Friday , May 24 2019
Breaking News
Home / ಪ್ರವಾಸ / ಸೌದಿ ಅರೇಬಿಯಾದ ಗ್ರ್ಯಾಂಡ್ ಕ್ಯಾನ್ಯನ್ ಅಲ್ ತುವೈಕ್ ಪರ್ವತ ಶ್ರೇಣಿ

ಸೌದಿ ಅರೇಬಿಯಾದ ಗ್ರ್ಯಾಂಡ್ ಕ್ಯಾನ್ಯನ್ ಅಲ್ ತುವೈಕ್ ಪರ್ವತ ಶ್ರೇಣಿ

ಸೌದಿ ಅರೇಬಿಯಾದ ರಿಯಾದ್ನಿಂದ 35 ಕಿಲೋಮೀಟರ್ ದೂರದಲ್ಲಿರುವ ಈ ಒಂದು ಪರ್ವತ ಶ್ರೇಣಿಯು ಇತ್ತೀಚಿಗೆ ಭೌಗೋಳಿಕ ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ.

ಹೌದು, ಅಲ್ ತುವೈಕ್ ಎಂಬ ಹೆಸರಿನ ಈ ಪರ್ವತ ಶ್ರೇಣಿಯು ಅಮೇರಿಕಾದ ಅರಿಝೋನಾದ ‘ಗ್ರ್ಯಾಂಡ್ ಕ್ಯಾನ್ಯನ್’ ಅನ್ನು ಹೋಲುತ್ತದೆ. “ವಿಶ್ವದ ಅಂಚು” ಎಂದೇ ಪ್ರಸಿದ್ಧವಾಗಿರುವ ಈ ಪರ್ವತ ಶ್ರೇಣಿಯನ್ನು ‘ಗ್ರ್ಯಾಂಡ್ ಕ್ಯಾನ್ಯನ್’ ಎಂದೇ ಅಡ್ಡ ಹೆಸರಿನಲ್ಲಿ ಕರೆಯಲಾಗುತ್ತದೆ.

ಸ್ಥಳೀಯ ನಿವಾಸಿಗಳು ಮತ್ತು ವಿದೇಶಿ ಪ್ರವಾಸಿಗಳು ಹೆಚ್ಚಾಗಿ ಈ ವಿಶಾಲವಾದ ಕಲ್ಲಿನ ಅಂಚಿನಂತಿರುವ ಪರ್ವತ ಶ್ರೇಣಿಗೆ ಭೇಟಿ ನೀಡುತ್ತಾರೆ. ಇಲ್ಲಿನ ವಿಚಿತ್ರವಾದ ನೈಸರ್ಗಿಕ ಕಲ್ಲಿನ ರಚನೆಯು ಪ್ರವಾಸಿಗರನ್ನು ಬೆರಗು ಗೊಳಿಸುತ್ತದೆ. ಅದೇ ರೀತಿ ಎತ್ತರವಾದ ಪರ್ವತ ಶ್ರೇಣಿಯಿಂದ ಕೆಳಗೆ ನೋಡುವಾಗ ಹಳ್ಳಿಗಳು, ಕಣಿವೆಗಳು, ರಸ್ತೆಗಳು, ತೋಟಗಳು, ಮರುಭೂಮಿಯ ಮರಳಿನ ದಿಬ್ಬಗಳ ವಿಶಾಲ ದರ್ಶನವು ನೋಡುಗರ ಮನಸೊರೆಗೊಳಿಸುತ್ತದೆ.

ಇಲ್ಲಿನ ಪರ್ವತಗಳ ತುದಿಗೆ ತಲುಪಲು ವಾದಿ ಹನೀಫಾದ ಕಡಿದಾದ ಇಳಿಜಾರುಗಳನ್ನು ದಾಟುವುದು ಸೇರಿದಂತೆ ಹಲವಾರು ಹಾದಿಗಳಿದ್ದು, ಇಲ್ಲಿನ ವಾಹ್ರಿನ್ ಎಂಬ ಹೆಸರಿನ ಪರ್ವತವೊಂದು ಸುಮಾರು 100 ಮೀಟರ್‌ಗಿಂತಲೂ ಎತ್ತರವಾಗಿದೆ.

ಮರುಭೂಮಿಯ ಬೈಕ್ ರೈಡಿಂಗ್ ಭಂಗಿ ಜಂಪ್ ಮುಂತಾದ ಸಾಹಸಗಳನ್ನು ಇಷ್ಟಪಡುವ ಜನರಿಗೆ ಇದು ಹೇಳಿ ಮಾಡಿಸಿದಂತಹ ಸ್ಥಳ ಎನ್ನಬಹುದು.

ಕಿಂಗ್ ಸೌದಿ ವಿಶ್ವವಿದ್ಯಾಲಯದ ಪೊಫೆಸರ್, ಡಾ. ಅಬ್ದುಲ್ ಅಝೀನ್ ಬಿನ್ ಲಾಬನ್ ಮಾತನಾಡಿ, “ಈ ಅಲ್ ತುವೈಕ್ ಪರ್ವತ ಶ್ರೇಣಿಯು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ನಿರಂತರವಾಗಿ ಹಬ್ಬಿದ್ದು, ಇದು ಸುಮಾರು 1,200 ಕಿಲೋಮೀಟರ್ ದೂರವನ್ನು ಹೊಂದಿದೆ. ಇದು ಸ್ಪೇಸ್‌ನಿಂದ ನೋಡುವಾಗ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಬೆನ್ನು ಹುರಿಯಂತೆ ಕಾಣುತ್ತದೆ” ಎಂದರು.

ತುವೈಕ್ ಪರ್ವತ ಪ್ರದೇಶದಲ್ಲಿ ಸುಣ್ಣದ ಕಲ್ಲು, ಪಳೆಯುಳಿಕೆಗಳು, ಹವಳದ ಬಂಡೆಯ ಅವಶೇಷಗಳು, ಚಿಪ್ಪುಗಳು, ಅಮೋನೈಟ್ ಮತ್ತು ಇತರ ಪ್ರಾಣಿಗಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಇದು ಸುಮಾರು 160 ಮಿಲಿಯನ್ ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿದೆ ಎಂದು ಪೊಫೆಸರ್, ಡಾ. ಅಬ್ದುಲ್ ಅಝೀನ್ ಬಿನ್ ಲಾಬನ್ ಹೇಳಿದ್ದಾರೆ.

ಈ ಪರ್ವತಗಳ ಪೂರ್ವ ಭಾಗದ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲ ಸಂಗ್ರಹವಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಸೌದಿ ಪ್ರವಾಸಿಗಳಿಗೆ ರಜೆಯ ಮಜವನ್ನು ಸವಿಯಲು ಈ ಪ್ರದೇಶಕ್ಕೆ ಭೇಟಿ ನೀಡಿವುದು ಒಂದು ಒಳ್ಳೆಯ ಸ್ವಾರಸ್ಯಕರ ಪ್ರವಾಸವಾಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *