಲಾಗಿದೆ.

6. ನೇರಳೆ ಬಣ್ಣದ ಗುಮ್ಮಟ: ಈಗ ಅಲ್ಲಿ ಕಾಣುತ್ತಿರುವ ಹಸಿರು ಗುಮ್ಮಟವು ಅನೇಕ ಬಣ್ಣ ಬದಲಾವಣೆಗಳನ್ನು ಕಂಡಿದೆ. ಇದು ಮೊದಲು ಬಿಳಿಯಾಗಿತ್ತು ಮತ್ತು ನಂತರ ಅದನ್ನು ನೇರಳೆ ಬಣ್ಣಕ್ಕೆ ಬದಲಿಸಲಾಯಿತು, ಹಿಜಾಝ್‌ನ ಜನರು ನೇರಳೆ ಬಣ್ಣವನ್ನು ತುಂಬಾ ಇಷ್ಟಪಡುತ್ತಿದ್ದರು. ಈಗ ಇರುವ ಹಸಿರು ಬಣ್ಣವು 150 ವರ್ಷಗಳ ಹಿಂದೆ ಬದಲಾವಣೆ ಗೊಂಡಿರುವಂತಹದ್ದಾಗಿದೆ.

7. ಮೂರು ಮೆಹ್ರಾಬ್‌ಗಳು: ಸಾಮಾನ್ಯವಾಗಿ ಮಸೀದಿಗಳಲ್ಲಿ ಕೇವಲ ಒಂದು ಮೆಹ್ರಾಬ್‌ ಇರುತ್ತದೆ. ಆದರೆ ಮಸ್ಜಿದುನ್ನಬವಿಯಲ್ಲಿ ಮೂರು ಮೆಹ್ರಾಬ್‌ ಇದೆ. ಆದರೆ ಈಗ ಪ್ರಾರ್ಥನೆ ನಿರ್ವಹಿಸಲು ಒಂದನ್ನು ಮಾತ್ರ ಇಮಾಮ್ ಬಳಸುತ್ತಾರೆ.

8. ಫಾತಿಮಾ(ರ)ರ ಕೊಠಡಿಯ ವಸ್ತುಗಳು: ಫಾತಿಮಾ(ರ)ರ ಕೊಠಡಿಯಲ್ಲಿ ಅನೇಕ ಬೆಲೆಬಾಳುವ ವಸ್ತುಗಳು ಇದ್ದವು, ಇದನ್ನು ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಒಟ್ಟೋಮನ್ ಕಮಾಂಡರ್ ಟರ್ಕಿಯ ಇಸ್ತಾಂಬುಲ್‌ಗೆ ಸ್ಥಳಾಂತರಿಸಿದರು. ಈಗ ಆ ವಸ್ತುಗಳನ್ನು ಟರ್ಕಿಯ ಟಾಪ್ಕಾಪಿ ಅರಮನೆಯಲ್ಲಿ ಕಾಣಬಹುದಾಗಿದೆ.

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *